Monday, 19 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 220-245

ಪದಾ ಪಿಪೇಷ ಕಾಲಿಙ್ಗಂ ಮುಷ್ಟಿನೈವ ಜಘಾನ ಹ ।

ಮುಷ್ಟಿನಾ ತ್ವದ್ವಧಾಯಾಹಂ ಸಮರ್ತ್ಥ ಇತಿ ಕಿಂ ವದೇ ॥೨೬.೨೨೦ ॥

 

ತಸ್ಮಾನ್ಮಯಾ ರಕ್ಷಿತಸ್ತ್ವಮಿತಿ ಜ್ಞಾಪಯಿತುಂ ಪ್ರಭುಃ ।

ಸಾಶ್ವಸೂತಧ್ವಜರಥಃ ಕಾಲಿಙ್ಗೋ ಮುಷ್ಟಿಚೂರ್ಣ್ಣಿತಃ  ॥೨೬.೨೨೧ ॥

 

ಕಾಲಿಂಗನನ್ನು ಭೀಮ ಮುಷ್ಟಿಯಿಂದ ಗುದ್ದಿ ಸಾಯಿಸಿದ,

ಮತ್ತು ಅದೇ ಮುಷ್ಟಿಯನ್ನು ಕರ್ಣನಿಗೆ ಎತ್ತಿ ತೋರಿಸಿದ.

‘ನನ್ನಿಂದ ರಕ್ಷಣೆಗೊಳಗಾದವನು ನೀನು’ ಎಂದು ಕರ್ಣನಿಗೆ ತಿಳಿಯಪಡಿಸುವ ಉದ್ದೇಶದಿಂದ,

ಕುದುರೆ, ಸಾರಥಿ, ಧ್ವಜ, ರಥಗಳಿಂದ ಕೂಡಿದ ಕಾಲಿಂಗನನ್ನು ಭೀಮ ಮುಷ್ಟಿಯಿಂದ ಕೊಂದ.

 

ಕೇತುಮಾಂಶ್ಚ ಪಿತಾ ತಸ್ಯ ಶಕ್ರದೇವಃ ಶ್ರುತಾಯುಧಃ ।

ಅಕ್ಷೋಹಿಣ್ಯಾ ಸೇನಯಾ  ಚ ಸಹ ಭೀಮೇನ ಪಾತಿತಾಃ ॥೨೬.೨೨೨ ॥

 

 

ಖಡ್-ಗಯುದ್ಧೇ ಪುರಾ ಭೀಷ್ಮೇ  ಸೇನಾಪತ್ಯಂ ಪ್ರಕುರ್ವತಿ ।

ಕರ್ಣ್ಣಾನುಜಾನ್ ದ್ಧ್ರುವಾದ್ಯಾಂಶ್ಚ ಬಹೂನ್ ಜಘ್ನೇ  ಸ ವೈ ನಿಶಿ ॥೨೬.೨೨೩ ॥

 

ಹಿಂದೆ ಭೀಷ್ಮರು ಸೇನಾಧಿಪತಿಯಾಗಿದ್ದಾಗ ಭೀಮನಿಂದ ಕಾಲಿಂಗನ ತಂದೆಯಾಗಿರುವ ಕೇತುಮಾನ್ ಎಂಬುವವನು,

ಶ್ರುತಾಯುಧ,  ಶಕ್ರದೇವರ ಜೊತೆಗೆ ಒಂದು ಅಕ್ಷೋಹಿಣಿ ಸೇನೆಯೊಂದಿಗೆ ಖಡ್ಗಯುದ್ಧದಲ್ಲಿ ಸಂಹರಿಸಲ್ಪಟ್ಟಿದ್ದನು.

