ಸಙ್ಜ್ಞಾಮವಾಪ್ಯಾಥ
ಘಟೋತ್ಕಚೋSಪಿ ಕ್ರುದ್ಧೋSವಿಶತ್
ಕೌರವಸೈನ್ಯಮಾಶು ।
ವಿದ್ರಾವಯಾಮಾಸ ಸ ಬಾಣವರ್ಷೈಃ ಪ್ರಕಮ್ಪಯಾಮಾಸ ಮಹಾರಥಾಂಸ್ತಥಾ ॥೨೬.೨೪೬
॥
ಕಾಲಾನಂತರ ಘಟೋತ್ಕಚನೂ
ಕೂಡಾ ಚೇತರಿಸಿಕೊಳ್ಳುತ್ತಾನೆ,
ಮುನಿದು ಕೌರವರ
ಸೇನೆಯನ್ನು ಪ್ರವೇಶ ಮಾಡಿ ಕಂಗೆಡಿಸುತ್ತಾನೆ,
ಅವನು ಮಹಾರಥರನ್ನು
ಬಾಣಗಳ ಮಳೆಗಳಿಂದ ಓಡಿಸುತ್ತಾನೆ.
ತದೈವ ಪಾರ್ತ್ಥಂ ಪ್ರತಿ
ಯೋದ್ಧುಮಾಗತಂ ವೈಕರ್ತ್ತನಂ ವೀಕ್ಷ್ಯ ಜಗತ್ಪತಿರ್ಹರಿಃ ।
ಘಟೋತ್ಕಚಂ
ಪ್ರಾಹಿಣೋಚ್ಛಕ್ತಿಮುಗ್ರಾಂ ತಸ್ಮಿನ್ ಮೋಕ್ತುಂ ಪಾರ್ತ್ಥರಕ್ಷಾರ್ತ್ಥಮೇವ ॥೨೬.೨೪೭ ॥
ಆಗಲೇ ಅರ್ಜುನನ
ಎದುರಿಸಿ ಯುದ್ಧಮಾಡಲು ಕರ್ಣ ಬರುತ್ತಾನೆ,
ಅದನ್ನು ಕಂಡ ಜಗಪತಿ
ಶ್ರೀಕೃಷ್ಣ ಪಾರ್ಥ ರಕ್ಷಣೆಗೆ ಮುಂದಾಗುತ್ತಾನೆ.
ಉಗ್ರವಾದ ಇಂದ್ರ ಕೊಟ್ಟ
ಶಕ್ತ್ಯಾಯುಧದಿಂದ ಅರ್ಜುನನನ್ನು ರಕ್ಷಿಸಲು,
ಆ ಶಕ್ತ್ಯಾಯುಧವನ್ನು
ಘಟೋತ್ಕಚನೆಡೆಗೇ ಬಿಡುವಂತೆ ಮಾಡಲು,
ಘಟೋತ್ಕಚನನ್ನು ಯುದ್ಧಕ್ಕೆಂದು
ಕಳಿಸಿದ್ದು ಕೃಷ್ಣತಂತ್ರದ ಮಜಲು.
ಸ ಕರ್ಣ್ಣಮಾಹೂಯ ಯುಯೋಧ
ತೇನ ತಸ್ಯಾನು ದುರ್ಯ್ಯೋಧನಪೂರ್ವಕಾಶ್ಚ ಯೇ ।
ದ್ರೋಣೇನ ಚೈತಾನ್ ಸಮರೇ
ಸ ಏಕೋ ನಿವಾರಯಾಮಾಸ ಮಮರ್ದ್ದ ಚಾಧಿಕಮ್ ॥೨೬.೨೪೮ ॥
ಘಟೋತ್ಕಚ ಕರ್ಣನನ್ನು
ಕರೆದು ಅವನೊಂದಿಗೆ ಯುದ್ಧ ಮಾಡಿದ,
ಕರ್ಣನ ಬೆಂಗಾವಲು ಪಡೆಯ
ದ್ರೋಣ ಕೌರವ ಇತರರನ್ನು ತಡೆದ,
ಯುದ್ಧದಲ್ಲಿ ಘಟೋತ್ಕಚ
ಒಬ್ಬನೇ ತಡೆಯುತ್ತಾ ಬಹಳ ಪೀಡಿಸಿದ.
ತೇ ಬಾದ್ಧ್ಯಮಾನಾ
ಬಹುಶೋ ಬಲೀಯಸಾ ಕರ್ಣ್ಣಂ ಪುರೋಧಾಯ ತಮಭ್ಯಯೋಧಯನ್ ।
ನ ವಿವ್ಯಥೇ ತತ್ರ ರಣೇ
ಸ ಕರ್ಣ್ಣಃ ಸ್ವವೀರ್ಯ್ಯಮಾಸ್ಥಾಯ ಮಹಾಸ್ತ್ರವೇತ್ತಾ ॥೨೬.೨೪೯ ॥
ದ್ರೋಣ, ದುರ್ಯೋಧನ, ಮೊದಲಾದವರು,
ಬಲಿಷ್ಠ ಘಟೋತ್ಕಚನಿಂದ
ಪೀಡೆಗೊಳಗಾದರು ,
ಕರ್ಣನ
ಮುಂದಿಟ್ಟುಕೊಂಡು ಹೋರಾಡಿದರು.
ಯುದ್ಧದಲ್ಲಿ
ಕರ್ಣನಾಶ್ರಯಿಸಿದ್ದು ತನ್ನ ವೀರ್ಯ,
ಕಂಗೆಡಲಿಲ್ಲ
ಮಹಾಸ್ತ್ರವನ್ನು ಬಲ್ಲವನಾದ ವೀರ.
ನಿವಾರಯಾಮಾಸ ಗುರೋಃ ಸುತಂ ತದಾ
ಭೀಮಸ್ತ್ರಿಗರ್ತ್ತಾಞ್ಛತಮನ್ಯುನನ್ದನಃ ।
ಅಲಮ್ಬಲೋ ನಾಮ ತದೈವ
ರಾಕ್ಷಸಃ ಸಮಾಗಮದ್ ಭೀಮಸುತಂ ನಿಹನ್ತುಮ್ ॥೨೬.೨೫೦
॥
ಆಗ ಭೀಮಸೇನ
ಅಶ್ವತ್ಥಾಮನ ತಡೆದ, ಅರ್ಜುನನು ತ್ರಿಗರ್ತದವರನ್ನು ತಡೆದ.
ಆಗಲೇ ಅಲಂಬಲ ಎನ್ನುವ
ರಾಕ್ಷಸನು, ಘಟೋತ್ಕಚನ ಕೊಲ್ಲಲೆಂದು ಬಂದನು.
ಯುಧ್ವಾ
ಪ್ರಗೃಹ್ಯೈನಮಥೋ ನಿಪಾತ್ಯ ಘಟೋತ್ಕಚೋ ಭೂಮಿತಳೇSಸಿನಾSಸ್ಯ ।
ಉತ್ಕೃತ್ಯ ಶೀರ್ಷಂ
ತು ಸುಯೋಧನೇSಕ್ಷಿಪದ್ ವಿಷೇದುರತ್ರಾಖಿಲಭೂಮಿಪಾಲಾಃ
॥೨೬.೨೫೧ ॥
ಹೀಗೆ ಬಂದ ಅಲಂಬಲನೊಡನೆ
ಘಟೋತ್ಕಚ ಕಾದಾಡಿದ ,
ಅವನನ್ನು ನೆಲಕ್ಕೆ
ಬೀಳಿಸಿ ಕತ್ತಿಯಿಂದ ಅವನ ಕತ್ತು ಕತ್ತರಿಸಿದ ,
ನೆಲಕ್ಕೆ ಬಿದ್ದ ಆ
ರುಂಡವನ್ನು ದುರ್ಯೋಧನನ ಮೇಲೆ ಎಸೆದ.
ಈ ಯುದ್ಧದಲ್ಲಿ ಎಲ್ಲಾ
ಕ್ಷತ್ರಿಯರಿಗೂ ಆದದ್ದು ಸಂಕಟ ವಿಷಾದ.
ಅಲಾಯುಧೋSಥಾSಗಮದುಗ್ರವೀರ್ಯ್ಯೋ
ನರಾಶನಸ್ತಂ ಸ ಘಟೋತ್ಕಚೋSಭ್ಯಯಾತ್ ।
ಧ್ವಾ ಮೂಹೂರ್ತಂ ಸ ತು
ತೇನ ಭೂಮೌ ನಿಪಾತ್ಯ ತಂ ಯಜ್ಞಪಶುಂ ಚಕಾರ ॥೨೬.೨೫೨ ॥
ಆನಂತರ ಉಗ್ರವೀರ
ನರಭಕ್ಷಕ ಅಲಾಯುಧನು ಯುದ್ಧಕ್ಕೆಂದು ಬಂದ,
ಅವನಿಗೆ ಎದುರಾದ
ಘಟೋತ್ಕಚ ಒಂದು ಮೂಹೂರ್ತ ಯುದ್ಧಮಾಡಿದ,
ಅವನನ್ನು ನೆಲಕೆ
ಬೀಳಿಸಿದ ಘಟೋತ್ಕಚ ಯಜ್ಞಪಶುವಿನಂತೆ ಕೊಂದು ಹಾಕಿದ.
ಅಥಾಸ್ಯ ಶಿರ ಉದ್ಧೃತ್ಯ
ಕ್ರೋಧಾದ್ ದುರ್ಯ್ಯೋಧನೋರಸಿ ।
ಚಿಕ್ಷೇಪ ತೇನ
ಸಮ್ಭ್ರಾನ್ತಾಃ ಸರ್ವೇ ದುರ್ಯ್ಯೋಧನಾದಯಃ ॥೨೬.೨೫೩ ॥
ತದನಂತರ ಅಲಾಯುಧನ
ತಲೆಯನ್ನು ಕತ್ತರಿಸಿದ, ಸಿಟ್ಟಲ್ಲಿ
ಅದನ್ನು ಕೌರವನ ಎದೆಯ ಮೇಲೆ ಎಸೆದ. ದುರ್ಯೋಧನಾದಿಗಳಿಗೆಲ್ಲ ಗಾಬರಿಯ ಆಘಾತ .
ಘಟೋತ್ಕಚಬಲಖ್ಯಾತ್ಯೈ
ಸಮರ್ತ್ಥೇನಾಪಿ ಯೋ ರಣೇ ।
ನ ಹತೋ ಭೀಮಸೇನೇನ ಹತೇSಸ್ಮಿನ್ ಭೈಮಸೇನಿನಾ ॥೨೬.೨೫೪ ॥
ಸರ್ವೇ ಸಞ್ಚೋದಯಾಮಾಸುಃ
ಕರ್ಣ್ಣಂ ಶಕ್ತಿವಿಮೋಕ್ಷಣೇ ।
ಅಸ್ಮಿನ್ ಹತೇ ಹತಂ
ಸರ್ವಂ ಕಿಂ ನಃ ಪಾರ್ತ್ಥಃ ಕರಿಷ್ಯತಿ ॥೨೬.೨೫೫ ॥
ಏವಂ ಸಞ್ಚೋದ್ಯಮಾನಃ ಸ
ಧಾರ್ತ್ತರಾಷ್ಟ್ರೈಃ ಪುನಃಪುನಃ ।
ಡಿಮ್ಬೇನಾರ್ದ್ದ್ಯಮಾನೈಸ್ತು
ಸ್ವಯಂ ಚ ಭೃಶಪೀಡಿತಃ ।
ಆದತ್ತ ಶಕ್ತಿಂ ವಿಪುಲಾಂ
ಪಾಕಶಾಸನಸಮ್ಮತಾಮ್ ॥೨೬.೨೫೬ ॥
ಘಟೋತ್ಕಚನ ಬಲ ಏನು
ಎನ್ನುವುದನ್ನು ಜಗತ್ತಿಗೆ ಮಾಡಲು ವ್ಯಕ್ತ,
ಭೀಮ ಅಲಾಯುಧನ
ಕೊಲ್ಲಲಿಲ್ಲ ತಾನಾಗಿದ್ದರೂ ಅದಕ್ಕೆ ಸಮರ್ಥ.
ಅಂತಹ ಅಲಾಯುಧನು
ಘಟೋತ್ಕಚನಿಂದ ಸಂಹರಿಸಲ್ಪಡುತ್ತಿರಲು,
ದುರ್ಯೋಧನಾದಿಗಳಿಂದ
ಕರ್ಣನಿಗೆ ಪ್ರೇರಣೆ ಶಕ್ತ್ಯಾಯುಧ ಬಿಡಲು.
‘ಈ
ಘಟೋತ್ಕಚ ಸಂಹರಿಸಲ್ಪಟ್ಟರೆ ಎಲ್ಲಾ ಶತ್ರು ಸಮೂಹ ಹತವಾದಂತೆ’,
ಇದು ಘಟೋತ್ಕಚನಿಂದ
ಪೀಡನೆಗೊಳಗಾದ ದುರ್ಯೋಧನಾದಿಗಳ ಚಿಂತೆ.
ಕರ್ಣ ತಾನು ಕೂಡಾ
ಅತ್ಯಂತ ಪೀಡಿತನಾಗಿದ್ದ,
ತೆಗೆದುಕೊಂಡ ಇಂದ್ರ
ಕೊಟ್ಟ ಹಿರಿ ಶಕ್ತ್ಯಾಯುಧ.
ತಾಮಮ್ಬರಸ್ಥಾಯ
ಘಟೋತ್ಕಚಾಯ ಶೈಲೋಪಮಾಯಾತುಲವಿಕ್ರಮಾಯ ।
ಚಿಕ್ಷೇಪ ಮೃತ್ಯೋ
ರಸನೋಪಮಾಮಲಂ ಪ್ರಕಾಶಯನ್ತೀಂ ಪ್ರದಿಶೋ ದಿಶಶ್ಚ ॥೨೬.೨೫೭ ॥
ಮೃತ್ಯುನಾಲಿಗೆಯಂತಿದ್ದ
ದಿಕ್ಕು-ವಿದಿಕ್ಕನ್ನು ಬೆಳಗಿಸುತ್ತಿದ್ದ ಆ ಶಕ್ತ್ಯಾಯುಧ,
ಬೆಟ್ಟದಂತಿದ್ದ
ಎಣೆಯಿರದ ಪರಾಕ್ರಮವುಳ್ಳ ಘಟೋತ್ಕಚನಿಗಾಗಿ ಕರ್ಣ ಎಸೆದ.
ನಿರ್ಭಿಣ್ಣವಕ್ಷಾಃ ಸ
ತಯಾ ಪಪಾತ ವಿಚೂರ್ಣ್ಣಯಞ್ಛತ್ರುಬಲಂ ಹತೋSಪಿ ।
ತಸ್ಮಿನ್ ಹತೇ
ಜಹೃಷುರ್ದ್ದಾರ್ತ್ತರಾಷ್ಟ್ರಾ ಉಚ್ಚುಕ್ರುಶುರ್ದ್ದುಧುವುಶ್ಚಾಮ್ಬರಾಣಿ ॥೨೬.೨೫೮ ॥
ಸೀಳಲ್ಪಟ್ಟ
ಎದೆಯುಳ್ಳವನಾಗಿ ಘಟೋತ್ಕಚನು ಬಿದ್ದ,
ಸಾಯುವಾಗಲೂ
ಶತ್ರುಗಳನ್ನು ಪುಡಿ-ಪುಡಿ ಮಾಡುತ್ತಲಿದ್ದ.
ಅವನು ಸಾಯಲು
ದುರ್ಯೋಧನಾದಿಗಳಲ್ಲಿ ಹರ್ಷದ ನೋಟ,
ಕಿರುಚುತ್ತಾ
ಬಟ್ಟೆಗಳನ್ನು ಹಾರಿಸುತ್ತಾ ಸಂಭ್ರಮ ಆಚರಣೆಯ ಆಟ.
ತದಾ ನನರ್ತ್ತ ಕೇಶವಃ ಸಮಾಶ್ಲಿಷಚ್ಚ
ಫಲ್ಗುನಮ್ ।
ನನಾದ ಶಙ್ಖಮಾಧಮಜ್ಜಹಾಸ
ಚೋರುನಿಸ್ವನಃ ॥೨೬.೨೫೯ ॥
ಶಕ್ತ್ಯಾಯುಧದಿಂದ
ಘಟೋತ್ಕಚ ಸಾಯುತ್ತಿದ್ದ ,
ಇತ್ತ
ಶ್ರೀಕೃಷ್ಣಪರಮಾತ್ಮನು ಕುಣಿದಾಡುತ್ತಿದ್ದ.
ಕೃಷ್ಣ ಅರ್ಜುನನನ್ನು
ಆಲಂಗಿಸಿಕೊಳ್ಳುತ್ತಾನೆ,
ಗಟ್ಟಿಯಾಗಿ ನಗುತ್ತಾನೆ,ಶಂಖವನ್ನೂದುತ್ತಾನೆ.
ತಮಪೃಚ್ಛದ್ ಗುಡಾಕೇಶಃ ಕಿಮೇತದಿತಿ
ದುರ್ಮ್ಮನಾಃ ।
ಹತೇ ಸುತೇSಗ್ರಜೇSಸ್ಮಾಕಂ ವೀರೇ ಕಿಂ ನನ್ದಸಿ ಪ್ರಭೋ ॥೨೬.೨೬೦ ॥
ಆಗ ಅರ್ಜುನನು ದುಃಖದ
ಮನಸ್ಸಿನವನಾಗಿ ಕೇಳುತ್ತಾನೆ,
‘ಏನಿದು
ಕೃಷ್ಣಾ, ನಮ್ಮ ವೀರನಾದ
ಹಿರಿ ಮಗ ಸತ್ತಿದ್ದಾನೆ,
ನೀನು ತೋರುತ್ತಿರುವೆ
ಸಂತೋಷ ಸಂಭ್ರಮದ ಆಚರಣೆ.
ತಮಾಹ ಭಗವಾನ್ ಕೃಷ್ಣೋ
ದಿಷ್ಟ್ಯಾ ಜೀವಸಿ ಫಲ್ಗುನ ।
ತ್ವದರ್ತ್ಥಂ ನಿಹಿತಾ
ಶಕ್ತಿರ್ವಿಮುಕ್ತಾSಸ್ಮಿನ್
ಹಿ ರಾಕ್ಷಸೇ ॥೨೬.೨೬೧ ॥
ಆಗ ಶ್ರೀಕೃಷ್ಣ- ‘ಎಲೋ
ಅರ್ಜುನನೇ, ಬದುಕಿದೆ
ನೀನು,
ನಿನಗಾಗಿ
ಕಾದಿರಿಸಲ್ಪಟ್ಟಿತ್ತು ಈ ಶಕ್ತ್ಯಾಯುಧವು ತಾನು,
ಘಟೋತ್ಕಚನ ಸಂಹರಿಸಿ
ಶಾಂತವಾಯಿತು ಸಾಲದೇನು.
ತತೋ ಯುಧಿಷ್ಠಿರೋ ದುಃಖಾದಮರ್ಷಾಚ್ಚಾಭ್ಯವರ್ತ್ತತ
।
ಕರ್ಣ್ಣಂ ಪ್ರತಿ
ತಮಾಹಾಥ ಕೃಷ್ಣದ್ವೈಪಾಯನಃ ಪ್ರಭುಃ ॥೨೬.೨೬೨ ॥
ಆನಂತರ ಯುಧಿಷ್ಠಿರ
ದುಃಖ ಮತ್ತು ಸಿಟ್ಟಿನಿಂದ, ಹೊರಟನು ಕರ್ಣನ ಮೇಲೆ
ಮಾಡಲುಯುದ್ಧ. ಆಗ ಅಲ್ಲಿ
ಪ್ರತ್ಯಕ್ಷರಾದ ವೇದವ್ಯಾಸರು, ಯುಧಿಷ್ಠಿರನನ್ನು ಕುರಿತು ಹೇಳಿದರು -.
ಯಯಾSರ್ಜ್ಜುನೋ ನಿಹನ್ತವ್ಯಸ್ತಯಾSಸೌ ರಾಕ್ಷಸೋ ಹತಃ ।
ತನ್ಮಾ ಶುಚಸ್ತ್ವಂ
ರಾಜೇನ್ದ್ರ ದಿಷ್ಟ್ಯಾ ಜೀವತಿ ಫಲ್ಗುನಃ ।
ಇತ್ಯುಕ್ತ್ವಾ ಪ್ರಯಯೌ
ವ್ಯಾಸಸ್ತತೋ ಯುದ್ಧಮವರ್ತ್ತತ ॥೨೬.೨೬೩ ॥
‘ಯಾವುದರಿಂದ
ಅರ್ಜುನನು ಸಾಯಬೇಕಿತ್ತು,
ಅದರಿಂದಲೇ ಈ ರಾಕ್ಷಸನ
ಸಂಹಾರವಾಯಿತು.
ಆ ಕಾರಣ ಓ ರಾಜೇಂದ್ರ, ಬೇಡ ದುಃಖ ತಾಪ,
ಅರ್ಜುನನು
ಬದುಕಿರುವುದದು ದೈವಸಂಕಲ್ಪ.
ಹೀಗೆ ಹೇಳಿ ವ್ಯಾಸರು
ತೆರಳಿದರು ಅಲ್ಲಿಂದ,
ಆನಂತರ ಮತ್ತೆ
ಪ್ರಾರಂಭವಾಯಿತು ಯುದ್ಧ.
ಭೀಮಾರ್ಜ್ಜುನಾಭ್ಯಾಮಿಹ
ಹನ್ಯಮಾನೇ ಬಲೇ ಕುರೂಣಾಮಿತರೈಶ್ಚ ಪಾಣ್ಡವೇ ।
ಪ್ರದೀಪಹಸ್ತಾ ಅಥ
ಯೋಧಕಾಶ್ಚ ಸರ್ವೇSಪಿ
ನಿದ್ರಾವಶಗಾ ಬಭೂವುಃ ॥೨೬.೨೬೪ ॥
ಆ ರಾತ್ರಿ ಯುದ್ಧದಲ್ಲಿ
ಭೀಮ ಮತ್ತು ಅರ್ಜುನ,
ಮಾಡುತ್ತಿರುವಾಗ
ಕೌರವಸೇನೆಯ ಮಾರಣ,
ಹಾಗೆಯೇ ಕೌರವರಿಂದ
ಪಾಂಡವಸೇನಾ ಹನನ,
ದೊಂದಿ ಹಿಡಿದವರೂ, ಯುದ್ಧನಿರತ ವೀರರೂ,
ಹೀಗೆ ಎಲ್ಲರೂ ಕೂಡಾ
ನಿದ್ರಾಪರವಶರಾದರು.
ದೃಷ್ಟ್ವೈವ ತಾನಾಹ
ಧನಞ್ಜಯಸ್ತದಾ ಸ್ವಪ್ಸ್ಯನ್ತು ಯಾವಚ್ಛಶಿನಃ ಪ್ರಕಾಶಃ ।
ಇತೀರಿತಾ ಆಶಿಷಃ
ಫಲ್ಗುನಾಯ ಪ್ರಯುಜ್ಯ ಸರ್ವೇ ಸುಷುಪುರ್ಯ್ಯಥಾಸ್ಥಿತಾಃ ॥೨೬.೨೬೫ ॥
ಈರೀತಿ
ನಿದ್ರಾಧೀನರಾದವರನ್ನು ಕಂಡ ಧನಂಜಯ-,
‘ನೀವೆಲ್ಲರೂ
ಮಲಗಿ’ ಆಗೋವರೆಗೂ ಚಂದ್ರೋದಯ.
ಮೇಲಿನ ಮಾತನ್ನು
ಅರ್ಜುನನು ಹೇಳಿದಾಗ,
ಅವರೆಲ್ಲ ಅರ್ಜುನಗೆ
ಆಶೀರ್ವದಿಸುವರಾಗ,
ಎಲ್ಲಿದ್ದರೋ ಅಲ್ಲಲ್ಲೇ
ಮಲಗಿಕೊಳ್ಳುವರಾಗ .
ಪುನಶ್ಚ ಚನ್ದ್ರೇSಭ್ಯುದಿತೇ ಯುಧೇ ತೇ ಸಮಾಯಯುಃ
ಶಸ್ತ್ರಮಹಾಸ್ತ್ರವರ್ಷಾಃ ।
ತತ್ರಾSಯಾತಃ ಸಾತ್ಯಕಿಂ ಸೋಮದತ್ತೋ
ಭೂರಿಶ್ಚ ತಾಭ್ಯಾಂ ಯುಯುಧೇ ಸ ಏಕಃ ॥೨೬.೨೬೬ ॥
ತದನಂತರ
ಚಂದ್ರೋದಯವಾಗುತ್ತಿರುವಾಗ ,
ಶಸ್ತ್ರಾಸ್ತ್ರಗಳ
ಹಿಡಿದು ಯುದ್ಧಕ್ಕೆ ಬರುತ್ತಾರಾಗ.
ಯುದ್ಧದಲ್ಲಿ ಸೋಮದತ್ತ
ಮತ್ತು ಭೂರಿ,
ಬಂದರು ಯುದ್ಧಕೆ
ಸಾತ್ಯಕಿಯ ಮೇಲೇರಿ.
ಇಬ್ಬರಿಗೂ ಸಾತ್ಯಕಿ
ಒಬ್ಬನೇ ಆಗುವ ವೈರಿ.
ಹತೌ ಚ ತೌ ಪೇತತುಸ್ತೇನ
ಭೂಮೌ ಬಾಹ್ಲೀಕ ಏನಂ ಸಮರೇ ತ್ವಯೋಧಯತ್ ।
ಸ ಸಾತ್ಯಕಿಂ
ವಿರಥೀಕೃತ್ಯ ಬಾಣಂ ವಧಾಯ ತಸ್ಯಾSಶು ಮುಮೋಚ ವೀರಃ ॥೨೬.೨೬೭ ॥
ಸಾತ್ಯಕಿ ಯುದ್ಧದಲ್ಲಿ
ಭೂರಿ ಮತ್ತು ಸೋಮದತ್ತರ ಕೊಲ್ಲುತ್ತಾನೆ,
ಆಗ ಬಾಹ್ಲೀಕರಾಜ
ಯುದ್ಧದಲ್ಲಿ ಸಾತ್ಯಕಿಯನ್ನು ಎದುರಿಸುತ್ತಾನೆ.
ವೀರ ಬಾಹ್ಲೀಕನು
ಸಾತ್ಯಕಿಯನ್ನು ರಥಹೀನನನ್ನಾಗಿ ಮಾಡುತ್ತಾನೆ,
ಅವನನ್ನು ಸಂಹಾರ
ಮಾಡುವುದಕ್ಕೆ ಬಾಣವನ್ನು ಬಿಡುತ್ತಾನೆ.
ಚಿಚ್ಛೇದ ತಂ
ಭೀಮಸೇನಸ್ತ್ರಿದೈವ ತಸ್ಮೈ ಶತಘ್ನೀಂ ಪ್ರಜಹಾರ
ಬಾಹ್ಲಿಕಃ ।
ತಯಾ ಹತೋ ವಿಹ್ವಲಿತೋ
ವೃಕೋದರೋ ಜಘಾನ ತಂ ಗದಯಾ ಸೋSಪತಚ್ಚ ॥೨೬.೨೬೮ ॥
ಭೀಮಸೇನ ಬಾಹ್ಲೀಕನ ಆ
ಬಾಣವನ್ನು ಮೂರಾಗಿ ಕತ್ತರಿಸುತ್ತಾನೆ.
ಆಗ ಬಾಹ್ಲೀಕ ಭೀಮನಿಗೆ
‘ಶತಘ್ನೀ’ ಎಂಬ ಅಸ್ತ್ರದಿ ಹೊಡೆಯುತ್ತಾನೆ.
ಆ ಶಕ್ತಿಯಿಂದ
ಹೊಡೆಯಲ್ಪಟ್ಟ ಭೀಮ ಒಂದು ಕ್ಷಣ ನೋವುಂಡ,
ಗದೆಯಿಂದ
ಬಾಹ್ಲೀಕನನ್ನು ಹೊಡೆದ, ಬಾಹ್ಲೀಕ
ಸತ್ತು ಉರುಳಿದ .
ಬಾಹ್ಲೀಕಃ
ಪ್ರಾರ್ತ್ಥಯಾಮಾಸ ಪೂರ್ವಂ ಸ್ನೇಹಪುರಸ್ಸರಮ್ ।
ಮಂ ತ್ವಯೈವ ಹನ್ತವ್ಯೋ
ರಣೇSಹಂ ಪ್ರೀತಿಮಿಚ್ಛತಾ
॥೨೬.೨೬೯ ॥
ತದಾ ಯಶಶ್ಚ ಧರ್ಮ್ಮಂ ಚ
ಲೋಕಂ ಚ ಪ್ರಾಪ್ನುಯಾಮಹಮ್ ।
ಇತ್ಯುಕ್ತ ಆಹ ತಂ ಭೀಮೋ
ನಿತರಾಂ ವ್ಯಥಿತಸ್ತದಾ ॥೨೬.೨೭೦ ॥
ಹನ್ಯಾಂ ನೈವಾನ್ಯಥಾ
ಯುದ್ಧೇ ತತ್ ತೇ ಶುಶ್ರೂಷಣಂ ಭವೇತ್ ।
ಇತಿ ತೇನ ಹತಸ್ತತ್ರ
ಭೀಮಸೇನೇನ ಬಾಹ್ಲಿಕಃ ॥೨೬.೨೭೧ ॥
ಹಿಂದೆ ಬಾಹ್ಲೀಕರಾಜನು
ಸ್ನೇಹದಿಂದ,
ಭೀಮಸೇನಗೆ ಈ ರೀತಿ
ಪ್ರಾರ್ಥಿಸಿದ್ದ -.
‘ನೀನೇ
ನನ್ನನ್ನು ಯುದ್ಧದಲ್ಲಿ ಕೊಲ್ಲಬೇಕು.
ಅದೆನಗೆ ನಿನ್ನ
ಪ್ರೀತಿಯ ಕೆಲಸವಾಗಬೇಕು .
ನಿನ್ನಿಂದ ಸತ್ತರೆ
ಲಭ್ಯ: ಒಳ್ಳೆಯ ಕೀರ್ತಿ, ಪುಣ್ಯ,
ಮತ್ತು ದೊರಕೀತು ಉತ್ತಮ
ಲೋಕದ ತಾಣ.
ಬಾಹ್ಲೀಕನು ಹೀಗೆ
ವಿನಂತಿಸಿದಾಗ ಭೀಮಸೇನ ಅವನಿಗೆ ಹೇಳಿದ್ದ,
‘ನೀ
ಎನಗೆ ಬಹಳ ನೋವು ಮಾಡಿದಾಗ ಮಾತ್ರ ನನ್ನಿಂದ ನಿನ್ನ ವಧ.
ಇಲ್ಲದಿದ್ದರೆ ನಾನು
ಎಂದೂ ನಿನ್ನ ಕೊಲ್ಲುವುದಿಲ್ಲ,
ನೋವು ಕೊಟ್ಟರೂ ನಿನಗದು
ಸೇವಾಪುಣ್ಯ ಫಲ.
