Sunday, 25 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 27: 138-170

 

ತಂ ಶಙ್ಕಿತಂ ಕರ್ಣ್ಣಜಯೇ ಸ್ವಿನ್ನಗಾತ್ರಂ ಹರಿಸ್ತದಾ ।

ಸಙ್ಕೀರ್ತ್ತ್ಯ ಪೂರ್ವಕರ್ಮ್ಮಾಣಿ ನರಾವೇಶಂ ವಿಶೇಷತಃ ।

ವ್ಯಞ್ಜಯಾಮಾಸ ಧೈರ್ಯ್ಯಂ ಚ ತಸ್ಯಾSಸೀತ್ ತೇನ ಸುಸ್ಥಿರಮ್ ॥೨೭.೧೩೮ ॥

 

ಕರ್ಣನನ್ನು ಗೆಲ್ಲುತ್ತೇನೋ ಇಲ್ಲವೋ ಎಂಬ ಭಯದಿಂದ ಅರ್ಜುನ ಬೆವರುತ್ತಾನೆ,                                 ಪರಮಾತ್ಮನು ಅವನು ಮಾಡಿದ ಹಿಂದಿನ ಕೆಲಸಗಳನ್ನು ನೆನಪಿಸಿ ಕೊಡುತ್ತಾನೆ.

ಅವನಲ್ಲಿ ನರನ ಆವೇಶ ಇದೇ ಎಂಬುದನ್ನೂ ಹೇಳಿದ,

ಅವನಲ್ಲಿದ್ದ ನರಾವೇಶವನ್ನು ಉಕ್ಕುವಂತೆಯೂ ಮಾಡಿದ.

ಆಗ ಅರ್ಜುನನು ಸ್ಥಿರಧೈರ್ಯ ತುಂಬಿಕೊಂಡವನು ಆದ.

 

ಭೀಮಸ್ತದಾ ಶತ್ರುಬಲಂ ಸಮಸ್ತಂ ವಿದ್ರಾವಯಾಮಾಸ ಜಘಾನ ಚಾSಜೌ ।

ವೀರಾನ್ ರಣಾಯಾಭಿಮುಖಾನ್ ಸ್ವಯನ್ತ್ರಾ ಕುರ್ವಂಶ್ಚ ವಾರ್ತ್ತಾ ರಮಮಾಣ ಏವ ॥೨೭.೧೩೯ ॥

 

ಅಷ್ಟು ಹೊತ್ತಿಗೆ ಈ ಕಡೆ ಭೀಮಸೇನ, ಮಾಡಿಸಿದ ಶತ್ರುಪಡೆಯ ಪಲಾಯನ.

ಉಳಿದವರನ್ನು ಭೀಮಸೇನ ಕೊಂದ, ಅಭಿಮುಖವೀರರೊಂದಿಗೆ ಕಾದಿದ.

ವಿಶೋಕನೊಂದಿಗೆ ಹರಟೆ ಹೊಡೆಯುತ್ತಲೇ, ತರಿಯುತ್ತಿದ್ದ ಆನಂದದಿಂದ ಶತ್ರುಗಳ ತಲೆ .

 

ತದಾSSಸದತ್ ತಂ ಶಕುನಿಃ ಸಸೈನ್ಯೋ ದುರ್ಯ್ಯೋಧನಸ್ಯಾವರಜೈರುಪೇತಃ ।

ತಂ ಭೀಮಸೇನೋ ವಿರಥಂ ನಿರಾಯುಧಂ ವಿಧಾಯ ಬಾಣೈರ್ಭುವಿ ಚ ನ್ಯಪಾತಯತ್ ॥೨೭.೧೪೦ ॥

 

ಆಗ ದುರ್ಯೋಧನನ ತಮ್ಮಂದಿರೊಂದಿಗೆ,

ಶಕುನಿ ಸಾಗಿ ಬರುತ್ತಾನೆ ಸೈನ್ಯದೊಂದಿಗೆ.

ಅಂಥ ಶಕುನಿ ಭೀಮಸೇನನಿಗೆ ಎದುರಾಗಿ ಬರುತ್ತಾನೆ,

ಭೀಮ ಬಾಣಗಳಿಂದ ಆಯುಧಹೀನನ್ನಾಗಿ ಮಾಡುತ್ತಾನೆ,

ರಥಹೀನನನ್ನಾಗಿಯೂ ಮಾಡಿ ಭೂಮಿಯಲ್ಲಿ ಕೆಡವುತ್ತಾನೆ.

 

ನ ಜಘ್ನಿವಾಂಸ್ತಂ ಸಹದೇವಭಾಗಂ ಪ್ರಕಲ್ಪಿತಂ ಸ್ವೇನ ತದಾSಕ್ಷಗೋಷ್ಠ್ಯಾಮ್ ।

ತಂ ಮೂರ್ಚ್ಛಿತಂ ಶ್ವಾಸಮಾತ್ರಾವಶೇಷಂ ದುರ್ಯ್ಯೋಧನಃ ಸ್ವರಥೇನಾಪನಿನ್ಯೇ ॥೨೭.೧೪೧ ॥

 

ಸಹದೇವ ಶಕುನಿಯನ್ನು ತಾನು ಕೊಲ್ಲುತ್ತೇನೆ ಎಂದು ಹಿಂದೆ ಪ್ರತಿಜ್ಞೆ ಮಾಡಿದ್ದ,

ಆದ್ದರಿಂದ ಭೀಮಸೇನ ಯುದ್ಧದಲ್ಲಿ ಅವನನ್ನು ತಾನು ಕೊಲ್ಲದೇ ಬಿಟ್ಟುಬಿಟ್ಟಿದ್ದ .

ಮೂರ್ಛೆ ಹೊಂದಿ ಕೇವಲ ಶ್ವಾಸಮಾತ್ರ ಉಳಿದಿತ್ತು ಶಕುನಿಯಲ್ಲಿ,

ಅಂಥಾ ಶಕುನಿಯನ್ನು ದುರ್ಯೋಧನ ಆಚೆ ಕೊಂಡೊಯ್ದ ರಥದಲ್ಲಿ.

 

ದುರ್ಯ್ಯೋಧನಸ್ಯಾವರಜಾ ದಶಾತ್ರ ಪ್ರದುದ್ರುವುರ್ಭೀಮಸೇನಂ ವಿಹಾಯ ।

ತದಾSರ್ಜ್ಜುನಂ ವಾಸುದೇವಂ ಚ ದೃಷ್ಟ್ವಾ ಪ್ರೀತಃ ಶ್ರುತ್ವಾ ಧರ್ಮ್ಮರಾಜಪ್ರವೃತ್ತಿಮ್ ॥೨೭.೧೪೨ ॥

 

ದುರ್ಯೋಧನನ ಹತ್ತು ಮಂದಿ ತಮ್ಮಂದಿರು ಭೀಮಸೇನನನ್ನು ಬಿಟ್ಟು ಮಾಡುತ್ತಾರೆ ಪಲಾಯನ,

ಬರುತ್ತಿರುವ ಅರ್ಜುನ ಶ್ರೀಕೃಷ್ಣರನ್ನು ನೋಡಿ, ಧರ್ಮಜನ ಸುರಕ್ಷತೆ ಕೇಳಿ ಸಂತುಷ್ಟನಾದ ಭೀಮಸೇನ.

 

ಪುನಶ್ಚ ನಿಘ್ನನ್ತಮರಿಪ್ರವೀರಾನ್  ವಿದ್ರಾವಯನ್ತಂ ಚ ನಿಜಾಂ ವರೂಥಿನೀಮ್ ।

ಸಸಾರ ದುಃಶಾಸನ ಆತ್ತಧನ್ವಾ ಭೀಮೋSಪಿ ತಂ ಸಿಂಹ ಇವಾಭಿಪೇತಿವಾನ್ ॥೨೭.೧೪೩ ॥

 

ಪುನಃ, ಶತ್ರುಸೈನಿಕರನ್ನು ಕೊಲ್ಲುತ್ತಾ, ಸೈನ್ಯವನ್ನು ಓಡಿಸುತ್ತಿದ್ದ ಭೀಮಸೇನ,

ಇನ್ನೊಂದು ಧನುಸ್ಸನ್ನು ಹಿಡಿದುಕೊಂಡು ಅವನ ಎದುರಿಸುತ್ತಾನೆ ದುಶ್ಯಾಸನ.

ಸಿಂಹ ಮೃಗವ ಹೊಂದುವಂತೆ  ದುಃಶಾಸನನನ್ನು ಎದುರಿಸುತ್ತಾನೆ ಭೀಮಸೇನ . 

 

ತಂ ರೂಕ್ಷವಾಚೋ ಮುಹುರರ್ಪ್ಪಯನ್ತಂ ವಿಧಾಯ ಭೀಮೋ ವಿರಥಂ ಕ್ಷಣೇನ ।

ಪ್ರಗೃಹ್ಯ ಭೂಮೌ ವಿನಿಪಾತ್ಯ ವಕ್ಷೋ ವಿದಾರಯಾಮಾಸ ಗದಾಪ್ರಹಾರತಃ ॥೨೭.೧೪೪ ॥

 

ಕೆಟ್ಟ ರೀತಿಯಿಂದ ಕ್ರೂರವಾದ ಮಾತುಗಳನ್ನು,

ಮತ್ತೆ-ಮತ್ತೆ ನುಡಿಯುತ್ತಿದ್ದ ಆ ದುಃಶಾಸನನನ್ನು,

ಭೀಮಸೇನ ಕ್ಷಣದಲ್ಲವನ ರಥಹೀನನನ್ನಾಗಿ ಮಾಡಿದ ,

ನೆಲಕ್ಕೆ ಕೆಡವಿ, ಅವನ ಎದೆಗೆ ಗದಾಪ್ರಹಾರ ಮಾಡಿದ.

 

ಆಕ್ರಮ್ಯ ಕಣ್ಠಂ ಚ ಪದೋದರೇSಸ್ಯ ನಿವಿಶ್ಯ ಪಶ್ಯನ್ ಮುಖಮಾತ್ತರೋಷಃ ।

ವಿಕೋಶಮಾಕಾಶನಿಭಂ ವಿಧಾಯ ಮಹಾಸಿಮಸ್ಯೋರಸಿ ಸಞ್ಚಖಾನ ॥೨೭.೧೪೫ ॥

 

ಕಾಲಿನಿಂದ ಅವನ ಕುತ್ತಿಗೆಯನ್ನು ಒತ್ತುತ್ತಾನೆ ,

ಅವನ ಹೊಟ್ಟೆಯಮೇಲೆ ಕುಳಿತುಕೊಳ್ಳುತ್ತಾನೆ.

ಕೋಪದಿಂದ ಅವನ ಮುಖವನ್ನು ನೋಡಿದ ,

ಆಕಾಶಸದೃಶ ಮಹಾಖಡ್ಗವ ಒರೆಯಿಂದ ತೆಗೆದ.

ಭೀಮಸೇನ,ದುಃಶಾಸನನ ಎದೆಯನ್ನು ಸೀಳಿದ.

 

ಕೃತ್ವಾSಸ್ಯ ವಕ್ಷಸ್ಯುರುಸತ್ತಟಾಕಂ ಪಪೌ ನಿಕಾಮಂ ತೃಷಿತೋSಮೃತೋಪಮಮ್ ।

ತಚ್ಛೋಣಿತಾಮ್ಭೋ ಭ್ರಮದಕ್ಷಮೇನಂ ಸಂಸ್ಮಾರಯಾಮಾಸ ಪುರಾಕೃತಾನಿ ॥೨೭.೧೪೬ ॥

 

ದುಃಶಾಸನನ ವಕ್ಷಃಸ್ಥಳದಲ್ಲಿ ಅಗಲವಾದ ರಕ್ತದ ಮಡುವನ್ನು ಮಾಡಿದ ಭೀಮಸೇನ,            ಬಾಯಾರಿದವ ಅಮೃತ ಕುಡಿಯುವಂತೆ ಮಾಡಿ ತೋರಿದ ದುಃಶಾಸನನ ರಕ್ತಪಾನ.

ಆಗ ಕಣ್ಣನ್ನು ಹೊರಳಿಸುತ್ತಿದ್ದ ದುಶ್ಯಾಸನ,

ಹಿಂದೆ ಅವನು ಮಾಡಿದ ಕೆಟ್ಟ ಕರ್ಮಗಳನ್ನ, ನೆನಪಿಸಿ ಕೊಡುತ್ತಾನೆ ಆಗ ಭೀಮಸೇನ.

 

ವಾಕ್ಸಾಯಕಾಂಶ್ಚಾಸ್ಯ ಪುರಾ ಸಮರ್ಪ್ಪಿತಾನ್ ಸಂಸ್ಮಾರಯಾಮಾಸ ಪುನಃಪುನರ್ಭೃಶಮ್ ।

ದನ್ತಾನ್ತರಂ ನ ಪ್ರವಿವೇಶ ತಸ್ಯ ರಕ್ತಂ ಹ್ಯಪೇಯಂ ಪುರುಷಸ್ಯ ಜಾನತಃ ॥೨೭.೧೪೭ ॥

 

ಭೀಮಸೇನ ದುಶ್ಯಾಸನನಿಗೆ, ಅವನು ಮೊದಲು ಆಡಿದ ಚುಚ್ಚು ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿದ,

ಮಾನವರಕ್ತ ಪಾನಯೋಗ್ಯವಲ್ಲ ಎಂದು ತಿಳಿದ  ಭೀಮಸೇನ,ರಕ್ತ ತನ್ನ ಹಲ್ಲುಗಳ ಒಳಗಿಳಿಯದಂತೆ ತಡೆದ.

(ಭೀಕರವಾಗಿ ರಕ್ತಪಾನ ಮಾಡಿದಂತೆ ತೋರಿದ,

ರಕ್ತ ಕುಡಿಯದೇ ಯುದ್ಧಕೌಶಲ್ಯವನ್ನು ಮೆರೆದ). 

 

ತಥಾSಪಿ  ಶತ್ರುಪ್ರತಿಭೀಷಣಾಯ ಪಪಾವಿವಾSಸ್ವಾದ್ಯ ಪುನಃಪನರ್ಭೃಶಮ್ ।

ಸ್ಮರನ್ ನೃಹಿಂಹಂ ಭಗವನ್ತಮೀಶ್ವರಂ ಸ ಮನ್ಯುಸೂಕ್ತಂ ಚ ದದರ್ಶ ಭಕ್ತ್ಯಾ ॥೨೭.೧೪೮ ॥

 

‘ಯಸ್ತೇ ಮನ್ಯೋ’ ಇತ್ಯತೋ ನಾರಸಿಂಹಂ ಸೋಮಂ ತಸ್ಮೈ ಚಾರ್ಪ್ಪಯಚ್ಛೋಣಿತಾಖ್ಯಮ್ ।

ಯುದ್ಧಾಖ್ಯಯಜ್ಞೇ ಸೋಮಬುದ್ಧ್ಯಾsರಿವಕ್ಷ ಇಹೇತಿ ಸಾಮ್ನಾ ಗದಯಾ ವಿಭಿನ್ದನ್ ॥೨೭.೧೪೯ ॥

 

ಆದರೂ ಕೂಡಾ, ಶತ್ರುಗಳನ್ನು ಭಯಗೊಳಿಸಲು ಭೀಮಸೇನ,

ಮತ್ತೆ ಮತ್ತೆ ಅಭಿನಯಿಸಿದ ಮಾಡುತ್ತಿರುವನಂತೆ ರಕ್ತಪಾನ .

ಆ ಭೀಮಸೇನನು ಸರ್ವೇಶ್ವರನಾದ, ಪೂಜ್ಯನಾದ,

ಮನ್ಯುಸೂಕ್ತ ಪ್ರತಿಪಾದ್ಯ ನರಸಿಂಹರೂಪಿ ಶ್ರೀಹರಿಯನ್ನು,

ಭಕ್ತಿಯಿಂದ ಸ್ಮರಿಸುತ್ತಲಿದ್ದ , ‘ಯಸ್ತೇ ಮನ್ಯೋ’

ಇದೇ ಮೊದಲಾದ ಸೂಕ್ತದಿಂದ ಬಿಂಬರೂಪಿ ನರಸಿಂಹನನ್ನು.

ಯುದ್ಧವೆಂಬ ಯಜ್ಞದಿ ಶತ್ರುಎದೆಯನ್ನು ಸೋಮಲತೆ ಎಂಬ ಬುದ್ಧಿಯಿಂದ,

‘ಇಹ’ ಎನ್ನುವ ಪದದಿಂದ ಪ್ರಾರಂಭವಾಗುವ ಸಾಮಮಂತ್ರದಿಂದ ,

ಶತ್ರುವಾದ ದುಃಶಾಸನನ ಎದೆಯನ್ನು ಸೋಮಲತೆಯಂತೆ ಜಜ್ಜಿದ.

(ವೈರಿಯೆದೆಯನ್ನು ಮಾಡಿಕೊಂಡ ಯಜ್ಞಕುಂಡ,

ಭಕ್ತಿಯಿಂದ ಅಲ್ಲಿ 'ಮನ್ಯು'ವನ್ನು ಕಂಡುಕೊಂಡ.)

 

ಉವಾಚ ವಾಚಂ ಪುರುಷಪ್ರವೀರಃ ಸತ್ಯಾಂ ಪ್ರತಿಜ್ಞಾಂ ಲೋಕಮದ್ಧ್ಯೇ ವಿಧಾಯ ।

ಯಾಃ ಸಪತಯಸ್ತಾ ಅಪತಯೋ ಹಿ ಜಾತಾ ಯಾಸಾSಪತಿಃ ಸಾ ಸಪತಿಶ್ಚ ಜಾತಾ ॥೨೭.೧೫೦ ॥

 

 

ಪುರುಷಶ್ರೇಷ್ಠ ಭೀಮಸೇನನು ಸಮಸ್ತ ಲೋಕದ ಮುಂದೆ ನುಡಿಯುತ್ತಾನೆ,

ತಾನು ಹಿಂದೆ ಮಾಡಿದ್ದ ಪ್ರತಿಜ್ಞೆಯನ್ನು ಪೂರೈಸಿ ಈ ರೀತಿ ಹೇಳುತ್ತಾನೆ-.

‘ಯಾರು ಪತಿ ಸಹಿತರಾಗಿದ್ದರೋ ಅಂತಹ ಕೌರವರ ಪತ್ನಿಯರದು ಇಂದು ಪತಿರಹಿತ ಬಾಳು.

ಯಾವ ದ್ರೌಪದಿಯನ್ನು ಹಿಂದೆ ಪತಿರಹಿತಳು ಎಂದಿದ್ದರೋ, ಅವಳು ಇಂದು ಪತಿ ಸಹಿತಳು’.

 

ಪಶ್ಯನ್ತು ಚಿತ್ರಾಂ ಪರಮಸ್ಯ ಶಕ್ತಿಂ ಯೇ ವೈ ತಿಲಾಃ ಷಣ್ಢತಿಲಾ ಬಭೂವುಃ ।

ಏನಂ ಗೃಹೀತಂ ಚ ಮಯಾ ಯದೀಹ ಕಶ್ಚಿತ್ ಪುಮಾನ್ ಮೋಚಯತು ಸ್ವವೀರ್ಯ್ಯಾತ್ ॥೨೭.೧೫೧ ॥

 

ಎಲೋ ವೀರರೇ, ಸರ್ವೋತ್ತಮ ಶ್ರೀಹರಿ, ನೋಡಿರವನ ಅಪರಿಮಿತ ಶಕ್ತಿಯ ಝರಿ.

ಯಾರಂದುಕೊಂಡಿದ್ದರು ತಾವು ವೀರ್ಯವಂತರು,

ಅವರೆಲ್ಲರೂ ಆಗಿದ್ದಾರೆ ಈಗ ನಪುಂಸಕಪ್ರಾಯರು. ವೀರ್ಯಹೀನರೂ(ಷಣ್ಢತಿಲಾಃ)

ಆಗಿ ಹೋಗಿರುವರು.ಇಲ್ಲಿರುವ ವೀರರ ನಡುವೆ ಯಾರಾದರೂ ಇದ್ದರೆ ಗಂಡು,

ನನ್ನಿಂದ ಹಿಡಿಯಲ್ಪಟ್ಟ ಇವನನ್ನು ಒಯ್ಯಲಿ ಬಿಡಿಸಿಕೊಂಡು.

 

ಇತಿ ಬ್ರುವಾಣಃ ಪುನರೇವ ರಕ್ತಂ ಪಪೌ ಸುಧಾಂ ದೇವವರೋ ಯಥಾ ದಿವಿ ।

ಪುನಶ್ಚ ಸಪ್ರಾಣಮಮುಂ ವಿಸೃಜ್ಯ ನದನ್ ನನರ್ತ್ತಾರಿಬಲೇ ನಿರಾಯುಧಃ ॥೨೭.೧೫೨ ॥

 

ಈರೀತಿ ಮತ್ತೆ ಮತ್ತೆ ಹೇಳುತ್ತಾ, ಭೀಮಸೇನ,         

ಹೇಗೆ ದೇವೇಂದ್ರ ಮಾಡುವನೋ ಅಮೃತಪಾನ,

ಹಾಗೆ ರಕ್ತವನ್ನು ಪಾನಮಾಡುವವನಂತೆ ತೋರಿಸಿಕೊಂಡ,

ಉಸಿರಾಡುತ್ತಿದ್ದ ದುಃಶಾಸನನ ಬಿಟ್ಟು, ಮಾಡುತ್ತಾ ಸಿಂಹನಾದ,

ಆಯುಧರಹಿತನಾಗಿ ಶತ್ರು ಸೈನ್ಯದ ಮಧ್ಯದಲ್ಲಿ ಕುಣಿದಾಡಿದ. 

 

ಪ್ರತ್ಯನೃತ್ಯನ್ ಪುರಾ ಯೇSಸ್ಮಾನ್ ಪುನರ್ಗ್ಗೌರಿತಿ ಗೌರಿತಿ ।

ತಾನ್ ವಯಂ ಪ್ರತಿನೃತ್ಯಾಮಃ ಪುನರ್ಗ್ಗೌರಿತಿ ಗೌರಿತಿ ॥೨೭.೧೫೩ ॥

 

ಯಾವ ಕೌರವರು ನಮ್ಮನ್ನು ಕುರಿತು ಗೂಳಿ-ಗೂಳಿ ಎಂದು ಅಣಕಿಸಿ ಕುಣಿದಿದ್ದರೋ,

ಅವರನ್ನು ನಾವಿಂದು ಗೂಳಿ-ಗೂಳಿ ಎಂದಣಕಿಸಿ ಕುಣಿಯುತ್ತಿದ್ದೇವೆ ನೋಡಿರೋ.

 

 

ಇತಿ ಬ್ರುವನ್ ನೃತ್ಯಮಾನೋSರಿಮದ್ಧ್ಯ ಆಸ್ಫೋಟಯಚ್ಛತ್ರುಗಣಾನಜೋಹವೀತ್ ।

ಶಶಾಖ ಚ ದ್ರಷ್ಟುಮಮುಂ ನ ಕಶ್ಚಿದ್ ವೈಕರ್ತ್ತನದ್ರೌಣಿಸುಯೋಧನಾದಿಷು ॥೨೭.೧೫೪ ॥

 

ಈರೀತಿ ಹೇಳುತ್ತಾ, ಶತ್ರುಗಳ ಮಧ್ಯದಲ್ಲಿ ಕುಣಿಯುವವನಾದ ,

ಭೀಮ ತೊಡೆತಟ್ಟಿ ಶತ್ರುಗಳ ಸಮೂಹವನ್ನು ಯುದ್ಧಕ್ಕಾಗಿ ಕರೆದ.

