Sunday, 25 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 27: 33-59

 

ಕರ್ಣ್ಣೋSಥ ಶಲ್ಯನಿಯತೇನ ರಥೇನ ಪಾರ್ತ್ಥಸೇನಾಮವಾಪ್ಯ ವಿದುಧಾವ ಶರೈಃ ಸಮನ್ತಾತ್ ।

ಸಂರಕ್ಷಿತೋ ಯುಧಿ ಸುಯೋಧನಗೌತಮಾದ್ಯೈರಾಚಾರ್ಯ್ಯಜೇನ ಚ ಮಹಾಸ್ತ್ರವಿದಾಂ ವರೇಣ॥೨೭.೩೩॥

 

ತದನಂತರ ಶಲ್ಯ ವಹಿಸಿದ ಕರ್ಣನ ಸಾರಥ್ಯ,

ಶಲ್ಯ ಸಾರಥಿಯಾದ ರಥದಲ್ಲಿ ಕರ್ಣ ಕುಳಿತ. ಕರ್ಣ;ದುರ್ಯೋಧನ,ಕೃಪ ಮೊದಲಾದವರಿಂದ, ರಕ್ಷಿತನಾದ ಅಸ್ತ್ರವನ್ನು ಬಲ್ಲ ಅಶ್ವತ್ಥಾಮನಿಂದ. ಪಾಂಡವರ ಸೇನೆಯನ್ನು ಹೊಂದಿದ ,

ಬಾಣಗಳಿಂದ ಎಲ್ಲರನ್ನೂ ನಡುಗಿಸಿದ.

 

ತಂ ಭೀಮಪಾರ್ಷತಶಿನಿಪ್ರವರಾಭಿಗುಪ್ತಾ ಸಾ ಪಾಣ್ಡವೇಯಪೃತನಾSಭಿವವರ್ಷ ಬಾಣೈಃ ।

ತಾಂ ಸೂರ್ಯ್ಯಸೂನುರಥ ಬಾಣವರೈರ್ವಿಧಾರ್ಯ್ಯ ಸಮ್ಪ್ರಾರ್ದ್ದಯಚ್ಛಿತಶರೈರಪಿ ಧರ್ಮ್ಮಸೂನುಮ್ ॥೨೭.೩೪॥

 

ಭೀಮ,ಧೃಷ್ಟದ್ಯುಮ್ನ,ಸಾತ್ಯಕಿಯರಿಂದ ರಕ್ಷಿಸಲ್ಪಟ್ಟ ಆ ಪಾಂಡವ ಸೇನೆ,

ಕರ್ಣನ ಮೇಲೆ ಧಾರಾಕಾರವಾಗಿ ಸುರಿಸಿತು ಆಗ ಬಾಣಗಳ ಮಳೆಯನ್ನೇ.

ಆ ಸೇನೆಯನ್ನು ಕರ್ಣನು ಬಾಣಗಳಿಂದ ಸೀಳಿದ , ಧರ್ಮಜನನ್ನು ಚೂಪಾದ ಬಾಣಗಳಿಂದ ಪೀಡಿಸಿದ.

 

ಕೃತ್ವಾ ತಮಾಶು ವಿರಥಂ ಧನುರಸ್ಯ ಕಣ್ಠೇ ಸಜ್ಯಂ ನಿಧಾಯ ಪರುಷಾ ಗಿರ ಆಹ ಚೋಚ್ಚೈಃ ।

ದೃಷ್ಟ್ವೈವ ಮಾರುತಿರಮುಂ ಭೃಶಮಾತುತೋದ ದುರ್ಯ್ಯೋಧನಂ ವಿರಥಕಾರ್ಮ್ಮುಕಮತ್ರ ಕೃತ್ವಾ ॥೨೭.೩೫॥

 

ಕರ್ಣನು ಧರ್ಮರಾಜನನ್ನು ಕೂಡಲೇ ರಥಹೀನನನ್ನಾಗಿ ಮಾಡಿದ,

ಅವನ ಕೊರಳಲ್ಲಿ ಬಿಲ್ಲನ್ನು ನೇತುಹಾಕಿ ಜೋರಾಗಿ ಕಠಿಣವಾಗಿ ನಿಂದಿಸಿದ.

ಈರೀತಿಯಾಗಿರುವ ಧರ್ಮರಾಜನನ್ನು ಕಂಡ ಭೀಮಸೇನ,

ದುರ್ಯೋಧನನನ್ನು ಮಾಡಿದ ರಥ ಹಾಗೂ ಬಿಲ್ಲುಹೀನ.

