Sunday 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 139-151

 ಭೀಮಸ್ಯ ನಾನದತ ಏವ ಮಹಾಸ್ವನೇನ ವಿಣ್ಮೂತ್ರಶೋಣಿತಮಥೋ ಮೃತಿಮಾಪುರೇಕೇ ।

ಭೀತೇಷು ಸರ್ವನೃಪತಿಷ್ವಮುಮಾಪ ತೂರ್ಣ್ಣಂ ಕರ್ಣ್ಣೋ ವಿಕರ್ಣ್ಣಮುಖರಾ ಅಪಿ ಧಾರ್ತ್ತರಾಷ್ಟ್ರಾಃ ॥೨೬.೧೩೯ ॥

 

ಭೀಮಸೇನ ಮಾಡಿದ ಮಹಾಧ್ವನಿಯ ಗರ್ಜನೆ, ತರಿಸಿತು ಬಹುಜನಕೆ ಮಲ-ಮೂತ್ರ ವಿಸರ್ಜನೆ. ಕೆಲವರಿಗಾಯಿತು ರಕ್ತವಾಂತಿ, ಕೆಲವರು ಪಡೆದರು ಚಿರಶಾಂತಿ.

ಹೀಗೆ ಎಲ್ಲಾ ರಾಜರು ಆಗಲು ಭಯಭೀತ, ಆಗ ಕರ್ಣ ಸಾಗಿಬಂದ ಭೀಮಸೇನನತ್ತ.

ಜೊತೆಗೆ ವಿಕರ್ಣ ಮುಂತಾದ ಧೃತರಾಷ್ಟ್ರಪುತ್ರರು, ಯುದ್ಧಕ್ಕೆಂದು ಭೀಮಸೇನಗೆದುರಾಗಿ ಬಂದರು.

 

ಹತ್ವಾ ವಿಕರ್ಣ್ಣಮುತ ತತ್ರ ಚ ಚಿತ್ರಸೇನಂ ಸಞ್ಚೂರ್ಣ್ಣಿತಂ ಚ ವಿದಧೇ ರಥಮರ್ಕ್ಕಸೂನೋಃ ।

ಘೋರೈಃ ಶರೈಃ ಪುನರಪಿ ಸ್ಮ ಸಮರ್ದ್ದ್ಯಮಾನಃ  ಕರ್ಣ್ಣೋSಪಯಾನಮಕರೋದ್ ದ್ರುತಮೇವ ಭೀಮಾತ್ ॥೨೬.೧೪೦ ॥

 

ಆ ಯುದ್ಧದಲ್ಲಿ ಭೀಮ ವಿಕರ್ಣ ಹಾಗೂ ಚಿತ್ರಸೇನನ ಕೊಂದ ,

ಸೂರ್ಯಪುತ್ರ ಕರ್ಣನ ರಥವನ್ನು  ಪುಡಿ-ಪುಡಿ ಮಾಡಿದ.

ಭೀಮಬಾಣಗಳಿಂದ ಮತ್ತೆಮತ್ತೆ ಪೀಡಿತನಾದ ಕರ್ಣ,

ಜರ್ಜರಿತನಾಗಿ ಶೀಘ್ರದಲ್ಲಿಯೇ ಮಾಡಿದ ಪಲಾಯನ.

 

 

ಆಶ್ವಾಸ್ಯ ಚೈವ ಸುಚಿರಂ ಪುನರೇವ ಭೀಮಂ ಯುದ್ಧಾಯ ಯಾತಿ ಧೃತರಾಷ್ಟ್ರಸುತೈಸ್ತಥಾSನ್ಯೈಃ ।

ತಾಂಶ್ಚೈವ ತತ್ರ ವಿನಿಹತ್ಯ ತಥೈವ ಕರ್ಣ್ಣೋ ವ್ಯಶ್ವಾಯುಧಃ ಕೃತ ಉತಾಪಯಯೌ ಕ್ಷಣೇನ ॥೨೬.೧೪೧ ॥

 

ಕರ್ಣ ಶಿಬಿರದಲ್ಲಿ ಸ್ವಲ್ಪ ಹೊತ್ತು ಚೇತರಿಸಿಕೊಂಡ, ಅಳಿದುಳಿದ ಧೃತರಾಷ್ಟ್ರಪುತ್ರರ ಜೊತೆ ಕರಕೊಂಡ.

ಯುದ್ಧಕ್ಕೆಂದು ಭೀಮಸೇನಗೆ ಎದುರಾಗಿ ಬಂದ ,

ಆಗಲೂ ಭೀಮ ಧೃತರಾಷ್ಟ್ರನ ಮಕ್ಕಳ ಕೊಂದ. ಕ್ಷಣದಲ್ಲೇ ಕರ್ಣನಾದ ಕುದುರೆ ಹಾಗು ರಥಹೀನ,  ದಾರಿಕಾಣದವನಾಗಿ ಮತ್ತೆ ಮಾಡಿದ ಪಲಾಯನ.

