Friday 18 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 36 - 41

ಸಮಸ್ತದುರ್ಗ್ಗಪ್ರವರೇ ದುರಾಸದಂ ವಿಮಾರ್ಗ್ಗತಾಂ ವಿನ್ಧ್ಯಗಿರಿಂ ಮಹಾತ್ಮನಾಮ್ ।
ಗತಃ ಸ ಕಾಲೋ ಹರಿರಾಡುದೀರಿತಃ ಸಮಾಸದಂಶ್ಚಾಥ ಬಿಲಂ ಮಹಾದ್ಭುತಮ್ ॥೬.೩೬॥

ಕಳೆದುಹೋಗುತಿರಲು ರಾಜ ಸುಗ್ರೀವ ನೀಡಿದ ಕಾಲ,
ಹನುಮಾದಿಗಳಿಂದ ವಿಂಧ್ಯಗಿರಿಯ ಶೋಧನಾ ಫಲ,
ಎದುರಾಯಿತೊಂದು ಅತ್ಯದ್ಭುತವಾದ ಬಿಲ ಅಲ್ಲಿ,
ಕಪಿಗಳೆಲ್ಲಾ ಸೇರಿ ಪ್ರವೇಶ ಮಾಡಿದರು ಅದರಲ್ಲಿ.




ಕೃತಂ ಮಯೇನಾತಿವಿಚಿತ್ರಮುತ್ತಮಂ ಸಮೀಕ್ಷ್ಯ ತತ್ ತಾರ ಉವಾಚ ಚಾಙ್ಗದಮ್ ।
ವಯಂ ನ ಯಾಮೋ ಹರಿರಾಜಸನ್ನಿಧಿಂ ವಿಲಙ್ಘಿತೋ ನಃ ಸಮಯೋ ಯತೋsಸ್ಯ ॥೬.೩೭॥
ಬೃಹಸ್ಪತಿಯ ಅವತಾರವಾದ ಕಪಿ ತಾರ,
ಮನುನಿರ್ಮಿತ ಗುಹೆ ನೋಡಿ ತೆಗೆದ ಉದ್ಗಾರ.
ಅಂಗದ,ಮುಗಿದು ಹೋಗಿದೆ ಸುಗ್ರೀವ ಕೊಟ್ಟ ಅವಧಿ,
ಹೊಂದಲಾರೆವು ನಾವಿನ್ನು ರಾಜ ಸುಗ್ರೀವನ ಸನ್ನಿಧಿ.

ದುರಾಸದೋsಸಾವತಿಚಣ್ಡಶಾಸನೋ ಹನಿಷ್ಯತಿ ತ್ವಾಮಪಿ ಕಿಂ ಮದಾದಿಕಾನ್ ।
ಅಗಮ್ಯಮೇತದ್ ಬಿಲಮಾಪ್ಯ ತತ್ ಸುಖಂ ವಸಾಮ ಸರ್ವೇ ಕಿಮಸಾವಿಹಾsಚರೇತ್ ॥೬.೩೮॥
ಸುಗ್ರೀವನ ಬಳಿ ತೆರಳಿ ಅವನಿಗೆ ತಿಳಿಹೇಳುವುದು ಕಷ್ಟಕರ,
ಆಜ್ಞೆ ಮೀರಿದವರಿಗೆ ಅವನು ಕೊಡುವ ಶಿಕ್ಷೆಯದು ಭಯಂಕರ.
ಅಣ್ಣನ ಮಗನಾದ ನಿನ್ನನ್ನೂ ಅವ ಕೊಲ್ಲಬಲ್ಲ,
ನಮ್ಮನ್ನೂ ಕೊಲ್ಲುವುದರಲ್ಲಿ ಆಶ್ಚರ್ಯವೇ ಇಲ್ಲ.
ನಮಗೀ ಅಗಮ್ಯವಾದ ಬಿಲವೇ ಕ್ಷೇಮಧಾಮ,
ಸುಗ್ರೀವ ನಮ್ಮನ್ನೇನೂ ಮಾಡಲಾರನೆಂಬ ತಾರನ ನೇಮ.

ನಚೈವ ರಾಮೇಣ ಸಲಕ್ಷ್ಮಣೇನ ಪ್ರಯೋಜನಂ ನೋ ವನಚಾರಿಣಾಂ ಸದಾ ।
ನಚೇಹ ನಃ ಪೀಡಯಿತುಂ ಸ ಚ ಕ್ಷಮಃ ತತೋ ಮಮೇಯಂ ಸುವಿನಿಶ್ಚಿತಾ ಮತಿಃ ॥೬.೩೯॥
ನಾವು ಕಾಡುಮೇಡು ತಿರುಗುವ ಕಪಿಗಳು,
ರಾಮಲಕ್ಷ್ಮಣರಿಂದೇನು ಪ್ರಾಯೋಜನ ಹೇಳು.
ನಮ್ಮನ್ನಿಲ್ಲಿ ಪೀಡಿಸಲು ಅವರಲ್ಲ ಸಮರ್ಥ,
ಪ್ರಸಕ್ತ ಕಾಲದಲ್ಲಿ ಈ ನಿರ್ಣಯವೇ ಇತ್ಯರ್ಥ.

ಇತೀರಿತಂ ಮಾತುಲವಾಕ್ಯಮಾಶು ಸ ಆದದೇ ವಾಲಿಸುತೋsಪಿ ಸಾದರಮ್ ।
ಉವಾಚ ವಾಕ್ಯಂ ಚ ನ ನೋ ಹರೀಶ್ವರಃ ಕ್ಷಮೀ ಭವೇಲ್ಲಙ್ಘಿತಶಾಸನಾನಾಮ್ ॥೬.೪೦॥
ಮರುವಿಚಾರ ಮಾಡದ ತಾರನಳಿಯ ಅಂಗದ,
ಭಕ್ತಿಯಿಂದವನ ಮಾತ ಸ್ವೀಕರಿಸುತ್ತಾ ಹೇಳಿದ,
ನಾವು ಸುಗ್ರೀವನ ಆಜ್ಞೆ ಮೀರಿದ್ದೀವಲ್ಲ,
ಅವನೆಂದೂ ನಮ್ಮನ್ನು ಕ್ಷಮಿಸುವುದಿಲ್ಲ.

ರಾಜ್ಯಾರ್ಥಿನಾ ಯೇನ ಹಿ ಫಾತಿತೋsಗ್ರಜೋ ಹೃತಾಶ್ಚ ದಾರಾಃ ಸುನೃಶಂಸಕೇನ ।
ಸ ನಃ ಕಥಂ ರಕ್ಷತಿ ಶಾಸನಾತಿಗಾನ್ ನಿರಾಶ್ರಯಾನ್ ದುರ್ಬಲಕಾನ್ ಬಲೇ ಸ್ಥಿತಃ ॥೬.೪೧॥
ರಾಜ್ಯಾರ್ಥಿಯಾಗಿ ಅಣ್ಣನನ್ನೇ ಕೊಲ್ಲಿಸಿದ,
ಸ್ವಂತ ತನ್ನ  ಅತ್ತಿಗೆಯನ್ನೇ ಅಪಹರಿಸಿದ.
ಅಂತಹಾ ಕ್ರೂರಿಯಾದ ಸುಗ್ರೀವ,
ಆಜ್ಞೆಮೀರಿದ ನಮ್ಮನ್ನೆಂತು ಕಾವ.
ನಾವುಗಳು ನಿರಾಶ್ರಿತ ಮತ್ತು ದುರ್ಬಲ,
ಅವನಿಗಿದೆ ಶ್ರೀರಾಮಚಂದ್ರನ ಬೆಂಬಲ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula