Saturday 2 April 2016

Sāra Saṅgama 11

ಸಾರ ಸಂಗಮ  by “ತ್ರಿವೇಣಿ ತನಯ

ಭವ ಭಾರ -ಆಗು ಹಗುರ

ಭಾರವದು ನೋಡು ಬಲುವಿಧದಿಂದ ದುರ್ಭರ,
ಏನಾದರೂ ಸಾಧಿಸಲು ಆಗಲೇಬೇಕು ಹಗುರ,
ಹಗುರಾಗುತಲಿ ಸಾಧನೆಯ ಮೆಟ್ಟಿಲುಗಳ ಏರು,
ಜ್ಞಾನಾಮೃತವ ಹೀರುತ್ತ ಬಿಡುಗಡೆಯ ಕೋರು.

ತಪ್ಪೊಪ್ಪಿಕೊಂಡರೆ ನಿನ್ನದೇನು ಹೋಯ್ತು?
ಕಲ್ಮಶ ತೊಲಗಿ ಮನವದು ನಿರಾಳ ಆಯ್ತು,
ಮೈ ಭಾರ ಮನ ಭಾರ ಬದುಕದು ದುರ್ಭರ,
ಮೈ ಮನದ ಕೊಳೆ ನೀಗಿ ಆಗುತಲಿರು ಹಗುರ.

ಒಳಕೆಂಡ --ಮುಖವಾಡ

ಮುಖವಾಡ ಧರಿಸಿ ನೀ ಸಾಧಿಸುವದೇನು?
ಒಳಗಿರುವ ಹೊಲೆಬೆಂಕಿ ಸುಡದೇ ಬಿಟ್ಟೀತೇನು?
ನಿನ್ನ ನೀ "ಬೆತ್ತಲಾಗಿ"ಕಾಣುವುದೇ ಮುಕ್ತಿ,
ಗಳಿಸಲದನು ಸಾಧಿಸು ಹರಿಭಕ್ತಿಯ ಶಕ್ತಿ.

ಭಯ --ಅಜ್ಞಾನದ ಛಾಯ

ಭಯವೆಂಬುದು ಅಜ್ಞಾನದ ನೆರಳು,
ನಿಜಜ್ಞಾನ ಕತ್ತರಿಸುವುದು ಭಯದ ಕೊರಳು,
ತೃಪ್ತ ನಿರ್ಲಿಪ್ತ ಬದುಕಲಿ ಹುಡುಕು ಜ್ಞಾನದ ತಿರುಳು,
ಆತ್ಮಸಖನ ನಂಬಿ ನಡೆದಿರಲು ಯಾತರ ಗೋಳು.

ಖಾಲಿ ಹೊಟ್ಟೆ -ಜ್ಞಾನದ ತಟ್ಟೆ

ಹೊಟ್ಟೆ ಇಟ್ಟುಕೊಂಡರೆ ಖಾಲಿ,
ತಲೆ ಚುರುಕಾಗುವುದು ನೋಡಲ್ಲಿ,
ಸ್ಫುರಣೆಗಳು ಭಗವಂತನ ಕರುಣೆ,
ಹೂಗಳವು ಅವನಪಾದಕೆ ಅರ್ಪಣೆ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula