Monday, 25 April 2016

Sāra Saṅgama 22

ಸಾರ ಸಂಗಮ  by “ತ್ರಿವೇಣಿ ತನಯ

ವೈವಿಧ್ಯ

ಎನಿತು ಸುಂದರವದು ಸೃಷ್ಟಿಯ ವೈವಿಧ್ಯ,
ತಿಳಿ-ಅದರಲ್ಲೇ ಇದೆ ತರ-ತಮದ ವಿದ್ಯ,
ಹರುಷದಿ ಮಾಡು ಎಲ್ಲ ಅವನಿಗೆ ನೈವೇದ್ಯ,
ಇರುವುದ ಒಪ್ಪಿ ಅವಗರ್ಪಿಸಲಷ್ಟೇ ನೀ ಬಾಧ್ಯ.


ಭ್ರಮೆ-ಜಮೆ

ತಂದದ್ದು ಒಯ್ಯುವುದು ಏನೂ ಇಲ್ಲ,
ಬದುಕು ಪೂರ್ತಿ ಕಲೆ ಹಾಕುತಿರುವೆ ಎಲ್ಲ,
ಬಿಟ್ಟು ಬಿಡು ಭ್ರಮೆ ಮಾಡು ಜ್ಞಾನದ ಜಮೆ,
ಕಳಚು ನೀ ಭ್ರಮೆ-ಕಳಚಿಯಾಳು "ಅಂಗಿ"ಗಳ ರಮೆ.

ನಾಟಕ ರಂಗ

ಯಾರು ಯಾರಿಗೂ ಇಲ್ಲಿ ಸಂಬಂಧವಿಲ್ಲ,
ನಾಟಕ ರಂಗದಲಿ ಸೇರಿರುವರೇ ಎಲ್ಲ,
ಪಾತ್ರ ನಿರ್ವಹಣೆಯದು ಇರಲಿ ಸಮರ್ಪಕ,
ಸಂಭಾವನೆ ಕೊಡುವವನು ಅವನು ನಿಯಾಮಕ.

ತಿಳಿದವರು-ಉಳಿದವರು

ಅಳಿದವರು ಉಳಿದವರು ತಿಳಿದವರ ನೋಡು,
ಅಳಿದಿದ್ದರೂ ಅನವರತ ತಿಳಿದವರದೇ ಹಾಡು,
ಬಾಳ ಸುಳಿಯಲ್ಲಿದ್ದರೂ ತಿಳಿವಿನ ಹಿಂದೆ ಬೀಳು,
ನೀನಳಿದರೂ ತಿಳಿವಿನ ಶಕ್ತಿ ಮೇಲೆತ್ತುವುದು ಕೇಳು.

ಜ್ಞಾನ -ಶಾಶ್ವತ

ರಾಜ ಮಹಾರಾಜರಾಗಿದ್ದವರದೂ ಏನಿಲ್ಲ ಸುಳಿವು,
ಸನ್ಯಾಸಿಗಳ ಬೃಂದಾವನಗಳಿರುವುದೇ ಸಾಕ್ಷಿ-ತಿಳಿವು,
ಜ್ಞಾನದ ಹಂಬಲವದು ಇರಲಿ ಸತತ,
ಜನ್ಮಾಂತರಗಳಾಗಲಿ ಬಿಡುಗಡೆ ಖಚಿತ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula