Wednesday, 28 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 63 - 67


ಸ ಕಶ್ಯಪಸ್ಯಾದಿತಿಗರ್ಭಜನ್ಮನೋ ವಿವಸ್ವತಸ್ತನ್ತುಭವಸ್ಯ ಭೂಭೃತಃ ।
ಗೃಹೇ ದಶಸ್ಯನ್ದನನಾಮಿನೋsಭೂತ್ ಕೌಸಲ್ಯಕಾನಾಮ್ನಿ ತದರ್ಥಿನೇಷ್ಟಃ ॥೩.೬೩ll

ಕಾಶ್ಯಪ ಅದಿತಿಯಲ್ಲಿ ಹುಟ್ಟಿದ ಮಕ್ಕಳಲ್ಲೊಬ್ಬ ಸೂರ್ಯ,
ಆ ಸೂರ್ಯವಂಶದಲ್ಲೆ ದಶರಥನ ಮಗನಾದ ರಾಮಚಂದ್ರ.
ಅದಕ್ಕಾಗೇ ದಶರಥ ಮಾಡಿದ್ದ ಪುತ್ರಕಾಮೇಷ್ಟಿ ಯಾಗ,
ಕೌಸಲ್ಯೆಯಲ್ಲಿ ರಾಮ ಮಗನಾಗಿ ಹುಟ್ಟಿಬಂದ ಯೋಗ.

ತದಾಜ್ಞಯಾ ದೇವಗಣಾ ಬಭೂವಿರೇ ಪುರೈವ ಪಶ್ಚಾದಪಿ ತಸ್ಯ ಭೂಮ್ನಃ ।
ನಿಷೇವಣಾಯೋರುಗಣಸ್ಯ ವಾನರೇಷ್ವಥೋ ನರೇಷ್ವೇವ ಚ ಪಶ್ಚಿಮೋದ್ಭವಾಃ॥೩.೬೪॥

ಭಗವದಾಜ್ಞೆ ಪಡೆದ ದೇವತಾವೃಂದ,
ಭುವಿಯಲ್ಲಿ ಹುಟ್ಟಿಬಂತು ಆಗಿ ಕಪಿವೃಂದ.
ಅದರಲ್ಲಿ ಕೆಲ ಕಪಿಗಳಾದರು  ರಾಮಾವತಾರಕ್ಕೆ ಮೊದಲು,
ಮತ್ತೆ ಕೆಲ ಕಪಿಗಳು ಮನುಷ್ಯರೂಪಿಗಳದು ನಂತರದ ಸಾಲು.

ಸ ದೇವತಾನಾಂ ಪ್ರಥಮೋ ಗುಣಾಧಿಕೋ ಬಭೂವ ನಾಮ್ನಾ ಹನುಮಾನ್ ಪ್ರಭಞ್ಜನಃ ।
ಸ್ವಸಮ್ಭವಃ ಕೇಸರಿಣೋ ಗೃಹೇ ಪ್ರಭುರ್ಭಭೂವ ವಾಲೀ ಸ್ವತಃ ಏವ ವಾಸವಃ ॥೩.೬೫॥

ದೇವತೆಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣ ದೇವ,
ಕೇಸರಿ ಅಂಜನಾರಲ್ಲಿ ಹುಟ್ಟಿದ ಹನುಮಂತನವ.
ದೇವಲೋಕಾಧಿಪತಿ ಇಂದ್ರದೇವ,
ತಾನೇ ವಾಲಿಯಾಗಿ ಆದ ಆವಿರ್ಭಾವ.

ಸುಗ್ರೀವ ಆಸೀತ್ ಪರಮೇಷ್ಠಿತೇಜಸಾ ಯುತೋ ರವಿಃ ಸ್ವಾತ್ಮತ ಏವ ಜಾಮ್ಬವಾನ್ ।
ಯ ಏವ ಪೂರ್ವಂ ಪರಮೇಷ್ಠಿವಕ್ಷಸಸ್ತ್ವಗುದ್ಭವೋ ಧರ್ಮ ಇಹಾsಸ್ಯತೋSಭವತ್ ॥೩.೬೬॥

ಬ್ರಹ್ಮಾವೇಶದಿಂದ ಕೂಡಿದ ಸೂರ್ಯ ತಾನಾದ ಸುಗ್ರೀವ.
ಹಿಂದೆ ಬ್ರಹ್ಮನೆದೆ ಚರ್ಮದಿಂದ ಹುಟ್ಟಿದವ ಯಮರಾಯ.
ಬ್ರಹ್ಮಾವೇಶದಿಂದ ಬ್ರಹ್ಮಮುಖದಿ ಪಡೆದ ಜಾಂಬವಂತ ಕಾಯ.

ಯ ಏವ ಸೂರ್ಯಾತ್ ಪುನರೇವ ಸಂಜ್ಞಯಾ ನಾಮ್ನಾ ಯಮೋ ದಕ್ಷಿಣದಿಕ್ಪ ಆಸೀತ್ ।
ಸ ಜಾಮ್ಬವಾನ್ ದೈವತಕಾರ್ಯದರ್ಶಿನಾ ಪುರೈವ ಸೃಷ್ಟೋ ಮುಖತಃ ಸ್ವಯಮ್ಭುವಾ॥೩.೬೭॥

ಸೂರ್ಯ ಸಂಜ್ಞಾದೇವಿಯಲ್ಲಿ ಹುಟ್ಟಿದ ಯಮಧರ್ಮ,
ಯಮನಾಮದಿಂದವನ ದಕ್ಷಿಣ ದಿಕ್ಪಾಲನೆಯ ಕರ್ಮ,
ಬ್ರಹ್ಮಮುಖದಿಂದ ಜಾಂಬವಂತನಾಗಿ ಹುಟ್ಟಿದ ಮರ್ಮ.
[Contributed by Shri Govind Magal]