(ಯುದ್ಧದಿ ದುರ್ಯೋಧನಗೆ ಕೊಟ್ಟರೆ ಪೀಡನೆ, ಕರ್ಣ ಧರ್ಮಜನ ಬಿಡುವನೆಂಬ ಯೋಜನೆ.)

 

ತಂ ಪ್ರಾಣಸಂಶಯಗತಂ ನೃಪತಿಂ ನಿರೀಕ್ಷ್ಯ ಕರ್ಣ್ಣಂ ಜಗಾದ ಯುಧಿ ಮದ್ರಪತಿಃ ಪ್ರದರ್ಶ್ಯ ।

ಯಸ್ಯಾರ್ತ್ಥ ಏವ ಸಮರಸ್ತ್ವಮಿಯಂ ಚ ಸೇನಾ ತಂ ತ್ವಂ ಯಮಸ್ಯ ಸದನಂ ಪ್ರಯಿಯಾಸುಮದ್ಯ ॥೨೭.೩೬॥

 

ಭೀಮೇನ ಪೀಡಿತಮಮುಂ ಪರಿಪಾಹಿ ಶೀಘ್ರಂ ಕಿಂ ತೇ ಯುಧಿಷ್ಠಿರಮಿಮಂ ಹಿ ಮುಧಾSಭಿಪೀಡ್ಯ।

ಶ್ರುತ್ವಾSಸ್ಯ ವಾಕ್ಯಮತಿಹಾಯ ಯುಧಿಷ್ಠಿರಂ ತಂ ಕರ್ಣ್ಣೋ ಯಯೌ ನೃಪತಿರಕ್ಷಣತತ್ಪರೋSಲಮ್ ॥೨೭.೩೭॥

 

ಭೀಮನಿಂದ ಪೀಡೆಗೊಳಪಟ್ಟ ದುರ್ಯೋಧನ , ಬದುಕುವನೋ ಇಲ್ಲವೋ ಎಂಬ ಅನುಮಾನ,

ಅದನ್ನು ನೋಡಿದ ಶಲ್ಯ ವ್ಯಕ್ತಪಡಿಸುತ್ತಾನೆ,

ಕರ್ಣಗೆ ದುರ್ಯೋಧನನ ತೋರಿಸುತ್ತಾನೆ. - ಯಾರಿಗಾಗಿ ನಡೆಯುತ್ತಿದೆಯೋ ಈ ಯುದ್ಧ ,

ನೀ ಯಾರಿಗಾಗಿ ಮಾಡುತ್ತಿರುವೆಯೋ ಯುದ್ಧ, ಅಂತಹ ದುರ್ಯೋಧನನಿಗಾಗಿದೆ ಸಾವಿನ  ಕ್ಷಣಗಣನೆ,

ಭೀಮನಿಂದ ಪೀಡಿತನಾದ ದುರ್ಯೋಧನಗೆ ಕೊಡು ರಕ್ಷಣೆ.

ಈ ಯುಧಿಷ್ಠಿರನನ್ನು ವ್ಯರ್ಥವಾಗಿ ಪೀಡಿಸಿ ಏನು ಪ್ರಯೋಜನ ಎಂದು ಕೇಳಿದ.

ಶಲ್ಯನ ವಾಕ್ಯವನ್ನು ಕೇಳಿದ ಕರ್ಣ ಧರ್ಮಜನ ಬಿಟ್ಟು,ಕೌರವರಕ್ಷಣೆಗೆ ತೆರಳಿದ.

 

 

ದೃಷ್ಟ್ವೈವ ತಂ ಪವನಸೂನುರಭಿ ತ್ವಿಯಾಯ ಕ್ರೋಧಾದ್ ದಿಧಕ್ಷುರಿವ ಕರ್ಣ್ಣಮಮೇಯಧಾಮಾ ।

ರಾಜಾವನಾಯ ಶಿನಿಪುಙ್ಗವಪಾರ್ಷತೌ ಚ ಸನ್ದಿಶ್ಯ ಕರ್ಣ್ಣಮಭಿಗಚ್ಛತ ಆಸ ರೂಪಮ್ ॥೨೭.೩೮॥

 

ಅನ್ತೇ ಕೃತಾನ್ತನರಸಿಂಹತನೋರ್ಯ್ಯಥೈವ ವಿಷ್ಣೋರ್ಹರಂ ಗ್ರಸತ ಆತ್ತಸಮಸ್ತವಿಶ್ವಮ್ ।

ತದ್ವೇಗತಃ ಪ್ರತಿಚಚಾಲ ಧರಾ ಸಮಸ್ತಾ ವಿದ್ರಾವಿತಾ ಚ ಸಕಲಾ ಪ್ರತಿವೀರಸೇನಾ ॥೨೭.೩೯॥

 

ಈರೀತಿಯಾಗಿ ಓಡಿ ಬರುತ್ತಿದ್ದ ಕರ್ಣನನ್ನು ಪವನಪುತ್ರ ಭೀಮ ನೋಡಿದ,

ಕ್ರೋಧದಿಂದ, ಸುಟ್ಟುಬಿಡುವನೋ ಎಂಬಂತೆ, ಆ ಕರ್ಣಗೆ ಎದುರಾಗಿ ಹೋದ.

ಯುಧಿಷ್ಠಿರನನ್ನು ರಕ್ಷಿಸಿ’ ಎಂದು ಸಾತ್ಯಕಿ ಹಾಗೂ ಧೃಷ್ಟದ್ಯುಮ್ನರಿಗೆ ಹೇಳಿ ಹೊರಟ ,

ಮಹಾಪ್ರಳಯದಿ ಸಂಹಾರಕ ರುದ್ರನನ್ನೇ ನುಂಗುವ ನಾರಸಿಂಹನಂತಿತ್ತು ಆ ನೋಟ.

ಯುದ್ಧಭೂಮಿಯಾಗಿತ್ತಾಗ ಅತಿ ಭಯಂಕರ, ಭೀಮನಡಿಗೆಯಿಂದ ನೆಲ ಕಂಪಿಸಿತ್ತು ಥರಥರ.                    ಸಮಸ್ತ ಶತ್ರುಸೈನ್ಯಕ್ಕೆ ಓಟವಾಯ್ತು ಅನಿವಾರ್ಯ.

 

ವೈಕರ್ತ್ತನೇನ ಶರಸಞ್ಚಯತಾಡಿತಃ ಸ ಬಾಣಂ ಚ ವಜ್ರಸದೃಶಂ ಪ್ರಮುಮೋಚ ತಸ್ಮಿನ್ ।

ತೇನಾSಹತೋ ಮೃತಕವತ್ ಸ ಪಪಾತ ಕರ್ಣ್ಣೋ ಭೀಮಃ ಕ್ಷುರಂ ಚ ಜಗೃಹೇSಭಿಯಯೌ ಚ ಪದ್ಭ್ಯಾಮ್ ॥೨೭.೪೦॥

 

ಭೀಮ ಕರ್ಣನ ಬಾಣಗಳ ಸಮೂಹದಿಂದ ಹೊಡೆಯಲ್ಪಟ್ಟ,

ವಜ್ರಾಯುಧಕ್ಕೆ ಸದೃಶವಾದ ಬಾಣವನ್ನು ಕರ್ಣನ ಮೇಲೆ ಬಿಟ್ಟ.

ಅದರಿಂದ ಚೆನ್ನಾಗಿ ಹೊಡೆಯಲ್ಪಟ್ಟ ಕರ್ಣನು ಶವದಂತೆ ಬಿದ್ದ.

ಆಗ ಭೀಮ ಚೂರಿ ಹಿಡಿದು, ರಥದಿಂದಿಳಿದು, ಕರ್ಣನ ಬಳಿ ಹೋದ.

 

ನಿನ್ದಾಂ ಹರೇಸ್ತು ವಿದಧಾತಿ ಪರೋಕ್ಷಗೋSಪಿ ಯಸ್ತಂ ಪ್ರಗೃಹ್ಯ ಕರವಾಣಿ ವಿಜಿಹ್ವ‌ಮೇವ ।

ಏವಂ ಹಿ ವಾಯುತನಯಸ್ಯ ಮಹಾಪ್ರತಿಜ್ಞಾ ಛೇತ್ತುಂ ಸ ತೇನ ರವಿಜಸ್ಯ ಸಸಾರ ಜಿಹ್ವಾ‌ಮ್ ॥೨೭.೪೧॥

 

ಹಿಂದಿನಿಂದ ಯಾರು ಮಾಡುತ್ತಾನೋ ಪರಮಾತ್ಮನ ನಿಂದನೆ ,

ಅವನ ನಾಲಿಗೆ ಕತ್ತರಿಸುತ್ತೇನೆ ಎಂಬುದು ಭೀಮನ ಮಹಾಪ್ರತಿಜ್ಞೆ.

ಅದಕೆ ಭೀಮ ಬಂದ ಕರ್ಣನ ಬಳಿ ಕತ್ತರಿಸಲವನ ನಾಲಿಗೆಯನ್ನೆ.

 

ಆಯಾನ್ತಮನ್ತಿಕಮಮುಂ ಪ್ರಸಮೀಕ್ಷ್ಯ ಶಲ್ಯೋ ನೇತ್ಯಾಹ ಹೇತುಭಿರಹೋ ನ ಮೃಷಾ ಪ್ರತಿಜ್ಞಾ ।

ಕಾರ್ಯ್ಯಾ ತ್ವಯೈವ ಪುರುಹೂತಸುತಸ್ಯ ಜಿ  ಹ್ವಾಂ ‌ ಮಾ ತೇನ ಪಾತಯ ಮರುತ್ಸುತ ಸೂತಸೂನೋಃ ॥೨೭.೪೨॥

 

ಇತ್ಯುಕ್ತ್ವಾ ಪ್ರಮುಖಾತ್ ತಸ್ಯ ರಥೇನೈವ ತು ಮದ್ರರಾಟ್ ।

ವೈಕರ್ತ್ತನಮಪೋವಾಹ ಸರ್ವಲೋಕಸ್ಯ ಪಶ್ಯತಃ ॥೨೭.೪೩॥

 

ಆಗ ಶಲ್ಯನು ಹತ್ತಿರದಲ್ಲಿ ಬರುತ್ತಿರುವ ಭೀಮಸೇನನನ್ನು ನೋಡಿದ ,

ಅನೇಕ ಕಾರಣವನ್ನು ಕೊಟ್ಟು, ಹೀಗೆ ಮಾಡಬೇಡ ಎಂದು ಕೇಳಿಕೊಂಡ.

ಎಲ್ಲಕ್ಕಿಂತ ಮಿಗಿಲಾಗಿ ನಿನ್ನಿಂದಲೇ ಅರ್ಜುನನ ಪ್ರತಿಜ್ಞೆ ಮುರಿಯಲ್ಪಡಬಾರದು,

ಓ ಭೀಮಸೇನನೇ, ಕರ್ಣನ ನಾಲಿಗೆಯನ್ನು ಈಗ ನೀನು ಕತ್ತರಿಸಿ ಹಾಕಬಾರದು.

ಹೀಗೆ ಶಲ್ಯ ಭೀಮಸೇನಗೆ ವಿವರಿಸಿ ಹೇಳುತ್ತಾನೆ,

ಎಲ್ಲರಂತೆ ಅವನೂ ಇದನ್ನ ನೋಡುತ್ತಿರುತ್ತಾನೆ ,

ಆಗ ಶಲ್ಯ ಕರ್ಣನ ಹೊರಗೆ ಕರೆದೊಯ್ಯುತ್ತಾನೆ.

 

ಜಿತ್ವಾ ಸೂರ್ಯ್ಯಸುತಂ ಭೀಮಃ ಕೌರವಾಣಾಮನೀಕಿನೀಮ್ ।

ಸರ್ವಾಂ ವಿದ್ರಾವಯಾಮಾಸ ದ್ರೌಣಿದುರ್ಯ್ಯೋಧನಾವೃತಾಮ್ ॥೨೭.೪೪॥

 

ಭೀಮಸೇನನು ಸೂರ್ಯನ ಮಗನಾಗಿರುವ ಕರ್ಣನನ್ನು ಗೆದ್ದ,

ಅಶ್ವತ್ಥಾಮ, ದುರ್ಯೋಧನಾದಿಗಳ, ಕೌರವ ಸೇನೆಯ ಓಡಿಸಿದ.

 

ಅಕ್ಷೋಹಿಣೀತ್ರಯಂ ತೇನ ತದಾ ವಿಲುಳಿತಂ ಕ್ಷಣಾತ್ ।

ತದೈವ ಗುರುಪುತ್ರೋSಯಾತ್ ಪಾಣ್ಡವಾನಾಮನೀಕಿನೀಮ್ ॥೨೭.೪೫॥

 

ವಿಮೃದ್ಯ ಸಕಲಾಂ ಸೇನಾಂ ಕೃತ್ವಾ ಚ ವಿರಥಂ ನೃಪಮ್ ।

ಧೃಷ್ಟದ್ಯುಮ್ನಂ ಯಮೌ ಚೈವ ಸಾತ್ಯಕಿಂ ದ್ರೌಪದೀಸುತಾನ್ ।

ಕ್ಷಣೇನ ವಿರಥೀಕೃತ್ಯ ಸರ್ವಾಂಶ್ಚಕ್ರೇ ನಿರಾಯುಧಾನ್ ॥೨೭.೪೬॥

 

ಸ್ವಲ್ಪ ಹೊತ್ತಿನಲ್ಲೇ ಭೀಮಸೇನ ಮೂರು ಅಕ್ಷೋಹಿಣಿ ನಾಶ ಮಾಡಿದ,

ಇನ್ನೊಂದು ಕಡೆಯಿಂದ ಅಶ್ವತ್ಥಾಮ ಪಾಂಡವಸೇನೆಯ ಮೇಲೇರಿ ಬಂದ.

 

ಆ ಅಶ್ವತ್ಥಾಮ ಎಲ್ಲಾ ಸೇನೆಯನ್ನು ಕಂಗೆಡಿಸಿದ,

ಧರ್ಮರಾಜನನ್ನು ರಥಹೀನನನ್ನಾಗಿ ಮಾಡಿದ , ಧೃಷ್ಟದ್ಯುಮ್ನ, ನಕುಲ-ಸಹದೇವರು, ಸಾತ್ಯಕಿ ಮತ್ತು ದ್ರೌಪದಿಯ ಮಕ್ಕಳು,

ಎಲ್ಲರನ್ನೂ ನಿರಾಯುಧರನ್ನಾಗಿ ಮಾಡಿ, ಅವರ ರಥವನ್ನು ಮಾಡಿದ ಹಾಳು .

 

ತಾನ್ ಭಗ್ನದರ್ಪ್ಪಾನ್ ರಣತೋSಪಯಾತಾನನ್ವೇವ ಬಾಣಾವೃತಮನ್ತರಿಕ್ಷಮ್ ।

ಕುರ್ವನ್ ಯಯೌ ಧರ್ಮ್ಮರಾಜಸ್ತಮಾಹ ಕಿಂ ನಃ ಸ್ವಧರ್ಮ್ಮೇ ನಿರತಾನ್ ವಿಹಂಸಿ ॥೨೭.೪೭॥

 

ಕ್ಷತ್ರಿಯಾನ್ ಪರಧರ್ಮ್ಮಸ್ಥೋ ಮಾ ಹಿಂಸೀರಿತಿ ಚೋದಿತಃ ।

ಪ್ರಹಸ್ಯ ತಾನ್ ವಿಹಾಯೈವ ಯಯೌ ಯತ್ರಾಚ್ಯುತಾರ್ಜ್ಜುನೌ ॥೨೭.೪೮॥

 

ಹೀಗೆ ಅಶ್ವತ್ಥಾಮ ಅವರೆಲ್ಲರ ದರ್ಪವನ್ನಿಳಿಸಿದ ,

ಯುದ್ಧದಿಂದ ಓಡಿಹೋಗುವವರನ್ನಾಗಿ ಮಾಡಿದ.

ಉಳಿದ ಸೇನೆಯನ್ನು ಬಾಣಗಳಿಂದ ತುಂಬುತ್ತಾ ಮುನ್ನುಗ್ಗಿದ,

ಆಗ ಧರ್ಮಜ ನಿಸ್ಸಹಾಯಕತೆಯಿಂದ ಅವನನ್ನು ನಿಂದಿಸಿ ನುಡಿದ -

‘ಯುದ್ಧ ಮಾಡುವುದು ಕ್ಷತ್ರಿಯರಾದ ನಮ್ಮ ಸಹಜ ಧರ್ಮ,

ಬ್ರಾಹ್ಮಣನಾದ ನೀನೇಕೆ ಹಿಂಸಿಸುತ್ತಿರುವೆ ನಮ್ಮ ಸ್ವಧರ್ಮ.

ಪ್ರಶ್ನೆ ಮಾಡಲ್ಪಟ್ಟವನಾದ ಅಶ್ವತ್ಥಾಮನು ನಕ್ಕುಬಿಡುತ್ತಾನೆ,

ಅವರೆಲ್ಲರನ್ನು ಬಿಟ್ಟು, ಕೃಷ್ಣಾರ್ಜುನರಲ್ಲಿಗೆ ಹೋಗಿಬಿಡುತ್ತಾನೆ.

 

ಸಂಶಪ್ತಕೈಸ್ತತ್ರ ಸಂಯುದ್ಧ್ಯಮಾನಂ ಸಮಾಹ್ವಯಾಮಾಸ ಸುರೇಶಸೂನುಮ್ ।

ಸ ಬಾಣಯುಕ್ತಂ ಭುಜಗೇನ್ದ್ರಕಲ್ಪಮುನ್ನಮ್ಯ ಬಾಹುಂ ಯುಧಯೇ ಸುಶೂರಮ್ ॥೨೭.೪೯॥

 

ಅಲ್ಲಿ ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿದ್ದ ಅತ್ಯಂತ ಶೂರನಾದ ಇಂದ್ರಪುತ್ರ ಅರ್ಜುನ, ಅಶ್ವತ್ಥಾಮ ಬಾಣಯುಕ್ತವಾದ, ಶೇಷ ಸದೃಶವಾದ ತನ್ನ ತೋಳನ್ನೆತ್ತಿ ಕೊಟ್ಟ ಯುದ್ಧಾಹ್ವಾನ .

 

ಪಾರ್ತ್ಥಃ ಸಂಶಕ್ತಕಗಣೈಃ ಸಂಸೃಷ್ಟಃ ಸಮರಾರ್ತ್ಥಿಭಿಃ ।

ಆಹೂತೋ ದ್ರೌಣಿನಾ ಚೈವ ಕಾರ್ಯ್ಯಂ ಕೃಷ್ಣಮಪೃಚ್ಛತ ।

ಚೋದಯಾಮಾಸ ಚ ಹಯಾನ್ ಕೃಷ್ಣೋ ದ್ರೌಣಿರಥಂ ಪ್ರತಿ ॥೨೭.೫೦॥

 

ಸಂಶಪ್ತಕ ಗಣದಿಂದ ತಡೆಯಲ್ಪಟ್ಟ, ಅಶ್ವತ್ಥಾಮನಿಂದಲೂ ಕರೆಯಲ್ಪಟ್ಟ,

ಪಾರ್ಥನು ಏನು ಮಾಡಬೇಕೆಂದು ತಿಳಿಯದೇ ಶ್ರೀಕೃಷ್ಣನನ್ನು ಕೇಳಿದ.

ಆಗ ಕೃಷ್ಣನು ಅಶ್ವತ್ಥಾಮನ ರಥವನ್ನು ಕುರಿತು ಕುದುರೆಗಳನ್ನು ಪ್ರೇರಿಸಿದ.

 

ಉಭೌ ಚ ತಾವಸ್ತ್ರವಿದಾಂ ಪ್ರಧಾನೌ ಮಹಾಬಲೌ ಸಂಯತಿ ಜಾತದರ್ಪ್ಪೌ ।

ಶರೈಃ ಸಮಸ್ತಾಃ ಪ್ರದಿಶೋ ದಿಶಶ್ಚ ದ್ರೋಣೇನ್ದ್ರಸೂನೂ ತಿಮಿರಾಃ ಪ್ರಚಕ್ರತುಃ ॥೨೭.೫೧॥

 

ಅಸ್ತ್ರವೇತ್ತರಲ್ಲಿಯೇ ಪ್ರಧಾನರಾಗಿರುವ, ಮಹಾಬಲರಾಗಿರುವ ಅಶ್ವತ್ಥಾಮ-ಅರ್ಜುನರು, ಯುದ್ಧಾಸಕ್ತಿ,ಹೆಮ್ಮೆಯಿಂದ ತಮ್ಮ ಬಾಣಗಳಿಂದ ದಿಕ್ಕು-ವಿದಿಕ್ಕುಗಳನ್ನೂ ಕತ್ತಲೆಯ ಮಾಡಿದರು. 

 

ದ್ರೌಣಿಸ್ತದಾ ಸ್ಯನ್ದನವಾಜಿರೋಮಸ್ವರೋಮಕೂಪಧ್ವಜಕಾರ್ಮ್ಮುಕೇಭ್ಯಃ ।

ಶರಾನಮೋಘಾನ್ ಸತತಂ ಸೃಜಾನೋ ಬಬನ್ಧ ಪಾರ್ತ್ಥಂ ಶರಪಞ್ಜರೇಣ ॥೨೭.೫೨॥

 

ಆಗ ಅಶ್ವತ್ಥಾಮನು ರಥದಿಂದ, ಕುದುರೆಗಳ ರೋಮದಿಂದ,

ತನ್ನ ರೋಮಕೂಪದಿಂದ, ಧ್ವಜದಿಂದ, ತನ್ನ ಬಿಲ್ಲಿನಿಂದ,

ಕೂಡಾ ಅಮೋಘ ಬಾಣಗಳನ್ನು ನಿರಂತರ ಬಿಡುವವನಾದ,

ತಾನು ನಿರ್ಮಿಸಿದ ಶರ ಪಂಜರದಲ್ಲಿ ಅರ್ಜುನನನ್ನು ಕಟ್ಟಿಹಾಕಿದ. 

