Sunday, 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 169-185

 

ಶಕ್ತಿಂ ತು ತದ್ರಥಗತಾಂ ಪ್ರಸಮೀಕ್ಷ್ಯ ಕೃಷ್ಣಃ  ಸಂಸ್ಥಾಪ್ಯ ಪಾರ್ತ್ಥಮಪಿ ಸಾತ್ಯಕಿಮೇವ ಯೋದ್ಧುಮ್ ।

ದತ್ವಾ ಸ್ವಕೀಯರಥಮೇವ ವಿರೋಚನಸ್ಯ ಪುತ್ರೇಣ ಸೋSದಿಶದಮುಷ್ಯ ಬಲಂ ಪ್ರದಾಯ ॥ ೨೬.೧೬೯ ॥

 

ಶ್ರೀಕೃಷ್ಣ ಕರ್ಣನ ರಥದಲ್ಲಿದ್ದ ಶಕ್ತ್ಯಾಯುಧವನ್ನು ಕಂಡ,

ಅರ್ಜುನನ ತಡೆದು ಸಾತ್ಯಕಿಗೆ ತನ್ನ ರಥವನ್ನು ನೀಡಿದ.

ಅವನಿಗೆ ಕರ್ಣನೊಂದಿಗೆ ಯುದ್ಧ ಮಾಡುವಂಥ ಸಾಮರ್ಥ್ಯ ಕೊಟ್ಟ,

ಸೂರ್ಯಪುತ್ರ ಕರ್ಣನೊಂದಿಗೆ ಯುದ್ಧಮಾಡಲು ಸಾತ್ಯಕಿಯ ಬಿಟ್ಟ .

 

ಶಿಷ್ಯಂ ತ್ವಶಕ್ತಮಿಹ ಮೇ ಪ್ರತಿಯೋಧನಾಯ ಪಾರ್ತ್ಥೋ ಹ್ಯದಾದಿತಿ ಸ ಸಾತ್ಯಕಿಮೀಕ್ಷಮಾಣಃ ।

ಸಂಸ್ಪರ್ದ್ಧಯೈವ ಯುಯುಧೇ ವಿರಥಂ ಚಕಾರ ತೇನೈವ ಸಾತ್ಯಕಿರಮುಂ ಹರಿಯಾನಸಂಸ್ಥಃ ॥೨೬.೧೭೦॥

 

‘ಅಶಕ್ತನಾದ ತನ್ನ ಶಿಷ್ಯ ಸಾತ್ಯಕಿಯನ್ನು ಅರ್ಜುನ ನನ್ನ ವಿರುದ್ಧ ಯುದ್ಧಕ್ಕೆ ಕಳುಹಿಸಿದ್ದಾನೆ’

ಹೀಗೆ ಸಾತ್ಯಕಿಯನ್ನು ಕುರಿತು ಯೋಚಿಸುತ್ತಾ ಕರ್ಣ ಸ್ಪರ್ಧೆಯಿಂದ ಯುದ್ಧಮಾಡುತ್ತಾನೆ .

ಸ್ಪರ್ಧಾಪೂರಕವಾಗಿ ಬಂದ ಕರ್ಣನನ್ನು ಕೃಷ್ಣನ ರಥದಲ್ಲಿದ್ದ ಸಾತ್ಯಕಿ ರಥಹೀನನನ್ನಾಗಿಸುತ್ತಾನೆ .

 

ನ ಕೇಶವರಥೇ ಕಶ್ಚಿತ್ ಸ್ಥಿತೋ ಯಾತಿ ಪರಾಜಯಮ್ ।

ಅತಶ್ಚ ಸಾತ್ಯಕಿರ್ನ್ನಾSಪ ಕರ್ಣ್ಣೇನಾತ್ರ ಪರಾಜಯಮ್ ॥೨೬.೧೭೧ ॥

 

ಕೇಶವನ ರಥದಲ್ಲಿದ್ದು ಯಾರೇ ಯುದ್ಧ ಮಾಡಿದರೂ ಅವರಿಗೆ ಸೋಲಾಗುವುದಿಲ್ಲ,

ಆ ಕಾರಣದಿಂದಲೂ ಸಾತ್ಯಕಿಯು ಕರ್ಣನಿಂದ ಸೋಲನ್ನು ಅನುಭವಿಸಲಿಲ್ಲ.

 

ಶಸ್ತ್ರಸಙ್ಗ್ರಹಕಾಲೇ ತು ಕುಮಾರಾಣಾಂ ವ್ರತಂ ಭವೇತ್ ।

ಇತ್ಯುಕ್ತಂ ಜಾಮದಗ್ನ್ಯೇನ ಧನುರ್ವಿದ್ಯಾಪುರಾಕೃತಾ ॥೨೬.೧೭೨ ॥

 

ತಚ್ಛತ್ರುವಧರೂಪಂ ಚ ಪೂರ್ವಾಸಿದ್ಧಂ ಚ ಗೂಹಿತಮ್ ।

ಅವಿರುದ್ಧಂ ಚ ಧರ್ಮ್ಮಸ್ಯ ಕಾರ್ಯ್ಯಂ ರಾಮಸ್ಯ ತುಷ್ಟಿದಮ್ ॥೨೬.೧೭೩ ॥

 

ಅನುಪದ್ರವಂ ಚ ಲೋಕಸ್ಯೇತ್ಯತೋ ಭೀಮೋ ವ್ರತಂ ತ್ವಿದಮ್ ।

ಚಕಾರ ತೂಬರೇತ್ಯುಕ್ತೇ ಹನ್ಯಾಮಿತಿ ರಹಃ ಪ್ರಭುಃ ॥೨೬.೧೭೪ ॥

 

ಅನುಪದ್ರವಾಯ ಲೋಕಸ್ಯ ಸುವ್ಯಞ್ಜಚ್ಛ್ ಮಶ್ರುಮಣ್ಡಲಃ ।

ಸುಶ್ಮಶ್ರುಂ ಮಾಂ ನ ಕಶ್ಚಿದ್ಧಿ ತಥಾ ಬ್ರೂಯಾದಿತಿ ಸ್ಫುಟಮ್ ॥೨೬.೧೭೫ ॥

 

ಧನುರ್ವಿದ್ಯೆಯ ಪ್ರಥಮ ಗುರು ಪರಶುರಾಮ ದೇವರು,

ಪ್ರತಿಯೊಬ್ಬರೂ ಒಂದು ವ್ರತವನ್ನು ಕೈಗೊಳ್ಳಲು ಹೇಳಿದ್ದರು.

ಜೀವನಪರ್ಯಂತ ಮಾಡಿಕೊಂಡು ಬರಬೇಕಿತ್ತು ಪ್ರತಿಯೊಬ್ಬರು.

 

ಆ ವ್ರತವು ಶತ್ರುವಧಾರೂಪವಾಗಿರಬೇಕು,

ಹಿಂದೆ ಯಾರೂ ಮಾಡದಿದ್ದುದಾಗಿರಬೇಕು.

ಈ ಪ್ರತಿಜ್ಞೆ ಗುಪ್ತವಾಗಿದ್ದು ಧರ್ಮವಿರೋಧಿ ಆಗಿರಬಾರದು,

ಈ ವ್ರತದಿಂದ ಲೋಕಕ್ಕೆ ಯಾವ ಉಪದ್ರವ ಆಗಬಾರದು.

 

ಭೀಮನ ಪ್ರತಿಜ್ಞೆ ಹೀಗಿತ್ತು -ನನ್ನನ್ನು ತೂಬರ ಎಂದು ಕರೆಯುವವನನ್ನು ನಾನು ಕೊಲ್ಲುತ್ತೇನೆ,

ಚೆನ್ನಾಗಿ ಕಾಣುವ ಗಡ್ಡ-ಮೀಸೆಯ ತನ್ನನ್ನು ಯಾರೂ ಹಾಗೆ ಕರೆಯರೆಂದವನ ಯೋಚನೆ.  ಇದರಿಂದ ಲೋಕಕ್ಕೂ ಯಾವುದೇ ಉಪದ್ರವವಿಲ್ಲ ಎಂದು ಭೀಮ ಮಾಡಿದ್ದ ಪ್ರತಿಜ್ಞೆ .

 

ತದರ್ಜ್ಜುನೋ ವಿಜಾನಾತಿ ಸ್ನೇಹಾದ್ ಭೀಮೋದಿತಂ ರಹಃ ।

ಅರ್ಜ್ಜುನಸ್ಯಾಪಿ ಗಾಣ್ಡೀವಂ ದೇಹಿತ್ಯುಕ್ತೋ ನಿಹನ್ಮ್ಯಹಮ್ ॥೨೬.೧೭೬ ॥

 

ಇತಿ ತಚ್ಚ ವಿಜಾನಾತಿ ಭೀಮ ಏಕೋ ನ ಚಾಪರಃ ।

ಗಾಣ್ಡೀವಸ್ಯಾSಗಮಂ ಪೂರ್ವಂ ಜಾನಾತ್ಯೇವ ಹಿ ನಾರದಾತ್ ॥೨೬.೧೭೭ ॥

 

ಭೀಮನ ಈ ಪ್ರತಿಜ್ಞೆಯನ್ನು ಅರ್ಜುನನೊಬ್ಬನೇ ತಿಳಿದಿದ್ದ.

ಭೀಮಸೇನ ಸ್ನೇಹದಿಂದ ತಾನೇ ಅವನಿಗೆ ಇದನ್ನು ಹೇಳಿದ್ದ.

ಇನ್ನು ಅರ್ಜುನನ ಪ್ರತಿಜ್ಞೆ : ‘ಗಾಂಡೀವ ತ್ಯಜಿಸು ಅಥವಾ ಯಾರಿಗಾದರೂ ಕೊಡು’ ಎಂದವರ ಕೊಲ್ಲುತ್ತೇನೆ,

ಇದನ್ನು ಭೀಮಸೇನನೊಬ್ಬನೇ ತಿಳಿದಿದ್ದು ಮುಂದೆ ಬರುವ ಗಾಂಡೀವದ ಬಗೆಗೆ ನಾರದರಿಂದ ಸಿಕ್ಕಿತ್ತು ಸೂಚನೆ.

 

ಪ್ರತಿಜ್ಞಾಂ ಭೀಮಸೇನಸ್ಯ ಬ್ರುವತಃ ಫಲ್ಗುನೇ  ರಹಃ ।

ದುರ್ಯ್ಯೋಧನಸ್ತು ಶುಶ್ರಾವ ತಾಂ ಚ ಕರ್ಣ್ಣಾಯ ಸೋSಬ್ರವೀತ್ ॥೨೬.೧೭೮ ॥

 

ಭೀಮ ತನ್ನ ಈ ಪ್ರತಿಜ್ಞೆಯನ್ನು ಅರ್ಜುನಗೆ ಹೇಳುತ್ತಿರುವಾಗ,

ದುರ್ಯೋಧನ ಅದನ್ನು ಕದ್ದು ಕೇಳಿ ಕರ್ಣನಿಗೆ ಹೇಳಿದ್ದನಾಗ.

 

ಅತೂಬರೋSಪಿ ತೇನಾಸೌ ತಸ್ಮಾತ್ ತೂಬರ ಇತ್ಯಲಮ್ ।

ಉಕ್ತಃ ಪ್ರಕೋಪನಾಯೈವ ತಸ್ಮಾದರ್ಜ್ಜುನಮಬ್ರವೀತ್ ॥೨೬.೧೭೯ ॥

 

ಜಾನಾಸಿ ಮತ್ಪ್ರತಿಜ್ಞಾಂ ತ್ವಂ ತ್ವತ್ಪ್ರತಿಜ್ಞಾಮಹಂ ತಥಾ ।

ತತ್ರ ಹನ್ತವ್ಯತಾಂ ಪ್ರಾಪ್ತೋ ಮಮ ವೈಕರ್ತ್ತನೋSತ್ರ ಹಿ ॥೨೬.೧೮೦ ॥

 

ಪ್ರತಿಜ್ಞಾತೋ ವಧಶ್ಚಾಸ್ಯ ತ್ವಯಾSಪಿ ಮದನುಜ್ಞಯಾ ।

ಅತಸ್ತ್ವಯಾ ಮಯಾ ವಾSಯಂ ಹನ್ತವ್ಯಃ ಸೂತನನ್ದನಃ ॥೨೬.೧೮೧ ॥

 

ಆ ಕಾರಣದಿಂದ ತೂಬರನಲ್ಲದಿದ್ದರೂ ಕೂಡಾ ಭೀಮಸೇನ,

ಕೇವಲ ಕೆರಳಿಸಲು ಭೀಮಸೇನನನ್ನು ತೂಬರ ಎಂದಿದ್ದ ಕರ್ಣ.

 

ಆಗ ಭೀಮ ಅರ್ಜುನಗೆ ಹೇಳುತ್ತಾನೆ- ‘ನನ್ನ ಪ್ರತಿಜ್ಞೆ ಏನು ಎನ್ನುವುದು ನಿನಗೆ ಗೊತ್ತಿದೆ, ನಿನ್ನ ಪ್ರತಿಜ್ಞೆ ಏನು ಎನ್ನುವುದೂ ನನಗೆ ಗೊತ್ತಿದೆ.

ಹೀಗಿರುವಾಗ ಒಂದೋ ಕರ್ಣ ನನ್ನಿಂದ ಸಾಯಬೇಕು ಅಥವಾ ಸಭೆಯಲ್ಲಿ ನನ್ನಾಜ್ಞೆಯಿಂದ ಪ್ರತಿಜ್ಞೆ ಮಾಡಿದ ನಿನ್ನಿಂದ ಸಾಯಬೇಕಿದೆ.

ಒಟ್ಟಿನಲ್ಲಿ ನಮ್ಮಿಬ್ಬರಲ್ಲಿ ಒಬ್ಬನಿಂದ ಆ ಕರ್ಣನ ಸಂಹಾರವಾಗಿ ನಮ್ಮಿಬ್ಬರ ಪ್ರತಿಜ್ಞೆಯದು ನೆರವೇರಿ ಯಾವ ಲೋಪವಿಲ್ಲದೇ ಫಲವೀಯಬೇಕಿದೆ.

 

ಇತ್ಯುಕ್ತೋ ವಾಸವಿಃ ಪ್ರಾಹ ಹನ್ತವ್ಯೋSಯಂ ಮಯೈವ ಹಿ ।

ತ್ವದೀಯೋSಹಂ ಯತಸ್ತೇನ ಮತ್ಕೃತಂ ತ್ವತ್ಕೃತಂ ಭವೇತ್ ॥೨೬.೧೮೨ ॥

 

ನ ತ್ವತ್ಕೃತಂ ಮತ್ಕೃತಂ ಸ್ಯಾದ್ ಗುರುರ್ಮ್ಮಮ ಯತೋ ಭವಾನ್ ।

ಅತೋ ಮಯೈವ ಹನ್ತವ್ಯ ಇತ್ಯುಕ್ತ್ವಾ ಕರ್ಣ್ಣಮಬ್ರವೀತ್ ॥೨೬.೧೮೩ ॥

 

ಈರೀತಿಯಾಗಿ ಹೇಳಲ್ಪಟ್ಟ ಅರ್ಜುನ ಹೇಳುತ್ತಾನೆ ‘ಕರ್ಣನು ನನ್ನಿಂದಲೇ ಕೊಲ್ಲಲ್ಪಡಬೇಕಾದವನು,

ನಾನು ನಿನ್ನವ(ಶಿಷ್ಯ)ನಾದ್ದರಿಂದ ಹಿರಿಯನಾದ ನೀನು ನನಗೆ ದಾರಿತೋರುವ ಗುರುಸಮಾನನು. ನಾನು ಮಾಡಿದರೆ ಅದು ನೀನು ಮಾಡಿದ ಹಾಗೇ,

ನೀನು ಮಾಡಿದರೆ ಅದು ನನ್ನದಾಗದ ಬೇರೆಬಗೆ.

ನೀನು ನನ್ನ ಗುರುವಾದ ಕಾರಣ,

ನನ್ನ ಕೈಯಲ್ಲಿ ಸಾಯಬೇಕು ಕರ್ಣ.

ಕರ್ಣನ ಕುರಿತು ಹೇಳುವ ಅರ್ಜುನ.

 

ರೂಕ್ಷಾ ವಾಚಃ ಶ್ರಾವಿತೋSಯಂ ಭೀಮಃ ಕೃಷ್ಣಸ್ಯ ಶೃಣ್ವತಃ ।

ಯಚ್ಛಾಭಿಮನ್ಯುರ್ಯ್ಯುಷ್ಮಾಭಿರೇಕಃ ಸಮ್ಭೂಯ ಪಾತಿತಃ ॥೨೬.೧೮೪ ॥

 

ಅತಸ್ತ್ವಾಂ ನಿಹನಿಷ್ಯಾಮಿ ತ್ವತ್ಪುತ್ರಂ ಚ ತವಾಗ್ರತಃ ।

ಇತ್ಯುಕ್ತೋSನ್ಯರಥಂ ಪ್ರಾಪ್ಯ ಕರ್ಣ್ಣ ಆವೀಜ್ಜಯದ್ರಥಮ್ ॥೨೬.೧೮೫ ॥

 

ಕರ್ಣಾ, ಕೃಷ್ಣ ಕೇಳುವಂತೇ ಭೀಮನಿಗೆ ಅತ್ಯಂತ ಕೆಟ್ಟ ಮಾತುಗಳನ್ನಾಡಿದೆ,

ನೀವೆಲ್ಲರೂ ಒಟ್ಟು ಸೇರಿ ಮಾಡಿದಿರಿ ಒಂಟಿಯಾಗಿದ್ದ ಅಭಿಮನ್ಯುವಿನ ವಧೆ.

ಈಗ ಕೇಳು ನಿನ್ನೆದುರಲ್ಲೇ ನಾನು ನಿನ್ನ ಮಗನನ್ನು ಕೊಲ್ಲುತ್ತೇನೆ’,

ಹೀಗೆ ಅರ್ಜುನ ಹೇಳಿದಾಗ, ಕರ್ಣ ಅಲ್ಲಿಂದ  ಹೋಗಿಬಿಡುತ್ತಾನೆ.

ಇನ್ನೊಂದು ರಥವನ್ನೇರಿ ಜಯದ್ರಥನ ರಕ್ಷಣೆ ಬಯಸಿ ತೆರಳುತ್ತಾನೆ.

 

No comments:

Post a Comment

ಗೋ-ಕುಲ Go-Kula