Tuesday, 27 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 58 - 62


ತ್ವಯಾ ಪುರಾ ಕರ್ಣಪುಟಾದ್ ವಿನಿರ್ಮಿತೌ ಮಹಾಸುರೌ ತೌ ಮಧುಗಕೈಟಭಾಖ್ಯೌ ।
ಪ್ರಭಞ್ಜನಾವೇಶವಶಾತ್ ತವಾsಜ್ಞಯಾ ಬಲೋದ್ಧತಾವಾಶು ಜಲೇ ವ್ಯವರ್ಧತಾಮ್ ॥೩.೫೮॥

ನೀನು ಹಿಂದೆ ಕರ್ಣಪುಟದಿಂದ ಸೃಜಿಸಿದ ಮಧುಕೈಟಭರು,
ವಾಯುವಿನಾವೇಷದಿಂದ ಬಲಾಢ್ಯರಾಗಿ ದೇವಪೀಡಕರಾದರು.
ನಿನ್ನಾಜ್ಞೆಯಂತೆಯೇ ಬಲದರ್ಪದಿಂದ ಪ್ರಳಯ ಜಲದಿ ಪ್ರಬಲರಾದರು.

ತ್ವದಾಜ್ಞಯಾ ಬ್ರಹ್ಮವರಾದವಧ್ಯೌ ಚಿಕ್ರೀಡಿಷಾಸಮ್ಭವಯಾ ಮುಖೋದ್ಗತಾನ್ ।
ಸ್ವಯಮ್ಭುವೋ ವೇದಗಣಾನಹಾರ್ಷತಾಂ ತದಾsಭವಸ್ತ್ವಂ ಹಯಶೀರ್ಷ ಈಶ್ವರಃ  ॥೩.೫೯॥

ನಿನ್ನಾಜ್ಞೆ ಬ್ರಹ್ಮವರದಿಂದ ಅವಧ್ಯರಾದ ಮಧುಕೈಟಭರು,
ಬ್ರಹ್ಮಮುಖದಿಂದ ಬಂದ ವೇದಾಭಿಮಾನಿಗಳ ಅಪಹರಿಸಿದರು.
ಅನಂತರೂಪಿ/ಅವತಾರಿಯಾದ ನೀನಾದೆ ಆಗ ಹಯಗ್ರೀವದೇವರು.

ಆಹೃತ್ಯ ವೇದಾನಖಿಲಾನ್ ಪ್ರದಾಯ ಸ್ವಯಮ್ಭುವೇ ತೌ ಚ ಜಘನ್ಥ ದಸ್ಯೂ ।
ನಿಷ್ಪೀಡ್ಯ ತಾವೂರುತಳೇ ಕರಾಭ್ಯಾಂ ತನ್ಮೇದಸೈವಾsಶು ಚಕರ್ಥ ಮೇದಿನೀಮ್ ॥೩.೬೦॥

ಅಪಹರಿಸಿದ ವೇದಗಳ ಕಸಿದು ಬ್ರಹ್ಮಗಿತ್ತೆ,
ಕಳ್ಳರ ತೊಡೆಯಲಿಟ್ಟು ತಾಡನದಿ ಅವರ ಜೀವ ಕಿತ್ತೆ.
ಅವರಿಂದ ಸೆಳೆಯಲ್ಪಟ್ಟ ಮೇದಸ್ಸು,
ಮೇದಿನಿ ಸೃಷ್ಟಿಗಾಯ್ತದು ರೇತಸ್ಸು.

ಏವಂ ಸುರಾಣಾಂ ಚ ನಿಸರ್ಗಜಂ ಬಲಂ ತಥಾsಸುರಾಣಾಂ ವರದಾನಸಮ್ಭವಮ್ ।
ವಶೇ ತವೈತದ್ ದ್ವಯಮಪ್ಯತೋ ವಯಂ ನಿವೇದಯಾಮಃ ಪಿತುರೇವ ತೇsಖಿಲಮ್ ॥೩.೬೧॥

ದೇವತೆಗಳಲ್ಲಿರುವ ಸಹಜವಾದ ಬಲ,
ದೈತ್ಯರಲ್ಲಿ ತುಂಬಿಕೊಂಡಿರುವ ವರ ಬಲ,
ಎರಡೂ ನಿನ್ನದೇ ವಶ- ನೀನೇ ಕಾರಣ,
ತಂದೇ ನಿನಗೆ ವಂದನ -ನಿನ್ನಲ್ಲೇ ನಿವೇದನ.

ಇಮೌ ಚ ರಕ್ಷೋಧಿಪತೀ ವರೋದ್ಧತೌ ಜಹಿ ಸ್ವವೀರ್ಯೇಣ ನೃಷು ಪ್ರಭೂತಃ ।

ಇತೀರಿತೇ ತೈರಖಿಲೈಃ ಸುರೇಶ್ವರೈರ್ಬಭೂವ ರಾಮೋ ಜಗತೀಪತಿಃ ಪ್ರಭುಃ ॥೩.೬೨॥

ಹಿರಣ್ಯಾಕ್ಷ ಹಿರಣ್ಯಕಶಿಪುಗಳಾಗಿದ್ದಾರೆ ರಾವಣ ಕುಂಭಕರ್ಣ,
ವರಬಲದಿಂದ ಅವಧ್ಯರಾದವರ ಅಟ್ಟಹಾಸವದು ಬಲು ದಾರುಣ.
ದೇವತೆಗಳು ಪ್ರಾರ್ಥಿಸಿದರು ಹರಿಗೆ ತಾಳಲು ಮಾನವ ಜನ್ಮ,
ಪ್ರಾರ್ಥನೆಗೊಲಿದ ನಾರಾಯಣನಾದ ದಶರಥ ಪುತ್ರ ರಾಮ.
[Contributed by Shri Govind Magal]

Monday, 26 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 54 - 57

ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್ ॥೩.೫೪॥

ರಾವಣ ಕುಂಭಕರ್ಣರಿಂದ ಪೀಡಿತ ದೇವತಾವೃಂದ,
ಬ್ರಹ್ಮರುದ್ರಾದಿಗಳು ಧಾವಿಸಿದರು ಶೇಷಶಾಯಿಯ ಮುಂದ.
ಕ್ಷೀರಸಾಗರದಲ್ಲಿ ಶೇಷನ ಮೇಲೆ ಮಲಗಿದ್ದ ಶ್ರೀಹರಿ,

ದೇವಾನುದೇವತೆಗಳೆಲ್ಲ ಹರಿಸಿದರು ಸ್ತೋತ್ರದ ಝರಿ.

