Sunday 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 129-138

 

ದ್ರೋಣೋSಪಿ ದುರ್ಯ್ಯೋಧನದತ್ತಮನ್ಯಂ ರಥಂ ಸಮಾಸ್ಥಾಯ ಯುಧಿಷ್ಠಿರಂ ಯಯೌ ।

ಗೃಹೀತುಕಾಮಂ ನೃಪತಿಂ ಪ್ರಯಾನ್ತಂ ನ್ಯವಾರಯತ್ ಸಂಯತಿ ವಾಹಿನೀಪತಿಃ ॥ ೨೬.೧೨೯ ॥

 

ಭೀಮಸೇನನಿಂದಾಗಿ ನಷ್ಟವಾಗಲು ದ್ರೋಣಾಚಾರ್ಯರ ರಥ,

ಕೌರವ ಕೊಟ್ಟ ಇನ್ನೊಂದು ರಥವೇರಿ ಹೊರಟರು ಯುಧಿಷ್ಠಿರನತ್ತ.

ಧರ್ಮಜನ ಹಿಡಿಯ ಬಯಸಿ ಬರುತ್ತಿದ್ದ ದ್ರೋಣ,

ಯುದ್ಧ ಮಾಡುತ್ತಾ ತಡೆದ ಅವರನ್ನ ಧೃಷ್ಟದ್ಯುಮ್ನ.

 

ವಿದಾರಿತಾಂ ದ್ರೋಣಶರೈಃ ಸ್ವಸೇನಾಂ ಸಂಸ್ಥಾಪ್ಯ ಭೂಯೋ ದ್ರುಪದಾತ್ಮಜಃ ಶರೈಃ ।

ದ್ರೋಣಂ ನಿವಾರ್ಯ್ಯೈವ ಚಮೂಂ ಪರೇಷಾಂ ವಿದ್ರಾವಯಮಾಸ ಚ ತಸ್ಯ ಪಶ್ಯತಃ ॥ ೨೬.೧೩೦ ॥

 

ದ್ರೋಣರ ಬಾಣಗಳಿಂದ ಓಡಿಸಲ್ಪಡುತ್ತಿದ್ದ ತಮ್ಮ ಸೇನೆಯನ್ನು ಧೃಷ್ಟದ್ಯುಮ್ನ ಮರುಸ್ಥಾಪಿಸಿದ, ದ್ರೋಣರನ್ನು ತಡೆದು ಅವರು ನೋಡುತ್ತಿರುವಂತೆ ದುರ್ಯೋಧನನ ಸೇನೆಯನ್ನು ಓಡಿಸಿದ.

 

ತಯೋರಭೂದ್ ಯುದ್ಧಮತೀವ ರೌದ್ರಂ ಜಯೈಷಿಣೋಃ ಪಾಣ್ಡವಧಾರ್ತ್ತರಾಷ್ಟ್ರಯೋಃ ।

ಅತ್ಯದ್ಭುತಂ ಸನ್ತತಬಾಣವರ್ಷಮನಾರತಂ ಸುಚಿರಂ ನಿರ್ವಿಶೇಷಮ್ ॥ ೨೬.೧೩೧ ॥

 

ದುರ್ಯೋಧನನಿಗೆ ಜಯವಾಗಬೇಕು ಎಂದು ಇಚ್ಛಿಸುವ ದ್ರೋಣಾಚಾರ್ಯ,

ಪಾಂಡವರಿಗೆ ಜಯವಾಗಬೇಕೆಂದು ಇಚ್ಛಿಸುವ ಧೃಷ್ಟದ್ಯುಮ್ನನ ಧೀರಕಾರ್ಯ.

ಹೀಗೆ ಅವರಿಬ್ಬರ ಮಧ್ಯೆ ಅತ್ಯಂತ ಅದ್ಭುತ ಮತ್ತು ಭೀಕರವಾದ,

ಸತತ ಬಾಣಗಳ ಮಳೆಯ ಧೀರ್ಘಕಾಲ ಸಾಗಿತು ಸಮಯುದ್ಧ.