ಇದು ಬಾಹ್ಲೀಕನ
ಕರ್ಮಸಾಧನೆಯ ಮರ್ಮ,
ಹೀಗಾಗಿ ಬಾಹ್ಲೀಕನ
ಕೊಲ್ಲುತ್ತಾನೆ ಬಲಭೀಮ.
ಹತೇ ಬಾಹ್ಲೀಕೇ ಕೌರವಾ
ಭೀಮಸೇನಮಭ್ಯಾಜಗ್ಮುಃ ಕರ್ಣ್ಣದುರ್ಯ್ಯೋಧನಾದ್ಯಾಃ ।
ದ್ರೌಣಿಂ ಪುರಸ್ಕೃತ್ಯ
ಗುರುಂ ಚ ಪಾರ್ಷತಃ ಸಭ್ರಾತೃಕಃ ಸಾತ್ಯಕಿನಾ ಸಮಭ್ಯಯಾತ್ ॥೨೬.೨೭೨ ॥
ಹೀಗೆ ಬಾಹ್ಲೀಕನು
ಕೊಲ್ಲಲ್ಪಡಲು, ಕರ್ಣ-ದುರ್ಯೋಧನಾದಿ ಕೌರವರು;
ಅಶ್ವತ್ಥಾಮನ ಮುಂದೆ ಮಾಡಿಕೊಂಡು ಭೀಮಸೇನನ ಎದುರಿಸಲೆಂದು ಬಂದರು.
ಇತ್ತ ಧೃಷ್ಟದ್ಯುಮ್ನ
ತನ್ನ ಸೋದರರು, ಸಾತ್ಯಕಿಯ
ಕೂಡಿಕೊಂಡ,
ಗುರುವಾದ
ದ್ರೋಣಾಚಾರ್ಯರನ್ನು ಯುದ್ಧದಲ್ಲಿ ಎದುರುಗೊಂಡ.
ಸಂಶಪ್ತಕೈರೇವ
ಪಾರ್ತ್ಥೋ ಯುಯೋಧ ತದ್ ಯುದ್ಧಮಾಸೀದತಿರೌದ್ರಮದ್ಭುತಮ್ ।
ಅಕ್ಷೋಹಿಣೀ ತತ್ರ
ಭೀಮಾರ್ಜ್ಜುನಾಭ್ಯಾಂ ನಿಸೂದಿತಾ ರಾತ್ರಿಯುದ್ಧೇ ಸಮಸ್ತಾ ॥೨೬.೨೭೩ ॥
ಸಂಶಪ್ತಕರೊಡನೆ
ಅರ್ಜುನನು ಘೋರವಾದ ಯುದ್ಧ ಮಾಡಿದ,
ಅದಾಗಿತ್ತು ಅತ್ಯಂತ
ರೌದ್ರ, ಅತ್ಯಂತ
ಭೀಕರ ಅದ್ಭುತವಾದ ಯುದ್ಧ.
ಆಗಿದ್ದು ಆ ರಾತ್ರಿ
ಭೀಮಾರ್ಜುನರಿಂದ ಒಂದು ಅಕ್ಷೋಹಿಣಿಯ ವಧ.
[ಹದಿನಾಲ್ಕನೇ
ದಿನದ ರಾತ್ರಿ ಯುದ್ಧ ಮುಗಿದು, ಬೆಳಗಾಗಿ-ಹದಿನೈದನೇ ದಿನದ ಯುದ್ಧ
ಪ್ರಾರಂಭವಾಯಿತು]
ತತಃ
ಸೂರ್ಯ್ಯಶ್ಚಾಭ್ಯುದಿತಸ್ತದಾSತಿಘೋರಂ ದ್ರೋಣಃ ಕರ್ಮ್ಮ ಯುದ್ಧೇ ಚಕಾರ ।
ಸ ಪಾಞ್ಚಾಲಾನಾಂ
ರಥವೃನ್ದಂ ಪ್ರವಿಶ್ಯ ಜಘಾನ ಹಸ್ತ್ಯಶ್ವರಥಾನ್ ನರಾಂಶ್ಚ ॥೨೬.೨೭೪ ॥
ಸೂರ್ಯೋದಯಾನಂತರ
ದ್ರೋಣಾಚಾರ್ಯರು ಯುದ್ಧದಲ್ಲಿ ಅತ್ಯಂತ ಘೋರಕರ್ಮ ಮಾಡಿದರು. ಅವರು ಪಾಂಚಾಲರ ಸೈನ್ಯ ಸಮೂಹವ
ಹೊಕ್ಕು ಆ ಚತುರಂಗ ಸೇನೆಯನ್ನು ಕೊಂದು ಹಾಕಿದರು.
ವಿದ್ರಾವಿತಾಸ್ತೇನ ಮಹಾರಥಾಶ್ಚ ನೈವಾವಿನ್ದಞ್ಛರ್ಮ್ಮ ಬಾಣಾನ್ಧಕಾರೇ ।
ಯುವೇವ ವೃದ್ಧೋSಪಿ ಚಚಾರ ಯುದ್ಧೇ ಸ ಉಗ್ರಧನ್ವಾ ಪರಮಾಸ್ತ್ರವೇತ್ತಾ ॥೨೬.೨೭೫ ॥
ದ್ರೋಣಾಚಾರ್ಯರಿಂದ
ಓಡಿಸಲ್ಪಟ್ಟ ಮಹಾರಥಿಕರೆಲ್ಲ,
ಎಲ್ಲೆಡೆ ತುಂಬಿದ
ಬಾಣಾಂಧಕಾರದಲ್ಲಿ ಸುಖ ಕಾಣಲಿಲ್ಲ.
ವೃದ್ಧನಾದರೂ ಯುವಕನೋ
ಎಂಬಂತೆ ಯುದ್ಧದಲ್ಲಿ ಉಗ್ರ ಧನುಸ್ಸುಳ್ಳವರಾದರು; ಮಹಾಸ್ತ್ರವನ್ನು
ಪ್ರಯೋಗ ಮಾಡುತ್ತಾ ದ್ರೋಣಾಚಾರ್ಯರು ಸಂಚರಿಸಿದರು.