ತ್ವಮೇಕ ಈಶಃ ಪರಮಃ ಸ್ವತನ್ತ್ರಃ ತ್ವಮಾದಿರನ್ತೋ ಜಗತೋ ನಿಯೋಕ್ತಾ ।
ತ್ವದಾಜ್ಞಯೈವಾಖಿಲಮಮ್ಬುಜೋದ್ಭವಾ ವಿತೇನಿರೇsಗ್ರ್ಯಾಶ್ಚರಮಾಶ್ಚ ಯೇsನ್ಯೇ ॥೩.೫೫॥

ಈ ಜಗತ್ತಿಗೆ ನೀನೊಬ್ಬನೇ ಒಬ್ಬ ಒಡೆಯ,
ಈ ಜಗತ್ತು ನಿನ್ನಿಂದಲೇ ಆದದ್ದು ಉದಯ.
ನೀನೇ ಆದಿ ನೀನೇ ಅಂತ್ಯ ನೀನೇ ಪ್ರೇರಕ,
ನಿನ್ನಾಜ್ಞೆಯಿಂದಲೇ ಬ್ರಹ್ಮಂದಿರ ಸೃಷ್ಟಿಯ ಕಾಯಕ.
ಹಿಂದಿನ ಮುಂದಿನ ಇಂದಿನ ಬ್ರಹ್ಮನೂ ನಿನ್ನಾಜ್ಞಾಧಾರಕ.

ಮನುಷ್ಯಮಾನಾತ್ ತ್ರಿಶತಂ ಸಷಷ್ಟಿಕಂ ದಿವೌಕಸಾಮೇಕಮುಶನ್ತಿ ವತ್ಸರಮ್ ।
ದ್ವಿಷಟ್ಸಹಸ್ರೈರಪಿ ತೈಶ್ಚತುರ್ಯದಂ ತ್ರೇತಾದಿಭಿಃ ಪಾದಶ ಏವ ಹೀನೈಃ   ॥೩.೫೬॥

ಮನುಷ್ಯ ಮಾನದ ಮುನ್ನೂರರವತ್ತು ವರ್ಷ,
ದೇವತಾಮಾನಕ್ಕೆ ಅದು ಬರೀ ಒಂದು ವರ್ಷ.
ದೇವತೆಗಳ ಹನ್ನೆರಡು ಸಾವಿರ ವರ್ಷಗಳ ಕಾಲದ ಅವಧಿ,
ಮನುಷ್ಯರಿಗೆ ಕೃತ ತ್ರೇತಾ ದ್ವಾಪರ ಕಲಿಯುಗಗಳೆಂದು ನಿಗದಿ.
ಯುಗದಿಂದ ಯುಗಕ್ಕೆ ಕ್ರಮೇಣ ಕಾಲುಭಾಗ ಕಡಿತವಾಗೋ ಕ್ರಮ,
ಕಾಲಾಂತರ್ಗತ ಕಾಲನಿಯಾಮಕ ಕಾಲನಾಮಕನ ಕಾಣದ ನೇಮ.

ಸಹಸ್ರವೃತ್ತಂ ತದಹಃ ಸ್ವಯಮ್ಭುವೋ ನಿಶಾ ಚ ತನ್ಮಾನಮಿತಂ ಶರಚ್ಛತಮ್ ।
ತ್ವದಾಜ್ಞಯಾ ಸ್ವಾನನುಭೂಯ ಭೋಗಾನುಪೈತಿ ಸೋsಪಿತ್ವರಿತಸ್ತ್ವದನ್ತಿಕಮ್  ॥೩.೫೭॥

ಸಾವಿರ ಬಾರಿ ಸುತ್ತಿದಾಗ ಚತುರ್ಯುಗ ಬ್ರಹ್ಮನ ಒಂದು ಹಗಲು,
ಸಾವಿರ ಬಾರಿ ಸುತ್ತಿದಾಗ ಚತುರ್ಯುಗ ಬ್ರಹ್ಮನ ಒಂದು ಇರುಳು.
ಈ ಗಣನೆಯಿಂದ ಬ್ರಹ್ಮನ ಸಾಧನೆ ನೂರು ವರ್ಷ.
ತನ್ನ ಕೆಲಸಗಳ ಪೂಜೆಮುಗಿಸಿ ನಿನ್ನ ಸೇರುವ ಹರ್ಷ.
[Contributed by Shri Govind Magal]

Sunday, 25 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 52 - 53


ತತಃ ಪುಲಸ್ತ್ಯಸ್ಯ ಕುಲೇ ಪ್ರಸೂತೌ ತಾವಾದಿದೈತ್ಯೌ ಜಗದೇಕಶತ್ರೂ ।
ಪರೈರವಧ್ಯೌ ವರತಃ ಪುರಾ ಹರೇಃ ಸುರೈರಜೈಯೌ ಚ ವರಾದ್ ವಿಧಾತುಃ  ॥೩.೫೨॥

ಆನಂತರ ಪುಲಸ್ತ್ಯ ಕುಲದಲ್ಲಿ ಹುಟ್ಟಿದ ಆದಿದೈತ್ಯರು,
ಬ್ರಹ್ಮವರಬಲದಿಂದಾದರು ಅವಧ್ಯರು ಅಜೇಯರು.

