Monday 19 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 287-319

ಅಶ್ವತ್ಥಾಮವಧಂ ಶ್ರುತ್ವಾ ನಾಹಂ  ಯೋತ್ಸ್ಯ ಇತಿ ಸ್ವಯಮ್ ।

ಪುರೋಕ್ತಂ ಧರ್ಮ್ಮಜಾಯೈವ ತೇನ ದ್ರೋಣೋ ಯುಧಿಷ್ಠಿರಮ್ ॥೨೬.೨೮೭ ॥

 

ಬ್ರೂಹಿ ಸತ್ಯಮಿತಿ ಪ್ರಾಹ ಸತ್ಯಮಿತ್ಯೇವ ಸೋSಬ್ರವೀತ್ ।

ಉಪಾಂಶು ಕುಞ್ಜರಶ್ಚೇತಿ ದ್ರೋಣೋSತೋ ವ್ಯಥಿತೋSಭವತ್ ॥೨೬.೨೮೮ ॥

 

ಅಶ್ವತ್ಥಾಮನ ಸಂಹಾರವನ್ನು ಕೇಳಿ ನಾನು ಸರ್ವಥಾ ಯುದ್ಧ ಮಾಡಲಾರೆ’  ಎಂದು ತಾನೇ ಧರ್ಮಜನಿಗೆ ಹಿಂದೆ ದ್ರೋಣರು ಹೇಳಿದ್ದರು.

ಆ ಕಾರಣದಿಂದ ಸ್ಪಷ್ಟ ಮಾಹಿತಿಗಾಗಿ ದ್ರೋಣಾಚಾರ್ಯರು ಯುಧಿಷ್ಠಿರನ ಬಳಿಗೆ ಹೋಗಿ, ‘ಸತ್ಯ ಹೇಳು’  ಎಂದು ಹೇಳಿದರು. ಯುಧಿಷ್ಠಿರನಾದರೋ ‘ಸತ್ಯವೇ’ ಎಂದು ಹೇಳಿದ. ಆದರೆ ಮೆಲ್ಲಗೆ ‘ಆನೆಯು’ ಎಂದು ಪಿಸುಗುಟ್ಟಿದ . ಅಶ್ವತ್ಥಾಮನ ಸಂಹಾರದ ವಿಷಯವನ್ನು ಕೇಳಿ ದ್ರೋಣ,

ಹೊಂದಿದ ಸ್ಥಿತಿಯದು ಬಲು ವಿಷಾದನೀಯ ವಿಷಣ್ಣ.

 

ತಸ್ಯ ಭೀಮೋ ರಥೇಷಾಂ ಚ ಗೃಹೀತ್ವಾ ನ ತವೇದೃಶಮ್ ।

ಯೋಗ್ಯಂ ಗುಣವತೋ ನಿತ್ಯಂ ಪರಧರ್ಮ್ಮೋಪಜೀವನಮ್ ॥೨೬.೨೮೯ ॥

 

ಆಗ ಭೀಮಸೇನನು ದ್ರೋಣಾಚಾರ್ಯರ ರಥದ ನೊಗವನ್ನು ಹಿಡಿದು ಹೇಳುತ್ತಾನೆ ;            ‘ಗುಣವಂತರಾದ ನಿಮಗೆ ಈರೀತಿಯ ಅನ್ಯವರ್ಣಧರ್ಮ ಅಯೋಗ್ಯ ಆಚರಣೆ' .

 

ಇತ್ಯಾಹ ಖಸ್ಥಾ ಮುನಯಶ್ಚಾಲಮೇಹೀತಿ ತಂ ತದಾ ।

ಊಚುಸ್ತದಖಿಲಂ ಜ್ಞಾತ್ವ ದ್ರೋಣಃ ಶಸ್ತ್ರಮವಾಸೃಜತ್ ॥೨೬.೨೯೦ ॥

 

ಹೀಗೆ ಭೀಮ ಹೇಳಲು ಆಕಾಶದಿ ಮುನಿಗಳೂ ‘ಸಾಕು, ಬಾ’, ಎಂದು ದ್ರೋಣರಿಗೆ ಹೇಳಿದರು.

ಅದೆಲ್ಲವನ್ನೂ ಕೇಳಿಸಿಕೊಂಡು ಆಲೋಚಿಸಿದ   ದ್ರೋಣಾಚಾರ್ಯರು ಶಸ್ತ್ರತ್ಯಾಗ ಮಾಡಿದರು .

 

ಸ ನ್ಯಸ್ಯ ಕರ್ಮ್ಮಾಣಿ ತದಾSಖಿಲಾನಿ ಯೋಗಾರೂಢಃ ಪರಮಂ ವಾಸುದೇವಮ್ ।

ಸರ್ವೇಶ್ವರಂ ನಿತ್ಯನಿರಸ್ತದೋಷಂ ದ್ಧ್ಯಾಯನ್ ಮುಕ್ತ್ವಾ ದೇಹಮಗಾತ್ ಸ್ವಧಾಮ ॥೨೬.೨೯೧ ॥

 

ಆಗ ದ್ರೋಣರು ಹುಟ್ಟಿದಂದಿನಿಂದ ಈತನಕ ಮಾಡಿದ ಕರ್ಮಗಳನ್ನು ಭಗವಂತಗರ್ಪಿಸುತ್ತಾರೆ,

ಜಗದ್ಪಿತ ದೋಷರಹಿತ ಶ್ರೀಕೃಷ್ಣನ ಧ್ಯಾನದಲ್ಲಿ ದೇಹವನ್ನು ಬಿಟ್ಟು, ಸ್ವರ್ಗಲೋಕಕ್ಕೆ ತೆರಳುತ್ತಾರೆ.

 

ತಂ ಕೇಶವಃ ಪಾಣ್ಡವಾ ಗೌತಮಶ್ಚ ಯಾನ್ತಂ ಸ್ವಲೋಕಂ ದದೃಶುರ್ವಿಹಾಯಸಾ ।

ಧೃಷ್ಟದ್ಯುಮ್ನಃ ಪಾಣ್ಡವೈರ್ವಾರ್ಯ್ಯಮಾಣೋSಪ್ಯಗಾತ್ ಖಡ್ಗಂ ಚರ್ಮ್ಮ ಚಾSದಾಯ ತತ್ರ ॥೨೬.೨೯೨ ॥

 

ಹೀಗೆ ಆಕಾಶಮಾರ್ಗವಾಗಿ ತಮ್ಮ ಲೋಕಕ್ಕೆ ಹೊರಟಿದ್ದರು ದ್ರೋಣಾಚಾರ್ಯರು, ಉತ್ಕ್ರಮಿಸುತ್ತಿರುವ ದ್ರೋಣರನ್ನು ಶ್ರೀಕೃಷ್ಣ, ಪಾಂಡವರು, ಕೃಪಾಚಾರ್ಯ ನೋಡಿದರು. ಅದೇಸಮಯ ಪಾಂಡವರೆಲ್ಲಾ ಒಟ್ಟಾಗಿ ಒಡ್ಡಿದರೂ ತಡೆ, ಧೃಷ್ಟದ್ಯುಮ್ನನದು ಖಡ್ಗಗುರಾಣಿ ಹಿಡಿದು ದ್ರೋಣರೆಡೆ ನಡೆ.

 

ಛಿತ್ವಾSಸಿನಾ ತಸ್ಯ ಶಿರಃ ಪುನಶ್ಚ ರಥಂ ಸ್ವಕೀಯಂ  ತ್ವರಯಾ ಸಮಾಸ್ಥಿತಃ ।

ದೃಷ್ಟ್ವಾ ಕೃಪಸ್ತಂ ಸುಭೃಶಂ ಭಯಾರ್ದ್ದಿತಃ ಸಮ್ಪ್ರಾದ್ರವದ್ ವಾಜಿನಮೇಕಮಾಸ್ಥಿತಃ ॥೨೬.೨೯೩ ॥

 

ಧೃಷ್ಟದ್ಯುಮ್ನ ದ್ರೋಣರ ತಲೆಯನ್ನು ಕತ್ತರಿಸುತ್ತಾನೆ,

ಕೂಡಲೇ ತನ್ನ ರಥವನ್ನು ವೇಗವಾಗಿ ಏರಿಬಿಡುತ್ತಾನೆ.

ಈ ಘಟನೆಯನ್ನು ಕೃಪಾಚಾರ್ಯರು ನೋಡುತ್ತಾರೆ,

ಹೆದರಿಕೊಂಡು ಒಂದು ಕುದುರೆಯೇರಿ ಓಡಿಹೋಗುತ್ತಾರೆ.

 

ಸಞ್ಛಿನ್ನೇ ದ್ರೋಣಶಿರಸಿ ಗರ್ಹಯಾಮಾಸ ವಾಸವಿಃ ।

ಯುಧಿಷ್ಠಿರಂ ಚ ಪಾಞ್ಚಾಲ್ಯಂ ಸಾತ್ಯಕಿಶ್ಚಾಪಿ ಕೋಪಿತಃ ॥೨೬.೨೯೪ ॥

 

ಈರೀತಿಯಾದಾಗ ದ್ರೋಣಾಚಾರ್ಯರ ಶಿರಚ್ಛೇದನೆ,

ಅರ್ಜುನನಿಂದ ಯುಧಿಷ್ಠಿರ, ಧೃಷ್ಟದ್ಯುಮ್ನರ ನಿಂದನೆ .

ಸಾತ್ಯಕಿ ಕೂಡಾ ವ್ಯಕ್ತಪಡಿಸುತ್ತಾನೆ ಸಿಡುಕಿನ ವರ್ತನೆ.

 

ಧೃಷ್ಟದ್ಯುಮ್ನಸ್ತು ತಾವಾಹ ಕಥಂ ಭೂರಿಶ್ರವಾ ಹತಃ ।

ಇತಿ ತಂ ಸಾತ್ಯಕಿಃ ಕ್ರುದ್ಧೋ ಗದಾಪಾಣಿಃ ಸಮಭ್ಯಯಾತ್ ॥೨೬.೨೯೫ ॥

 

ಆಗ ಧೃಷ್ಟದ್ಯುಮ್ನ ಕೇಳುತ್ತಾನೆ :‘ಭೂರೀಶ್ರವನು ಹೇಗೆ ಸತ್ತ ’

ಮುನಿದ ಸಾತ್ಯಕಿ ಗದೆ ಹಿಡಿದೆರಗುವ ಧೃಷ್ಟದ್ಯುಮ್ನನತ್ತ.

 

ಆಹ್ವಯಾಮಾಸ ಪಾಞ್ಚಾಲ್ಯಸ್ತಂ ಧೃತಾಸಿರವಿಸ್ಮಯಃ ।

ತದಾ ಜಗ್ರಾಹ ಶೈನೇಯಂ ಭೀಮಃ ಕೃಷ್ಣಪ್ರಚೋದಿತಃ ।

ಶಮಯಾಮಾಸ ಪಾರ್ತ್ಥಂ ಚ ಪಾಞ್ಚಾಲ್ಯಸ್ನೇಹಯನ್ತ್ರಿತಃ ॥೨೬.೨೯೬ ॥

 

ಇದರಿಂದ ಯಾವುದೇ ಆಶ್ಚರ್ಯಪಡಲಿಲ್ಲ ಧೃಷ್ಟದ್ಯುಮ್ನ .

ಅವನು ನಿರ್ಭೀತಿಯಿಂದ ‘ಬಾ’ ಎಂದು ಕರೆದ ಸಾತ್ಯಕಿಯನ್ನ .

ಕೃಷ್ಣನಿಂದ ಪ್ರಚೋದಿಸಲ್ಪಟ್ಟ ಭೀಮಸೇನನು ಸಾತ್ಯಕಿಯನ್ನು ಹಿಡಿದುಕೊಂಡ.

ಧೃಷ್ಟದ್ಯುಮ್ನನ ಮೇಲಿನ ಪ್ರೀತಿಯಿಂದ ಅರ್ಜುನನನ್ನೂ ಸಮಾಧಾನಗೊಳಿಸಿದ. 

 

ತೇ ವಾಸುದೇವೇನ ತದಾSನುಶಿಕ್ಷಿತಾಃ ಸ್ನೇಹಂ ಪುನಃ ಪೂರ್ವವದಾಪುರುತ್ತಮಮ್ ।

ಯತ್ತಾಶ್ಚ ಯುದ್ಧಾಯ ಸಮುದ್ಯತಾಶ್ಚ ತದಾSSಗಮದ್ ದ್ರೌಣಿರಪ್ಯಾತ್ತಧನ್ವಾ ॥೨೬.೨೯೭ ॥

 

ಆಗ ಚೆನ್ನಾಗಿ ಬುದ್ಧಿಹೇಳುತ್ತಾನೆ ಮಧುಸೂದನ, ಅವರು ಮತ್ತೆ ಬೆಳೆಸಿಕೊಳ್ಳುತ್ತಾರೆ ಪ್ರೀತಿ ಗೆಳೆತನ. ಆಯುಧವನ್ನು ಧರಿಸಿ,ಯುದ್ಧಕ್ಕಾದರು ಸಿದ್ಧ, ಆಗ ಬಿಲ್ಲನ್ನು ಹಿಡಿದು ಅಶ್ವತ್ಥಾಮನು ಬಂದ.

 

ಆಶ್ರುತ್ಯ ತಾತಂ ನಿಹತಂ ಪ್ರತಿಜ್ಞಾಂ ಚಕಾರ ನಿಃಶೇಷರಿಪುಪ್ರಮಾಥನೇ ।

ನಾರಾಯಣಾಸ್ತ್ರಂ ವಿಸಸರ್ಜ್ಜ ಕೋಪಾತ್ ತದಾ ಭೀತಾ ಭೀಮಮೃತೇ ಸಮಸ್ತಾಃ ॥೨೬.೨೯೮ ॥

 

ತನ್ನ ಅಪ್ಪ ಸತ್ತಿದ್ದಾನೆ ಎಂದು ಕೇಳಿದ ಅಶ್ವತ್ಥಾಮ, ಪ್ರತಿಜ್ಞೆಗೈದ ಶತ್ರುಗಳ ಮಾಡುವುದಾಗಿ ನಿರ್ನಾಮ.  ಕೋಪದಿಂದ ಮಾಡುತ್ತಾನೆ ನಾರಾಯಣಾಸ್ತ್ರದ ಪ್ರಯೋಗ,

ಭೀಮ ಒಬ್ಬನ ಬಿಟ್ಟು ಇತರೆಲ್ಲರೂ ಭಯಗೊಂಡರಾಗ.

 

ಯುಧಿಷ್ಠಿರಃ ಪ್ರಾಹ ವಿಷಣ್ಣಚೇತನಃ ಶೈನೇಯಪೂರ್ವಾಃ ಪ್ರತಿಯಾನ್ತು ಸರ್ವೇ ।

ಸಭ್ರಾತೃಕೋsಹಂ ದ್ರೌಣಿವರಾಸ್ತ್ರಮಗ್ನೋ ಭವೇಯಮಿತ್ಯತ್ರ ಜಗಾದ ಕೇಶವಃ ॥೨೬.೨೯೯ ॥

 

ಯುಧಿಷ್ಠಿರ ಹೇಳುವ ವಿಷಾದಪೂರ್ಣವಾದ ಮನಸ್ಸಿನವನಾಗಿ,

ಸಾತ್ಯಕಿ ಮೊದಲಾದವರೆಲ್ಲರೂ ಯುದ್ಧದಿಂದ ಹೊರಟುಹೋಗಿ .

ನಮಗೋಸ್ಕರ ನೀವು ಜೀವ ಕೊಡುವುದು ಯಾವ ಧರ್ಮಕ್ಕೆ,

ನಾನು ನನ್ನ ತಮ್ಮಂದಿರು ಎದೆ ಕೊಡುತ್ತೇವೆ ನಾರಾಯಣಾಸ್ತ್ರಕ್ಕೆ.

ಯುಧಿಷ್ಠಿರ ಹೀಗೆ ಹೇಳಲು,ಶ್ರೀಕೃಷ್ಣ ಹೇಳುತ್ತಾನೆ-ಅದೇ ಸಮಯಕ್ಕೆ.

 

ನಮಧ್ವಮಸ್ತ್ರಸ್ಯ ತತೋ ವಿಮೋಕ್ಷ್ಯಥೇತ್ಯಥ ಪ್ರಣೇಮುಶ್ಚ ಧನಞ್ಜಯಾಧಿಕಾಃ ।

ಸರ್ವೇ ನ ಭೀಮಸ್ತದಮುಷ್ಯ ಮೂರ್ಧ್ನಿ ಪಪಾತ ಸೋSಗ್ನಾವಿವ ಸಂಸ್ಥಿತೋSಗ್ನಿಃ ॥೨೬.೩೦೦ ॥

 

ಎಲ್ಲರೂ ಕೂಡಾ ಅಸ್ತ್ರಕ್ಕೆ ಮಾಡಿರಿ ನಮಸ್ಕಾರ, ಆಗ ಅದರಿಂದ ಸಿಗುತ್ತದೆ ಬಿಡುಗಡೆ ಪರಿಹಾರ. ಆಗ ಅರ್ಜುನನೇ ಮೊದಲಾದವರು ಅಸ್ತ್ರಕ್ಕೆ ನಮಸ್ಕರಿಸುತ್ತಾರೆ.

ನಮಸ್ಕರಿಸದ ಭೀಮನ ತಲೆಯ ಮೇಲೆ ಅಸ್ತ್ರ ಪ್ರಜ್ವಲಿಸುವ ತಾರೆ.

ಭೀಮಸೇನನದು ಬೆಂಕಿಯಲ್ಲಿ ಬೆಂಕಿ ನಿಂತಂತೆ ಹೊಳೆಯುವ ಮೋರೆ .

 

ಅದಹ್ಯಮಾನೇ ಭೀಮೇSಪಿ ವಹ್ನೌ ವಹ್ನಿರಿವ ಸ್ಥಿತೇ ।

ಅವೇಷ್ಟಯದ್ ವಾರುಣೇನ ಪಾರ್ತ್ಥೋSತ್ರಾSತ್ಮಪ್ರಪತ್ತಯೇ ॥೨೬.೩೦೧ ॥

 

ನ ದೇಹೇ ಪತಿತಾಸ್ತ್ರಸ್ಯ ಬಹಿರ್ವೇಷ್ಟನತಃ ಫಲಮ್ ।

ತಥಾSಪಿ ಸ್ನೇಹವಶಗೋ ವೇಷ್ಟಯಾಮಾಸ ಫಲ್ಗುನಃ ॥೨೬.೩೦೨ ॥

 

ಭೀಮಸೇನನು ನಾರಾಯಣಾಸ್ತ್ರದಿಂದ ಏನೂ ಸುಡಲ್ಪಡದೇ ಇರುವಾಗ ,

ಅರ್ಜುನ ಭೀಮಪ್ರೀತಿಯಿಂದ ವರುಣಾಸ್ತ್ರ ಬಿಟ್ಟು ಆವರಣ ಮಾಡುವನಾಗ .

ದೇಹದಲ್ಲಿಯೇ ಅಸ್ತ್ರ ಬಿದ್ದಾಗ ಹೊರಗಿನಿಂದ ಆವರಣ ಮಾಡಿದರೆ ಏನೂ ಫಲವಿಲ್ಲ,

ಆದರೂ ಭೀಮನ ಮೇಲಿನ ಭಕ್ತಿಯಿಂದ ಅರ್ಜುನ ಬಿಟ್ಟ ವಾರುಣಾಸ್ತ್ರದ ಜಾಲ.

 

ಅಮೋಘತ್ವಂ ನಿಜಾಸ್ತ್ರಸ್ಯ ಭೀಮಸ್ಯಾವದ್ಧ್ಯತಾಮಪಿ ।

ಸಾಧಯನ್ ಸಾರ್ಜ್ಜುನಃ ಕೃಷ್ಣೋ ಭೀಮಸ್ಯ ರಥಮಾರುಹತ್ ॥೨೬.೩೦೩ ॥

 

ಒಂದು ನಾರಾಯಣಾಸ್ತ್ರದ ಅಮೋಘತ್ವ,       

ಇನ್ನೊಂದು ಬಲ ಭೀಮಸೇನನ ಅವಧ್ಯತ್ವ.       

ಎರಡನ್ನೂ ಸಾಧಿಸುತ್ತಾ,ಅರ್ಜುನಸಮೇತ,      

ಶ್ರೀಕೃಷ್ಣನು ಏರುತ್ತಾನೆ ಭೀಮಸೇನನ ರಥ.

