Tuesday, 19 April 2016

ಹಳ್ಳಿಗರ "ಕಣ್ಣಾಮುಚ್ಚಾಲೆ" ಆಟದಲ್ಲಿ ರಾಮಾಯಣ.

ನೆನಪಿದೆಯೇ ಬಂಧುಗಳೇ ? ನಾವೆಲ್ಲ ಚಿಕ್ಕವರಿದ್ದಾಗ ಒಂದು ಆಟ ಆಡುತ್ತಿದ್ದೆವು... ಅದೇ "ಕಣ್ಣಾಮುಚ್ಚಾಲೆ" ಆಟ...

ಅದರ ನಡೆ ಹೀಗಿದೆ :

"ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ... ಬಿಟ್ಟೆ ... "
ಅಂತ ಹೇಳಿಕೊಂಡು ಅನೇಕ ಪುಟ್ಟ ಪುಟ್ಟ ಮಕ್ಕಳೊಂದಿಗೆ ತಾಯಂದಿರು ಆಟವಾಡುತ್ತಿದ್ದರು....

ತಾಯಿಯ ತೊಡೆಯ ಮೇಲೆ ಕುಳಿತುಕೊಂಡ ಮಗುವಿನ ಕಣ್ಣುಗಳನ್ನು ತಾಯಿ ತನ್ನ ಎರಡು ಕೈಗಳಿಂದ ಮುಚ್ಚಿಟ್ಟುಕೊಂಡು, ಮೇಲೆ ತಿಳಿಸಿದ ಸಾಲುಗಳನ್ನು ಹೇಳುವುದು, ಅಷ್ಟರೊಳಗೆ ಉಳಿದ  ಮಕ್ಕಳು ಬಚ್ಚಿಟ್ಟುಕೊಳ್ಳುವುದು, ನಂತರ ಈ ಮಗು ಅವಿತುಕೊಂಡ ಮಕ್ಕಳನ್ನು ಹುಡುಕುವುದು...  ಸಿಕ್ಕಿಬಿದ್ದ ಮಗು ಮತ್ತೆ ತಾಯಿಯ ತೊಡೆಯೇರುವುದು ಹೀಗೆ "ಕಣ್ಣಾಮುಚ್ಚಾಲೆ" ಆಟ ಮುಂದುವರೆಯುವುದು...

ನಮ್ಮ ಹಿಂದಿನವರು ಇಂಥಾ ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಎಂಬುದಕ್ಕೆ ಈ "ಕಣ್ಣಾಮುಚ್ಚಾಲೆ" ಆಟವೇ ಒಂದು ನಿದರ್ಶನ ....

ರಾಮಾಯಣದ  ಒಂದು  ಕಥೆಯ ನಿರೂಪಣೆ ಈ ಮೇಲಿನ ಆಟದಲ್ಲಿದೆ....
ಅದು ಹೇಗೇ 👇👇ನೋಡಿ...

"ಕಣ್ಣಾ ಮುಚ್ಚೆ " -
ಅಂದರೆ, ಅಯೋಧ್ಯೆಯ ದೊರೆ, "ದಶರಥ ಮಹಾರಾಜ " ಕಣ್ಣು ಮುಚ್ಚಲು....


"ಕಾಡೇ ಗೂಡೆ "-
 ಶ್ರೀರಾಮಚಂದ್ರನಿಗೆ ಕಾಡೇ (ಗೂಡಾಯಿತು) ಮನೆಯಾಯಿತು...

"ಉದ್ದಿನಮೂಟೆ" -
ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು ...

"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ.... ಅದೇ "ಉದ್ದಿನ ಮೂಟೆ ಉರುಳೇ ಹೋಯ್ತು" ಎಂಬುದರ ಅರ್ಥ ...

"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ "....

ಸಾತ್ವಿಕನಾದ ವಿಭೀಷಣ  (ರಾವಣನ ತಮ್ಮ ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ...

ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ 
ಬಿಟ್ಟು ಕಳಿಸಿಕೊಡುತ್ತಿದ್ದೇವೆ ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ...

ಈ ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಈ ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು....

ಎಷ್ಟು ಚೆಂದ ನೋಡಿ  ಈ "ಕಣ್ಣಾಮುಚ್ಚಾಲೆ" ಆಟದ ಅರ್ಥ...

ಈಗಿನ ಕಾಲದಲ್ಲೂ ಹಳ್ಳಿಗರ ಬಾಯಲ್ಲಿ ಹೀಗೆಲ್ಲ ರಾಮಾಯಣದ ಕಥೆ ಹರಿದಾಡುತ್ತಿರುವಾಗಆ ತ್ರೇತಾಯುಗದಲ್ಲಿ ಜನಿಸಿದ್ದ (ಭಗವಂತ) "ಶ್ರೀರಾಮಚಂದ್ರ" ಎಂಥಾ ಪ್ರಸಿದ್ಧ ರಾಜನಾಗಿದ್ದ ? ಎಂಥಾ ವ್ಯಕ್ತಿತ್ವ ಹೊಂದಿದ್ದ ? ... ಅದು ನಮ್ಮ ಊಹೆಗೂ ಮೀರಿದ ಸಂಗತಿಯಾಗಿದೆ...

"ರಾಮ, ರಾಮ , ಎಂಬ ಎರಡಕ್ಷರವೇ ಅಧ್ಬುತ "...
ಅದಕ್ಕೆ ದಾಸರು ಸಲಿಗೆಯಿಂದ ಹಾಡಿದ್ದು :
ನೀನ್ಯಾಕೋ !
ನಿನ್ನ ಹಂಗ್ಯಾಕೋ !!
ನಿನ್ನ ನಾಮದ ಬಲವೊಂದಿದ್ದರೆ ಸಾಕೋ...


"ಶ್ರೀರಾಮನವಮಿಯ ಶುಭಾಶಯಗಳು"
(Write up by Shri Harish B.S. - Bannanje Balaga)

No comments:

Post a Comment

ಗೋ-ಕುಲ Go-Kula