ಸರ್ವೈರಜೇಯಃ ಸ ಚ ಕುಮ್ಭಕರ್ಣಃ ಪುರಾತನೇ ಜನ್ಮನಿ ಧಾತುರೇವ ।
ವರಾನ್ನರಾದೀನೃತ ಏವ ರಾವಣಸ್ತದಾತನಾತ್ ತೌ ತ್ರಿದಶಾನಬಾಧತಾಮ್  ॥೩.೫೩॥

ಕುಂಭಕರ್ಣಗೆ ಬ್ರಹ್ಮವರದಿಂದ ಅಜೇಯತ್ವದ ಪಟ್ಟ,
ರಾವಣನೂ ನರವಾನರ ಬಿಟ್ಟು ಅಜೇಯನಾದ ಘಟ್ಟ.
ಇವರಿಬ್ಬರಿಂದಲೂ ದೇವತೆಗಳಿಗೆ ಬಗೆ ಬಗೆಯ ಪೀಡಾಟ.
 
ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್ ॥೩.೫೪॥

ರಾವಣ ಕುಂಭಕರ್ಣರಿಂದ ಪೀಡಿತ ದೇವತಾವೃಂದ,
ಬ್ರಹ್ಮರುದ್ರಾದಿಗಳು ಧಾವಿಸಿದರು ಶೇಷಶಾಯಿಯ ಮುಂದ.
ಕ್ಷೀರಸಾಗರದಲ್ಲಿ ಶೇಷನ ಮೇಲೆ ಮಲಗಿದ್ದ ಶ್ರೀಹರಿ,
ದೇವಾನುದೇವತೆಗಳೆಲ್ಲ ಹರಿಸಿದರು ಸ್ತೋತ್ರದ ಝರಿ.
[Contributed by Shri Govind Magal]


Saturday, 24 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 48 - 51


ಬಭೂವಿರೇ ಚನ್ದ್ರಲಲಾಮತೋ ವರಾತ್ ಪುರಾ ಹ್ಯಜೇಯಾ ಅಸುರಾ ಧರಾತಳೇ ।
ತೈರರ್ದಿತಾ ವಾಸವನಾಯಕಾಃ ಸುರಾಃ ಪುರೋ ನಿಧಾಯಾಬ್ಜಜಮಸ್ತುವನ್ ಹರಿಮ್ ॥೩.೪೮॥

ಸಜ್ಜನರ ರಕ್ಷಣಕೆ ದುರ್ಜನರ ಶಿಕ್ಷಣಕೆ ಅವತಾರಗಳ ಮಾಡಿದ ಹರಿ,
ಈಗ ಕಾಣುತ್ತೇವೆ ಪರಶುರಾಮಾವತಾರದ ಹಿನ್ನೆಲೆ ಮತ್ತು ಪರಿ.
ಹಿಂದೆ ರುದ್ರವರದಿಂದ ಉನ್ಮತ್ತರಾದ ದೈತ್ಯರ ಹುಟ್ಟು,
ಪೀಡಿತ ದೇವತೆಗಳು ಹರಿಯ ಬಳಿ ಸ್ತೋತ್ರ ಮಾಡಿದ ಗುಟ್ಟು.

ವಿರಿಞ್ಚಸೃಷ್ಟೈರ್ನಿತರಾಮವಧ್ಯೌ ವರಾದ್ ವಿಧಾತುರ್ದಿತಿಜೌ ಹಿರಣ್ಯಕೌ ।
ತಥಾ ಹಯಗ್ರೀವ ಉದಾರವಿಕ್ರಮಸ್ತ್ವಯಾ ಹತಾ ಬ್ರಹ್ಮಪುರಾತನೇನ   ॥೩.೪೯॥

ಬ್ರಹ್ಮಸೃಷ್ಟಿಯಿಂದ ಅವಧ್ಯರೆನಿಸಿದ ಹಿರಣ್ಯಾಕ್ಷ ಹಿರಣ್ಯಕಶಿಪು,
ಬಲಶಾಲಿ ಉನ್ಮತ್ತನಾದ ಹಯಗ್ರೀವನೆಂಬಂಥ ದೇವರಿಪು.
ಯಾವ ದೇವತೆಗಳಿಗೂ ಮಣಿಯದ ದುಷ್ಟ ರಕ್ಕಸ ಪಡೆ,
ನಿನ್ನವರ ಮಾತ ಕಾಯುತ ದೈತ್ಯರ ನಿವಾರಿಸಿದ ನಿನ್ನ ನಡೆ.
ದೇವತೆಗಳ ಸಜ್ಜನರ ಪರ ನಿನ್ನ ಯಾವತ್ತೂ ವ್ಯಾಪಾರ,
ಚಾಣಾಕ್ಷತನದಿ ಮಾಡಿ ಮುಗಿಸಿದೆ  ಅನೇಕ ರಾಕ್ಷಸರ  ಸಂಹಾರ.

ಸ ಚಾಸುರಾನ್ ರುದ್ರವರಾದವಧ್ಯಾನಿಮಾನ್ ಸಮಸ್ತೈರಪಿ ದೇವದೇವ ।
ನಿಸ್ಸೀಮಶಕ್ತ್ಯೈವ ನಿಹತ್ಯ ಸರ್ವಾನ್ ಹೃದಮ್ಬುಜೇ ನೋ ನಿವಸಾಥ ಶಶ್ವತ್ ॥೩.೫೦॥

ಅಂತಹ ಸರ್ವಶಕ್ತ ಸರ್ವಸ್ವತಂತ್ರ ಸ್ವಾಮಿಯಾದವನೇ,
ರುದ್ರವರದಿ ಮೆರೆವ ಕ್ಷತ್ರಿಯರ ನಿಗ್ರಹಿಸೆಲೆಂದು ಬಾ ನೀನೇ.
ದುಷ್ಟ ಕ್ಷತ್ರಿಯರನೆಲ್ಲಾ ಬಿಡದೆ ಸಂಹರಿಸು,
ನಮ್ಮ ಹೃದಯಕಮಲದಲಿ ಸದಾ ನೆಲೆಸು.

ಇತ್ಯಾದರೋಕ್ತಸ್ತ್ರಿದಶೈರಜೇಯಃ ಸ ಶಾರ್ಙ್ಗಧನ್ವಾsಥ ಭೃಗುದ್ವಹೋsಭೂತ್
ರಾಮೋ ನಿಹತ್ಯಾಸುರಪೂಗಮುಗ್ರಂ ನದಾನನಾದಿರ್ವಿದಧೇsಸೃಜೈವ  ॥೩.೫೧॥

ಹೀಗೆ ದೇವತೆಗಳಿಂದ ಸ್ತುತಿಸಲ್ಪಟ್ಟ ನಾರಾಯಣ,
ಕೊಡಲಿರಾಮನಾಗಿ ಮಾಡಿದ ಕ್ಷತ್ರಿಯರ ಮಾರಣ.
ಹೀಗೆ ಕ್ಷತ್ರಿಯರ ತರಿದ ಭೃಗುಕುಲೋದ್ಭವ,
ಹಾಗೇ ಮಾಡಿದ ಸಮಂತಪಂಚಕ ತೀರ್ತೋದ್ಭವ.
[Contributed by Shri Govind Magal]

Friday, 23 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 45 - 47

ವರಾದಜೇಯತ್ವಮವಾಪ ದೈತ್ಯರಾಟ್ ಚತುರ್ಮುಖಸ್ಯೈವ ಬಲಿರ್ಯದಾ ತದಾ ।
 ಅಜಾಯತೇನ್ದ್ರಾವರಜೋsದಿತೇಃ ಸುತೋ ಮಹಾನಜೋsಪ್ಯಬ್ಜಭವಾದಿಸಂಸ್ತುತಃ ॥೩.೪೫॥

ದೈತ್ಯರಿಗೆಲ್ಲಾ ಒಡೆಯನಾದ ಬಲಿಚಕ್ರವರ್ತಿ,
ಬ್ರಹ್ಮವರಬಲದಿ ಅಜೇಯತ್ವ ಪಡೆದ ಕೀರ್ತಿ.
ಭಗವಂತ ಅದಿತಿಯಲ್ಲಿ ಇಂದ್ರನ ತಮ್ಮನಾಗಿ ಬಂದ,
ದೇವತೆಗಳಿಂದ ವಂದಿತನಾಗಿ ಇತ್ತ ಅವರಿಗೆ ಆನಂದ.

ಸ ವಾಮನಾತ್ಮಾsಸುರಭೂಭೃತೋsಧ್ವರಂ ಜಗಾಮ ಗಾಂ ಸನ್ನಮಯನ್ ಪದೇಪದೇ ।
ಜಹಾರ ಚಾಸ್ಮಾಚ್ಛಲತಸ್ತ್ರಿವಿಷ್ಟಪಂತ್ರಿಭಿಃ ಕ್ರಮೈಸ್ತಚ್ಚ ದದೌ ನಿಜಾಗ್ರಜೇ   ॥೩.೪೬॥

ನಾರಾಯಣನೇ ವಟುವೇಷದ ವಾಮನನಾದ,
ಬಲಿ ಯಜ್ಞಮಂಟಪಕೆ ಭೂಮಿ ಭಾಗಿಸುತಾ ನಡೆದ.
ಬಲಿಯಲ್ಲಿ ಬೇಡಿದ ಚಮತ್ಕಾರದಿ ಮೂರು ಪಾದ ಭೂಮಿ ದಾನ,
ಮೂರು ಹೆಜ್ಜೆಯಲಿ ತೋರಿದ ಮೂರ್ಲೋಕವೂ ತನ್ನದೇ ಅಧೀನ.
ಇಲ್ಲಿ ಅಣ್ಣ ಇಂದ್ರನಾದರೆ ತಮ್ಮನಾದ ವಾಮನ,
ಪಡೆದ ಮೂರ್ಲೋಕವನ್ನು ಅಣ್ಣಗೆ ಮಾಡಿದ ಪ್ರದಾನ.

ಪಿತಾಮಹೇನಾಸ್ಯ ಪುರಾ ಹಿ ಯಾಚಿತೋ ಬಲೇಃ ಕೃತೇ ಕೇಶವ ಆಹ ಯದ್ ವಚಃ ।
ನಾಯಾಞ್ಚ ಯಾsಹಂ ಪ್ರತಿಹನ್ಮಿ ತಂ ಬಲಿಂ ಶುಭಾನನೇತ್ಯೇವ ತತೋsಭ್ಯಯಾಚತ ॥೩.೪೭॥

ಭಗವಂತ ನೃಸಿಂಹ ಭಕ್ತಪ್ರಹ್ಲಾದನ ಸಂಬಂಧದ ರೀತಿ,
ಕೊಟ್ಟ ಮಾತನುಳಿಸಿದ ತೋರಿ ಅಪಾರ ಅನುಗ್ರಹ ಪ್ರೀತಿ.
ಪ್ರಹ್ಲಾದನ ವಂಶದ ಮೇಲವನ ವಿಶೇಷ ಅನುಗ್ರಹ,

ದಂಡಿಸಿ ತುಳಿದು ಮಾಡಲಿಲ್ಲವ  ಬಲಿಯ ನಿಗ್ರಹ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 44


ಸುರಾಸುರಾಣಾಮುದಧಿಂ ವಿಮಥ್ನತಾಂ ದಧಾರ ಪೃಷ್ಠೇನ ಗಿರಿಂ ಸ ಮನ್ದರಮ್ ।
ವರಪ್ರದಾನಾದಪರೈರಧಾರ್ಯಂ ಹರಸ್ಯ ಕೂರ್ಮೋ ಬೃಹದಣ್ಡವೋಢಾ   ॥೩.೪೪॥

ದೇವತೆಗಳು ಅಸುರರಿಂದಾಯಿತು ಕ್ಷೀರ ಸಮುದ್ರ ಮಥನ,
ಕೂರ್ಮರೂಪಿಯಾಗಿ ಹರಿ ಮಾಡಿದ ಮಂದರ ಧಾರಣ.
ಇತರರು ಮಂದರ ಹೊರಲಾಗದಂತೆ ಸದಾಶಿವನ ವರ,
ಬ್ರಹ್ಮಾಂಡವನೇ ಹೊತ್ತವಗೆ ಇದ್ಯಾವ ಸೀಮೆಯ ವ್ಯಾಪಾರ.

 (ಗ್ರಂಥಾಧ್ಯಯನಕೆ ಬೇಕಾದರೆ ಸ್ಫೂರ್ತಿ,
ಸ್ಮರಿಸಿಕೊಳ್ಳಬೇಕು ಅಮೃತ ಮಥನದ ನೀತಿ,
ಸುರ ಅಸುರರಿಬ್ಬರೂ ಮಾಡಿದ ಮಥನ,
ಒಳಿತು ಕೆಡುಕುಗಳ ತಿಕ್ಕಾಟದ ಚಿತ್ರಣ,
ಮನವೇ ಕ್ಷೀರಸಾಗರ ಕಾಮವದು ವಾಸುಕಿ,
ಭದ್ರತಳಕ್ಕೆ ಹರಿ ಕೂತ ಕೂರ್ಮನಾಗಿ ಬೆನ್ಹಾಕಿ,
ಮೊದಲು ಬರುವುದೇ ಘೋರ ಹಾಲಾಹಲ
ಬೇಕು ನೀಲಕಂಠನಂತೆ ನಿರ್ಬಂಧಿಸುವ ಛಲ,
ಕಂಠದಿಂದ ಕೆಳಗಿಳಿಯದಿದ್ದರೆ ವಿಷ,
ಮಾತು ಮನವಾಗುವುದು ಪೀಯೂಷ,
ಮಾತು -ಪಾರ್ವತಿ ; ಮನವದು-ರುದ್ರ,
ಇಬ್ಬರ ಅನುಗ್ರಹವಿರೆ ಎಲ್ಲವೂ ಸುಭದ್ರ).
[Contributed by Shri Govind Magal]

Wednesday, 21 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 42 - 43


ಅಥೋ ದಿತೇರ್ಜ್ಯೇಷ್ಠಸುತೇನ ಶಶ್ವತ್ ಪ್ರಪೀಡಿತಾ ಬ್ರಹ್ಮವರಾತ್ ಸುರೇಶಾಃ ।
ಹರಿಂ ವಿರಿಞ್ಚೇನ ಸಹೋಪಜಗ್ಮುರ್ದೌರಾತ್ಮ್ಯಮಸ್ಯಾಪಿ ಶಶಂಸುರಸ್ಮೈ   ॥೩.೪೨॥

ಬ್ರಹ್ಮ ವರಬಲದಿಂದ ದಿತಿಪುತ್ರ ಹಿರಣ್ಯಕಶಿಪು ಉನ್ಮತ್ತ,
ದೇವಗಣವೆಲ್ಲವೂ ಅವನಿಂದ ವಿಧ ವಿಧವಾಗಿ ಪೀಡಿತ.
ದೇವೋತ್ತಮರೆಲ್ಲರೂ ಬ್ರಹ್ಮನೊಂದಿಗೆ ಹರಿಯ ಬಳಿ ಬಂದು,
ದಿತಿಪುತ್ರನ ದೌರ್ಜನ್ಯದ ಅರಿಕೆ ಮಾಡಿಕೊಂಡರು ನೊಂದು.

ಅಭಿಷ್ಟುತಸ್ತೈರ್ಹರಿರುಗ್ರವೀರ್ಯೋ ನೃಸಿಂಹರೋಪೇಣ ಸ ಆವಿರಾಸೀತ್ ।
ಹತ್ವಾಹಿರಣ್ಯಂ ಚ ಸುತಾಯ ತಸ್ಯ ದತ್ವಾsಭಯಂ ದೇವಗಣಾನತೋಷಯತ್  ॥೩.೪೩॥

ದೇವತೆಗಳಿಂದ ಸ್ತುತಿಸಲ್ಪಟ್ಟ ನಾರಾಯಣ,
ನಾರಸಿಂಹನಾಗಿ ಕಂಬದಲ್ಲಾದ ಅನಾವರಣ.
ಮುಗಿಸಿದ ಹಿರಣ್ಯಕಶಿಪುವಿನ ಸಂಹಾರದ ಕೆಲಸ,
ಪ್ರಹ್ಲಾದಗೆ ಅಭಯವಿತ್ತು ದೇವತೆಗಳಿಗಿತ್ತ ಮಂದಹಾಸ.
[Contributed by Shri Govind Magal]

Tuesday, 20 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 40 - 41


ಅಥೋ ವಿಧಾತುರ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇನ್ದ್ರಃ ।
ನಿಹತ್ಯ ತಂ ಮತ್ಸ್ಯವಪುರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ ॥೩.೪೦॥

ಬಳಿಕ ಹೊರಟಿತು ಬ್ರಹ್ಮನ ಮುಖದಿಂದ ವೇದಧಾರ,
ಅದಾಯಿತು ಹಯಗ್ರೀವನೆಂಬ ಅಸುರನಿಂದ ಅಪಹಾರ.
ಮತ್ಸ್ಯಾವತಾರಿ ಹರಿಯಿಂದ ಆಯಿತು ಅಸುರನ ಸಂಹಾರ,
ಮನು ಮುನಿಗಳ ರಕ್ಷಿಸಿ ವೇದಗಳ ಬ್ರಹ್ಮಗೆ ಇತ್ತ ಶೂರ.
ವೇದಗಳ ಅಪಹಾರವೆಂದರೆ ಅಭಿಮಾನಿ ದೇವತೆಗಳ ಅಪಹಾರ,
ವೇದವೇದ್ಯ ಭಗವಂತನಿಂದ ರಕ್ಕಸ ಸಂಹಾರ-ಸೂಕ್ತ ಪರಿಹಾರ.

ಮನ್ವನ್ತರಪ್ರಳಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವದೇವಃ ।
ವೈವಸ್ವತಾಯೋತ್ತಮಸಂವಿದಾತ್ಮಾ ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್ ॥೩.೪೧॥

ಚಾಕ್ಷುಷ ಮನ್ವಂತರದ ಪ್ರಳಯ ಕಾಲದ ಸಂದರ್ಭ,
ಮತ್ಸ್ಯರೂಪಿ ಹರಿ ದೇವತೆಗಳಿಗೆಲ್ಲಾ ಮೂಲಗರ್ಭ.
ವೈವಸ್ವತ ಮನುವಿಗೆ ತಿಳಿಸಿದ ವಿಷ್ಣು ಸ್ವರೂಪ,
ಉಪದೇಶಿಸುತ್ತಾ ಹಚ್ಚಿದ ಶಾಸ್ತ್ರ ಜ್ಞಾನದ ದೀಪ.
[Contributed by Shri Govind Magal]

Monday, 19 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 37 - 39


ತತಃ ಸ ಮಗ್ನಾಮಲಯೋ ಲಯೋದಧೌ ಮಹೀಂ ವಿಲೋಕ್ಯಾsಶು ಹರಿರ್ವರಾಹಃ ।
ಭೂತ್ವಾ ವಿರಿಞ್ಚಾರ್ಥ ಇಮಾಂ ಸಶೈಲಾಮುದ್ ಧೃತ್ಯ ವಾರಾಮುಪರಿ ನ್ಯಧಾತ್ ಸ್ಥಿರಮ್ ॥೩.೩೭॥

ಆಯಿತು ಬ್ರಹ್ಮಾಂಡ ದೇವತೆಗಳು ಇತರ ಸೃಷ್ಟಿಯ ಆಟ,
ನಾರಾಯಣ ನೋಡಿದ ಭೂಮಿ ಮುಳುಗುತ್ತಿರುವ ನೋಟ.
ವರಾಹ ತಾನಾಗಿ ಪ್ರಳಯ ಸಮುದ್ರವ ಹೊಕ್ಕ ರೂಪ,
ಬ್ರಹ್ಮಗಾಗಿ  ಭೂಮಿಯ ಎತ್ತಿ ಗಟ್ಟಿಯಾಗಿ ಇಟ್ಟ ತಾ  ಭೂಪ.

ಅಥಾಬ್ಜನಾಭಪ್ರತಿಹಾರಪಾಲೌ ಶಾಪಾತ್ ತ್ರಿಶೋ ಭೂಮಿತಳೇsಭಿಜಾತೌ ।
ದಿತ್ಯಾಂ ಹಿರಣ್ಯಾವಥ ರಾಕ್ಷಸೌ ಚ ಪೈತೃಷ್ವಸೇಯೌ ಚ ಹರೇಃ ಪರಸ್ತಾತ್ ॥೩.೩೮॥

ಭಗವಂತನ ದ್ವಾರಪಾಲಕ ಜಯವಿಜಯರಿಗೆ ಶಾಪ,
ಮೂರು ಜನ್ಮ ಹರಿವೈರಿಗಳಾಗಿ ಹುಟ್ಟಿಬರುವ ತಾಪ.
ಹಿರಣ್ಯಕಶಿಪು ಹಿರಣ್ಯಾಕ್ಷರಾದರು ಆದಿಯಲ್ಲಿ,
ರಾವಣ ಕುಂಭಕರ್ಣರಾದರು ಮಧ್ಯದಲ್ಲಿ,
ಶಿಶುಪಾಲ ದಂತವಕ್ರರಾದರು ಅಂತ್ಯದಲ್ಲಿ.

ಹತೋ ಹಿರಣ್ಯಾಕ್ಷ ಉದಾರವಿಕ್ರಮೋ ದಿತೇಃ ಸುತೋ ಯೋsವರಜಃ ಸುರಾರ್ಥೇ ।
ಧಾತ್ರಾsರ್ಥಿತೇನೈವ ವರಾಹರೂಪಿಣಾ ಧರೋದ್ಧೃತೌ ಪೂರ್ವಹತೋsಬ್ಜಜೋದ್ಭವಃ ॥೩.೩೯॥

ದಿತಿಪುತ್ರರಲ್ಲಿ ಕಿರಿಯವನಾದ ಬಲಶಾಲಿ ಹಿರಣ್ಯಾಕ್ಷನಾತ,
ವರಾಹರೂಪಿ  ಭುವಿಯ ಎತ್ತುವ ಕಾಲದಿ ಹತನಾದನಾತ.
ಹಿಂದೊಮ್ಮೆ ಭೂಮಿ ಕುಸಿಯುವಾಗ ಎತ್ತಿದ್ದ ಭಗವಂತ,
ಆಗ ಹತನಾದ ಹಿರಣ್ಯಾಕ್ಷನವನು ಬ್ರಹ್ಮದೇವನ ಪುತ್ರನಾತ.
[Contributed by Shri Govind Magal]

Sunday, 18 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 32 - 36


ಏವಂ ಪುನಃ ಸೃಜತೇ ಸರ್ವಮೇತದನಾದ್ಯನನ್ತೋ ಹಿ ಜಗತ್ ಪ್ರವಾಹಃ ।
ನಿತ್ಯಾಶ್ಚ ಜೀವಾಃ ಪ್ರಕೃತಿಶ್ಚ ನಿತ್ಯಾ ಕಾಲಶ್ಚ ನಿತ್ಯಃ ಕಿಮು ದೇವದೇವಃ ॥೩.೩೨॥

ಹೀಗೆ ಭಗವಂತನ ಸೃಷ್ಟಿಯದು ಅನವರತ ಅಬಾಧಿತ,
ಜೀವರು ನಿತ್ಯ,ಪ್ರಕೃತಿ ನಿತ್ಯ,ಕಾಲ ನಿತ್ಯ,ದೇವರು ನಿತ್ಯರಲ್ಲಿ ನಿತ್ಯ.

ಯಥಾ ಸಮುದ್ರಾತ್ ಸರಿತಃ ಪ್ರಜಾತಾಃ ಪುನಸ್ತಮೇವ ಪ್ರವಿಶನ್ತಿ ಶಶ್ವತ್ ।
ಏವಂ ಹರೇರ್ನಿತ್ಯಜಗತ್ ಪ್ರವಾಹಸ್ತಮೇವ ಚಾಸೌ ಪ್ರವಿಶತ್ಯಜಸ್ರಮ್ ॥೩.೩೩॥

ಹೇಗೆ ನದಿಗಳ ಮೂಲವದು ಕಡಲು,
ಮತ್ತೆ ಸೇರುತ್ತವೋ ಅದೇ ಕಡಲ ಒಡಲು.
ಭಗವಂತನಿಂದ ಹೊರಡುವ ಜಗತ್ತಿನ ಪ್ರವಾಹ,
ಮತ್ತವನನ್ನೇ ಹೊಂದುವವು ಮರು ಆಶ್ರಯ.

ಏವಂ ವಿದುರ್ಯೇ ಪರಮಾಮನನ್ತಾಮಜಸ್ಯ ಶಕ್ತಿಂ ಪುರುಷೋತ್ತಮಸ್ಯ ।
ತಸ್ಯ ಪ್ರಸಾದಾದಥ ದಗ್ಧದೋಷಾಸ್ತಮಾಪ್ನುವನ್ತ್ಯಾಶು ಪರಂ ಸುರೇಶಮ್ ॥೩.೩೪॥

ಈ ರೀತಿಯ ಹರಿಯ ಪುರುಷೋತ್ತಮತ್ವದ ಮರ್ಮ,
ಬಿತ್ತಿ ಸಮರ್ಥ ಜ್ಞಾನ ಕಳೆಯುತ್ತದೆ ಬುತ್ತಿಯಾದ ಕರ್ಮ.
ಭಗವದ್ ಅನುಗ್ರಹದಿಂದ ಕಳೆಯುತ್ತದೆ ದೋಷ,
ಲಭಿಸುವುದು ಯೋಗ್ಯತೆಯಂತೆ ಅವನ ಸಹವಾಸ.

ದೇವಾನಿಮಾನ್ ಮುಕ್ತಸಮಸ್ತದೋಷಾನ್ ಸ್ವಸನ್ನಿಧಾನೇ ವಿನಿವೇಶ್ಯ ದೇವಃ ।
ಪುನಸ್ತದನ್ಯಾನಧಿಕಾರಯೋಗ್ಯಾಂಸ್ತತ್ತದ್ಗಣಾನೇವ ಪದೇ ನಿಯುಙ್ಕ್ತೇ ॥೩.೩೫॥

ಈ ರೀತಿ ದೋಷಮುಕ್ತರಾದ ದೇವತಾವೃಂದ,
ಲಭ್ಯವವರಿಗೆ  ಭಗವದ್ಸನ್ನಿಧಾನದ ಆನಂದ.
ಬೇರೆ ಅರ್ಹ ತಾರತಮ್ಯೋಕ್ತ ದೇವತಾ ಗಣ,
ಆಗುತ್ತಾರೆ ವಿವಿಧ ಪದವಿಗಳಲ್ಲಿ ನಿಯೋಜನ.

ಪುನಶ್ಚ ಮಾರೀಚತ ಏವ ದೇವಾ ಜಾತಾ ಅದಿತ್ಯಾಮಸುರಾಶ್ಚ ದಿತ್ಯಾಮ್ ।
ಗಾವೋ ಮೃಗಾಃ ಪಕ್ಷ್ಯುರಗಾದಿಸತ್ತ್ವಾ ದಾಕ್ಷಾಯಣೀಷ್ವೇವ ಸಮಸ್ತಶೋsಪಿ ॥೩.೩೬॥

ಕಾಶ್ಯಪ ಅದಿತಿಯರಲ್ಲಿ ಆದಿತ್ಯರು,
ದಿತಿಯಲ್ಲಿ ದೈತ್ಯರು ಹುಟ್ಟಿ ಬಂದರು.
ಇತರ ದಕ್ಷ ಪುತ್ರಿಯರಲ್ಲಿ ಗೋವು ಮೃಗ ಪಕ್ಷಿ ಹಾವು,
ಮೊದಲಾಯ್ತು  ಪ್ರಾಣಿ ಜೀವಿಗಳ ಸೃಷ್ಟಿಯ ಹರವು.
[Contributed by Shri Govind Magal]