 

ಕಾಲಿಂಗನನ್ನು ಕೊಂದ ನಂತರ ಆ ರಾತ್ರಿ ಭೀಮ, ಮಾಡಿದ ಕರ್ಣನ ತಮ್ಮಂದಿರ ಮಾರಣ ಹೋಮ, ಹಾಗೇ ಅಧಿರಥಪುತ್ರರಾದ ಧ್ರುವಾದಿಗಳ ನಿರ್ನಾಮ.

 

ಸಙ್ಜ್ಞಾಂ ಭೀಮಕೃತಾಂ ಜ್ಞಾತ್ವಾ ಶಕ್ತಿಂ ಚಿಕ್ಷೇಪ ಚಾಪರಾಮ್ ।

ಕರ್ಣ್ಣಃ ಶಕ್ತಿರ್ಮ್ಮಯಾ ದಿವ್ಯಾ ನ ಮುಕ್ತಾ ತೇನ ಜೀವಸಿ ॥ ॥೨೬.೨೨೪ ॥

 

ಇತಿ ಜ್ಞಾಪಯಿತುಂ ತಾಂ ತು ಜ್ಞಾತ್ವಾ ಭೀಮಃ ಕ್ಷಣಾತ್ ತದಾ ।

ಖಮುತ್ಪತ್ಯ ಗೃಹೀತ್ವಾ ಚ ಕರ್ಣ್ಣೇ ಚಿಕ್ಷೇಪ ಸತ್ವರಃ ॥೨೬.೨೨೫ ॥

 

ಭೀಮ ತನ್ನ ಕ್ರಿಯೆಯಿಂದ ತೋರಿದ ಸಂಜ್ಞೆಯನ್ನು ಕರ್ಣ ತಿಳಿದವನಾದ ,

‘ಶಕ್ತ್ಯಾಯುಧ ಬಿಡಲಿಲ್ಲ, ಅದಕ್ಕೇ ಬದುಕಿದ್ದೀಯ’ ಎಂದು ತಿಳಿಸಲಿಚ್ಛಿಸಿದ.

ಇಂದ್ರ ಕೊಟ್ಟಿದ್ದ ಶಕ್ತಿಗಿಂತ ಬೇರೆಯಾದ ಇನ್ನೊಂದು ಶಕ್ತ್ಯಾಸ್ತ್ರ,

ಭೀಮಸೇನನಮೇಲೆ ಪ್ರಯೋಗಿಸುತ್ತಾನಾಗ ಅಧಿರಥಪುತ್ರ.

ಕರ್ಣನ ಆ ಸಂಜ್ಞೆಯ ತಿಳಿದ ಭೀಮ ಕ್ಷಣದಲ್ಲಿ ಆಕಾಶಕ್ಕೆ ನೆಗೆದ,

ಕರ್ಣ ಪ್ರಯೋಗಿಸಿದ ಆ ಶಕ್ತಿಯನ್ನು ಹಿಡಿದು ಅವನ ಮೇಲೆಸೆದ.

 

ಯದಿ ತ್ವಯಾ ತದಾ ಮುಕ್ತಾ ಶಕ್ತಿಸ್ತ್ವಾಂ ಸಾ ಹನಿಷ್ಯತಿ ।

ಇತಿ ಜ್ಞಾಪಯಿತುಂ ಸಾ ಚ ಕರ್ಣ್ಣರಕ್ಷಣಕಾಙ್ಕ್ಷಿಣಾ ॥೨೬.೨೨೬ ॥

 

ಮುಕ್ತಾ ದಕ್ಷಭುಜೇ ಸಾSಥ ವಿದಾರ್ಯ್ಯ ಧರಣೀಂ ತಥಾ ।

ಭಿತ್ತ್ವಾ ವಿವೇಶ ಕರ್ಣ್ಣಸ್ಯ ದರ್ಶಯನ್ತೀ ನಿದರ್ಶನಮ್ ॥೨೬.೨೨೭ ॥

 

 

‘ಒಂದು ವೇಳೆ ನೀನು ಬಿಟ್ಟಿದ್ದರೂ ಶಕ್ತ್ಯಾಯುಧ,

ಅದರಿಂದ ಆಗ ಆಗುತ್ತಿದ್ದದ್ದದು ನಿನ್ನದೇ ವಧ.     

ಇದನ್ನು ತಿಳಿಸಲೆಂದೇ ಭೀಮಸೇನ ಕರ್ಣ ಬಿಟ್ಟ ಶಕ್ತಿಯನ್ನು ತಿರುಗಿ ಅವನ ಮೇಲೇ ಎಸೆದಿದ್ದ,

ಅವನ ಬಳತೋಳ ಸೀಳಿ ನೆಲ ಸೇರಿತ್ತು ‘ಕರ್ಣ ಬದುಕಲೆಂದೇ’ ಭೀಮನೆಸೆದ ಆ ಆಯುಧ.

ಏನೇ ಮಾಡಿದರೂ ಭೀಮನನ್ನು ಮಣಿಸಲು ಸಾಧ್ಯವಿಲ್ಲ,

ಎಂದು ಮನವರಿಕೆ ಮಾಡಿಕೊಟ್ಟಿತ್ತು ಆ ಸಂದೇಶದ ಆಳ.

 

ತತೋ ಭೀಮಃ ಪುನಃ ಸ್ವಂ ತು ರಥಮಾಸ್ಥಾಯ ಚಾಪಭೃತ್ ।

ಕರ್ಣ್ಣಸ್ಯ ಪುರತಃ ಶತ್ರೂನ್  ದ್ರಾವಯಾಮಾಸ ಸರ್ವತಃ ॥೨೬.೨೨೮ ॥

 

ಆನಂತರ ಭೀಮ ಮತ್ತೆ ತನ್ನ ರಥವನ್ನೇರಿ  ಬಿಲ್ಲನ್ನು ಹಿಡಿದ,

ಕರ್ಣನ ಮುಂದುಗಡೆಯೇ ಎಲ್ಲಾ ಶತ್ರುಗಳನ್ನು ಓಡಿಸಿದ.

 

ತಂ ಕರ್ಣ್ಣೋ ವಾರಯಾಮಾಸ ಶರೈಃ ಸನ್ನತಪರ್ವಭಿಃ ।

ಭೀಮಃ ಕರ್ಣ್ಣರಥಾಯೈವ ಗದಾಂ ಚಿಕ್ಷೇಪ ವೇಗಿತಃ ॥೨೬.೨೨೯ ॥

 

ಭೀಮನನ್ನು ಕರ್ಣ ಚೂಪಾದ ವಕ್ರವಾದ ತುದಿಯ ಬಾಣಗಳಿಂದ ತಡೆದ,

ಭೀಮ ವೇಗದಿಂದ ಕರ್ಣನ ರಥದ ಮೇಲೆಯೇ ಗದೆಯನ್ನು ಎಸೆದ. 

 

ಸ ತದ್ಗದಾವಿಘಾತಾಯ ಸ್ಥೂಣಾಕರ್ಣಾಸ್ತ್ರಮಾಸೃಜತ್ ।

ತೇನಾಸ್ತ್ರೇಣ ಪ್ರತಿಹತಾ ಸಾ ಗದಾ ಭೀಮಮಾಬ್ರಜತ್ ॥೨೬.೨೩೦ ॥

 

ಕರ್ಣ ಭೀಮನ ಗದೆಯನ್ನು ಹೊಡೆಯಲು ಸ್ಥೂಣಾಕರ್ಣಾ ಎಂಬ ಅಸ್ತ್ರವ ಬಿಟ್ಟ,

ಆ ಅಸ್ತ್ರದಿಂದ ತಡೆಯಲ್ಪಟ್ಟ ಆ ಗದೆಯು ಮತ್ತೆ ಹಿಂದಿರುಗಿತು ಭೀಮಸೇನನತ್ತ .  

 

ಭೀಮೋ ಗದಾಂ ಸಮಾದಾಯ ಕರ್ಣ್ಣಸ್ಯ ರಥಮಾರುಹತ್ ।

ತಯಾ ಸಞ್ಚೂರ್ಣ್ಣಯಾಮಾಸ ಕರ್ಣ್ಣಸ್ಯ ರಥಕೂಬರಮ್ ॥೨೬.೨೩೧ ॥

 

ಭೀಮ ಗದೆಯನ್ನು ಮತ್ತೆ ಹಿಡಿದುಕೊಂಡು ಕರ್ಣನ ರಥವನ್ನೇರಿದ,

ಆ ಗದೆಯಿಂದ ಕರ್ಣನ ರಥದ ನೊಗವನ್ನು ಪುಡಿ-ಪುಡಿ ಮಾಡಿದ.

 

ಏವಂ ತ್ವಚ್ಚೂರ್ಣ್ಣನೇ ಶಕ್ತೋ ಮತ್ಕಾಮಾತ್ ತ್ವಂ ಹಿ ಜೀವಸಿ ।

ಏವಂ ನಿದರ್ಶಯಿತ್ವೈವ ಪುನಃ ಸ್ವಂ ರಥಮಾಬ್ರಜತ್ ॥೨೬.೨೩೨ ॥

 

‘ಹೀಗೆಯೇ ನಿನ್ನನ್ನು ಪುಡಿಪುಡಿ ಮಾಡುವುದರಲ್ಲಿ ನಾನಾಗಿದ್ದೇನೆ ಶಕ್ತ,

ಆದರೆ ನನ್ನ ಇಚ್ಛೆಯಿಂದಲೇ ನೀನು ಬದುಕಿರುವೆ ಎಂಬುದು ದೈವಚಿತ್ತ’.

ಹೀಗೆ ದೃಷ್ಟಾಂತದ ಮೂಲಕ ತೋರಿದ, ಭೀಮಸೇನ ಮತ್ತೆ ತನ್ನ ರಥವನ್ನೇರಿದ.

 

ಪುನಃ ಕರ್ಣ್ಣಪುರಃ ಸೇನಾಂ ಜಘಾನ ಬಹುಶೋ ರಣೇ ।

ಕರ್ಣ್ಣಸ್ತು ತಂ ಪರಿತ್ಯಜ್ಯ ಸಹದೇವಮುಪಾದ್ರವತ್ ॥೨೬.೨೩೩ ॥

 

ಮತ್ತೆ ಕರ್ಣನ ಎದುರೇ ಭೀಮಸೇನನು ಬಹಳವಾಗಿ ಸೇನೆಯನ್ನು ಕೊಂದುಹಾಕಿದ, ಕರ್ಣನಾದರೋ ಅಸಹಾಯಕನಾಗಿ ಭೀಮನನ್ನು ಬಿಟ್ಟು, ಸಹದೇವನ ಬಳಿಗೆ ಬಂದ.

 

ಸ ತು ತಂ ವಿರಥೀಕೃತ್ಯ ಧನುಃ ಕಣ್ಠೇSವಸಜ್ಯ ಚ ।

ಕುತ್ಸಯಾಮಾಸ  ಬಹುಶಃ ಸ ತು ನಿರ್ವೇದಮಾಗಮತ್ ॥೨೬.೨೩೪ ॥

 

ಕರ್ಣನು ಸಹದೇವನನ್ನು ರಥಹೀನನನ್ನಾಗಿ ಮಾಡಿದ,

ಬಿಲ್ಲನ್ನು ಕೊರಳಿಗೆ ಹಾಕಿ, ಅವನನ್ನು ಬಹಳ ನಿಂದಿಸಿದ.

ವಿಮನಸ್ಕನಾದ ಸಹದೇವನು ವೈರಾಗ್ಯವನ್ನೇ ಹೊಂದಿದ.

