Sunday, 25 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 220 - 223

 ವಾಸಿಷ್ಠಪೇನ ಯದುಪೇನ ಚ ಪಾಣ್ಡವಾನಾಂ ರತ್ನೋತ್ಕರಂ ಕುರು ಪುರಂ ಪುರುಹೂತಪುರ್ಯ್ಯಾಃ  ।

ಸಾದೃಶ್ಯತಸ್ತ್ವಿತಿ ನಿಯುಕ್ತ ಉಭೌ ಪ್ರಣಮ್ಯ ಸರ್ವೇಶ್ವರೌ ಸ ಕೃತವಾಂಶ್ಚ ಪುರಂ ತಥೈವ ॥೧೯.೨೨೦॥

ವಿಶ್ವಕರ್ಮಗೆ ಆಜ್ಞೆ ಮಾಡಿದರು --ವೇದವ್ಯಾಸ ಮತ್ತು ಯಾದವ ಕೃಷ್ಣ,

ಪಾಂಡವರಿಗಾಗಿ ನಿರ್ಮಿಸು ಇಂದ್ರನಮರಾವತಿ ಸದೃಶ ರತ್ನಖಚಿತ ಪಟ್ಟಣ,

ಒಪ್ಪಿದ ವಿಶ್ವಕರ್ಮ ಇಬ್ಬರನೂ ನಮಿಸಿ ಮಾಡಿದ ಭವ್ಯಭವನದ ನಿರ್ಮಾಣ.

 

ದೇಶಂ ಚ ನಾತಿಜನಸಂವೃತಮನ್ಯದೇಶಸಂಸ್ಥೈರ್ಜ್ಜನೈರಭಿಪುಪೂರಿರ ಆಶು ಪಾರ್ತ್ಥಾಃ ।

ತೇಷಾಂ ಗುಣೈರ್ಹರಿಪದಾನತಿಹೇತುತಶ್ಚ ರಾಷ್ಟ್ರಾನ್ತರಾ ಇಹ ಶುಭಾ ವಸತಿಂ ಸ್ಮ ಚಕ್ರುಃ ॥೧೯.೨೨೧॥

ನರಿಲ್ಲದ ಆ ದೇಶಕೆ ಪಾಂಡವರು ಬೇರೆ ದೇಶದ ಜನರ ತುಂಬಿದರು,

ಪಾಂಡವರ ಸದ್ಗುಣ ಹರಿಭಕ್ತಿ ಸಜ್ಜನಿಕೆಗೆ ಜನರು ಆಕರ್ಷಿತರಾಗಿ ಬಂದರು.

ಬೇರೆ ಬೇರೆ ರಾಜ್ಯದ ಸಜ್ಜನರು ಅಲ್ಲಿಗೇ ಬಂದು ವಾಸಕ್ಕಾಗಿ ನೆಲೆಸಿದರು.

 

ಪ್ರಸ್ಥಾಪ್ಯ ದೂರಮನುಜಸ್ಯ ಸುತಾನ್ ಸ ರಾಜಾ ಚಕ್ರೇsಭಿಷೇಕಮಪಿ ತತ್ರ ಸುಯೋಧನಸ್ಯ ।

ದುಃಶಾಸನಂ ಚ ಯುವರಾಜಮಸೌ ವಿಧಾಯ ಮೇನೇ ಕೃತಾರ್ತ್ಥಮಿವ ಚ ಸ್ವಮಶಾನ್ತಕಾಮಃ ॥೧೯.೨೨೨॥

ರಾಜ ಧೃತರಾಷ್ಟ್ರ ತನ್ನ ತಮ್ಮನ ಮಕ್ಕಳ ದೂರ ಕಳಿಸಿದ,

ಹಸ್ತಿನಪುರದಲ್ಲಿ ದುರ್ಯೋಧನನಿಗೆ ಅಭಿಷೇಕ ನಡೆಸಿದ.

ದುಃಶಾಸನನ ಯುವರಾಜನನ್ನಾಗಿ ಮಾಡಿ ಮಾಡಬೇಕಾದ್ದನ್ನ ಮಾಡಿದೆ ಅಂದುಕೊಂಡ,

ಆದರೂ ನಂದಿರಲಿಲ್ಲ ಧೃತರಾಷ್ಟ್ರನ ಒಳಗೆ ಹೊಗೆಯಾಡುತ್ತಿದ್ದ ಇದ್ದ ಕಾಮನೆಯ ಕೆಂಡ.

 

ಪಾರ್ತ್ಥಾಶ್ಚ ತೇ ಮುಮುದುರತ್ರ ವಸಿಷ್ಠವೃಷ್ಣಿವರ್ಯ್ಯೋದಿತಾನಖಿಲತತ್ತ್ವವಿನಿರ್ಣ್ಣಯಾಂಸ್ತು ।

ಶೃಣ್ವನ್ತ ಏವ ಹಿ ಸದಾ ಪೃಥಿವೀಂ ಚ ಧರ್ಮ್ಮಾದ್ ಭುಞ್ಜನ್ತ ಆಶ್ರಿತರಮಾಪತಿಪಾದಯುಗ್ಮಾಃ ॥೧೯.೨೨೩॥

ಇಂದ್ರಪ್ರಸ್ಥದಲ್ಲಿ ಪಾಂಡವರು ಕೇಳುತ್ತಾ ವ್ಯಾಸ ಕೃಷ್ಣರಿಂದ ತತ್ವ ನಿರ್ಣಯ,

ಧರ್ಮರಾಜ್ಯಭಾರ ಮಾಡುತ್ತಾ ಸಂತಸದಿಂದಿದ್ದರು ಹೊಂದಿ ದೈವಪಾದಾಶ್ರಯ.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋ ನಾಮ ಏಕೋನವಿಂಶೋsದ್ಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಅನುವಾದ,

ಪಾಂಡವರಾಜ್ಯಲಾಭ ಹೆಸರಿನ ಹತ್ತೊಂಬತ್ತನೇ ಅಧ್ಯಾಯ,

                                          ಪಾಂಡವ ಪಕ್ಷಪಾತಿ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ ಭಾವ

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 214 - 219

 

ಕೋಶಸ್ಯ ಚಾರ್ದ್ಧಸಹಿತಾಸ್ತು ಯದೈವ ಪಾರ್ತ್ಥಾ ಗಚ್ಛನ್ತಿ ತಾನನುಯಯುರ್ನ್ನಿಖಿಲಾಶ್ಚ ಪೌರಾಃ ।

ಊಚುಶ್ಚ ಹಾ ಬತ ಸುಯೋಧನ ಏಷ ಪಾಪೋ ದೂರೇ ಚಕಾರ ನನು ಪಾಣ್ಡುಸುತಾನ್ ಗುಣಾಢ್ಯಾನ್ ॥೧೯.೨೧೪॥

ಅರ್ಧಕೋಶವ ತೆಗೆದುಕೊಂಡು ಪಾಂಡವರು ತೆರಳುತ್ತಿರಲು,

ಅವರನ್ನು ಅನುಸರಿಸಿ ಹೊರಟರು ನಗರದ ಎಲ್ಲಾ ಪ್ರಜೆಗಳು,

ಅಲ್ಲಿ ಪಾಪಿಷ್ಠ ದುರ್ಯೋಧನ ಪಾಂಡವರ ದೂರ ಮಾಡಿದ ಗೋಳು.

 

ಭೀಮಪ್ರತಾಪಮವಲಮ್ಬ್ಯ Lಕಲಿಙ್ಗಬನ್ಧಾನ್ಮುಕ್ತಃ ಸುತಾಮಪಿ ಹಿ ತಸ್ಯ ಪುರಂ ನಿನಾಯ ।

ದ್ವೇಷ್ಟ್ಯೇವಮಪ್ಯತಿಬಲಾನ್ ಹಿ ಸದೈವ ಪಾರ್ತ್ಥಾನ್ ಯಾಮೋ ವಯಂ ಗುಣಿಭಿರದ್ಯ ಸಹೈವ ಪಾರ್ತ್ಥೈಃ ॥೧೯.೨೧೫॥

ಭೀಮನ ಬಲದಿಂದಲೇ ಕಲಿಂಗಬಂಧನದಿಂದ ಮುಕ್ತನಾದ,

ಕಲಿಂಗರಾಜ ಪುತ್ರಿಯ ತನ್ನ ಪಟ್ಟಣಕೆ ಮದುವೆಗೆ ತಂದ.

ಆದರೂ ಶಕ್ತ ಪಾಂಡವರ ಮೇಲೆ ಅವನ ದ್ವೇಷ -ಸೇಡು,

ಜನರೆಂದರು-ಹಿಡಿಯಬೇಕು ಸಾತ್ವಿಕ ಪಾಂಡವರ ಜಾಡು.

 

ಆಜ್ಞಾಪಯತ್ಯಪಿ ಸ ಭೇರಿರವೇಣ ಪಾರ್ತ್ಥಾನ್ ನೈವಾನುಗಚ್ಛತ ಯದಿ ವ್ರಜಥಾನು ವೋsದ್ಯ ।

ವಿತ್ತಂ ಹರಿಷ್ಯ ಇಹ ಸರ್ವಮಪೀತಿ ತಚ್ಚ ಪಾಪಃ ಕರೋತು ನ ವಯಂ ವಿಜಹಾಮ ಪಾರ್ತ್ಥಾನ್॥೧೯.೨೧೬॥

ನ ಪಾಂಡವರ ಅನುಸರಿಸುತ್ತಿರುವುದ ಕೇಳಿದ ದುರ್ಯೋಧನ ಹೊಡೆಸಿದ ಡಂಗೂರ,

ನೀವು ಪಾಂಡವರ ಹಿಂದೆ ಹೊರಟಿರಾದರೆ ನಿಮ್ಮ ಆಸ್ತಿ ವಶಮಾಡಿಕೊಳ್ಳತ್ತೆ ರಾಜ್ಯಾಧಿಕಾರ.

ಜನರೆಂದರು-ಪಾಪಿಷ್ಟ ಅವನೇನಾದರೂ ಮಾಡಲಿ, ನಮ್ಮದು ಪಾಂಡವರ ಬಿಡದ ನಿರ್ಧಾರ.

 

ಸದ್ಭಿರ್ಹಿ ಸಙ್ಗತಿರಿಹೈವ ಸುಖಸ್ಯ ಹೇತುರ್ಮ್ಮೋಕ್ಷ್ಯೈಕಹೇತುರಥ ತದ್ವಿಪರೀತಮನ್ಯತ್ ।

ತಸ್ಮಾದ್ ವ್ರಜೇಮ ಸಹ ಪಾಣ್ಡುಸುತೈರ್ಹಿ ಶಕ್ರಪ್ರಸ್ಥಂ ತ್ವಿತಿ ಸ್ಮ ಧೃತಚೇತಸ ಆಹ ಧಾರ್ಮ್ಮಃ ॥೧೯.೨೧೭॥

ಸಜ್ಜನರ ಸಹವಾಸ ಇಹಲೋಕದ ಸುಖಕ್ಕೆ ಕಾರಣ,

ಇಹ ತ್ಯಜಿಸಿದ ಮೇಲೆ ಮೋಕ್ಷಕ್ಕೂ ಅದುವೇ ಹೂರಣ.

ದುರ್ಜನರ ಸಹವಾಸ ಅದಕ್ಕೆ ತದ್ವಿರುದ್ಧ,

ಎರಡೂ ಕಡೆಯ ದುಃಖಕ್ಕೆ ಅದು ಬದ್ಧ.

ಹಾಗಾಗಿ ಪಾಂಡವರೊಡನೆ ಇಂದ್ರಪ್ರಸ್ಥಕ್ಕೆ ಹೋಗೋಣವೆಂದು ಜನರ ನಿರ್ಧಾರ,

ಇದನ್ನೆಲ್ಲ ಗಮನಿಸಿ ಜನರನ್ನುದ್ದೇಶಿಸಿ ನುಡಿದ ಯಮಪುತ್ರ ಯುಧಿಷ್ಠಿರ.

 

ಪ್ರೀತಿರ್ಯ್ಯದಿ ಸ್ಮ ಭವತಾಂ ಮಯಿ ಸಾನುಜೇsಸ್ತಿ ತಿಷ್ಠಧ್ವಮತ್ರ ಪಿತುರೇವ ಹಿ ಶಾಸನೇ ಮೇ ।

ಕೀರ್ತ್ತಿರ್ಹಿ ವೋsನುಗಮನಾತ್ ಪಿತುರತ್ಯಯೇನ ನಶ್ಯೇನ್ನ ಇತ್ಯನುಸರಧ್ವಮಿಹಾsಮ್ಬಿಕೇಯಮ್ ॥೧೯.೨೧೮॥

ನಿಮ್ಮೆಲ್ಲರಿಗೂ ನನ್ನಲ್ಲಿ, ನಮ್ಮೆಲ್ಲರಲ್ಲಿ ಇರುವುದೇ ಆದರೆ ಪ್ರೀತಿ,

ನೀವು ನನ್ನ ದೊಡ್ಡಪ್ಪ ಧೃತರಾಷ್ಟ್ರನ ಆಳ್ವಿಕೆಯಲ್ಲಿರುವುದು ನೀತಿ.

ನೀವು ಅದನ್ನನುಸರಿಸದಿದ್ದರೆ ನಾಶವಾಗುತ್ತದೆ ಧೃತರಾಷ್ಟ್ರನ ಕೀರ್ತಿ.

ಈರೀತಿಯ ಚಿಂತನೆಯಲ್ಲಿರಲಿ ನಿಮ್ಮ ಯೋಚನೆಯ ದಾರಿ,

ಧೃತರಾಷ್ಟ್ರನ ರಾಜನಾಗಿ ಒಪ್ಪಿಕೊಂಡು ಅವನಾಳ್ವಿಕೆಯಲ್ಲಿ ಇರಿ.

 

ಇತ್ಯೇವ ತೈಃ ಪುರಜನಾ ನಿಖಿಲೈರ್ನ್ನಿಷಿದ್ಧಾಃ ಕೃಚ್ಛ್ರೇಣ ತಸ್ಥುರಪಿ ತಾನ್ ಮನಸಾsನ್ವಗಚ್ಛನ್ ।

ಪ್ರಾಪ್ಯಾಥ ಶಕ್ರಪುರಮಸ್ಮರತಾಂ ಚ ಕೃಷ್ಣೌ ದೇವೇಶವರ್ದ್ದಕಿಮಥಾsಗಮದತ್ರ ಸೋsಪಿ ॥೧೯.೨೧೯॥

ಯುಧಿಷ್ಠಿರನ ಮಾತು ಕೇಳಿ ಪ್ರಜೆಗಳು ಅಲ್ಲೇ ನಿಂತರೂ,

ಮಾನಸಿಕವಾಗಿ ಅವರನನುಸರಿಸಿ ಅವರೊಡನೆ ಇದ್ದರು.

ಪಾಂಡವರು ಖಾಂಡವ ಪ್ರಸ್ಥಕ್ಕೆ ಸೇರಿದರು,

ವ್ಯಾಸಕೃಷ್ಣರು ದೇವಬಡಗಿಯ ನೆನೆದರು,

ನೆನೆದೊಡನೆ ವಿಶ್ವಕರ್ಮ ಬಂದದ್ದ ಕಂಡರು.

[Contributed by Shri Govind Magal]

Thursday, 22 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 206 - 213

 ದುರ್ಯ್ಯೋಧನೇsನುಜಜನೈಃ ಸಹ ತೈರ್ಗ್ಗೃಹೀತೇ ಭೀಷ್ಮಾಮ್ಬಿಕೇಯವಿದುರಾಗ್ರಜವಾಕ್ಯನುನ್ನಃ ।

ಭೀಮೋ ವಿಜಿತ್ಯ ನೃಪತೀನ್ ಸಜರಾಸುತಾಂಸ್ತಾನ್ ಹತ್ವಾ ಸುವಜ್ರಮಮುಚದ್ ಧೃತರಾಷ್ಟ್ರಪುತ್ರಾನ್ ॥೧೯.೨೦೬॥

ತಮ್ಮಂದಿರಿಂದ ಕೂಡಿಕೊಂಡು ಸೆರೆಹಿಡಿಯಲ್ಪಟ್ಟವನಾದ ದುರ್ಯೋಧನ,

ಭೀಷ್ಮ, ಧೃತರಾಷ್ಟ್ರ, ವಿದುರ, ಧರ್ಮರಾಜಾದಿಗಳ ಮಾತಿಗೆ ಕಟ್ಟುಬಿದ್ದ ಭೀಮಸೇನ,

ಜರಾಸಂಧ ಮೊದಲಾದ ರಾಜರುಗಳ ತಾ ಗೆದ್ದ ,

ಸುವಜ್ರನ ಕೊಂದು ಅಂಧಕನ ಮಕ್ಕಳ ಬಿಡಿಸಿದ.

 

ತೇsಪಿ ಸ್ಮ ಕರ್ಣ್ಣಸಹಿತಾ ಮೃತಕಪ್ರತೀಕಾ ನಾಗಾಹ್ವಯಂ ಪುರಮಥಾsಯಯುರಪ್ಯಮೀಷಾಮ್ ।

ದೃಷ್ಟ್ವಾ ವಿರೋಧಮವದನ್ನೃಪತಿಶ್ಚ ಧರ್ಮ್ಮಪುತ್ರಂ ಪುರನ್ದರಕೃತಸ್ಥಲಮಾಶು ಯಾಹಿ ॥೧೯.೨೦೭॥

ಕರ್ಣನಿಂದ ಕೂಡಿರುವ ದುರ್ಯೋಧನಾದಿಗಳ ಹಿಂಡು,

ಹಸ್ತಿನವತಿ ಸೇರಿದರು ಸತ್ತ ಮುಖಗಳ ಹೊತ್ತುಕೊಂಡು.

ಇಷ್ಟಾದರೂ ದುರ್ಯೋಧನನದು ಪಾಂಡವರೆಡೆ ಭಾರೀ ವಿರೋಧ,

ಅದ ಕಂಡ ಧೃತರಾಷ್ಟ್ರ ಧರ್ಮರಾಜಗೆ ನೀ ಇಂದ್ರಪ್ರಸ್ತಕೆ ಹೋಗೆಂದ.

 

ತತ್ರಾರ್ದ್ಧರಾಜ್ಯಮನುಭುಙ್ಕ್ಷ್ವಸಹಾನುಜೈಸ್ತ್ವಂ ಕೋಶಾರ್ದ್ಧಮೇವ ಚ ಗೃಹಾಣ ಪುರಾ ಹಿ ಶಕ್ರಃ ।

ತತ್ರಾಭಿಷಿಕ್ತ ಉತ ಕಞ್ಜಭವಾದಿದೇವೈಸ್ತತ್ರಸ್ಥ ಏವ ಸ ಚಕಾರ ಚಿರಂ ಚ ರಾಜ್ಯಮ್ ॥೧೯.೨೦೮॥

ಅಲ್ಲಿ ನಿನ್ನ ತಮ್ಮಂದಿರೊಡನೆ ಅರ್ಧರಾಜ್ಯವ ಭೋಗಿಸು,

ರಾಜ್ಯದ ಅರ್ಧಭಾಗ ಕೋಶವನ್ನು ಒಯ್ದು ಅನುಭವಿಸು.

ಹಿಂದೆ ಇಂದ್ರ ಬ್ರಹ್ಮಾದಿಗಳಿಂದ ಅಭಿಷಿಕ್ತನಾಗಿದ್ದ,

ಅಭಿಷಿಕ್ತನಾಗಿ ಅಲ್ಲೇ ದೀರ್ಘಕಾಲ ರಾಜ್ಯವಾಳಿದ್ದ.

 

ತ್ವಂ ವೀರ ಶಕ್ರಸಮ ಏವ ತತಸ್ತವೈವ ಯೋಗ್ಯಂ ಪುರಂ ತದತ ಆಶ್ವಭಿಷೇಚಯಾಮಿ ।

ಇತ್ಯುಕ್ತ ಆಹ ಸ ಯುಧಿಷ್ಠಿರ ಓಮಿತಿ ಸ್ಮ ಚಕ್ರೇsಭಿಷೇಕಮಪಿ ತಸ್ಯ ಸ ಆಮ್ಬಿಕೇಯಃ ॥೧೯.೨೦೯॥

ಓ ವೀರಾ, ನೀನಿದ್ದೀಯ ಇಂದ್ರನಿಗೆ ಸಮಾನ,

ಹಾಗಾಗಿ ಯೋಗ್ಯವಾದುದು ನಿನಗೆ ಆ ಪಟ್ಟಣ.

ಧೃತರಾಷ್ಟ್ರನೆಂದ -ನಿನಗೀಗಲೇ ಇಲ್ಲೇ ಮಾಡುತ್ತೇನೆ ಅಭಿಷೇಕ,

ಧರ್ಮರಾಜ ಒಪ್ಪಲು ಅಂಬಿಕೆಯ ಮಗ ಮಾಡಿದ ಅವನ ಅಭಿಷೇಕ.

 

ತಸ್ಯಾಭಿಷೇಕಮಕರೋತ್ ಪ್ರಥಮಂ ಹಿ ಕೃಷ್ಣೋ ವಾಸಿಷ್ಠನನ್ದನ ಉರುರ್ಭವ ಚಕ್ರವರ್ತೀ ।

ಯಷ್ಟಾsಶ್ವಮೇಧನಿಖಿಲಾತ್ಮಕರಾಜಸೂಯಪೂರ್ವೈರ್ಮ್ಮಖೈಃ ಸತತಮೇವ ಚ ಧರ್ಮ್ಮಶೀಲಃ ॥೧೯.೨೧೦॥

ಮೊದಲು ವೇದವ್ಯಾಸರಿಂದ ಯುಧಿಷ್ಠಿರಗೆ ನಡೆಯಿತು ಅಭಿಷೇಕದ ಕಾರ್ಯ,

ಚಕ್ರವರ್ತಿಯಾಗಿ ಅಶ್ವಮೇಧ ರಾಜಸೂಯಗಳ ಮಾಡೆಂದು ಹರಸಿದ ಆರ್ಯ.

 

ಇತ್ಯೇವ ಪಾರ್ಷತಸುತಾಸಹಿತೇsಭಿಷಿಕ್ತೇ ಕೃಷ್ಣೋsಪಿ ವೃಷ್ಣಿವೃಷಭಃ ಸ ತಥಾsಭ್ಯಷಿಞ್ಚತ್ ।

ಏವಂ ಚ ಮಾರುತಿಶಿರಸ್ಯಭಿಷೇಕಮೇತೌ ಸಞ್ಚಕ್ರತುಃ ಸ್ಮ ಯುವರಾಜಪದೇ ಸಭಾರ್ಯ್ಯಮ್ ॥೧೯.೨೧೧॥

ಹೀಗೆ ದ್ರೌಪದೀಸಮೇತ ಧರ್ಮರಾಜಗೆ ನಡೆಯಿತು ಅಭಿಷೇಕ,

ತದನಂತರ ಕೃಷ್ಣನೂ ಮಾಡಿದ ಧರ್ಮರಾಯನ ಪಟ್ಟಾಭಿಷೇಕ.

ಆಮೇಲೆ ಕೃಷ್ಣ ವ್ಯಾಸರಿಂದ ದ್ರೌಪದೀಸಮೇತ ಭೀಮನ ತಲೆಗೆ,

ಅಭಿಷೇಕದೊಂದಿಗೆ ಯುವರಾಜನ ಪದವಿಯ ಪಟ್ಟದ ಕೊಡುಗೆ.

 

ಭೀಮೇ ಚ ಪಾರ್ಷತಸುತಾಸಹಿತೇsಭಿಷಿಕ್ತೇ ತಾಭ್ಯಾಮನನ್ತಸುಖಶಕ್ತಿಚಿದಾತ್ಮಕಾಭ್ಯಾಮ್ ।

ಅನ್ಯೈಶ್ಚ ವಿಪ್ರವೃಷಭೈಃ ಸುಕೃತೇಭಿಷೇಕೇ ಧರ್ಮ್ಮಾತ್ಮಜಾನು ಮುಮುದುರ್ನ್ನಿಖಿಲಾಶ್ಚ ಸನ್ತಃ ॥೧೯.೨೧೨॥

ಧರ್ಮರಾಜನ ಅಭಿಷೇಕಾನಂತರ ದ್ರೌಪದೀಸಹಿತನಾದ ಭೀಮಸೇನ,

ಪಡೆದ ಅನಂತಶಕ್ತ ವ್ಯಾಸ ಕೃಷ್ಣರಿಂದ ರಾಜ್ಯಾಭಿಷೇಕದ ವಿಧಿವಿಧಾನ,

ಸಜ್ಜನರಿಗೆ ಸಂತಸವಾಯ್ತು ಶ್ರೇಷ್ಠ ವಿಪ್ರರಿಂದಾಗಲು ಪಟ್ಟ ಪ್ರದಾನ.

