ಓ̐ ॥
ಅಥಾನುಜ್ಞಾಮುಪಾದಾಯ
ದ್ರೌಣೇರ್ದ್ದುರ್ಯ್ಯೋಧನೋ ನೃಪಃ ।
ಕರ್ಣ್ಣಂ ಸೇನಾಪತಿಂ
ಚಕ್ರೇ ಸೋSಗಾದ್
ಯುದ್ಧಾಯ ದಂಸಿತಃ ॥೨೭.೦೧॥
ದ್ರೋಣಾಚಾರ್ಯರು
ಹೊಂದಿದ ಮೇಲೆ ತಮ್ಮ ಪರಲೋಕಗತಿ,
ಅಶ್ವತ್ಥಾಮರ ಆಣತಿಯಂತೆ, ಕೌರವ ಮಾಡಿದ ಕರ್ಣನ
ಸೇನಾಧಿಪತಿ.
ಕರ್ಣನು ಕವಚವನ್ನು
ಧರಿಸಿ, ಯುದ್ಧಕ್ಕೆಂದು
ಹೊರಟು ನಿಂತ ಪರಿಸ್ಥಿತಿ.
ತತ್ರಾಭವದ್ ಯುದ್ಧಮತೀವ
ದಾರುಣಂ ಪಾಣ್ಡೋಃ ಸುತಾನಾಂ ಧೃತರಾಷ್ಟ್ರಜೈರ್ಗ್ಗಜೇ ।
ತತ್ರೋದಯಾದ್ರಿಪ್ರತಿಮೇ
ಪ್ರದೃಶ್ಯತೇ ಭೀಮೋ ಯಥೋದ್ಯನ್ ಸವಿತಾSತಿನಿರ್ಮ್ಮಲಃ ॥೨೭.೦೨॥
ಅಲ್ಲಿ ನಡೆದಿತ್ತು
ಯುದ್ಧದ ಹದಿನಾರನೇ ದಿನ,
ಯುಧಿಷ್ಠಿರಾದಿ,ದುರ್ಯೋಧನಾದಿಗಳ ಕದನ.
ಸಾಗಿತ್ತು ಅಲ್ಲಿ
ಅತ್ಯಂತ ಭಯಂಕರವಾದ ಯುದ್ಧ,
ಯುದ್ಧದ ಮಧ್ಯದಲ್ಲಿ
ಉದಯಗಿರಿಯಂತೆ ಇದ್ದ,
ಭೀಮ ಆನೆ ಮೇಲೆ
ರವಿಯಂತೆ ಕಂಗೊಳಿಸುತ್ತಿದ್ದ.
ತಂ ಕಾಲಯನ್ತಂ ನೃಪತೀನ್
ಕ್ಷೇಮಧೂರ್ತ್ತಿರಭ್ಯಾಗಮತ್ ತಸ್ಯ ಗಜಂ ಜಘಾನ ಚ ।
ತಂ ವೀರ್ಯ್ಯಮತ್ತಂ ಪ್ರತಿಲಭ್ಯ
ಭೀಮೋ ನಿನಾಯ ಮೃತ್ಯೋಃ ಸದನಾಯ ಶೀಘ್ರಮ್ ॥೨೭.೦೩॥
ಭೀಮ ಎಲ್ಲಾ ರಾಜರನ್ನೂ
ಕೊಲ್ಲುತ್ತಿದ್ದ, ಕ್ಷೇಮಧೂರ್ತಿ
ಅವನಿಗೆ ಎದುರಾಗಿ ಬಂದ. ಅವನು ಭೀಮಸೇನನ ಆನೆಯನ್ನು ಸಂಹರಿಸಿದ, ಭೀಮ
ಅವನನ್ನು ಶೀಘ್ರವೇ ಯಮಪುರಿಗಟ್ಟಿದ.
ನಿಹತ್ಯ ತಂ
ಮಾರುತಿರಭ್ಯಕೃನ್ತಚ್ಛಿರಾಂಸಿ ಯೂನಾಂ ಪರಪಕ್ಷಪಾತಿನಾಮ್ ।
ವಿಕ್ಷೋಭಯಾಮಾಸ ಚ
ಶತ್ರುಸೈನ್ಯಂ ಸಿಂಹೋ ಯಥೈವ ಶ್ವಸೃಗಾಲಯೂಥಮ್ ॥೨೭.೦೪॥
ಈರೀತಿಯಾಗಿ
ಕ್ಷೇಮಧೂರ್ತಿಯನ್ನು ಕೊಂದ ಭೀಮ,
ಮಾಡಿದ ಕೌರವಪಕ್ಷದ
ಯುವಕರ ಮಾರಣ ಹೋಮ.
ವೈರಿ ತಲೆಗಳ
ಕತ್ತರಿಸುತ್ತಾ ಶತ್ರು ಪಡೆಗಳ ಮಾಡಿದ ಉಲ್ಲೋಲಕಲ್ಲೋಲ,
ಹೇಗೆ ಸಿಂಹವೊಂದು
ಬೇಟೆನಾಯಿಗಳ ಗುಂಪನ್ನು ವಿಕ್ಷೋಭಗೊಳಿಸುವಂಥ ಜಾಲ.
ಸಙ್ಕ್ಷೋಭ್ಯಮಾಣಂ
ತದನೀಕಮೀಕ್ಷ್ಯದ್ರೌಣೀ ರಥೇನ ಪ್ರತಿಜಗ್ಮಿವಾಂಸ್ತಮ್ ।
ತದ್
ಯುದ್ಧಮಾಸೀದತಿಘೋರಮದ್ಭುತಂ ಪುರಾ ಯಥಾ ನಾSಸ ಚ ಕಸ್ಯಚಿತ್ ಕ್ವಚಿತ್ ॥೨೭.೦೫॥
ಕೌರವ ಸೇನೆಯನ್ನು
ಕದಡಿಸುತ್ತಿರುವ ಭೀಮಸೇನನನ್ನು ಕಂಡ,
ಅಶ್ವತ್ಥಾಮಾಚಾರ್ಯ
ರಥವನ್ನೇರಿ ಅವನ ಬಳಿಗೆ ಬಂದ.
ಅವರಿಬ್ಬರ ನಡುವೆ
ಆಯಿತು ಅತ್ಯಂತ ಘೋರ ಅದ್ಭುತ ಯುದ್ಧ,
ಹಿಂದೆ ಆರೀತಿಯ ಯುದ್ಧ
ಎಲ್ಲಿಯೂ ಆಗಿರಲಿಲ್ಲ ಎಂಬುದು ಸಿದ್ಧ.
ದೃಷ್ಟ್ವೈವ ತದ್
ದೇವಗನ್ಧರ್ವವಿಪ್ರಾ ಊಚುರ್ನ್ನೇದೃಗ್ ದೃಷ್ಟಪೂರ್ವಂ ಸುಯುದ್ಧಮ್ ।
ನಚೋತ್ತರಂ ವಾSಪಿ ಭವಿಷ್ಯತೀದೃಕ್ ಕಲಾಂ ಚ
ಸರ್ವಾಣಿ ನ ಷೋಡಶೀಮಿಯುಃ ॥೨೭.೦೬॥
ಆ ಯುದ್ಧವನ್ನು ಕಂಡ
ದೇವತೆ, ಗಂಧರ್ವ,
ಋಷಿಗಳೂ ಹೇಳಿದ ಮಾತು -,
‘ಈರೀತಿಯ ಯುದ್ಧವು
ಮುಂದೆ ನಡೆಯದು ಹಿಂದೆ ಕಂಡಿಲ್ಲ,
ನಾವಂತೂ.
ಬೇರಾವುದೇ ಭಯಂಕರ
ಯುದ್ಧವೂ ,ಈ
ಯುದ್ಧದ ಹದಿನಾರನೇ ಒಂದು ಕಂತು.
ನೈತಾದೃಶೀ
ಜ್ಞಾನಸಮ್ಪದ್ ಬಲಂ ವಾ ದ್ವಯಂ ಕುತೋ ವಾಯುಮೃತೇ ಶಿವಂ ತಥಾ ।
ದ್ವಯೋಃ ಸಮಾಹಾರ ಇಹ
ದ್ವಯೋರಪಿ ಜ್ಞಾನಸ್ಯ ಬಾಹ್ವೋಶ್ಚ ಬಲಸ್ಯ ಸೂರ್ಜ್ಜಿತಃ ॥೨೭.೦೭॥
ಈರೀತಿಯ ಬಲ, ಜ್ಞಾನ, ಇರುವುದು ಮುಖ್ಯಪ್ರಾಣನಲ್ಲಿ,
ಅವನನ್ನು ಬಿಟ್ಟರೆ
ನಂತರದ ಸ್ಥಾನವದು ಸದಾಶಿವನಲ್ಲಿ.
ಅತ್ಯಂತ ಉತ್ಕಟ
ಜ್ಞಾನ-ಬಲಗಳುಂಟು ಅವರಿಬ್ಬರಲ್ಲಿ.
ಇತೀರ್ಯ್ಯಮಾಣೇ ವಿಬುಧೈರ್ನ್ನರೋತ್ತಮೌ
ದಿಶಃ ಸಮಸ್ತಾ ಗಗನಂ ಚ ಪತ್ರಿಭಿಃ ।
ನಿರನ್ತರಂ
ಚಕ್ರತುರುತ್ತಮೋಜಸೌ ದೃಷ್ಟ್ವೈವ ತದ್ ಭೀತಿಮಗುರ್ಮ್ಮಹಾರಥಾಃ ॥೨೭.೦೮॥
ಈರೀತಿಯಾಗಿ ದೇವತೆಗಳು
ಹೇಳುತ್ತಿರುವ ಆ ಹೊತ್ತು ,
ಕಾಣುತ್ತಿತ್ತು
ಜೀವೋತ್ತಮ ಮತ್ತು ರುದ್ರರ ಬಲ ತಾಕತ್ತು.
ಬಿಡುತ್ತಿದ್ದರು ಬಾಣಗಳ
ಭೀಮಸೇನ ಹಾಗೂ ಅಶ್ವತ್ಥಾಮ,
ಬಾಣಮಯವಾಯ್ತು
ಸರ್ವದಿಕ್ಕು ಭೂಮಿ ಮತ್ತು ವ್ಯೋಮ.
ಕಂಡ ಅತಿರಥ ಮಹಾರಥರ
ಮನಗಳವು ಭಯದ ಧಾಮ.
ಶರಾಸನೇ ಮಾರುತಿನಾ
ನಿರಾಕೃತೋ ದ್ರೌಣಿರ್ಮ್ಮಹಾಸ್ತ್ರಾಣಿ ಮುಮೋಚ ತಸ್ಮಿನ್ ।
ತಾನ್ಯಸ್ತ್ರವರ್ಯೈರ್ಬಲವಾನವಿಸ್ಮಯಃ
ಸಂಶಾಮಯಾಮಾಸ ಸುತೋSನಿಲಸ್ಯ
॥೨೭.೦೯॥
ಭೀಮನೊಂದಿಗೆ
ಬಿಲ್ಲುಯುದ್ಧದಲ್ಲಿ ಸೋತ ಅಶ್ವತ್ಥಾಮನು ಮಹಾಮಹ ಅಸ್ತ್ರಗಳನ್ನು ಭೀಮಸೇನನಲ್ಲಿ ಪ್ರಯೋಗಿಸಿದ.
ಅವುಗಳನ್ನು ಶ್ರೇಷ್ಠ
ಅಸ್ತ್ರಗಳಿಂದ ಬಲಿಷ್ಠ ಭೀಮ , ಯಾವುದೇ
ಅಚ್ಚರಿಯನ್ನು ಹೊಂದದೇ ಶಾಂತಗೊಳಿಸಿದ.
ಪುನಃ ಶರೈರೇವ ಪರಸ್ಪರಂ
ತಾವಯುದ್ಧ್ಯತಾಂ ಚಿತ್ರಮಲಂ ಚ ಸುಷ್ಠು ।
ತದಾ ತು ಭೀಮಸ್ಯ
ಶರೈರ್ಭೃಶಾರ್ತ್ತೋ ದ್ರೌಣಿಃ ಪಪಾತಾSಶು ದೃಢಂ ವಿಚೇತನಃ ॥೨೭.೧೦॥
ಮತ್ತೆ ಬಾಣಗಳಿಂದಲೇ
ಭೀಮ-ಅಶ್ವತ್ಥಾಮರು ಪರಸ್ಪರವಾಗಿ ಚೆನ್ನಾಗಿ,
ಗಾಢವಾಗಿ, ಮಾಡಿದರು ಕಲಾತ್ಮಕ ಯುದ್ಧ,
ಒಂದು ಹಂತದಲ್ಲಿ
ಭೀಮಸೇನನ ಬಾಣಗಳಿಂದ ಬಹಳ ಪೀಡಿಸಲ್ಪಟ್ಟ ಅಶ್ವತ್ಥಾಮನು ಪ್ರಜ್ಞೆಕಳೆದುಕೊಂಡು ಬಿದ್ದ.
ಭೀಮಶ್ಚ ವಿಹ್ವಲತನುಃ ಸ
ತು ಕಿಞ್ಚಿದೇವ ಪೂರ್ವಂ ಗತೇ ಗುರುಸುತೇ ಪ್ರಯಯೌ ಕ್ಷಣೇನ ।
ನಿರ್ದ್ಧೂತಯುದ್ಧಶ್ರಮ
ಆತ್ತಧನ್ವಾ ಯೋದ್ಧುಂ ಗಜೌಘಂ ಪ್ರತಿನಾದಿತಾಶಃ ॥೨೭.೧೧॥
ಅಶ್ವತ್ಥಾಮ
ಮೂರ್ಛೆಹೊಂದಿ ಕೆಳಗೆ ಬಿದ್ದ,
ದಣಿವಾದ ಭೀಮ ಒಂದು
ಕ್ಷಣ ಹೊರಹೋದ.
ಮತ್ತೆ ಚೇತರಿಸಿಕೊಂಡು, ಬಿಲ್ಲನ್ನು ಹಿಡಿದು ಬಂದ,
ಆನೆಗಳ ಬೆನ್ನತ್ತಿ, ದಿಕ್ಕುಗಳನ್ನೆಲ್ಲಾ ಸದ್ದು
ಮಾಡಿದ.
ತಸ್ಮಿನ್ ಗಜಾನ್
ಮರ್ದ್ದಯತಿ ಧಾರ್ತ್ತರಾಷ್ಟ್ರೋ ಯುಧಿಷ್ಠಿರಮ್ ।
ಅಗಾದ್ ಯುದ್ಧಾಯ ತೌ
ಯುದ್ಧಂ ರಾಜಾನೌ ಚಕ್ರತುಶ್ಚಿರಮ್ ॥೨೭.೧೨॥
ಭೀಮಸೇನನು ಆನೆಗಳನ್ನು
ಕೊಲ್ಲುತ್ತಿರುವಾಗ ,
ಕೌರವ ಯುಧಿಷ್ಠಿರನ
ಮೇಲೇರಿ ಬರುವನಾಗ.
ಅಲ್ಲಿ ಅವರಿಬ್ಬರ
ಮಧ್ಯೆ ದೀರ್ಘ ಯುದ್ಧಯೋಗ.
ತತ್ರ ತಂ ವಿರಥಂ ಚಕ್ರೇ
ಸಹಸೈವ ಯುಧಿಷ್ಠಿರಃ ।
ಸ ಗದಾಮಾದದೇ ಗುರ್ವೀಂ
ತಂ ಭೀಮೋSಭ್ಯಪತದ್
ಗದೀ ॥೨೭.೧೩॥
ಆ ಯುದ್ಧದಲ್ಲಿ
ಯುಧಿಷ್ಠಿರ ಬೇಗನೇ ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದ,
ಆಗ ಮುನಿದ ದುರ್ಯೋಧನನು
ಭಾರವಾದ ಗದೆಯನ್ನು ತೆಗೆದುಕೊಂಡು ತಯಾರಾದ .
ಇದನ್ನು ನೋಡಿದ
ಭೀಮಸೇನನು ಗದೆಯನ್ನು ಹಿಡಿದು ದುರ್ಯೋಧನನತ್ತ ತೆರಳಿದ.
ದೃಷ್ಟ್ವಾ ಕೃಪಸ್ತಂ
ಸ್ವರಥಮಾರೋಪ್ಯಾಪಯಯೌ ತತಃ ।
ತದೈವ ಕರ್ಣ್ಣನಕುಲೌ
ಭೃಶಂ ಬಾಣೈರಯುದ್ಧ್ಯತಾಮ್ ॥೨೭.೧೪॥
ನಕುಲಂ ವಿರಥಂ ಕೃತ್ವಾ
ಕರ್ಣ್ಣೋSಥ ಪ್ರಪಲಾಯಿತಮ್
।
ಅನುದ್ರುತ್ಯ ಚ ವೇಗೇನ
ಕಣ್ಠೇ ಧನುರವಾಸೃಜತ್ ॥೨೭.೧೫॥
ಈರೀತಿಯಾಗಿ ಭೀಮಸೇನ
ಬರುವುದನ್ನು ಕಂಡ ಕೃಪಾಚಾರ್ಯ,
ಕೌರವನ ತನ್ನ
ರಥಕ್ಕೇರಿಸಿಕೊಂಡು ಮಾಡಿದರು ಓಡುವ ಕಾರ್ಯ.
ಆಗ ನಡೆಯಿತು ಕರ್ಣ
ನಕುಲರಿಬ್ಬರ ಮಧ್ಯೆ ಬಾಣಯುದ್ಧ,
ಸ್ವಲ್ಪ ಹೊತ್ತಲ್ಲೇ
ಕರ್ಣ ನಕುಲನನ್ನು ರಥಹೀನನ ಮಾಡಿದ ,
ಆಗ ನಕುಲ ಪಲಾಯನಕ್ಕೆ
ತೊಡಗಿದ,
ಕರ್ಣ ಅವನ ಕೊರಳಿಗೆ
ಬಿಲ್ಲಿನಿಂದ ತಿವಿದ.
ಉಕ್ತ್ವಾ ಚ ಪರುಷಾ
ವಾಚಃ ಕುನ್ತ್ಯಾ ವಚನಗೌರವಾತ್ ।
ನ ಜಘಾನೈವ ನಕುಲಂ
ವಿಸೃಜ್ಯ ಚ ಯಯೌ ಪರಾನ್ ॥೨೭.೧೬॥
ಕರ್ಣನು ನಕುಲನಿಗೆ
ಕೆಟ್ಟ ಮಾತುಗಳನ್ನು ಆಡಿದ,
ಕುಂತಿಗೆ ಕೊಟ್ಟ
ಮಾತಿನಂತವನ ಕೊಲ್ಲದೇ ಇದ್ದ.
ಅವನನ್ನು
ತಿರಸ್ಕಾರದಿಂದ ಅಲ್ಲೇ ಬಿಟ್ಟ,
ಅವನು ಉಳಿದವರನ್ನು
ಕುರಿತು ಹೊರಟ.
No comments:
Post a Comment
ಗೋ-ಕುಲ Go-Kula