 

ವಿಕರ್ಣ್ಣಚಿತ್ರಸೇನಾದ್ಯಾ ಏವಂ ವೀರತಮಾಃ ಸುತಾಃ ।

ಕರ್ಣ್ಣಸ್ಯ ಪಶ್ಯತೋ ಭೀಮಬಾಣಕೃತ್ತಶಿರೋಧರಾಃ ॥ ೨೬.೧೪೨ ॥

 

ನಿಪೇತುರ್ದ್ಧೃತರಾಷ್ಟ್ರಸ್ಯ ರಥೇಭ್ಯಃ ಪೃಥಿವೀತಳೇ ।

ತ್ರಯೋವಿಂಶತಿರೇವಾತ್ರ ಕರ್ಣ್ಣಸಾಹಾಯ್ಯಕಾಙ್ಕ್ಷಿಣಃ ॥ ೨೬.೧೪೩ ॥

 

ಏಕವಿಂಶತಿವಾರಂ ಚ ವ್ಯಶ್ವಸೂತರಥಧ್ವಜಃ ।

ಗಾಢಮಭ್ಯರ್ದ್ದಿತಸ್ತೀಕ್ಷ್ಣೈಃ ಶರೈರ್ಭೀಮೇನ ಸಂಯುಗೇ ॥ ೨೬.೧೪೪ ॥

 

ಹೀಗೆ ಕರ್ಣನಿಗೆ ಸಹಾಯ ಮಾಡುತ್ತಿದ್ದ ಪರಾಕ್ರಮಿಗಳಾದ ವಿಕರ್ಣ, ಚಿತ್ರಸೇನ, ಮೊದಲಾದ ಪ್ರಬಲರು,

ಇಪ್ಪತ್ಮೂರು ಧೃತರಾಷ್ಟ್ರನ ಮಕ್ಕಳು ಕರ್ಣ ನೋಡುತ್ತಿರುವಂತೆ ಭೀಮನ ಬಾಣದಿಂದ ತಲೆ ಉರುಳಿ ಬಿದ್ದರು.

 

ಕರ್ಣ ಭೀಮನ ತೀಕ್ಷ್ಣ ಬಾಣಗಳಿಂದ ಚೆನ್ನಾಗಿ ಪೆಟ್ಟುತಿಂದ,

ಇಪ್ಪತ್ತೊಂದು ಬಾರಿ ರಥ, ಕುದುರೆ, ಧ್ವಜವನ್ನು ಕಳಕೊಂಡ.

 

ಪ್ರಾಣಸಂಶಯಮಾಪನ್ನಃ ಸರ್ವಲೋಕಸ್ಯ ಪಶ್ಯತಃ ।

ರಣಂ ತ್ಯಕ್ತ್ವಾ ಪ್ರ ದುದ್ರಾವ ರುದನ್ ದುಃಖಾತ್ ಪುನಃಪುನಃ ॥ ೨೬.೧೪೫ ॥

 

ಎಲ್ಲರೂ ನೋಡುತ್ತಿರುವಂತೇ ತಾನು ಬದುಕುಳಿಯುವ ವಿಷಯದಲ್ಲಿ ಸಂಶಯ ಹೊಂದಿದ ಕರ್ಣ,

ರಣಭೂಮಿಯನ್ನು ಬಿಟ್ಟು ದುಃಖದಿಂದ ಮತ್ತೆಮತ್ತೆ ರೋದಿಸುತ್ತಾ ಮಾಡುತ್ತಾನೆ ಪಲಾಯನ.

 

 

ದ್ವಾವಿಂಶತಿಮಯುದ್ಧೇ ತು ರಾಮದತ್ತಂ ಸುಭಾಸ್ವರಮ್ ।

ಅಭೇದ್ಯಂ ರಥಮಾರುಹ್ಯ ವಿಜಯಂ ಧನುರೇವ ಚ ॥ ೨೬.೧೪೬ ॥

 

ತದ್ದತ್ತಮೇವ ಸಙ್ಗೃಹ್ಯ ತೂಣೀ ಚಾಕ್ಷಯಸಾಯಕೌ ।

ಆಸಸಾದ್ ರಣೇ ಭೀಮಂ ಕರ್ಣ್ಣೋ ವೈಕರ್ತ್ತನೋ ವೃಷಾ ॥ ೨೬.೧೪೭ ॥

 

ಸೂರ್ಯಪುತ್ರನಾದ ಕರ್ಣನು ಯುದ್ಧದಲ್ಲಿ  ಇಪ್ಪತ್ತೆರಡನೇ ಬಾರಿ,

ಪರಶುರಾಮದತ್ತ ಹೊಳೆವ ಅಭೇದ್ಯ ಅಪೂರ್ವ ರಥವನ್ನೇರಿ,

ಪರಶುರಾಮನೇ ಕೊಟ್ಟಿದ್ದ ‘ವಿಜಯ’ ಎನ್ನುವ ಧನುಸ್ಸು,

ಅಕ್ಷಯಬತ್ತಳಿಕೆಯೊಂದಿಗೆ ಬಂದವನದು ಸಿಟ್ಟಿನ ಮನಸ್ಸು.

 

ಸುಘೋರ ಆಸೀತ್ ಸ ತಯೋರ್ವಿಮರ್ದ್ದೋ ಭೀಮಸ್ಯ ಕರ್ಣ್ಣಸ್ಯ ಚ ದೀರ್ಘಕಾಲಮ್ ।

ಆಕಾಶಮಾಚ್ಛಾದಯತೋಃ ಶರೌಘೈಃ ಪರಸ್ಪರಂ ಚೈವ ಸುರಕ್ತನೇತ್ರಯೋಃ ॥ ೨೬.೧೪೮ ॥

 

ಕೆಂಪರಳಿದ ಕಂಗಳ ಕರ್ಣ ಹಾಗೂ ಭೀಮಸೇನರ ಮಧ್ಯದಲ್ಲಿ,

ಪರಸ್ಪರ ಬಾಣಸಮೂಹದ ಮೋಡ ಆವರಿಸಿತು ದಿಕ್ಕುಗಳಲ್ಲಿ.

ನಡೆಯಿತು ಧೀರ್ಘಕಾಲದ ಘನ ಘೋರವಾದ ಯುದ್ಧವಲ್ಲಿ .

 

ತತೋ ಭೀಮೋ ಮಹಾಬಾಹುಃ ಸಹಜಾಭ್ಯಾಂ ಚ ಸಂಯುತಮ್ ।

ತ್ವಾಂ ತು ಕುಣ್ಡಲವರ್ಮ್ಮಭ್ಯಾಂ ಶಕ್ನುಯಾಂ ಹನ್ತುಮಞ್ಜಸಾ ॥ ೨೬.೧೪೯ ॥

 

ಇತಿ ಜ್ಞಾಪಯಿತುಂ ತಸ್ಯ ಕುಣ್ಡಲೇ ಕವಚಂ ತಥಾ ।

ಶರೈರುತ್ಕೃತ್ಯ ಸಮರೇ ಪಾತಯಾಮಾಸ ಭೂತಳೇ ॥ ೨೬.೧೫೦ ॥

 

ಆ ನಂತರ ಮಹಾಬಾಹುವಾದ ಭೀಮಸೇನ ಕರ್ಣಗೆ ಹೀಗೆ ಮಾಡುತ್ತಾನೆ,

ನಿನ್ನಲ್ಲಿದ್ದರೂ ಸಹಜ ಕವಚ ಕುಂಡಲ ನಿನ್ನ ಕೊಲ್ಲಲು ನಾ ಸಮರ್ಥನಿದ್ದೇನೆ’,

ಎಂಬುದನ್ನವನಿಗೆ ತಿಳಿಸಿಕೊಡಲೆಂದೇ , ಸೀಳಿದ ಕವಚಕುಂಡಲಗಳ ಬಾಣಗಳಿಂದೆ,

ಕತ್ತರಿಸಿ ಬಿಸುಟ ಅವನ್ನು ನೆಲಕಚ್ಚುವಂತೆ.

 

ಏವಂ ತಾನ್ಯಪಕೃಷ್ಯಾಹಂ ಹನ್ಯಾಂ ತ್ವಾಮಿತಿ ವೇದಯನ್ ।

ಪುನಶ್ಚ ಬಹುಭಿಸ್ತೀಕ್ಷ್ಣೈಃ ಶರೈರೇನಂ ಸಮಾರ್ದ್ದಯತ್ ॥ ೨೬.೧೫೧ ॥

 

ಹೀಗೆ ‘ಸಹಜವಾದ ಕವಚ-ಕುಂಡಲದಿಂದ ಬಂದಿದ್ದರೂ ಸಹಿತ,

ನಾನು ನಿನ್ನನ್ನು ಕೊಲ್ಲಲಾಗಿದ್ದೇನೆ ಸಮರ್ಥ ಎಂದು ತೋರಿಸುತ್ತಾ,

ಮತ್ತೆ ಬಹು ತೀಕ್ಷ್ಣವಾದ ಬಾಣಗಳ ಬಿಟ್ಟ ಕರ್ಣನ ಘಾಸಿಗೊಳಿಸುತ್ತ.

No comments:

Post a Comment

ಗೋ-ಕುಲ Go-Kula