 

ವೇಷ್ಟಿತಂ ವಾರುಣಾಸ್ತ್ರೇಣ ಪ್ರವಿಷ್ಟಂ ಬಾಹ್ಯತಸ್ತದಾ ।

ಸಹಿತತ್ವಾತ್ ಕೇಶವೇನ ನರತ್ವಾದಥ ಫಲ್ಗುನಮ್ ॥೨೬.೩೦೪ ॥

 

ಹೊರಗೆ ವರುಣಾಸ್ತ್ರವು ಸುತ್ತುವರಿಯಲ್ಪಟ್ಟಿತ್ತು,

ಶ್ರೀಕೃಷ್ಣ, ನರಾವೇಶದರ್ಜುನನ ಪ್ರವೇಶವಾಗಿತ್ತು.

ಹಾಗಾಗಿಯೇ ಆ ಬೆಂಕಿ ಅರ್ಜುನನ ಸುಡದಿತ್ತು.

 

ತದಸ್ತ್ರಂ ನಾದಹತ್ ತಾಭ್ಯಾಂ ಸ್ವರಥಾದವರೋಪಿತೇ ।

ಭೀಮ ಆಚ್ಛಿನ್ನಹೇತೌ ಚ ತದಸ್ತ್ರಂ ಶಾನ್ತಿಮಾಗಮತ್ ॥೨೬.೩೦೫ ॥

 

ಕೃಷ್ಣಾರ್ಜುನರು ಭೀಮಸೇನನ ಬಿಡಿಸುತ್ತಾರೆ, ಬಲಾತ್ಕಾರದಿಂದ ಆಯುಧವ ಸೆಳೆಯುತ್ತಾರೆ. ರಥದಿಂದಿಳಿಯಲು ಶಾಂತವಾಯ್ತು ಅಸ್ತ್ರತಾರೆ.

 

ಶುದ್ಧಕ್ಷತ್ರಿಯಧರ್ಮ್ಮೇಷು ನಿರತತ್ವಾದ್ ವೃಕೋದರಃ ।

ವಾಹನಾದವತೀರ್ಯ್ಯಾನ್ಯೈಃ ಪ್ರಣತೇSಪಿ ನಿರಾಯುಧೈಃ ।

ಸಾಯುಧಃ ಸರಥೋSಯುದ್ಧ್ಯದವಿಷಹ್ಯಮಪೀಶ್ವರೈಃ ॥೨೬.೩೦೬ ॥

 

ಇತರರು ತಮ್ಮ ರಥಗಳಿಂದ ಕೆಳಗಿಳಿದರು,            

ಆಯುಧ ರಹಿತರಾಗಿ ಅಸ್ತ್ರಕ್ಕೆ ನಮಿಸಿದರು.                    

ಭೀಮ ಮಾತ್ರ ಶುದ್ಧ ಕ್ಷತ್ರಿಯ ಧರ್ಮದಲ್ಲಿ ನಿರತ,

ಆದ್ದರಿಂದ ಆಯುಧ ಸಹಿತ ಮತ್ತು ರಥ ಸಹಿತ,

ಅತ್ಯಂತ ಶಕ್ತಿಶಾಲಿ ದೇವತೆಗಳೂ ಎದುರಿಸಲಾರದ,

ನಾರಾಯಣಾಸ್ತ್ರದ ಮುಂದೆ ಭೀಮ ಯುದ್ಧ ಮಾಡಿದ.

 

ಸ್ವಧರ್ಮ್ಮಹಾನೌ ಮಿತ್ರಾಣಾಂ ಕರ್ತ್ತವ್ಯಂ ಯನ್ನಿಷೇಧನಮ್ ।

ಅತಃ ಸೋSನ್ಯಾನಪಿ ಪ್ರಾಹ ಮಾ ಗಮಧ್ವಮಿತಿ ಸ್ವಯಮ್ ॥೨೬.೩೦೭ ॥

 

ಸ್ವಧರ್ಮಕ್ಕೆ ಧಕ್ಕೆಯಾಗುವ ಪರಿಸ್ಥಿತಿ ಎದುರಾದಾಗ,

ಸ್ನೇಹಿತರಿಗೂ ಕರ್ತವ್ಯ ಮೀರದಂತೆ ಹೇಳಬೇಕಾಗ .

ಆದ್ದರಿಂದ, ಭೀಮಸೇನನು ಇತರರಿಗೂ ಕೂಡಾ,

ತೋರಿದ ಅಸ್ತ್ರಕ್ಕೆ ಬಾಗದೇ ಹೋರಾಡುವ ಜಾಡ.

 

ನಮಸ್ಕಾರ್ಯ್ಯಮಪಿ ಹ್ಯಸ್ತ್ರಂ ನ ನಮ್ಯಂ ಜೀವನೇಚ್ಛಯಾ ।

ಸಮರೇ ಶತ್ರುಣಾ ಮುಕ್ತಂ ತಸ್ಮಾತ್ ತನ್ನ ಚಕಾರ ಸಃ ॥೨೬.೩೦೮ ॥

 

ಆ ಅಸ್ತ್ರವು ಎಲ್ಲರಿಗೂ ನಮಸ್ಕಾರಕ್ಕೆ ಅತ್ಯಂತ ಯೋಗ್ಯ,

ಅದು ಶತ್ರು ಬಿಟ್ಟ ಅಸ್ತ್ರವಾದ್ದರಿಂದ ಯುದ್ಧದ ಒಂದು ಭಾಗ.

ಅದಾಗಬಾರದು ಕೇವಲ ಜೀವ ಉಳಿಸಿಕೊಳ್ಳುವ ಬಯಕೆಗಾಗಿ,

ಹಾಗಾಗಿ ಭೀಮಸೇನ ನಮಸ್ಕಾರ ಮಾಡುವುದಿಲ್ಲ ತಲೆಬಾಗಿ.

 

ಅಸ್ತ್ರಾಭಿಮಾನೀ ವಾಯುರ್ಹಿ ದೇವತಾSಸ್ಯ ಹರಿಃ ಸ್ವಯಮ್ ।

ತಸ್ಮಾದ್ ಭೀಮಂ ಸ್ವರೂಪತ್ವಾನ್ನಾದಹಚ್ಚಾಗ್ನಿಮಗ್ನಿವತ್ ॥೨೬.೩೦೯ ॥

 

ವಾಯುದೇವರೇ ಅಸ್ತ್ರಕ್ಕೆ ಅಭಿಮಾನಿ ದೇವತೆಸ್ವಯಂ ನಾರಾಯಣನೇ ಆ ಅಸ್ತ್ರದ ದೇವತೆ.    

ಆದ್ದರಿಂದ ಅಸ್ತ್ರವು ಭೀಮನದೇ ಸ್ವರೂಪ, ಅಗ್ನಿಯನ್ನು ಅಗ್ನಿಯು ಸುಡಬಲ್ಲದೇ ಪಾಪ!

 

ಮನಸೈವಾSದರಂ ಚಕ್ರೇ ಭೀಮೋSಸ್ತ್ರೇ ಚ ಹರೌ ತದಾ ।

ಕ್ಷತ್ರಧರ್ಮ್ಮಾನುಸಾರೇಣ ನ ನನಾಮ ಚ ಬಾಹ್ಯತಃ ॥೨೬.೩೧೦ ॥

 

ಭೀಮ ಅಸ್ತ್ರಕ್ಕೂ ಅಸ್ತ್ರದೇವತೆ ನಾರಾಯಣಗೂ ತೋರಿದ ಮನಸ್ಸಿಂದ ಆದರ,

ಕ್ಷತ್ರಿಯ ಧರ್ಮವನ್ನು ಅನುಸರಿಸುತ್ತ ಮಾಡಲಿಲ್ಲ ಹೊರಗಡೆಯಿಂದ ನಮಸ್ಕಾರ.

 

ವಾಸುದೇವ ಸ್ವಕೀಯಾಸ್ತ್ರಂ ಭೀಮಂ ಚಾಮೋಘಮೇವ ತು ।

ಸಾಧಯಿತ್ವಾSನನ್ತಶಕ್ತಿಃ ಪುನರಶ್ವಾನಚೋದಯತ್ ॥೨೬.೩೧೧ ॥

 

ಅನಂತ ಶಕ್ತಿಯುಳ್ಳ ಶ್ರೀಕೃಷ್ಣನು ತನ್ನ ಅಸ್ತ್ರವು ಅಮೋಘವೆಂದು ತೋರಿದ,

ಭೀಮಸೇನನೂ ಕೂಡಾ ಅಮೋಘ ಅವಧ್ಯ ಎಂದು ಸಾರಿ ತನ್ನ ರಥವನ್ನೇರಿದ.

 

ಪುನಃ ಪ್ರಯೋಕ್ತುಮಸ್ತ್ರಂ ತಂ ಧಾರ್ತ್ತರಾಷ್ಟ್ರೋSಭ್ಯಚೋದಯತ್ ।

ದ್ರೌಣಿರ್ನ್ನ ಶಕ್ಯಮಿತ್ಯುಕ್ತ್ವಾ ಧೃಷ್ಟದ್ಯುಮ್ನಂ ಸಮಭ್ಯಯಾತ್ ॥೨೬.೩೧೨ ॥

 

ದುರ್ಯೋಧನ ಅಶ್ವತ್ಥಾಮಗೆ ನಾರಾಯಣಾಸ್ತ್ರವನ್ನು ಪುನಃ ಪ್ರಯೋಗಿಸುವಂತೆ ಹೇಳುತ್ತಾನೆ,

ಆಗ ಅಶ್ವತ್ಥಾಮ ಅದು ಶಕ್ಯವಲ್ಲವೆಂದು ಹೇಳಿ, ಧೃಷ್ಟದ್ಯುಮ್ನನನ ಕಡೆ ತೆರಳುತ್ತಾನೆ.

 

ಆಯಾನ್ತಮೀಕ್ಷ್ಯೈವ ಗುರೋಃ ಸುತಂ ತಂ ಧೃಷ್ಟದ್ಯುಮ್ನಂ ಸಾತ್ಯಕಿರನ್ವಯಾದ್ ರಣೇ ।

ಉಭೌ ಚ ತೌ ಸಾಯಕಾಭ್ಯಾಮವಿದ್ಧ್ಯನ್ನಿಪೇತತುಸ್ತೌ ಚ ವಿಮೂರ್ಚ್ಛಿತೌ ರಣೇ ॥೨೬.೩೧೩ ॥

 

ಬರುತ್ತಿರುವ ಅಶ್ವತ್ಥಾಮನನ್ನು ಸಾತ್ಯಕಿ ನೋಡಿದ, ಧೃಷ್ಟದ್ಯುಮ್ನನಿಗೆ ರಕ್ಷಣೆ ಕೊಡಲು ಹಿಂಬಾಲಿಸಿದ. ಅವರಿಬ್ಬರಿಗೂ ಅಶ್ವತ್ಥಾಮನ ಬಾಣಗಳ ಮಳೆ, ಇಬ್ಬರೂ ಮೂರ್ಛೆಹೊಂದಿ ಅಪ್ಪುತ್ತಾರೆ ಇಳೆ.

 

ಭೀಮಸ್ಯಾಭ್ಯಾಗತಸ್ಯಾಶ್ವಾನ್ ದ್ರೌಣಿರ್ವ್ಯದ್ರಾವಯದ್ ರಣೇ ।

ಸಂಸ್ಥಾಪಯತಿ ತಾನ್ ಭೀಮೇ ದದರ್ಶ ದ್ರೌಣಿಮರ್ಜ್ಜುನಃ ॥೨೬.೩೧೪ ॥

 

ತನ್ನ ಎದುರು ಬರುತ್ತಿರುವ ಭೀಮನ ಕುದುರೆಗಳನ್ನು,

ದ್ರೌಣಿಯು ಓಡಿಸುತ್ತಾನೆ ಬಳಸುತ್ತಾ ತನ್ನ ಬಾಣಗಳನ್ನು.

ಭೀಮ ಮುಂದೆ ಹೋಗಿ ಕುದುರೆಗಳ ನಿಗ್ರಹಿಸುತ್ತಿರುವಾಗ,

ಅರ್ಜುನನು ಅಶ್ವತ್ಥಾಮನನ್ನು ಕುರಿತು ಸಾಗಿಬರುವನಾಗ.

 

ತತೋSರ್ಜ್ಜುನಸ್ತಂ ಪ್ರತಿಯೋದ್ಧುಮಾಗಮದ್ ರೂಕ್ಷಾ ವಾಚಃ ಶ್ರಾವಯನ್ ಕ್ರುದ್ಧರೂಪಃ ।

ತತ್ರಾSಗ್ನೇಯಂ ದ್ರೌಣಿರಮುಞ್ಚದಸ್ತ್ರಂ ತೇನ ವ್ಯಾಪ್ತಾ ಪೃತನಾ ಪಾಣ್ಡವಾನಾಮ್ ॥೨೬.೩೧೫ ॥

 

ಆನಂತರ ಅರ್ಜುನ ಕ್ರೂರ ಮಾತುಗಳನ್ನಾಡುತ್ತಾ ಅಶ್ವತ್ಥಾಮನ ಮೇಲೇರಿ ಬಂದ,

ಆಗ ಅಶ್ವತ್ಥಾಮ ಕ್ರುದ್ಧನಾಗಿ  ಅಗ್ನಿದೇವತಾಕವಾದ ಅಸ್ತ್ರವನ್ನು ಪ್ರಯೋಗ ಮಾಡಿದ.

ಅಶ್ವತ್ಥಾಮ ಬಿಟ್ಟ ಆ ಆಗ್ನೇಯಾಸ್ತ್ರ, ಆವರಿಸಿತು ಪಾಂಡವ ಸೇನೆಯ ಸರ್ವತ್ರ.

 

ಅಕ್ಷೋಹಿಣೀ ನಿಹತಾ ಚಾತ್ರ ಸೇನಾ ಪಾರ್ತ್ಥಂ ಸಯಾನಂ ಹರಿರುಜ್ಜಹಾರ ।

ಜೀವನ್ತಮಾಲೋಕ್ಯ ಸುರೇನ್ದ್ರನನ್ದನಂ ದ್ರೌಣಿಃ ಕೋಪಾತ್ ಕಾರ್ಮ್ಮುಕಂ ಚಾಪಹಾಯ ।

ಯಯೌ ತಮಾಗತ್ಯ ಜಗಾದ ಕೃಷ್ಣೋ ವೇದಾನ್ತಕೃತ್  ಪೂರ್ಣ್ಣಷಾಡ್ಗುಣ್ಯದೇಹಃ ॥೨೬.೩೧೬ ॥

 

ಆ ಅಸ್ತ್ರದಿಂದಾಯಿತು ಯುದ್ಧದಲ್ಲಿ ಒಂದು ಅಕ್ಷೋಹಿಣೀ ಸೇನೆ ಹತ.

ಅರ್ಜುನನನ್ನು ರಥ ಸಹಿತವಾಗಿ ಮೇಲೆತ್ತಿ, ಬೇರೆಡೆಗೆ ಒಯ್ದ ಭಗವಂತ.

ದ್ರೌಣಿಯು ಇನ್ನೂ ಅರ್ಜುನ ಬದುಕಿರುವುದನ್ನು ನೋಡಿದ,

ಕೋಪದಿಂದ ಬಿಲ್ಲನ್ನೆಸೆದು ಯುದ್ಧಭೂಮಿಯಿಂದ ಹೊರನಡೆದ.

ಆಗ ವೇದಕರ್ತ ಷಡ್ಗುಣ ಮೈವೆತ್ತ ವೇದವ್ಯಾಸರು, ಅಶ್ವತ್ಥಾಮನಿದ್ದಲ್ಲಿಗೆ ಬಂದು ಹೀಗೆ ಹೇಳಿದರು-

 

ಮಾ ಯಾಹಿ ಸಾಕ್ಷಾದ್ ಗಿರಿಶಃ ಸುರಾಣಾಂ ಕಾರ್ಯ್ಯಾಯ ಭೂಮೌ ಬಲವಾನಜಾಯಥಾಃ ।

ಮಹಚ್ಚ ಕಾರ್ಯ್ಯಂ ಪುನರಸ್ತಿ ದೃಷ್ಟಂ ತವಾSಶು ತಚ್ಚ ಪ್ರತಿಪಾದಯೇತಿ ॥೨೬.೩೧೭ ॥

 

‘ಯುದ್ಧವನ್ನು ಬಿಟ್ಟು ಹೋಗಬೇಡ. ನೀನು ಸಾಕ್ಷಾತ್ ರುದ್ರ',

ದೇವತೆಗಳ ಕೆಲಸಕ್ಕಾಗಿ ಭೂಮಿಯಲ್ಲಾಗಿದೆ ನಿನ್ನ ಅವತಾರ.

ಆಗಬೇಕಿದೆ ನಿನ್ನಿಂದ ಅನೇಕ ಮಹತ್ಕಾರ್ಯ,         

ಬೇಗ ಮಾಡು ಅದನು ಅಶ್ವತ್ಥಾಮಾಚಾರ್ಯ.

 

ತಥೋದಿತಃ ಪ್ರಾತರಿತಿ ಬ್ರುವಾಣೋ ಯಯೌ ಪ್ರಣಮ್ಯಾಖಿಲವೇದಯೋನಿಮ್ ।

ಯಯುಸ್ತಮನ್ವೇವ ಸುಯೋಧನಾದಯೋ ದುಃಖಾನತಾಸ್ತೇ ಶಿಬಿರಾಯ ಭೀತಾಃ ॥೨೬.೩೧೮ ॥

 

ಆರೀತಿ ವೇದವ್ಯಾಸ ದೇವರಿಂದ ಹೇಳಲ್ಪಟ್ಟ ಅಶ್ವತ್ಥಾಮ ‘ನಾಳೆ ಮಾಡುವೆನು’ ಎಂದ,

ಸಮಸ್ತ ವೇದಗಳನ್ನು ವಿಶ್ವಕ್ಕಿತ್ತ ವೇದವ್ಯಾಸರನ್ನು ನಮಸ್ಕರಿಸಿ, ಶಿಬಿರಕ್ಕೆ ತೆರಳಿದ.

ದುರ್ಯೋಧನಾದಿಗಳು ಅವನನುಸರಿಸಿದರು ಭಯಗೊಂಡು ಬಾಗಿ ನೋವಿನಿಂದ.

 

ಪಾರ್ತ್ಥಾಶ್ಚ ಸರ್ವೇ ಮುದಿತಾ ಜನಾರ್ದ್ದನಂ ಪರಂ ಸ್ತುವನ್ತಃ ಶಿಬಿರಾಯ ಜಗ್ಮುಃ ।

ತತ್ರಾಪಿ ರಾತ್ರಾವಮಿತಾನ್ ಹರೇರ್ಗ್ಗುಣಾನನುಸ್ಮರನ್ತೋ ಮುಮುದುಃ ಸಮೇತಾಃ ॥೨೬.೩೧೯ ॥

 

ಎಲ್ಲಾ ಪಾಂಡವರಿಗೂ ಕೂಡಾ ಆಯಿತು ಬಲು ಸಂತೋಷ,

ಹಿರಿದೈವ ಹರಿಸ್ತೋತ್ರಮಾಡುತ್ತಾ ಮಾಡುವರು ಶಿಬಿರ ಪ್ರವೇಶ.

ರಾತ್ರಿ ಶಿಬಿರದಲ್ಲಿಯೂ ಕೂಡಾ ಒಟ್ಟಿಗೇ ಕೃಷ್ಣಗುಣಗಾನ ಎಲ್ಲರಿಂದ ,

ಎಣೆಯಿರದ ಪರಮಾತ್ಮನ ಗುಣಗಳನ್ನು ನೆನೆಯುತ್ತಾ,ಪಟ್ಟರು ಆನಂದ .

 

[ ಆದಿತಃ ಶ್ಲೋಕಾಃ ೩೯೩೦+೩೧೯=೪೨೪೧ ]

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ನಾರಾಯಣಾಸ್ತ್ರೋಪಶಮನಂ ನಾಮ ಷಡ್ವಿಂಶೋsದ್ಧ್ಯಾಯಃ ॥

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ನಾರಾಯಣಾಸ್ತ್ರೋಪಶಮನಂ ಹೆಸರಿನ ಇಪ್ಪತ್ತಾರನೇ ಅಧ್ಯಾಯ,

ಶ್ರೀಕೃಷ್ಣ ಭೀಮಸೇನರ ಪಾದಗಳಿಗರ್ಪಿಸಿದ ಪರಮ ಧನ್ಯತಾ ಭಾವ.

 

*********


No comments:

Post a Comment

ಗೋ-ಕುಲ Go-Kula