ರಥಾರ್ಬುದಂ ತೇನ ಹತಂ ಚ
ತತ್ರ ತತಃ ಸಹಸ್ರಂ ಗುಣಿತಂ ನರಾಣಾಮ್ ।
ತತೋ ದಶಾಂಶೋ ನಿಹತೋ
ಹಯಾನಾಂ ಗಜಾರ್ಬುದಂ ಚೈವ ರಣೋತ್ಕಟೇನ ॥೨೬.೨೭೬ ॥
ಆ ಯುದ್ಧದಲ್ಲಿ ಅಮಿತ
ಪರಾಕ್ರಮ ಸಾಹಸದಿಂದ ವಿಪರೀತವಾಗಿ ತೊಡಗಿಕೊಂಡ ಯುದ್ಧಗುರು ದ್ರೋಣರಿಂದ ,
ಹತ್ತುಸಾವಿರ ರಥಿಕರ,ಹತ್ತು ಪಟ್ಟು ಪದಾತಿಗಳ,
ಹತ್ತು ಸಾವಿರ ಕುದುರೆಗಳ,ಹತ್ತು ಸಾವಿರ ಆನೆಗಳ ವಧ .
ತಥಾ ವಿರಾಟದ್ರುಪದೌ
ಶರಾಭ್ಯಾಂ ನಿನಾಯ ಲೋಕಂ ಪರಮಾಜಿಮದ್ಧ್ಯೇ ।
ತತೋ ವಿಜಿತ್ಯೈವ ಗುರೋಃ ಸುತಾದೀನ್ ಧೃಷ್ಟದ್ಯುಮ್ನಂ ಭೀಮಸೇನೋ ಜುಗೋಪ
॥೨೬.೨೭೭ ॥
ಹಾಗೆಯೇ
ದ್ರೋಣಾಚಾರ್ಯರು ಒಂದು ಬಾಣದಿಂದ ವಿರಾಟ,
ಇನ್ನೊಂದರಿಂದ
ದ್ರುಪದನನ್ನು ಯಮಪುರಿಗೆ ಕಳುಹಿಸಿದ ನೋಟ.
ಆನಂತರ ಗುರುಪುತ್ರ
ಅಶ್ವತ್ಥಾಮ ಮತ್ತು ಇತರರನ್ನು ಗೆದ್ದ ಭೀಮ,
ಕೈಗೊಳ್ಳುತ್ತಾನೆ
ಧೃಷ್ಟದ್ಯುಮ್ನನನ್ನು ರಕ್ಷಿಸುವ ಯುದ್ಧನಡೆಯ ನೇಮ .
ಧೃಷ್ಟದ್ಯುಮ್ನೋ
ಭೀಮಸೇನಾಭಿಗುಪ್ತೋ ದ್ರೋಣಂ ಹನ್ತುಂ ಯತ್ನಮುಚ್ಚೈಶ್ಚಕಾರ ।
ನಿವಾರಯಾಮಾಸ ಗುರುಃ
ಶರೌಘೈರ್ಧೃಷ್ಟದ್ಯುಮ್ನಂ ಸೋSಪಿ ತಂ ಸಾಯಕೇನ ।
ವಿವ್ಯಾಧ ತೇನಾಭಿಹತಃ ಸ
ಮೂರ್ಚ್ಛಾಮವಾಪ ವಿಪ್ರೋ ನಿಷಸಾದ ಚಾSಶು ॥೨೬.೨೭೮ ॥
ಭೀಮಬೆಂಬಲದಿಂದ
ಧೃಷ್ಟದ್ಯುಮ್ನ ದ್ರೋಣರನ್ನು ಕೊಲ್ಲಲು ಬಹಳ ಪ್ರಯತ್ನ ಮಾಡಿದ.
ದ್ರೋಣಾಚಾರ್ಯ ಬಾಣಗಳ
ಸಮೂಹದಿಂದ ಧೃಷ್ಟದ್ಯುಮ್ನನನ್ನು ತಡೆದು ನಿಲ್ಲಿಸಿದ.
ಧೃಷ್ಟದ್ಯುಮ್ನ ಕೂಡಾ
ದ್ರೋಣಾಚಾರ್ಯರನ್ನು ಬಾಣದಿಂದ ಹೊಡೆದ.
ಅದರ ಗಾಢಹೊಡೆತದಿಂದ
ದ್ರೋಣಾಚಾರ್ಯ ಮೂರ್ಛೆಹೊಂದಿ ಬಿದ್ದ.
ಧೃಷ್ಟದ್ಯುಮ್ನಃ
ಸತ್ವರಂ ಖಡ್ಗಚರ್ಮ್ಮಣೀ ಆದಾಯ ತಸ್ಯಾSರುರುಹೇ ರಥೋತ್ತಮಮ್ ।
ಸಞ್ಜ್ಞಾಮವಾಪ್ಯಾಥ
ಗುರುಃ ಶರೌಘೈಃ ಪ್ರಾದೇಶಮಾತ್ರೈರ್ವ್ಯರ್ಥಯಾಮಾಸ ತಂ ಚ ॥೨೬.೨೭೯ ॥
ಆಗ ಧೃಷ್ಟದ್ಯುಮ್ನ
ವೇಗದಲ್ಲಿ ಕತ್ತಿ-ಗುರಾಣಿಗಳನ್ನು ಹಿಡಿದುಕೊಂಡ,
ತನ್ನ ರಥದಿಂದಿಳಿದು, ವೈರಿ ದ್ರೋಣಾಚಾರ್ಯರ
ರಥವನ್ನೇರಿದ.
ಆ ಸಮಯದಲ್ಲಿ
ದ್ರೋಣಾಚಾರ್ಯರು ಎಚ್ಚೆತ್ತುಕೊಳ್ಳುತ್ತಾರೆ,
ಒಂದು ಅಂಗುಲದ
ಬಾಣಗಳಿಂದ ಅವನ ಚುಚ್ಚಿ ಓಡಿಸುತ್ತಾರೆ.
ಸ
ತೈರಥಿವ್ಯಥಿತಸ್ತದ್ರಥಾಚ್ಚ ಪರಾವೃತ್ತಃ ಸ್ವಂ ರಥಮಾರುರೋಹ ।
ಸುಸಂರಬ್ಧೌ ತೌ ಪುನರೇವ
ಯುದ್ಧಂ ಸಞ್ಚಕ್ರತುರ್ವೃಷ್ಟಶರಾಮ್ಬುಧಾರೌ ॥೨೬.೨೮೦ ॥
ಧೃಷ್ಟದ್ಯುಮ್ನನು ಆ ಬಾಣಗಳಿಂದ
ಗಾಯಗೊಂಡ, ದ್ರೋಣರ
ರಥದಿಂದ ಇಳಿದು, ತನ್ನ ರಥವನ್ನೆರಿದ.
ಮತ್ತೆ ಅವರಿಬ್ಬರಲ್ಲೂ
ಅಗಾಧ ಕೋಪ, ಆರಂಭಿಸಿದರು
ಬಾಣಮಳೆಯ ಪ್ರತಾಪ .
ನಿವಾರ್ಯ್ಯ ಶತ್ರುಂ ಸ
ಶರೈರ್ಬ್ರಹ್ಮಾಸ್ತ್ರಮಸೃಜದ್ ದ್ವಿಜಃ ।
ತೇನ ಸನ್ದಾಹಯಾಮಾಸ
ಪಾಞ್ಚಾಲಾನ್ ಸುಬಹೂನ್ ರಣೇ ॥೨೬.೨೮೧ ॥
ಆ ದ್ರೋಣರು ಬಾಣಗಳಿಂದ
ಶತ್ರುಗಳನ್ನು ತಡೆಯುತ್ತಾರೆ,
ಬ್ರಹ್ಮಾಸ್ತ್ರವನ್ನು
ಪಾಂಡವ ಸೇನೆಯ ಮೇಲೆ ಪ್ರಯೋಗಿಸುತ್ತಾರೆ.
ಆ ಬ್ರಹ್ಮಾಸ್ತ್ರದಿಂದ
ಯುದ್ಧದಲ್ಲಿ ಅಧಿಕ ಪಾಂಚಾಲರ ಸುಡುತ್ತಾರೆ .
ಪುರುಜಿತ್
ಕುನ್ತಿಭೋಜಶ್ಚ ತೇನಾನ್ಯೇ ಚ ಹತಾಸ್ತದಾ ।
ಭೀಮೋSರ್ಜ್ಜುನಃ; ಸಾತ್ಯಕಿಶ್ಚ ಪರ್ಯ್ಯಾಯೇಣ ಗುರೋಃ ಸುತಮ್ ॥೨೬.೨೮೨ ॥
ದೂರತೋ
ವಾರಯಾಮಾಸುರ್ಮ್ಮಹತ್ಯಾ ಸೇನಯಾ ಸಹ ।
ಕರ್ಣ್ಣದುರ್ಯ್ಯೋಧನಾದೀಂಶ್ಚ
ಶಲ್ಯಂ ಭೋಜಂ ಕೃಪಂ ತಥಾ ॥೨೬.೨೮೩ ॥
ಭೀಮಾರ್ಜ್ಜುನೌ ಶರೌಘೇಣ
ವಾರಯಾಮಾಸತೂ ರಣೇ ।
ತತ್ರ ಭೀಮೋ ಗಜಾನೀಕಂ
ಜಯತ್ಸೇನಂ ಚ ಮಾಗಧಮ್ ॥೨೬.೨೮೪ ॥
ಜಘಾನ ಸುಬಹೂಂಶ್ಚೈವ ಮಾಗಧಾನಾಂ
ರಥವ್ರಜಾನ್ ।
ಅಥ ಮಾಳವರಾಜಸ್ಯ
ತ್ವಶ್ವತ್ಥಾಮಾಭಿದಂ ಗಜಮ್ । ॥೨೬.೨೮೫ ॥
ಭೀಮಸೇನಹತಂ ದೃಷ್ಟ್ವಾ
ವಾಸುದೇವಪ್ರಚೋದಿತಃ ।
ಅಶ್ವತ್ಥಾಮಾ ಹತ ಇತಿ
ಪ್ರಾಹ ರಾಜಾ ಯುಧಿಷ್ಠಿರಃ ॥೨೬.೨೮೬ ॥
ದ್ರೋಣಾಚಾರ್ಯರಿಂದ
ಪುರುಜಿತ್, ಕುಂತಿಭೋಜ
ಹಾಗೂ ಇತರ ಬಹಳ ಜನ ಸಾಯುತ್ತಾರೆ.
ದ್ರೋಣರ ಸಂಹರಿಸುವ
ತಂತ್ರ ರೂಪಿಸಿ ಭೀಮಸೇನ,ಅರ್ಜುನ,
ಸಾತ್ಯಕಿ, ಇವರೆಲ್ಲರೂ ಒಟ್ಟಾಗುತ್ತಾರೆ.
ಒಬ್ಬೊಬ್ಬರೂ ದೊಡ್ಡ
ಸೇನೆಯೊಡಗೂಡಿ ಅಶ್ವತ್ಥಾಮಾಚಾರ್ಯರನ್ನು
ದೂರದಲ್ಲಿಯೇ ತಡೆಯುತ್ತಾರೆ.
ಭೀಮಾರ್ಜುನರು ಕರ್ಣ, ದುರ್ಯೋಧನ, ಶಲ್ಯ, ಕೃತವರ್ಮ, ಕೃಪ,
ಇವರೆಲ್ಲರನ್ನೂ ಕೂಡಾ
ದೂರದಿ ತಡೆಯುತ್ತಾರೆ.
ಆ ಯುದ್ಧದಲ್ಲಿ ಭೀಮನು
ಬಹಳ ಆನೆಗಳಪಡೆ, ಮಾಗದದೇಶದ
ಜಯತ್ಸೇನನನ್ನೂ ಕೊಂದ.
ಹಾಗೇ ಬಹಳ ಜನ ಜರಾಸಂಧನ
ಪಕ್ಷದವರನ್ನು ಯುದ್ಧದಲ್ಲಿ ಎದುರಿಸಿ ಕೊಂದು ಹಾಕಿದ.
ಸ್ವಲ್ಪ ಹೊತ್ತಾದಮೇಲೆ, ಮಾಳವರಾಜನ ಅಶ್ವತ್ಥಾಮ ಎಂಬ
ಆನೆಯನ್ನು ಭೀಮಸೇನ ಸಾಯಿಸುತ್ತಾನೆ,
ಅದನ್ನ ಕಂಡ ಕೃಷ್ಣ
ಯುಧಿಷ್ಠಿರನ ಪ್ರಚೋದಿಸಿ ಅವನಿಂದ ಹೇಳಿಸುತ್ತಾನೆ ‘ಅಶ್ವತ್ಥಾಮ ಸತ್ತಿದ್ದಾನೆ’.
No comments:
Post a Comment
ಗೋ-ಕುಲ Go-Kula