 

ನ ಹನ್ತುಮೈಚ್ಛತ್ ತಂ ಕರ್ಣ್ಣಃ ಪೃಥಾಯೈ ಸ್ವಂ ವಚಃ ಸ್ಮರನ್ ।

ತಂ ವಿಜಿತ್ಯ ರಣೇ ಕರ್ಣ್ಣೋ ಜಘ್ನೇ ಪಾರ್ತ್ಥವರೂಥಿನೀಮ್ ॥೨೬.೨೩೫ ॥

 

ಕರ್ಣಗೆ ನೆನಪಿತ್ತು ತಾನು ಕುಂತಿಗೆ ಕೊಟ್ಟ ತನ್ನ ಮಾತು,

(ಅದು ಅರ್ಜುನನ ಬಿಟ್ಟು ಉಳಿದವರ ಕೊಲ್ಲಲ್ಲ ಎಂದಿತ್ತು)

ಅದನ್ನ ಸ್ಮರಿಸುತ್ತಾ ಸಹದೇವನ ಕೊಲ್ಲದೇ ಉಳಿಸಿದ್ದವನ ಔದಾರ್ಯ,

ಹೀಗೆ ಕರ್ಣ ಸಹದೇವನ ಗೆದ್ದು ಮಾಡಿದ ಪಾಂಡವ ಸೇನೆಯ ಸಂಹಾರ.

 

ತತೋ ದ್ರೌಣಿರ್ವಿವಿಧೈರ್ಬಾಣಸಙ್ಘೈರ್ಜ್ಜಘಾನ ಪಾರ್ತ್ಥಸ್ಯ ಚಮೂಂ ಸಮನ್ತತಃ ।

ಸಾ ಹನ್ಯಮಾನಾ ರಣಕೋವಿದೇನ ನ ಶಂ ಲೇಭೇ ಮೃತ್ಯುನಾSSರ್ತ್ತಾ ಪ್ರಜೇವ ॥೨೬.೨೩೬ ॥

 

 

ಇನ್ನೊಂದು ಭಾಗದಲ್ಲಿ ಅಶ್ವತ್ಥಾಮಾಚಾರ್ಯ, ಸುರಿಸುತ್ತ ವಿಧವಿಧವಾದ ಬಾಣಗಳ ಧಾರ, ಎಲ್ಲಕಡೆ ಮಾಡಿದ ಪಾಂಡವಸೇನೆಯ ಸಂಹಾರ.  ಯುದ್ಧಕುಶಲನಾದ ಅಶ್ವತ್ಥಾಮನ ಆ ಪೀಡನೆ, ನಾಶವಾಗುವ ಸೈನ್ಯಕ್ಕೆ ಕೊಟ್ಟಿತು ಯಮಯಾತನೆ. 

 

ದೃಷ್ಟ್ವಾ ಸೇನಾಂ ದ್ರೌಣಿಬಲಾಭಿಭೂತಾಂ ತಮಾಹ್ವಯಾಮಸ ಘಟೋತ್ಕಚೋ ಯುಧೇ ।

ದ್ರೌಣಿಸ್ತಮಾಹಾSಲಮಲಂ ನ ವತ್ಸ ಪುತ್ರಸ್ತಾತಂ ಯೋಧಯಸ್ವಾದ್ಯ ಮಾಂ ತ್ವಮ್ ॥೨೬.೨೩೭ ॥

 

ಅಶ್ವತ್ಥಾಮನ ಬಲದಿಂದ ಕಂಗೆಟ್ಟ ಸೈನ್ಯ,

ಕಂಡ ಘಟೋತ್ಕನಿಂದ ಯುದ್ಧಾಹ್ವಾನ.

ಅಶ್ವತ್ಥಾಮನು ಘಟೋತ್ಕಚಗೆ ಹೀಗೆ ಹೇಳುತ್ತಾನೆ,

ತಂದೆಯೊಡನೆ ಯುದ್ಧ ಮಾಡಬಾರದು ಮಗನೇ.                                                       

(   ನೀನು ನನಗೆ ಮಗನ ಸಮಾನ  )

( ತಂದೆಯೊಡನೆ ಯುದ್ಧ ಅಮಾನ್ಯ)

 

ಇತ್ಯುಕ್ತ ಊಚೇ ನ ಪಿತಾ ಮಮ ತ್ವಂ ಸಖಾ ಪಿತುರ್ಯ್ಯದ್ಯಪಿ ಶತ್ರುಸಂಶ್ರಯಾತ್ ।

ಅರಿಶ್ಚ ಮೇSಸೀತಿ ತಮಾಹ ಯದ್ಯರಿಂ ಮಾಂ ಮನ್ಯಸೇ ತದ್ವದಹಂ ಕರೋಮಿ ತೇ ॥೨೬.೨೩೮ ॥

 

ಈರೀತಿಯಾಗಿ ಹೇಳಲ್ಪಟ್ಟ ಭೀಮಪುತ್ರ -

‘ನೀನಪ್ಪನಲ್ಲ, ವಸ್ತುತಃ ಅಪ್ಪನ ಮಿತ್ರ.

ಶತ್ರುಗಳನ್ನು ಆಶ್ರಯಿಸಿದ್ದೀಯ,

ನೀನು ನನ್ನ ಶತ್ರುವೇ ಆಗಿದ್ದೀಯ’

ಅಶ್ವತ್ಥಾಮ-‘ಒಂದು ವೇಳೆ ಕೊಟ್ಟರೆ ನೀನು ಶತ್ರು ಎಂಬ ಸೂಚನೆ,

ಅನಿವಾರ್ಯವಾಗಿ ನಾನೂ ಹಾಗೇ ಮಾಡಬೇಕಾಗುತ್ತದೆ’ ಯೋಚನೆ.

 

ಇತ್ಯೂಚಿವಾಞ್ಛಕ್ರಧನುಪ್ರಕಾಶಂ ವಿಷ್ಫಾರ್ಯ್ಯ ಚಾಪಂ ಪ್ರಕಿರಞ್ಛರೌಘಾನ್ ।

ಅಭ್ಯಾಗಮದ್ ರಾಕ್ಷಸಮುಗ್ರವೇಗಃ ಸ್ವಸೇನಯಾ ಸೋSಪಿ ತಮಭ್ಯವರ್ತ್ತತ ॥೨೬.೨೩೯ ॥

 

ಈರೀತಿಯಾಗಿ ಹೇಳುತ್ತಾ ಅಶ್ವತ್ಥಾಮಾಚಾರ್ಯರು,

ಕಾಮನ ಬಿಲ್ಲಿನಂಥ ದೊಡ್ಡ ಬಿಲ್ಲನ್ನು ಹೆದೆಯೇರಿಸಿದರು.

ಬಿಲ್ಲಿಂದ ಠೇಂಕಾರ ಮಾಡಿ, ಬಾಣಗಳ ಮಳೆಸುರಿಸಿದರು.

ಉಗ್ರವಾದ ವೇಗವುಳ್ಳವನಾಗಿ ಘಟೋತ್ಕಚನನ್ನು ಎದುರುಗೊಂಡಾಗ,

ಘಟೋತ್ಕಚ ಕೂಡಾ ತನ್ನ ಸೇನೆಯೊಂದಿಗವರನ್ನು ಎದುರುಗೊಳ್ಳುವನಾಗ.

 

ಸ ರಕ್ಷಸಾಂ ಲಕ್ಷಸಮಾವೃತೋ ಬಲೀ ನೃಭಿಶ್ಚ ವೀರೈರ್ಬಹುಭಿಃ ಸುಶಿಕ್ಷಿತೈಃ ।

ಅಕ್ಷೋಹಿಣೀ ಮಾತ್ರಬಲೇನ ರಾಕ್ಷಸಃ ಸಙ್ಕ್ಷೋಭಯಾಮಾಸ  ಗುರೋಃ ಸುತಂ ಶರೈಃ  ॥೨೬.೨೪೦ ॥

 

ಲಕ್ಷ ರಾಕ್ಷಸರು ಮತ್ತು ಶಿಕ್ಷಿತರಾದ ಮನುಷ್ಯರಿದ್ದ   ಒಂದು ಅಕ್ಷೋಹಿಣಿ ಬಲದ ಸೇನೆಯಿಂದ ,

ಬಲಿಷ್ಠನಾದ ಘಟೋತ್ಕಚನು, ಗುರುಪುತ್ರನಾದ ಅಶ್ವತ್ಥಾಮನನ್ನು ಬಾಣಗಳಿಂದ ಕಂಗೆಡಿಸಿದ.

 

ಸ ತೇನ ಬಾಣೈರ್ಬಹುಭಿಃ ಪ್ರಪೀಡಿತೋ ವಿಭಿನ್ನಗಾತ್ರಃ ಕ್ಷತಜಾಪ್ಲುತಾಙ್ಗಃ 

ವ್ಯಾವೃತ್ಯ ನೇತ್ರೇ ಕುಪಿತೋ ಮಹದ್ ಧನುರ್ವಿಷ್ಫಾರ್ಯ್ಯ ಬಾಣೈ ರಜನೀಂ ಚಕಾರ ॥೨೬.೨೪೧ ॥

 

ಘಟೋತ್ಕಚನ ಬಹಳ ಬಾಣಗಳಿಂದ ನೊಂದು ಗಾಯಗೊಂಡು ಮೈಯೆಲ್ಲಾ ರಕ್ತವಾದ ಅಶ್ವತ್ಥಾಮ,

ಸಿಟ್ಟಿಂದ ದೊಡ್ಡ ಕಣ್ಣುಗಳನ್ನು ಬಿಡುತ್ತ ತನ್ನ ದೊಡ್ಡ ಬಿಲ್ಲಿನಿಂದ ಬಾಣಗಳ ಬಿಟ್ಟು ಸೃಷ್ಟಿಸಿದರು ಎಲ್ಲೆಡೆ ತಮ.

 

ಸೋSಕ್ಷೋಹಿಣೀಂ ತಾಂ ಕ್ಷಣಮಾತ್ರತಃ ಕ್ಷರನ್ ಮಹಾಶರಾಂಸ್ತಾನಪಿ ರಾಕ್ಷಸಾನ್ ಕ್ಷಯಮ್ ।

ನಿನಾಯ ಪುತ್ರಂ ಚ ಘಟೋತ್ಕಚಸ್ಯ ನಿಷ್ಟ್ಯಂ ಪುರಾ ಯೋSಞ್ಜನವರ್ಮ್ಮನಾಮಕಃ ॥೨೬.೨೪೨ ॥

 

ಮಹಾಬಾಣಗಳನ್ನು ಪ್ರಯೋಗಿಸುತ್ತಾ ಕೆಲವೇ ಸಮಯದಲ್ಲಿ ಶಕ್ತ ಅಶ್ವತ್ಥಾಮ,

ಮಾಡಿದರು ಅಕ್ಷೋಹಿಣಿ ರಕ್ಕಸರು ಘಟೋತ್ಕಚಪುತ್ರ ಅಂಜನವರ್ಮನ ನಿರ್ನಾಮ.

ನಿಷ್ಟ್ಯ ಎನ್ನುವ ಒಬ್ಬ ದೇವತೆಯ ಅವತಾರ ಆಗಿದ್ದನವನು ಅಂಜನವರ್ಮ.