 

ತಸ್ಮಿನ್ ನಿಬದ್ಧೇ ಹರಿರಪ್ರಮೇಯೋ ವಿಬೋಧಯಾಮಾಸ ಸುರೇನ್ದ್ರಸೂನುಮ್ ।

ಆಲಿಙ್ಗನೇನಾಸ್ಯ ದದೌ ಬಲಂ ಚ ಸ ಉತ್ಥಿತೋSಸ್ತ್ರಾಣ್ಯಮುಚನ್ಮಹಾನ್ತಿ ॥೨೭.೫೩॥

 

ಅರ್ಜುನನು ಹೀಗೆ ದ್ರೌಣಿಯಿಂದ ಕಟ್ಟಲ್ಪಟ್ಟಾಗ,

ಅಪ್ರಮೇಯ ಅವನನ್ನು ಅಪ್ಪಿಕೊಳ್ಳುವನಾಗ,

ಆ ಮೂಲಕ ಅವನಿಗೆ ಬಲವನ್ನು ಕೊಡುತ್ತಾನೆ,

ಅದರಿಂದ ಮತ್ತೆ ಅರ್ಜುನ ಎದ್ದು ನಿಲ್ಲುತ್ತಾನೆ,

ಮಹಾಸ್ತ್ರಗಳನ್ನು ದ್ರೌಣಿಯ ಮೇಲೆ ಬಿಡುತ್ತಾನೆ.

 

ನಿವಾರ್ಯ್ಯ ತಾನ್ಯಸ್ತ್ರವರೈರ್ಗ್ಗುರೋಃ ಸುತಶ್ಚಿಚ್ಛೇದ ಚ ಜ್ಯಾಂ ಯುಧಿ ಗಾಣ್ಡಿವಸ್ಯ ।

ವವರ್ಷ ಪಾರ್ತ್ಥಂ ಚ ಶರೈರಥಾSನ್ಯಾ ಜ್ಯಾSSಸೀತ್ ತಯಾ ಗಾಣ್ಡಿವಂ ಸೋSಪ್ಯಯುಙ್ಕ್ತ ॥೨೭.೫೪॥

 

ಅರ್ಜುನನ ಅಸ್ತ್ರಗಳನ್ನು ಅದಕ್ಕಿಂತ ಪ್ರಬಲವಾದ ಅಸ್ತ್ರಗಳಿಂದ ಅಶ್ವತ್ಥಾಮ ತಡೆದ ,

ಅರ್ಜುನನ ಗಾಂಡೀವದ ನೇಣನ್ನು ಕತ್ತರಿಸಿ ಮತ್ತು ಅವನನ್ನು ಬಾಣಗಳಿಂದ ಪೀಡಿಸಿದ.

ಅಷ್ಟರಲ್ಲಿ ಗಾಂಡೀವದಲ್ಲಿ ಇನ್ನೊಂದು ನೇಣು ಬೆಳೆದು ಬರುತ್ತದೆ,

ಆಗ ಅರ್ಜುನನಿಂದ ಪುನಃ ಗಾಂಡೀವಕ್ಕೆ ಹೆದೆ ಏರಿಸಲ್ಪಡುತ್ತದೆ.

 

ತತಃ ಶರೇಣ ಕುಪಿತಃ ಶಿತೇನ ದ್ರೌಣಿಸಾರಥೇಃ ।

ಶಿರೋ ಜಹಾರ ಕೌನ್ತೇಯಃ ಸಾರಥ್ಯಂ ಸೋSಕರೋತ್ ಸ್ವಯಮ್ ॥೨೭.೫೫॥

 

ತದನಂತರ ಅರ್ಜುನನು ಕೋಪಗೊಂಡ, ಕತ್ತರಿಸುತ್ತಾನೆ ತೀಕ್ಷ್ಣವಾದ ಬಾಣದಿಂದ, ಎದುರಾಳಿ ಅಶ್ವತ್ಥಾಮನ ಸಾರಥಿಯ ರುಂಡ,   ಆಗ ಅಶ್ವತ್ಥಾಮ ತಾನೇ ಸಾರಥ್ಯವನ್ನು ಮಾಡಿದ.

 

ಶರಾನ್ ವಿಸೃಜತಾ ತೇನ ಸಾರಥ್ಯಮಪಿ ಕುರ್ವತಾ ।

ಶರಕೂಟೇನ ಪಾರ್ತ್ಥಃ ಸ ಪುನರ್ಬುದ್ಧೋ ದ್ವಿಜನ್ಮನಾ ॥೨೭.೫೬॥

 

ಬಾಣಗಳನ್ನು ಬಿಡುತ್ತಾ, ಸಾರಥ್ಯವನ್ನೂ ಮಾಡುತ್ತಿದ್ದ ಅಶ್ವತ್ಥಾಮನೆಂಬ ಬ್ರಾಹ್ಮಣ,

ಅಶ್ವತ್ಥಾಮನ ಬಾಣಸಮೂಹದಿಂದ ಕಟ್ಟಲ್ಪಟ್ಟ ಅರ್ಜುನನಾಗುತ್ತಾನೆ ಹೈರಾಣ.

 

ಪುನರಾಲಿಙ್ಗ್ಯ ಕೃಷ್ಣಸ್ತಮಧಾಚ್ಛತ್ರುವಿಘಾತಕಮ್ ।

ಬಲಮಸ್ಮಿಂಸ್ತತಃ ಪಾರ್ತ್ಥ ಉತ್ತಸ್ಥೌ ಶರಚಾಪಭೃತ್ ॥೨೭.೫೭॥

 

ಆಗ ಶ್ರೀಕೃಷ್ಣ ಪುನಃ ಆಲಿಂಗನವನ್ನು ಕೊಟ್ಟ, ಶತ್ರುಸಂಹಾರ ಬಲವನ್ನು ಅರ್ಜುನನಲ್ಲಿಟ್ಟ.      ಆಮೇಲೆ ಅರ್ಜುನ ಬಿಲ್ಲು ಬಾಣಗಳ ಹಿಡಿದ, ಮತ್ತೆ ಯುದ್ಧ ಮಾಡುವುದಕ್ಕೆ ಸನ್ನದ್ಧನಾದ.

 

ವವರ್ಷ ಚ ಶರಾನ್ ಭೂಯೋ ದ್ರೋಣಪುತ್ರೇSರಿಮರ್ದ್ದನಃ ।

ಪುನಸ್ತಸ್ಯ ನುನೋದ ಜ್ಯಾಂ ದ್ರೌಣಿಃ ಸನ್ಧಾಯ ತಾಂ ಪುನಃ ॥೨೭.೫೮ ॥

 

ಶತ್ರುಗಳನ್ನು ಗೆಲ್ಲಬಲ್ಲ ಆ ಅರ್ಜುನ ಅಶ್ವತ್ಥಾಮನ ಮೇಲೆ ಬಾಣಗಳ ಬಿಡುತ್ತಾನೆ.

ಆಗ ಅಶ್ವತ್ಥಾಮನು ಅವನ ಬಿಲ್ಲಿನ ನೇಣನ್ನು ಮತ್ತೆ ಕತ್ತರಿಸಿ ಹಾಕುವನಾಗುತ್ತಾನೆ .

ಅರ್ಜುನನು ನೇಣನ್ನು ಮತ್ತೆ ಕಟ್ಟುತ್ತಾನೆ , ದ್ರೌಣಿಯ ಕುದುರೆ ಲಗಾಮನ್ನು ಕತ್ತರಿಸುತ್ತಾನೆ.

 

ಪಾರ್ತ್ಥೋ ದ್ರೋಣಸುತಸ್ಯಾಶ್ವರಶ್ಮೀಂಶ್ಚಿಚ್ಛೇದ ಸಾಯಕೈಃ ।

ವಿರಶ್ಮಯೋ ಹಯಾ ದ್ರೌಣೇಃ ಪುನಃ ಪಾರ್ತ್ಥಶರಾಹತಾಃ ॥ ೨೭.೫೯॥

 

ಅಶ್ವತ್ಥಾಮನ ಕುದುರೆಗಳು ಲಗಾಮನ್ನು ಕಳೆದುಕೊಂಡು,

ದೂರ ಓಡಿದವು ಅರ್ಜುನನ ಬಾಣಗಳಿಂದ ಘಾಸಿಗೊಂಡು.

No comments:

Post a Comment

ಗೋ-ಕುಲ Go-Kula