 

ತತಃ ಪ್ರಾಯಾದ್ ಭೀಮಸೇನೋSಮಿತೌಜಾ ಮೃದ್ನಞ್ಛರೈಃ ಕೌರವರಾಜಸೇನಾಮ್ ।

ವಿನ್ದಾನುವಿನ್ದಪ್ರಮುಖಾ ಧಾರ್ತ್ತರಾಷ್ಟ್ರಾಸ್ತಮಾಸೇದುರ್ದ್ದ್ವಾದಶ ವೀರಮುಖ್ಯಾಃ ॥ ೨೬.೧೩೨ ॥

 

ಇತ್ತ ಎಣೆಯಿರದ ಪರಾಕ್ರಮದ ಭೀಮಸೇನ, ಬಿಡುತ್ತಾ ದುರ್ಯೋಧನನ ಸೇನೆಗೆ ತನ್ನ ಬಾಣ, ಶತ್ರುಗಳ ಕತ್ತರಿಸುತ್ತಾ ಮುಂದೆ ತೆರಳುತ್ತಿದ್ದ;

ಅಂತಹ ಭೀಮಗೆ ಧೃತರಾಷ್ಟ್ರನ ಹನ್ನೆರಡುಮಕ್ಕಳ ಸಮೇತ ಮುಖಂಡರಾಗಿ ಎದುರಾದರು ಯುದ್ಧದಿ ವೀರಾಗ್ರೇಸರರಾದ ವಿಂದ-ಅನುವಿಂದ.

 

 

ವಿದ್ಧಃ ಶರೈಸ್ತೈರ್ಬಹುಭಿರ್ವೃಕೋದರಃ ಶಿರಾಂಸಿ ತೇಷಾಂ ಯುಗಪಚ್ಚಕರ್ತ್ತ 

ಹತೇಷು ತೇಷು ಪ್ರವರೇಷು ಧನ್ವಿನಾಂ ಸತ್ಯವ್ರತಃ ಪುರುಮಿತ್ರೋ ಜಯಶ್ಚ  ॥ ೨೬.೧೩೩ ॥

 

ವೃನ್ದಾರಕಃ ಪೌರವಶ್ಚೇತ್ಯಮಾತ್ಯಾಃ  ಸಮಾಸೇದುರ್ದ್ಧಾರ್ತ್ತರಾಷ್ಟ್ರಸ್ಯ ಭೀಮಮ್  ।

ಸ ತೈಃ ಪೃಷತ್ಕೈರವಕೀರ್ಯ್ಯಮಾಣಃ  ಶಿತಾನ್ ವಿಪಾಠಾನ್ ಯುಗಪತ್ ಸಮಾದಧೇ ॥ ೨೬.೧೩೪ ॥

 

ಜಹಾರ ತೈರೇವ ಶಿರಾಂಸಿ ತೇಷಾಂ ಹತೇಷು ತೇಷ್ವೇವ ಪರೇ ಪ್ರದುದ್ರುವುಃ ।

ಸ ಸಿಂಹವತ್ ಕ್ಷುದ್ರಮೃಗಾನ್ ಸಮನ್ತತೋ ವಿದ್ರಾಪ್ಯ ಶತ್ರೂನ್ ಹೃದಿಕಾತ್ಮಜಂ ರಣೇ ॥ ೨೬.೧೩೫ ॥

 

ಆಗ ವೃಕೋದರನು ಆ ಹನ್ನೆರಡೂ ಜನರ ಬಾಣಗಳಿಂದ ಹೊಡೆಯಲ್ಪಟ್ಟ ,

ಎಲ್ಲಾ ಅಂಧಕಪುತ್ರರ ಶಿರವನ್ನು ಏಕಕಾಲದಿ ಬಾಣಗಳಿಂದ ಕತ್ತರಿಸಿಬಿಟ್ಟ .

ಹೀಗೆ ಬಿಲ್ಗಾರರಲ್ಲೇ ಅಗ್ರಗಣ್ಯರಾದ ಅವರೆಲ್ಲರೂ  ಯುದ್ಧದಲ್ಲಿ ಸಾವನ್ನಪ್ಪಲು,

ಸತ್ಯವ್ರತ,ಪುರುಮಿತ್ರ,ಜಯ,ವೃಂದಾರಕ,ಪೌರವ ಎಂಬೈದು ಕೌರವ ಮಂತ್ರಿಗಳು,

ಭೀಮಸೇನನಿಗೆ ಎದುರಾಗಿ ಬಂದರು,

ಬಾಣಗಳಿಂದ ಭೀಮಸೇನಗೆ ಹೊಡೆದರು.

ಭೀಮ ಚೂಪಾದ ಐದು ಬಾಣಗಳನ್ನು ಒಮ್ಮೆಲೇ ತೆಗೆದುಕೊಂಡ,

ಮತ್ತು ಆ ಬಾಣಗಳಿಂದ ಅವರೈದು ತಲೆಗಳನ್ನು ಕತ್ತರಿಸಿ ಹಾಕಿದ.

ಅವರೆಲ್ಲರೂ ಸಾಯಲು,ಅವರ ಬೆಂಗಾವಲು ಪಡೆಯವರ ಓಟ,

ಹೀಗೆ ಭೀಮಸೇನ ಸಿಂಹವು ಕ್ಷುದ್ರ ಪ್ರಾಣಿಗಳನ್ನು ಓಡಿಸುವಂತೆ ಆಟ,

ಎಲ್ಲೆಡೆ ಮುತ್ತಿದ್ದ ಶತ್ರುಗಳನ್ನು ಓಡಿಸಿ, ಕೃತವರ್ಮಗೆದುರಾದ ನೋಟ.

 

ಅಭ್ಯಾಗಮತ್ ತೇನ ನಿವಾರಿತಃ ಶರೈಃ ಕ್ಷಣೇನ ಚಕ್ರೇ ವಿರಥಾಶ್ವಸೂತಮ್ ।

ಸ ಗಾಢವಿದ್ಧಸ್ತು ವೃಕೋದರೇಣ ರಣಂ ವಿಸೃಜ್ಯಾಪಯಯೌ ಕ್ಷಣೇನ ॥ ೨೬.೧೩೬ ॥

 

ಕೃತವರ್ಮನಿಂದ ಬಾಣಗಳಿಂದ ತಡೆಯಲ್ಪಟ್ಟ ಭೀಮಸೇನ,

ಕ್ಷಣದಲ್ಲಿ ಮಾಡಿದ ಅವನನ್ನು ಸಾರಥಿ ಮತ್ತು  ರಥಹೀನ.

ಹೀಗೆ ಕೃತವರ್ಮ ಭೀಮನಿಂದ ಬಹು ಪೆಟ್ಟುತಿಂದ, ಯುದ್ಧರಂಗವನ್ನೇ ಬಿಟ್ಟು ಪಲಾಯನ ಮಾಡಿದ.

 

ವಿಜಿತ್ಯ ಹಾರ್ದ್ದಿಕ್ಯಮಥಾSಶು ಭೀಮೋ ವಿದ್ರಾವಯಾಮಾಸ ವರೂಥಿನೀಂ ತಾಮ್ ।

ಸಮ್ಪ್ರೇಷಯನ್ ಸರ್ವನರಾಶ್ವಕುಞ್ಜರಾನ್ ಯಮಾಯ ಯಾತೋ ಹರಿಪಾರ್ತ್ಥಪಾರ್ಶ್ವಮ್ ॥ ೨೬.೧೩೭ ॥

 

ಹೀಗೆ ಕೃತವರ್ಮನನ್ನು ಸುಲಭವಾಗಿ ಗೆದ್ದ ಭೀಮಸೇನ ಅವನ ಬೆಂಗಾವಲು ಪಡೆಯನ್ನು ಓಡಿಸಿದ,

ಎಲ್ಲಾ ಕಾಲಾಳು,ಕುದುರೆ,ಆನೆ,ಸೈನ್ಯವನ್ನು ಯಮಕಾಣಿಕೆಯಾಗಿ ಕಳಿಸಿ ಕೃಷ್ಣಾರ್ಜುನರ ಬಳಿ ತೆರಳಿದ.

 

ದೃಷ್ಟ್ವೈವ ಕೃಷ್ಣವಿಜಯೌ ಪರಮಪ್ರಹೃಷ್ಟಸ್ತಾಭ್ಯಾಂ ನಿರೀಕ್ಷಿತ ಉತ ಪ್ರತಿಭಾಷಿತಶ್ಚ ।

ಸಙ್ಜ್ಞಾಂ ನೃಪಸ್ಯ ಸ ದದಾವಪಿ ಸಿಂಹನಾದಾನ್ ಶ್ರುತ್ವಾ ಪರಾಂ ಮುದಮವಾಪ ಸ ಚಾಗ್ರ್ಯಬುದ್ಧಿಃ ॥೨೬.೧೩೮ ॥

 

ಹೀಗೆ ಕೃಷ್ಣಾರ್ಜುನರನ್ನು ಕಂಡು ಪ್ರಸನ್ನನಾದ, ಅವರಿಂದಲೂ ಕಾಣಿಸಿಕೊಳ್ಳಲ್ಪಟ್ಟವನಾದ. ಅವರೊಂದಿಗೆ ಮಾತನಾಡಿ ಸಿಂಹನಾದ ಮಾಡಿ ಯುಧಿಷ್ಠಿರನಿಗೆ ಸಂಕೇತ ಕೊಟ್ಟ,

ಶ್ರೇಷ್ಠ ಬುದ್ಧಿಯುಳ್ಳ ಧರ್ಮರಾಜನು ಭೀಮನ ಸಿಂಹನಾದವನ್ನು ಕೇಳಿ ಆನಂದ ಪಟ್ಟ.

No comments:

Post a Comment

ಗೋ-ಕುಲ Go-Kula