ಕರ್ಣ, ಅಶ್ವತ್ಥಾಮ, ದುರ್ಯೋಧನ, ಮೊದಲಾದವರಲ್ಲಿ ಯಾರೊಬ್ಬನೂ,

ಈ ಭೀಮಸೇನನನ್ನು ಕಣ್ಣೆತ್ತಿ ನೋಡಲು ಕೂಡಾ ಆಗಲಿಲ್ಲ ಸಮರ್ಥನು.

 

ಭಯಾಚ್ಚ ಕರ್ಣ್ಣಸ್ಯ ಪಪಾತ ಕಾರ್ಮ್ಮುಕಂ ನಿಮೀಲಯಾಮಾಸ ತದಾSಕ್ಷಿಣೀ ಚ ।

ಸಮ್ಬೋಧಿತೋ ಮದ್ರರಾಜೇನ ಯುದ್ಧೇ ಸ್ಥಿತಃ ಕಥಞ್ಚಿತ್ ಸ ತು ಪಾರ್ತ್ಥಭಾಗಃ ॥೨೭.೧೫೫ ॥

 

ಇದನ್ನು ನೋಡಿ ಭಯದಿಂದಲೇ ಕರ್ಣನ ಬಿಲ್ಲು ಕೈಜಾರಿ ಬಿದ್ದಿತು.

ಕಣ್ಣು ಮುಚ್ಚಿದವಗೆ ಶಲ್ಯನಿಂದ ಪದೇ ಪದೇ ಎಚ್ಚರಿಕೆಯ ತಾಕೀತು.

ಎಚ್ಚರಿಸಲ್ಪಟ್ಟ ಕರ್ಣನು ಪ್ರಾಯಾಸದಿಂದ ಯುದ್ಧದಲ್ಲಿ ಸ್ಥಿರನಾದ.

ಸಂಹಾರದಲ್ಲಿ ಅರ್ಜುನನ ಭಾಗವಾದ್ದರಿಂದ ಹೇಗೋ ಬದುಕುಳಿದ.

 

ದ್ರೌಣಿರ್ವಿಹಾಯೈನಮಪಾಜಗಾಮ ದೂರಂ ತದಾ ಭೀಮಸೇನೋ ಜಗಾದ ।

ಪೀತಃ ಸೋಮೋ ಯುದ್ಧಯಜ್ಞೇ ಮಯಾSದ್ಯ ವದ್ಧ್ಯಃ ಪಶುರ್ಮ್ಮೇ ಹರಯೇ ಸುಯೋಧನಃ ॥೨೭.೧೫೬ ॥

 

ಅಶ್ವತ್ಥಾಮ ಭೀಮನ ದೃಷ್ಟಿಯಿಂದ ದೂರಕ್ಕೆ ಹೊರಟುಹೋಗುತ್ತಾನೆ,

ಭೀಮ ತನ್ನಿಂದ ಈ ಯುದ್ಧಯಜ್ಞದಲ್ಲಿ ಸೋಮಪಾನವಾಯಿತೆನ್ನುತ್ತಾನೆ.

ಇನ್ನು ಶ್ರೀಹರಿಪ್ರೀತಿಗಾಗಿ ದುರ್ಯೋಧನನೆಂಬ ಯಜ್ಞಪಶು,

ನನ್ನಿಂದ ವಧಾರ್ಹವಾಗಿದ್ದು ಅರ್ಪಿಸಬೇಕಾಗಿದೆ ಬಲಿಪಶು.

 

ಇತಿ ಬ್ರುವನ್ ಮೃತಮುತ್ಸೃಜ್ಯ ಶತ್ರುಂ ದುರ್ಯ್ಯೋಧನಂ ಚಾSಶು ರುಷಾSಭಿದುದ್ರುವೇ ।

ಆಯಾನ್ತಮೀಕ್ಷ್ಯೈವ ತಮುಗ್ರಪೌರುಷಂ ದುದ್ರಾವ ಭೀತಃ ಸ ಸುಯೋಧನೋ ಭೃಶಮ್ ॥೨೭.೧೫೭ ॥

 

ಹೀಗೆ ಹೇಳುತ್ತಾ, ಸತ್ತ ದುಃಶಾಸನನ ದೇಹವನ್ನು ದೂರಕ್ಕೆ ಎಸೆದ,

ಭೀಮ ಶೀಘ್ರದಲ್ಲಿ ಸಿಟ್ಟಿನಿಂದ ದುರ್ಯೋಧನನತ್ತ ಧಾವಿಸಿದ.

ತನ್ನೆದುರುಬರುತ್ತಿರುವ ಉಗ್ರಪೌರುಷದ ಭೀಮನನ್ನು ಕಂಡ,

ದುರ್ಯೋಧನ ಅತ್ಯಂತ ಭಯಗ್ರಸ್ಥನಾಗಿ ಪಲಾಯನ ಮಾಡಿದ.

 

ಬಲದ್ವಯಂ ಚಾಪಯಯೌ ವಿಹಾಯ ಭಯಾದ್ ಭೀಮಂ ಕೃಷ್ಣಪಾರ್ತ್ಥೌ ವಿನೈವ ।

ಆಯೋಧನಂ ಶೂನ್ಯಮಭೂನ್ಮುಹೂರ್ತ್ತಂ ನನರ್ತ್ತ ಭೀಮೋ ವ್ಯಾಘ್ರಪದೇನ ಹರ್ಷಾತ್ ॥೨೭.೧೫೮ ॥

 

ಆಗ ಕೃಷ್ಣಾರ್ಜುನರ ಬಿಟ್ಟು ಇತರ ಸೇನೆ (ಕೌರವ ಪಾಂಡವ ಸೇನೆ) ಅಲ್ಲಿಂದ ಮಾಡಿತು ಪಲಾಯನ.

ಸುಮಾರು ಒಂದು ಮಹೂರ್ತದ ತನಕ ಆ ಪ್ರದೇಶ (ಆ ಮೂವರನ್ನು ಬಿಟ್ಟು)ಆಯಿತು ಜನವಿಹೀನ. ಹುಲಿಯಂತೆ ಹೆಜ್ಜೆ ಹಾಕುತ್ತಾ, ಹರ್ಷದಿಂದ ಕುಣಿದಾಡುತ್ತಾನೆ ಆಗ ಬಲಶಾಲಿ ಭೀಮಸೇನ .

 

ಸಙ್ಕಲ್ಪ್ಯ ಶತ್ರೂನ್ ಗೋವದೇವಾSಜಿಮದ್ಧ್ಯೇ ಶಾರ್ದ್ದೂಲವತ್ ತಚ್ಚರಿತಂ ನಿಶಾಮ್ಯ ।

ಜಹಾಸ ಕೃಷ್ಣಶ್ಚ ಧನಞ್ಜಯಶ್ಚ ಶಶಂಸತುಶ್ಚೈನಮತಿಪ್ರಹೃಷ್ಟೌ ॥೨೭.೧೫೯ ॥

 

ಆ ಯುದ್ಧಭೂಮಿಯಲ್ಲಿ ತನ್ನ ಶತ್ರುಗಳನ್ನು ಪಶುಗಳಂತೆ ಸಂಕಲ್ಪಿಸಿದ ಬಗೆ,

ಹುಲಿಯಂತೆ ಭೀಮ ಮಾಡಿದ ಕರ್ಮವನ್ನು ನೋಡಿದ ಕೃಷ್ಣಾರ್ಜುನರಿಗೆ ನಗೆ.

ಅತ್ಯಂತ ಸಂತುಷ್ಟರಾಗಿ ಇಬ್ಬರೂ ಕೂಡಾ ಹೊಗಳಿದರು ಭೀಮಸೇನನಿಗೆ.

 

ಯದಾ ಸ ರಙ್ಗಃ ಪವಮಾನಸೂನುನಾ ಶೂನ್ಯಃ ಕೃತಸ್ತತ್ರ ಮುಹೂರ್ತ್ತಮಾತ್ರಾತ್ ।

ದುರ್ಯ್ಯೋಧನಸ್ಯಾವರಜಾಃ ಶರೌಘೈರವೀವೃಷನ್ ಭೀಮಮುದಾರಸತ್ತ್ವಮ್ ॥೨೭.೧೬೦ ॥

 

ಭೀಮನಿಂದಾಗಿ ಯುದ್ಧರಂಗ ಶೂನ್ಯವಾಗಿತ್ತು,

ಒಂದು ಮುಹೂರ್ತಕಾಲ ಪರಿಸ್ಥಿತಿ ಹಾಗೇ ಇತ್ತು.

ನಂತರ ಕೌರವನ ತಮ್ಮಂದಿರಿಂದ ಬಾಣಗಳ ಮಳೆ,

ಅತಿ ಉತ್ಕೃಷ್ಟವಾದ ಬಲವುಳ್ಳ ಭೀಮಸೇನನ ಮೇಲೆ.

 

ತಾನ್ ಮಾರುತಿರ್ಬಾಣವರೈರ್ನ್ನಿಕೃತ್ತಶೀರ್ಷಾನ್ ಯಮಾಯಾನಯದಾಶು ವೀರಃ ।

ತಸ್ಮಿನ್ ದಿನೇ ವಿಂಶತಿರ್ಧಾರ್ತ್ತರಾಷ್ಟ್ರಾ ಹತಾಸ್ತದನ್ಯೇ ಸಮರಾತ್ ಪ್ರದುದ್ರುವುಃ ॥೨೭.೧೬೧ ॥

 

ಉತ್ಕ್ರಷ್ಟ ಬಾಣಗಳಿಂದ ಭೀಮನು ಅವರೆಲ್ಲರ ತಲೆಯನ್ನು ಕತ್ತರಿಸಿದ ,

ಅವರೆಲ್ಲರನ್ನು ಯಮನ ಮನೆಯ ದಾರಿ ತೋರಿ ಕಳುಹಿಸಿದವನಾದ .

ಆ ಒಂದೇ ದಿನದಲ್ಲಿ ರಣಕಲಿ ಭೀಮಸೇನ, ಇಪ್ಪತ್ತುಮಂದಿ ಧೃತರಾಷ್ಟ್ರನ ಮಕ್ಕಳನ್ನ,

ಮಾಡಿಬಿಟ್ಟಿದ್ದ ಯುದ್ಧದಲ್ಲಿ ಸಂಹಾರಣ, ಇತರರು ಮಾಡಿದರು ಯುದ್ಧದಿಂದ ಪಲಾಯನ.

 

 

ಕರ್ಮ್ಮಾಣ್ಯನನ್ಯೌಪಯಿಕಾನಿ ಭೀಮೇ ಕುರ್ವತ್ಯೇವಂ ಭೀತಭೀತೇSರಿಸಙ್ಘೇ ।

ನಿಮೀಲಿತಾಕ್ಷೇ ಚ ಭಯೇನ ಕರ್ಣ್ಣೇ ಕರ್ಣ್ಣಾತ್ಮಜೋ ನಕುಲಂ ಪ್ರತ್ಯಧಾವತ್ ॥೨೭.೧೬೨॥

 

ಈರೀತಿ ಭೀಮನು ಇತರರಿಂದ ಅಸಾಧ್ಯವಾದ ಕರ್ಮ ಮಾಡುತ್ತಿರಲು,

ಶತ್ರು ಸಮುದಾಯ ಹೆದರುತ್ತಿರಲು, ಭಯದಿಂದ ಕರ್ಣ ಕಣ್ಣು ಮುಚ್ಚುತ್ತಿರಲು,

ಕರ್ಣನ ಪುತ್ರನಾದ ವೃಷಸೇನ, ತೆರಳಿದನು ಕುರಿತು ನಕುಲನನ್ನ.

 

ಮಾದ್ರೀಸುತೋ ವೃಷಸೇನಂ ಶರೌಘೈರವಾರಯತ್ ತಂ ವಿರಥಂ ಚಕಾರ ।

ಕರ್ಣ್ಣಾತ್ಮಜಃ ಸೋSಪ್ಯಸಿಚರ್ಮ್ಮಪಾಣಿಸ್ತಸ್ಯಾನುಗಾಂಸ್ತ್ರಿಸಹಸ್ರಂ ಜಘಾನ ॥೨೭.೧೬೩ ॥

 

ಮಾದ್ರೀಸುತನಾದ ನಕುಲನು, ಬಾಣಗಳಿಂದ ವೃಷಸೇನನನ್ನು ತಡೆದನು.

ಆಗ ಕರ್ಣಪುತ್ರನಾದ ವೃಷಸೇನ, ನಕುಲನನ್ನು ಮಾಡಿದ ರಥಹೀನ.

ಆಗ ನಕುಲ ಕತ್ತಿ-ಗುರಾಣಿಯನ್ನು ಕೈಯಲ್ಲಿ ಹಿಡಿದ, ವೃಷಸೇನನ ಮೂರುಸಹಸ್ರ ಸೈನ್ಯವ ಸಂಹರಿಸಿದ.

 

ಕರ್ಣ್ಣಾತ್ಮಜಸ್ತಸ್ಯ ಸಞ್ಛಿದ್ಯ ಚರ್ಮ್ಮ ಭೀಮಾರ್ಜ್ಜುನಾದೀನಪಿ ಬಾಣಸಙ್ಘೈಃ ।

ಅವೀವೃಷತ್ ತಸ್ಯ ಪಾರ್ತ್ಥಃ ಶರೇಣ ಗ್ರೀವಾಬಾಹೂರೂನ್ ಯುಗಪಚ್ಚಕರ್ತ್ತ ॥೨೭.೧೬೪ ॥

 

ಕರ್ಣನ ಮಗನಾದ ಆ ವೃಷಸೇನ ನಕುಲನ ಗುರಾಣಿಯನ್ನು ಛೇದಿಸಿದ ,

ಭೀಮಾರ್ಜುನ ಮೊದಲಾದವರ ಮೇಲೆ ಬಾಣಗಳ ಮಳೆ ಸುರಿಸಿದ.

ಆಗ ಅರ್ಜುನನು ವೃಷಸೇನನ ಮೇಲೆ ತನ್ನ ಬಾಣ ಬಿಟ್ಟ,

ಏಕಕಾಲದಿ ಕತ್ತರಿಸಿದ ಅವನ ಬಾಹು,ತೊಡೆ ಮತ್ತು ಕತ್ತ.

 

ಏಕೇನ ಬಾಣೇನ ಸುತೇ ಹತೇ ಸ್ವೇ ವೈಕರ್ತ್ತನೋ ವಾಸವಿಮಭ್ಯಧಾವತ್ ।

ತಯೋರಭೂದ್ ದ್ವೈರಥಯುದ್ಧಮದ್ಭುತಂ ಸರ್ವಾಸ್ತ್ರವಿದ್ವರಯೋರುಗ್ರರೂಪಮ್ ॥೨೭.೧೬೫ ॥

 

ಅರ್ಜುನನ ಒಂದೇ ಒಂದು ಬಾಣದಿಂದ, ತನ್ನ ಮಗ ಹತನಾಗಿರುವುದನ್ನು ಕಂಡ,

ಕರ್ಣ ಅರ್ಜುನನನ್ನು ಕುರಿತು ಧಾವಿಸಿದ. ಅಸ್ತ್ರಗಳನ್ನು ತಿಳಿದವರಲ್ಲಿ ಬಲು ಶ್ರೇಷ್ಠರಾದ,          ಕರ್ಣಾರ್ಜುನರನಡುವೆ ನಡೆಯಿತು ಉಗ್ರವಾದ, ಅತ್ಯಂತ ಆಶ್ಚರ್ಯಕರವಾದ ದ್ವಂದ್ವಯುದ್ಧ.

 

 

ಪಕ್ಷಗ್ರಹಾಸ್ತತ್ರ ಸುರಾಸುರಾಸ್ತಯೋರನ್ಯೇ ಚ ಜೀವಾ ಗಗನಂ ಸಮಾಸ್ಥಿತಾಃ ।

ಮಹಾನ್ ವಿವಾದೋSಪ್ಯಭವತ್ ತಯೋಃ ಕೃತೇ ತದಾ ಗಿರೀಶೋSವದದಬ್ಜಯೋನಿಮ್ ॥೨೭.೧೬೬ ॥

 

ಕರ್ಣಾರ್ಜುನರ ನಡುವಿನ ಆ ಯುದ್ಧದಲ್ಲಿ, ದೇವತೆಗಳು ಅರ್ಜುನನ ಪಕ್ಷದಲ್ಲಿ ನಿಂತರೆ;

ಅಸುರರು ಕರ್ಣನ ಪಕ್ಷದಲ್ಲಿ ನಿಲ್ಲುತ್ತಾರೆ, ಇತರರು ತಟಸ್ಥವಾಗಿ ಆಕಾಶದಲ್ಲಿರುತ್ತಾರೆ.

ಆಗ  ಅರ್ಜುನ-ಕರ್ಣರಿಗಾಗಿ ದೇವತೆಗಳು ಮತ್ತು ಅಸುರರ ನಡುವೆ ವಿವಾದ,

(ಅರ್ಜುನ ಗೆಲ್ಲುತ್ತಾನೆ ಎಂದು ದೇವತೆಗಳು, ಕರ್ಣ ಗೆಲ್ಲುತ್ತಾನೆ ಎಂದಸುರರ ವಾದ).

ಆಗ ಬ್ರಹ್ಮದೇವರನ್ನು ಕುರಿತು, ಬರುತ್ತದೆ ರುದ್ರದೇವರ ಮಾತು.

 

ಸುರಾಸುರಾಣಾಂ ಭೀಮದುರ್ಯ್ಯೋಧನೌ ದ್ವೌ ಸಮಾಶ್ರಯೌ ತತ್ಪ್ರಿಯೌ ಕರ್ಣ್ಣಪಾರ್ತ್ಥೌ ।

ಪ್ರಾಣೋಪಮೌ ತೇನ ಚೈತತ್ಕೃತೇ ತೇ ಸುರಾಸುರಾಃ ಕರ್ತ್ತುಮಿಚ್ಛನ್ತಿ ಯುದ್ಧಮ್ ।

ತದಾ ವಿನಾಶೋ ಜಗತಾಂ ಮಹಾನ್ ಸ್ಯಾತ್ ತೇನಾನಯೋಃ ಸಮಮೇವಾಸ್ತು ಯುದ್ಧಮ್ ॥೨೭.೧೬೭ ॥

 

‘ಸುರರಿಗೆ ಭೀಮನ ಆಶ್ರಯ, ಅಸುರರಿಗೆ ಕೌರವನ ಆಶ್ರಯ.

ಅರ್ಜುನ ಭೀಮಗೆ ಪ್ರಾಣಪ್ರಿಯ, ಕರ್ಣ ದುರ್ಯೋಧನಗೆ ಪ್ರಾಣಪ್ರಿಯ.

ಹೀಗಾಗಿ ಇದು ಸುರಾಸುರರ ಯುದ್ಧಾಭಿಲಾಷ, ಈರೀತಿ ಯುದ್ಧವಾದರೆ ಅದು ಜಗತ್ತಿನ ವಿನಾಶ.

ಹೀಗಾಗಿ ಕರ್ಣ-ಅರ್ಜುನರಲ್ಲಿ ಯುದ್ಧ, ನಡೆಯಲಿ ಅದು ಸಮಭಾವದಿಂದ’.

 

ಇತೀರಿತೇ ವಾಸವಃ ಪದ್ಮಯೋನಿಂ ಜಗಾದ ಕೃಷ್ಣೋ ಯತ್ರ ಜಯಶ್ಚ ತತ್ರ ।

ಕಾಮೋ ನ ಕೃಷ್ಣಸ್ಯ ಮೃಷಾ ಭವೇದ್ಧಿ ಕಾಮೋSಸ್ಯ ಪಾರ್ತ್ಥಸ್ಯ ಜಯಂ ಪ್ರದಾತುಮ್ ॥೨೭.೧೬೮ ॥

 

ಈರೀತಿಯಾಗಿ ರುದ್ರದೇವರು ಹೇಳಿದಾಗ, ಬ್ರಹ್ಮರೆಂದರು-‘ಶ್ರೀಕೃಷ್ಣನಿದ್ದಲ್ಲೇ ಜಯಕ್ಕೆ ಜಾಗ’.

‘ಎಂದೂ ಹುಸಿಯಾಗುವುದಿಲ್ಲ ಅದು ಶ್ರೀಕೃಷ್ಣನ ಸಂಕಲ್ಪ,

ದೇವೇಂದ್ರನೆಂದ- ಅರ್ಜುನನ ಜಯವೇ ಅವನ ಸಂಕಲ್ಪ’.

 

ಇತ್ಯೂಚಿವಾನ್ ವಾಸವಃ ಫಲ್ಗುನಸ್ಯ ಜಯೋSಸ್ತು ಕರ್ಣ್ಣಸ್ಯ ವಧಸ್ತಥೇತಿ ।

ಉಕ್ತ್ವಾSನಮತ್ ಕಞ್ಜಭವಸ್ತಥೇತಿ ಪ್ರಾಹಾಸುರಾನ್ ದೇವತಾಶ್ಚಾSಬಭಾಷೇ ॥೨೭.೧೬೯ ॥

 

ಹೀಗೆ ಹೇಳುತ್ತಾನೆ ದೇವೇಂದ್ರ, ‘ಅರ್ಜುನಗೆ ಬೀಳಲಿ ಜಯದ ಹಾರ,

ಮತ್ತು ಕರ್ಣನದು ಆಗಲಿ ಸಂಹಾರ. ಇಂದ್ರ ಮಾಡಿದ ಬ್ರಹ್ಮನಿಗೆ ನಮಸ್ಕಾರ.

‘ಹಾಗೆಯೇ ಆಗಲಿ ಎಂದು ಹೇಳಿದ ಬ್ರಹ್ಮದೇವರು, ಅಸುರರ ದೇವತೆಗಳ ಕುರಿತು ಮಾತನಾಡಿದರು.

 

ನ ಕರ್ಣ್ಣಾರ್ಜ್ಜುನಯೋರರ್ತ್ಥೇ ವಿರೋಧಂ ಕುರುತ ಕ್ವಚಿತ್ ।

ಭೀಮದುರ್ಯ್ಯೋಧನಾರ್ತ್ಥೇ ವಾ ಪಶ್ಯನ್ತ್ವೇವ ಚ ಸಂಯುಗಮ್ ।

ಇತ್ಯುಕ್ತೇ ಶಾನ್ತಿಮಾಪನ್ನಾ ದದೃಶುಃ ಸಂಯುಗಂ ತಯೋಃ ॥೨೭.೧೭೦ ॥

 

‘ಕರ್ಣ-ಅರ್ಜುನರ ಕುರಿತಾಗಲೀ, ಭೀಮ-ದುರ್ಯೋಧನರ ಕುರಿತಾಗಲೀ,

ಮಾಡಕೂಡದು ಒಬ್ಬರಿಗೊಬ್ಬರು ವಿರೋಧ, ನೀವಿಬ್ಬರೂ ವೀಕ್ಷಿಸಬೇಕು ಕೇವಲ ಯುದ್ಧ.

ಎಂದು ಚತುರ್ಮುಖ ದೇವರು ಹೇಳುತ್ತಾರೆ , ಸುರಾಸುರರು ಶಾಂತಿಯನ್ನು ಹೊಂದುತ್ತಾರೆ,

ಕರ್ಣಾರ್ಜುನರ ಯುದ್ಧವನ್ನು ನೋಡುತ್ತಾರೆ.  

No comments:

Post a Comment

ಗೋ-ಕುಲ Go-Kula