 

ನಿರೀಕ್ಷ್ಯ ಸೇನಾಂ  ಸ್ವಸುತಂ ಚ ಪಾತಿತಂ ಘಟೋತ್ಕಚೋ ದ್ರೋಣಸುತಂ ಶರೇಣ ।

ವಿವ್ಯಾಧ ಗಾಢಂ ಸ ತು ವಿಹ್ವಲೋ ಧ್ವಜಂ ಸಮಾಶ್ರಿತಶ್ಚಾSಶು ಸಸಙ್ಜ್ಞಕೋSಭವತ್ ॥೨೬.೨೪೩ ॥

 

ಘಟೋತ್ಕಚ ತನ್ನ ಸೇನೆ ತನ್ನ ಮಗ ಅಶ್ವತ್ಥಾಮರಿಂದ ಸತ್ತದ್ದನ್ನು ನೋಡಿದ,

ಅವರನ್ನು ಉಗ್ರವಾದ ಬಾಣದಿಂದ ಘಟೋತ್ಕಚ ಚೆನ್ನಾಗಿ ಹೊಡೆದ.

ಇದರಿಂದ ಅಶ್ವತ್ಥಾಮ ಘಾಸಿಗೊಂಡ, ಧ್ವಜ ಆಶ್ರಯಿಸುತ್ತಾ ಚೇತರಿಸಿಕೊಂಡ. 

 

ಉತ್ಥಾಯ ಬಾಣಂ ಯಮದಣ್ಡಕಲ್ಪಂ ಸನ್ಧಾಯ ಚಾಪೇ ಪ್ರವಿಕೃಷ್ಯ ರಾಕ್ಷಸೇ ।

ಮುಮೋಚ ತೇನಾಭಿಹತಃ ಪಪಾತ ವಿನಷ್ಟಸಙ್ಜ್ಞಃ ಸ್ವರಥೇ ಘಟೋತ್ಕಚಃ ॥೨೬.೨೪೪ ॥

 

ಕೆಲಕಾಲಾನಂತರ ಅಶ್ವತ್ಥಾಮಾಚಾರ್ಯರಿಂದ ತೀಕ್ಷ್ಣ ಯಮದಂಡದಂತಿರುವ ಬಾಣದ ಪ್ರಯೋಗ,

ಆ ಬಾಣದಿಂದ ಹೊಡೆಯಲ್ಪಟ್ಟವನಾದ ಘಟೋತ್ಕಚ ತನ್ನ ರಥದಲ್ಲಿ ಮೂರ್ಛಿತನಾಗಿ ಬಿದ್ದನಾಗ .

 

ವಿಮೂರ್ಚ್ಛಿತಂ  ಸಾರಥಿರಸ್ಯ ದೂರಂ ನಿನಾಯ ಯುದ್ಧಾಜ್ಜಗತೋ ವಿಪಶ್ಯತಃ ।

ದ್ರೌಣಿಶ್ಚ ಸೇನಾಂ  ನಿಶಿತೈಃ ಶರೋತ್ತಮೈರ್ವ್ಯದ್ರಾವಯತ್ ಪಾಣ್ಡವಸೋಮಕಾನಾಮ್ ॥೨೬.೨೪೫ ॥

 

ಹೀಗೆ ಘಟೋತ್ಕಚ ಮೂರ್ಛಿತನಾಗಿ ಬೀಳುತ್ತಾನೆ, ಆಗವನ ಸಾರಥಿ ದೂರಕ್ಕೆ ಕೊಡೊಯ್ಯುತ್ತಾನೆ .        ಇತ್ತ ಅಶ್ವತ್ಥಾಮ ಚೂಪಾದ ಬಾಣಗಳನ್ನು ಬಿಡುತ್ತಾನೆ,

ಪಾಂಡವ ಹಾಗೂ ಪಾಂಚಾಲ ಸೇನೆಯ ಓಡಿಸುತ್ತಾನೆ .


No comments:

Post a Comment

ಗೋ-ಕುಲ Go-Kula