Sunday 25 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 27: 17-32

 

ವಿನ್ದಾನುವಿನ್ದಾವಥ ಕೈಕಯೌ ರಣೇ  ಸಮಾಸದತ್ ಸಾತ್ಯಕಿರುಗ್ರವಿಕ್ರಮಃ ।

ತಯೋರಮುಷ್ಯಾಭವದುಗ್ರವೈಶಸಂ ಪ್ರವರ್ಷತೋರುತ್ತಮಸಾಯಕಾನ್ ಬಹೂನ್ ॥೨೭.೧೭॥

 

ಇನ್ನೊಂದು ಕಡೆ ಪರಾಕ್ರಮಿಯಾದ ಸಾತ್ಯಕಿಯು ವಿಂದಾನುವಿಂದ ಎನ್ನುವ ಕೇಕಯರನ್ನು ಯುದ್ಧದಲ್ಲಿ ಎದುರಾದ,

ಅವರ ಮೇಲೆ ಅತ್ಯುತ್ತಮ ಬಾಣಮಳೆಗರೆದು ಅವರ ಮೇಲೆ ಉಗ್ರವಾಗಿರುವ ಯುದ್ಧವನ್ನು ಮಾಡಿದ.

 

ತಾಭ್ಯಾಂ ನಿರುದ್ಧಃ ಸಹಸಾ ಜಹಾರ ತತ್ರಾನುವಿನ್ದಸ್ಯ ಶಿರೋSಥ ವಿನ್ದಃ ।

ಯುಯೋಧ ಶೈನೇಯಮಥಾರಥಾವುಭೌ ಪರಸ್ಪರಂ ಚಕ್ರತುರುತ್ತಮಾಹವೇ ॥೨೭.೧೮॥

 

ಅವರಿಬ್ಬರಿಂದ ತಡೆಯಲ್ಪಟ್ಟ ಸಾತ್ಯಕಿ ತತ್ಕ್ಷಣದಲ್ಲಿ ಅನುವಿಂದನ ತಲೆ ಕತ್ತರಿಸಿದ.                        ಆನಂತರ ಎದುರಾದ ವಿಂದ ಸಾತ್ಯಕಿಯ ಮೇಲೇರಿ ಬಂದು ಯುದ್ಧದಿ ಹೋರಾಡಿದ .

ಇಬ್ಬರಲ್ಲಿ ನಡೆಯಿತು ಕದನ, ಪರಸ್ಪರ ಆದರು ರಥವಿಹೀನ.

 

ತತಶ್ಚ ಚರ್ಮ್ಮಾಸಿಧರೌ ಪ್ರಚೇರತುಃ ಶ್ಯೇನೌ ಯಥಾSಕಾಶತಳೇ ಕೃತಶ್ರಮೌ ।

ನಿಕೃತ್ಯ ಚಾನ್ಯೋನ್ಯಮುಭೌ ಚ ಚರ್ಮ್ಮಣೀ ವರಾಸಿಪಾಣೀ ಯುಗಪತ್ ಸಮೀಯತುಃ ॥೨೭.೧೯॥

 

ತದನಂತರ ಅವರಿಬ್ಬರಲ್ಲಿ ಕತ್ತಿ-ಗುರಾಣಿಗಳನ್ನು ಧರಿಸಿ ಹೋರಾಟ,

ಆಕಾಶದಲ್ಲಿ ಮಾಂಸಕ್ಕಾಗಿ ಎರಡು ಗಿಡುಗಗಳು ಕಚ್ಚಾಡುವಂಥ ಆಟ.

ಪರಸ್ಪರವಾಗಿ ಗುರಾಣಿಗಳನ್ನು ಕತ್ತರಿಸಿಕೊಂಡರು, ಕೇವಲ ಕತ್ತಿಯುಳ್ಳವರಾಗಿ ಒಟ್ಟಿಗೇ ಎದುರಾದರು.

 

ತತ್ರಾಪಹಸ್ತೇನ ಶಿರಃ ಸಕುಣ್ಡಲಂ ಜಹಾರ ವಿನ್ದಸ್ಯ ಮೃಧೇ ಸ ಸಾತ್ಯಕಿಃ ।

ನಿಹತ್ಯ ತಂ ಬನ್ಧುಜನೈಃ ಸುಪೂಜಿತೋ ಜಗಾಮ ಶತ್ರೂನಪರಾನ್ ಪ್ರಕಮ್ಪಯನ್ ॥೨೭.೨೦॥

 

ಸಾತ್ಯಕಿ ತನ್ನ ಕೈಯಿಂದ ವಿಂದನ ತಲೆ ಹಿಡಿದು, ಕುಂಡಲಸಹಿತವಾದ ಅವನ ಕತ್ತನ್ನು ಕತ್ತರಿಸಿದ.  ವಿಂದಾನುವಿಂದರನ್ನು ಕೊಂದು ಬಂಧುಗಳಿಂದ ಸತ್ಕೃತನಾದ ಸಾತ್ಯಕಿ,ಭೀತ ಶತ್ರುಗಳತ್ತ ನಡೆದ.

 

ಕೃಪಮಾಯಾನ್ತಮೀಕ್ಷ್ಯೈವ ತಪಸಾ ಮಾಂ ಪ್ರಪೀಡಯೇತ್ ।

ಇತಿ ಮತ್ವಾ ಪಾರ್ಷತಸ್ತು ಭೀಮಂ ಶರಣಮೇಯಿವಾನ್ ॥೨೭.೨೧॥

 

 

ಇತ್ತ ಧೃಷ್ಟದ್ಯುಮ್ನ ಬರುತ್ತಿರುವ ಕೃಪಾಚಾರ್ಯರ ನೋಡಿದ,

ಅವರ ತಪೋಬಲದಿಂದ ತನ್ನ ಪೀಡಿಸಬಹುದು ಎಂದು ಹೆದರಿದ,

ರಕ್ಷಣೆ ಬಯಸಿ ಭೀಮ ಇದ್ದಲ್ಲಿಗೆ ಧೃಷ್ಟದ್ಯುಮ್ನ ಹೋಗಿ ಸೇರಿದ.

 

ಕರ್ಣ್ಣಂ ಸಮನ್ತಾತ್ ಪ್ರತಿಕಾಲಯನ್ತಂ ವರೂಥಿನೀಮಿನ್ದ್ರಸುತಃ ಸಮಭ್ಯಯಾತ್ ।

ಕ್ಷಣಾತ್ ತಮಾಜೌ ವಿರಥಂ ಚ ಚಕ್ರೇ ತತೋSಪಹಾರಂ ಸ ಚಕಾರ ಚಮ್ವಾಃ ॥೨೭.೨೨॥

 

ಇನ್ನೊಂದೆಡೆ ಎಲ್ಲಾ ಕಡೆಯಿಂದ ಸೇನೆಯನ್ನು ನಾಶಮಾಡುತ್ತಿದ್ದ ಕರ್ಣ,

ಅರ್ಜುನ ಅವನಿಗೆದುರಾಗಿ ಕೆಲವೇ ಕ್ಷಣದಲ್ಲಿ ಮಾಡಿದನವನ ರಥಹೀನ.

ತದನಂತರ ಕರ್ಣ ಮುಕ್ತಾಯ ಮಾಡಿದ ಯುದ್ಧವನ್ನು ಹದಿನಾರನೇ ದಿನ.

 

ಪರಾಜಿತಃ ಸಂಯತಿ ಸೂರ್ಯ್ಯಸೂನುಃ ಸುತೇನ ಶಕ್ರಸ್ಯ ಸ ಧಾರ್ತ್ತರಾಷ್ಟ್ರಮ್ ।

ಜಗಾದ ಬಾಹುಂ ಪ್ರತಿಗೃಹ್ಯ ಪಾರ್ತ್ಥೋ ಜಿಗಾಯ ಮಾಮನ್ಯಮನಸ್ಕಮಾಜೌ ॥೨೭.೨೩॥

 

ಯುದ್ಧದಲ್ಲಿ ಅರ್ಜುನನಿಂದ ಸೋತುಹೋದ, ಸೂರ್ಯಪುತ್ರ ಕರ್ಣ ದುರ್ಯೋಧನನ  ಕೈ ಹಿಡಿದುಕೊಂಡು ಹೇಳಿದ-, ನನ್ನ ಮನಸ್ಸನ್ನು ಬೇರೆಲ್ಲೋ ನೆಟ್ಟಿರುವಾಗ ಅರ್ಜುನನು ನನ್ನನ್ನು ಯುದ್ಧದಲ್ಲಿ ಗೆದ್ದ.

 

ಕಾಮಂ ರಥೋ ಮೇ ಧನುರಪ್ಯಭೇದ್ಯಂ ದತ್ತಂ ಭೃಗೂಣಾಮಧಿಪೇನ ದಿವ್ಯಮ್ ।

ಯನ್ತಾ ನ ತಾದೃಙ್ ಮಮ ಹರಿಃ ಶಲ್ಯೋ ಯದಿ ಸ್ಯಾತ್ ತ್ವದರಿಂ ನಿಹನ್ಯಾಮ್ ॥೨೭.೨೪॥

 

ಭಾರ್ಗವ ವಂಶೋತ್ತಮನಾದ ಗುರು ಪರಶುರಾಮನ ದಯೆ,

ಆತನಿಂದ ನನಗೆ ಅಲೌಕಿಕ ಧನುಸ್ಸು, ಒಳ್ಳೇ ರಥ ಕೊಡಲ್ಪಟ್ಟಿವೆ .

ಯಾವರೀತಿಯಾಗಿ ಶ್ರೀಕೃಷ್ಣ  ಅರ್ಜುನನ ಸಾರಥಿಯಾಗಿ ಎಲ್ಲವನ್ನೂ ನೋಡಿಕೊಳ್ಳುತ್ತಾನೆ,

ಅಂಥ ಸಾರಥಿ ನನಗಿಲ್ಲ,ಒಮ್ಮೆ ಶಲ್ಯ ನನಗೆ ಸಾರಥಿ ಆದರೆ ಶತ್ರು ಅರ್ಜುನನನ್ನು ಕೊಲ್ಲುತ್ತೇನೆ.

 

ಇತೀರಿತೇ ಸೌತ್ಯಕೃತೇ ಸ ಶಲ್ಯಂ ಪ್ರೋವಾಚ ಸ ಕ್ರುದ್ಧ ಇವಾಭವತ್ ತದಾ ।

ದುರ್ಯ್ಯೋಧನೋ ರಥಿನಃ ಸಾರಥೇಸ್ತು ವ್ಯಾವರ್ಣ್ಣಯನ್ನುತ್ತಮತಾಮಶಾಮಯತ್ ॥೨೭.೨೫॥

 

ಈರೀತಿಯಾಗಿ ಕರ್ಣ ದುರ್ಯೋಧನಗೆ ಹೇಳಿದಾಗ,

ಕೌರವ ಕರ್ಣನ ಸಾರಥಿಯಾಗೆಂದು ಶಲ್ಯನ ಕೇಳುವನಾಗ.

ಆಗ ಶಲ್ಯರಾಜ ಮುನಿಸಿಕೊಂಡವನಂತೆ ಕಾಣುತ್ತಾನೆ,

ಕೌರವ ರಥಿಕನಿಗಿಂತ ಸಾರಥಿಯ ಉತ್ತಮತ್ವ ಹೇಳುತ್ತಾನೆ,

ಶಲ್ಯಗೆ ವಿವರಿಸಿ ಹೇಳುತ್ತಾ ಅವನ ಸಮಾಧಾನ ಮಾಡುತ್ತಾನೆ .

 

ಬುದ್ಧ್ಯಾ ಬಲೇನ ಜ್ಞಾನೇನ ಧೈರ್ಯ್ಯಾದ್ಯೈರಪಿ ಯೋSಧಿಕಃ ।

ರಥಿನಃ ಸಾರಥಿಃ ಸ ಸ್ಯಾದರ್ಜ್ಜುನಸ್ಯ ಯಥಾ ಹರಿಃ ॥೨೭.೨೬॥

 

ಯಥಾ ಶಿವಸ್ಯ ಬ್ರಹ್ಮಾSಭೂದ್ ದಹತಸ್ತ್ರಿಪುರಂ ಪುರಾ ।

ಇತ್ಯಾದಿವಾಕ್ಯೈಃ ಸಂಶಾನ್ತ ಇವ ಶಲ್ಯೋSಸ್ಯ ಸಾರಥಿಃ ॥೨೭.೨೭॥

 

ಯಾರು ಸಹಜ ಬುದ್ಧಿ, ಬಲ, ಜ್ಞಾನ, ಧೈರ್ಯ ಮೊದಲಾದವುಗಳಿಂದ, ರಥಿಕನಿಗಿಂತ ಉತ್ತಮ; ಅಂಥವನೇ ಸಾರಥಿಯಾಗುತ್ತಾನೆ ಎಂಬುದು ಇತಿಹಾಸದಿಂದ ಕಂಡುಬರುವ ನಿಯಮ.

ಹೇಗೆ ಅರ್ಜುನನಿಗಿಂತ ಅಧಿಕನಾದ ಕೃಷ್ಣ  ಸಾರಥಿ ಆಗಿರುವನೋ,

ಹೇಗೆ ತ್ರಿಪುರಾಸುರರ ವಧೆಯಲ್ಲಿ ಶಿವನಿಗೆ ಬ್ರಹ್ಮ ಸಾರಥಿಯಾದನೋ,

ಅದೇ ರೀತಿ ಕರ್ಣನಿಗಿಂತ ಸಾರಥಿಯಾಗಿ ನೀನು ಉತ್ತಮನಾದವನೋ,

ಎಂಬಿತ್ಯಾದಿಯಾಗಿ ದುರ್ಯೋಧನ ಹೇಳುತ್ತಾನೆ, ಶಲ್ಯ,ಸಮಾಧಾನಗೊಂಡಂತೆ ಸಾರಥಿಯಾಗುತ್ತಾನೆ.

 

ಬಭೂವ ತೇನ ಸಹಿತಃ ಸೇನಾಂ ವ್ಯೂಹ್ಯ ರವೇಃ ಸುತಃ ।

ಗಚ್ಛನ್ ಯುದ್ಧಾಯ ದರ್ಪ್ಪೇಣ ಪ್ರಾಹ  ಯೋ ಮೇರ್ಜ್ಜುನಂ ಪುಮಾನ್ ॥೨೭.೨೮॥

 

ದರ್ಶಯೇತ್ ತಸ್ಯ ದಾಸ್ಯಾಮಿ ಪ್ರೀತೋ ವಿತ್ತಮನರ್ಗ್ಗಳಮ್ ।

ಇತಿ ಬ್ರುವನ್ತಂ ಬಹುಶಃ ಪ್ರಾಹ ಶಲ್ಯಃ ಪ್ರಹಸ್ಯ ಚ  ॥೨೭.೨೯॥

 

ಯುದ್ಧದ ಹದಿನೇಳನೇ ದಿನ ಶಲ್ಯಸಮೇತನಾದ ಸೂರ್ಯಪುತ್ರ ಕರ್ಣ,

ತನ್ನ ಸೇನೆಯನ್ನು ಆಯಕಟ್ಟಿನಲ್ಲಿ ನಿಲ್ಲಿಸುತ್ತಾನೆ ಯುದ್ಧದ ಕಾರಣ,

ಜಂಬದಿ ಹೇಳುವ: ಅರ್ಜುನನ ತೋರಿದವಗೆ ಕೊಡುವೆ ಅಮಿತ ಹಣ.

ಈರೀತಿಯಾಗಿ ಕರ್ಣ ಪದೇಪದೇ ಹೇಳುತ್ತಾನೆ,                

ಶಲ್ಯ ನಕ್ಕು ಅವನ ಉದ್ದೇಶಿಸಿ ಹೇಳುತ್ತಾನೆ-.

 

ನಿವಾತಕವಚಾ ಯೇನ ಹತಾ ದಗ್ಧಂ ಚ ಖಾಣ್ಡವಮ್ ।

ಕೋ ನಾಮ ತಂ ಜಯೇನ್ಮರ್ತ್ತ್ಯೋ ದೃಷ್ಟೋ ವೋSಪಿ ಸ ಗೋಗ್ರಹೇ ॥೨೭.೩೦॥

 

ಯಾರಿಂದ ಆಯಿತೋ ನಿವಾತಕವಚರ ಮರಣ,  ಯಾರಿಂದ ಆಯಿತೋ ಖಾಂಡವವನ ದಹನ,

ಅಂತಹ ಅರ್ಜುನನನ್ನು ಯಾವ ಮನುಷ್ಯ ತಾನೇ ಗೆದ್ದಾನು?

ಗೋಗ್ರಹಣದ ಕಾಲದಲ್ಲಿ ಅರ್ಜುನ ಪರಾಕ್ರಮವ ಕಂಡಿಲ್ಲವೇನು?

 

ಕಾಕಗೋಮಾಯುಧರ್ಮ್ಮಾ ತ್ವಂ ಹಂಸಸಿಂಹೋಪಮಂ ರಣೇ ।

ಮಾ ಯಾಹಿ ಪಾರ್ತ್ಥಂ ಮಾ ಯಾಹಿ ಹತೋSನೇನ ಯಮಕ್ಷಯಮ್ ॥೨೭.೩೧॥

 

ನೀನೋ, ಕಾಗೆಯಂತೆ ನರಿಯಂತೆ ಇರುವವನು, ಹಂಸದಂತೆ, ಸಿಂಹದಂತೆ  ಇರುವ ಅರ್ಜುನನು.  ಅವನಿಗೆದುರಾಗಿ ನೀನು ಹೋಗಬೇಡ. ಅವನಿಂದ ಸತ್ತು ಯಮಪುರಿಗೆ ಹೋಗಬೇಡ.

 

ಇತ್ಯುಕ್ತೇ ರವಿಜೋ ಮದ್ರಾನ್ ನಿತರಾಂ ಪರ್ಯ್ಯಕುತ್ಸಯತ್ ।

ಶಲ್ಯೋSಪಿ ಸರ್ವದೇಶೇಷು ನೀಚಮದ್ಧ್ಯೋತ್ತಮಾ ನರಾಃ ।

ಸನ್ತೀತ್ಯುಕ್ತ್ವಾSಸ್ಯ ಸಾರಥ್ಯಂ ಚಕ್ರೇ ಪಾರ್ತ್ಥಹಿತೇಪ್ಸಯಾ ॥೨೭.೩೨॥

 

ಈರೀತಿಯಾಗಿ ಶಲ್ಯರಾಜ ಹೇಳಿದಾಗ ,

ಕರ್ಣ ಮದ್ರದೇಶದವರ ಬೈಯ್ವನಾಗ .

ಆಗ ಶಲ್ಯ ಹೇಳುವ, ಎಲ್ಲಾ ದೇಶದಲ್ಲೂ ಇರುತ್ತಾರೆ ನೀಚ-ಅಧಮ-ಉತ್ತಮ ಜನ,

ಪಾಂಡವರಿಗೆ  ಹಿತವಾಗಬೇಕು ಎಂಬ ಇಚ್ಛೆಯಿಂದ ಮಾಡಿದ ಕರ್ಣ ಸಾರಥ್ಯವನ್ನ.

No comments:

Post a Comment

ಗೋ-ಕುಲ Go-Kula