ಸಞ್ಚೂರ್ಣ್ಣಿತಗದೌ ವೀರೌ ಜಘ್ನತುರ್ಮ್ಮುಷ್ಟಿಭಿರ್ಮ್ಮಿಥಃ ।
ಬ್ರಹ್ಮಾಣ್ಡಸ್ಫೋಟಸಙ್ಕಾಶೈರ್ಯ್ಯಥಾ ಕೇಶವಕೈಟಭೌ ॥೨೧.೧೫೭॥
ಗದೆ ಕಳೆದುಕೊಂಡ ಆ ಇಬ್ಬರು
ವೀರರ ಕಾದಾಟವಿತ್ತು ಕೇಶವ ಕೈಟಭರಂತೆ,
ಆ ಮುಷ್ಟಿಯುದ್ಧದ
ಶಬ್ದವದಿತ್ತು ಬ್ರಹ್ಮಾಂಡ ಬಿರಿಯಿತೇನೋ ಎನ್ನುವಂತೆ.
ಚಚಾಲ ಪೃಥ್ವೀ ಗಿರಯಶ್ಚ ಚೂರ್ಣ್ಣಿತಾಃ ಕುಲಾಚಲಾಶ್ಚೇಲುರಲಂ ವಿಚುಕ್ಷುಭುಃ ।
ಸಮಸ್ತವಾರಾಮ್ಪತಯಃ ಸುರಾಸುರಾ ವಿರಿಞ್ಚಶರ್ವಾದಯ ಆಸದನ್ನಭಃ ॥೨೧.೧೫೮॥
ಅವರಿಬ್ಬರ ಮಧ್ಯೆ ನಡೆದ
ಮುಷ್ಟಿಯುದ್ಧದ ಆ ರಭಸದ ಕಾದಾಟ,
ಭುವಿಯು ನಡುಗಿ ಪರ್ವತಗಳು
ನಲುಗಿ ಗುಡ್ಡಗಳು ಪುಡಿಯಾದ ನೋಟ.
ಅಲ್ಲೋಲ ಕಲ್ಲೋಲಗೊಂಡವು
ಸಮುದ್ರಗಳು,
ನಭದಿ ನೆರೆದರು ದೇವತಾಸುರ
ಬ್ರಹ್ಮರುದ್ರಾದಿಗಳು.
ಸುರಾಸ್ತು ಭೀಮಸ್ಯ ಜಯಾಭಿಕಾಙ್ಕ್ಷಿಣಸ್ತಥಾsಸುರಾದ್ಯಾ ಮಗಧಾಧಿಪಸ್ಯ
।
ಪಶ್ಯನ್ತಿ ಸರ್ವೇ ಕ್ರಮಶೋ ಬಲಂ ಸ್ವಂ ಸಮಾದದೇ ಮಾರುತನನ್ದನೋsಪಿ ॥೨೧.೧೫೯॥
ದೇವತೆಗಳೆಲ್ಲಾ ಹಾಕಿದರು
ಭೀಮಸೇನನಿಗೆ ಜಯಕಾರ,
ಅಸುರಾದಿಗಳದು ಜರಾಸಂಧನ
ಗೆಲುವಿಗೆ ಪುರಸ್ಕಾರ.
ಎಲ್ಲರದಿತ್ತು ಯುದ್ಧದೆಡೆಗೆ
ನೋಟ ಮತ್ತು ಚಿತ್ತ,
ಭೀಮ ಆರಂಭಸಿದ ತನ್ನ ಮೂಲಬಲದ
ಅಭಿವ್ಯಕ್ತ.
[ಪ್ರಾಣದೇವರು ಅವತಾರದಲ್ಲೂ
ಸ್ವಇಚ್ಛೆಯಿಂದ ಯಾವರೀತಿ ಮೂಲರೂಪದ ಬಲವನ್ನು ಸ್ವೀಕರಿಸಬಹುದು, ಉಳಿದ ದೇವತೆಗಳಲ್ಲಿ
ಇದು ಹೇಗೆ ಭಿನ್ನ, ಇತ್ಯಾದಿ
ವಿವರವನ್ನು ಮುಂದಿನ ಅಧ್ಯಾಯಗಳಲ್ಲಿ ನಾವು ಕಾಣಬಹುದು].
ಮಾನಯಿತ್ವಾ ವರಂ ಧಾತುರ್ದ್ದಿವಸಾನ್ ದಶ ಪಞ್ಚ ಚ ।
ವಾಸುದೇವಾಜ್ಞಯಾ ಭೀಮಃ ಶತ್ರುಂ ಹನ್ತುಂ ಮನೋ ದಧೇ ॥೨೧.೧೬೦॥
ಸ ಪ್ರಣಮ್ಯ ಹೃಷೀಕೇಶಂ ಹರ್ಷಾದಾಶ್ಲಿಷ್ಯ ಫಲ್ಗುನಮ್ ।
ರಿಪುಂ ಜಗ್ರಾಹ ಮುಕುಟೇ ವಾರಣಂ
ಮೃಗರಾಡಿವ ॥೨೧.೧೬೧॥
ಭೀಮಸೇನ ಹದಿನೈದು ದಿನ ಯುದ್ಧ
ಮಾಡಿದ ಸಲ್ಲಿಸುತ್ತಾ ಬ್ರಹ್ಮವರಕ್ಕೆ ಗೌರವ,
ಶತ್ರು ಜರಾಸಂಧನ ಕೊಲ್ಲಲು
ನಿಶ್ಚಯಿಸಿದ ಆಜ್ಞೆ ಕೊಡಲು ಕೃಷ್ಣವಾಸುದೇವ.
ಭೀಮಸೇನ ಶ್ರೀಕೃಷ್ಣಗೆ
ಸಲ್ಲಿಸಿದ ನಮನ,
ತಮ್ಮ ಅರ್ಜುನನಿಗಿತ್ತ ಸಂತಸದ
ಆಲಿಂಗನ.
ಆನೆಯನ್ನು ಹಿಡಿಯುವಂತೆ ಸಿಂಹ,
ಶತ್ರುತಲೆಯನ್ನು ಹಿಡಿದ ತಾ
ಭೀಮ.
ಪೃಷ್ಠೇsಸ್ಯ ಜಾನುಮಾಧಾಯ ಕೂರ್ಮ್ಮದೇಶಂ ಬಭಞ್ಜ ಹ ।
ಮೃತಿಕಾಲೇ ಪುನರ್ದ್ದೇಹಂ ವಿದದಾರ ಯಥಾ ಪುರಾ ॥೨೧.೧೬೨॥
ಜರಾಸಂಧನ ಬೆನ್ಹುರಿಯ ಮೂಳೆಗೆ
ತನ್ನ ಮೊಣಕಾಲನ್ನಿಟ್ಟ,
ಭೀಮಸೇನ ತಾನು ಸೀಳಿಹಾಕಿದ
ಶತ್ರು ಜರಾಸಂಧನ ಸೊಂಟ.
ಹುಟ್ಟುವಾಗ ಹೇಗಿತ್ತೋ ಅವನ
ದೇಹದ ಸೀಳು,
ಹಾಗೇ ಸೀಳಿಕೊಟ್ಟಿದ್ದ
ಅವನಿಗೆ ಮರಣದ ಪಾಲು.
ಮರ್ಮ್ಮಣ್ಯೇವ ನ ಹನ್ತವ್ಯೋ ಮಯಾsಯಮಿತಿ ಮಾರುತಿಃ ।
ಸ್ವಪೌರುಷಪ್ರಕಾಶಾಯ ಬಭಞ್ಜೈನಮಮರ್ಮ್ಮಣಿ ॥೨೧.೧೬೩॥
ಈ ಜರಾಸಂಧನನ್ನು ನಾನು ಅವನ
ಮರ್ಮಸ್ಥಾನಕ್ಕೇ ಹೊಡೆದು ಕೊಲ್ಲಬೇಕಿಲ್ಲ,
ಬೇರೆಡೆಗೆ ಹೊಡೆದು ಜಗಕೆ
ತನ್ನ ಬಲ ತೋರಿದ ಭೀಮಸೇನನೆಂಬ ಜಗಮಲ್ಲ.
ಭಜ್ಯಮಾನೇ ಶರೀರೇsಸ್ಯ ಬ್ರಹ್ಮಾಣ್ಡಸ್ಫೋಟಸನ್ನಿಭಃ ।
ಬಭೂವ ರಾವೋ ಯೇನೈವ ತ್ರಸ್ತಮೇತಜ್ಜಗತ್ತ್ರಯಮ್ ॥೨೧.೧೬೪॥
ಭೀಮ ಜರಾಸಂಧನ ದೇಹವನ್ನು
ಸೀಳುತ್ತಿರುವಾಗ,
ಬ್ರಹ್ಮಾಂಡವೇ ಸ್ಫೋಟಗೊಂಡಂಥಾ
ಶಬ್ದವಾಯಿತಾಗ.
ಭಯಗ್ರಸ್ಥವಾಗಿ ಹೋಯಿತು ಆ
ಶಬ್ದದಿಂದ ಮೂಜಗ.
ನಿಹತ್ಯ ಕೃಷ್ಣಸ್ಯ ರಿಪುಂ ಸ ಭೀಮಃ
ಸಮರ್ಪ್ಪಯಾಮಾಸ ತದರ್ಚ್ಚನಂ ಹರೇಃ ।
ಕೃತಾಂ ಹಿ ಭೀಮೇನ ಸಮರ್ಚ್ಚನಾಂ ತಾಂ ಸಮಕ್ಷಮಾದಾತುಮಿಹಾsಗತೋ
ಹ್ಯಜಃ ॥೨೧.೧೬೫॥
ಶ್ರೀಕೃಷ್ಣನೆದುರೇ
ಶತ್ರುವನ್ನು ಕೊಂದುಹಾಕಿದ ಭೀಮ,
ಎಲ್ಲ 'ಕೃಷ್ಣಾರ್ಪಣ'ವೆಂಬುದೇ ಅವನ ಪೂಜಾ
ನೇಮ.
ಭೀಮ ಮಾಡಿದ ಶತ್ರುವಧೆಯ ಪೂಜಾ
ಸಮರ್ಪಣೆಯನ್ನು,
ಅದನು ಪ್ರತ್ಯಕ್ಷವಾಗಿ
ಸ್ವೀಕರಿಸಲೆಂದೇ ಬಂದಿದ್ದ ಶ್ರೀಕೃಷ್ಣ ತಾನು.
ಸ್ವೀಕೃತ್ಯ ಪೂಜಾಂ ಚ ವೃಕೋದರಸ್ಯ ದೃಢಂ ಸಮಾಶ್ಲಿಷ್ಯ ಚ ತಂ ಜನಾರ್ದ್ದನಃ ।
ಪ್ರೀತೋ ನಿತಾನ್ತಂ ಪುನರೇವ ಕೃಷ್ಣಂ ನನಾಮ ಭೀಮಃ ಪ್ರಣತೋsರ್ಜ್ಜುನೇನ
॥೨೧.೧೬೬॥
ಜನಾರ್ದನ ಮಾಡಿದ ಭೀಮಸೇನನ
ಪೂಜೆಯ ಸ್ವೀಕಾರ,
ಭೀಮಗೆ ಹರಸಿದ ಕೃಷ್ಣ
ಗಟ್ಟಿಯಾದ ಆಲಿಂಗನದ ದ್ವಾರ.
ಅರ್ಜುನ ಭೀಮಸೇನನಿಗೆ ಮಾಡಿದ
ನಮಸ್ಕಾರ,
ಭೀಮ ಕೃಷ್ಣಗೆ ಮಾಡಿದ ಪುನಃ
ಪುನಃ ನಮಸ್ಕಾರ.
ಜಗ್ಮುಃ ಸುರಾಶ್ಚಾತಿತರಾಂ ಪ್ರಹೃಷ್ಟಾ ಬ್ರಹ್ಮಾದಯೋ ದೀನತರಾಶ್ಚ ದೈತ್ಯಾಃ ।
ಬಲಾದುಮೇಶಸ್ಯ ವರೇ ಪ್ರಭಗ್ನೇ ವೃಕೋದರೇಣಾಚ್ಯುತಸಂಶ್ರಯೇಣ ॥೨೧.೧೬೭॥
ಸದಾ ಶ್ರೀಕೃಷ್ಣನನ್ನೇ
ಆಶ್ರಯಿಸಿದ್ದ ಭೀಮಸೇನ,
ಅದಕಾಯಿತು ರುದ್ರನಜೇಯತ್ವ
ವರದ ನಾಶನ.
ಅತ್ಯಂತ ಸಂತಸಪಟ್ಟರು ಬ್ರಹ್ಮಾದಿ
ದೇವತೆಗಳು,
ಅತ್ಯಂತ ದುಃಖಿತರಾಗಿ
ತೆರಳಿದರು ದೈತ್ಯರುಗಳು.
No comments:
Post a Comment
ಗೋ-ಕುಲ Go-Kula