 

ತಸ್ಮಿನ್ ಮಹೋತ್ಸವವರೇ ದಿನಸಪ್ತಕಾನುವೃತ್ತೇ ವಸಿಷ್ಠವೃಷಭೇಣ ಚ ವೃಷ್ಣಿಪೇನ ।

ಕೃಷ್ಣೇನ ತೇ ಯಯುರಮಾ ಪೃಥಯಾ ತಯಾ ಚ ಪಾಞ್ಚಾಲರಾಜಸುತಯಾ ಸ್ಥಲಮಿನ್ದ್ರವಾಸಮ್ ॥೧೯.೨೧೩॥

ಸತತ ಏಳುದಿನಗಳ ಕಾಲ ನಿರಂತರ,

ನಡೆಯಿತಲ್ಲಿ ಶ್ರೇಷ್ಠ ಉತ್ಸವದ ಸಡಗರ.

ವೇದವ್ಯಾಸ ಕೃಷ್ಣ ಕುಂತೀದೇವಿ ಮತ್ತು ದ್ರೌಪದಿ,

ಪಾಂಡವರಕೂಡಿ ಹಿಡಿದರು ಇಂದ್ರಪ್ರಸ್ಥದ ಹಾದಿ.

Wednesday, 21 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 201 -205

 ಉದ್ವಾಹ್ಯ ಕಾಶಿತನಯಾಂ ಗಿರಿಜಾಧಿವಿಷ್ಟಾಂ ಸಾಕ್ಷಾನ್ನರೇಷು ಜನಿತಾಂ ಪ್ರಥಮಾಮಲಕ್ಷ್ಮೀಮ್ ।

ತಸ್ಯಾಂ ಸುತಂ ತ್ವಜನಯತ್ ಪುರ ಆಸ ಯೋsಕ್ಷಃ ಕನ್ಯಾಂ ಪುರಾ ಪ್ರಿಯತಮಾಂ ಚ ಷಡಾನನಸ್ಯ ॥೧೯.೨೦೧॥

ಜ್ಯೇಷ್ಠ ಅಲಕ್ಷ್ಮಿ ಪಾರ್ವತಿಯಿಂದ ಆವಿಷ್ಟಳು,

ಕಾಶೀರಾಜನ ಮಗಳಾಗಿ ಹುಟ್ಟಿ ಬಂದವಳು.

ಅವಳನ್ನು ಮದುವೆಯಾದ ತಾನು ದುರ್ಯೋಧನ,

ಮಗನಾಗಿ ಪಡೆದದ್ದು ಪೂರ್ವದ ಅಕ್ಷಕುಮಾರನನ್ನ.

ಷಣ್ಮುಖನ ಪ್ರಿಯೆಯಾಗಿದ್ದವಳು,

ಈಗವನ ಮಗಳಾಗಿ ಹುಟ್ಟಿದಳು.

 

ಪುತ್ರೋ ಬಭೂವ ಸ ತು ಲಕ್ಷಣನಾಮಧೇಯಃ ಸಾ ಲಕ್ಷಣೇತ್ಯಧಿಕರೂಪಗುಣಾssಸ ಕನ್ಯಾ ।

ತಸ್ಯಾನುಜಾಶ್ಚ ನಿಜಯೋಗ್ಯಗುಣಾ ಅವಾಪುರ್ಭಾರ್ಯ್ಯಾಃ ಪುನಶ್ಚ ಸ ಸುಯೋಧನ ಆಪ ಭಾರ್ಯ್ಯಾಃ ॥೧೯.೨೦೨॥

ಆ ಮಗನ ಹೆಸರಾಯಿತು ಲಕ್ಷಣ,

ಗುಣ ರೂಪಸಿ ಮಗಳಾದಳು ಲಕ್ಷಣಾ.

ದುರ್ಯೋಧನನ ಉಳಿದ ತಮ್ಮಂದಿರು,

ಯೋಗ್ಯರಾದ ಹೆಂಡಂದಿರನ್ನು ಪಡೆದರು.

ದುರ್ಯೋಧನನೂ ಪಡೆದ ಹಲವು ಹೆಂಡಂದಿರು.

 

ಪೂರ್ವಂ ಸುರಾನ್ತಕ ಇತಿ ಪ್ರಥಿತಃ ಸುತೋsಭೂದ್ ದುಃಶಾಸನಸ್ಯ ತದನು ಪ್ರತಿತಪ್ಯಮಾನಾಃ ।

ದೃಷ್ಟ್ವೈವ ಪಾರ್ತ್ಥಬಲವೀರ್ಯ್ಯಗುಣಾನ್ ಸಮೃದ್ಧಿಂ ತಾಂ ಚೈವ ತೇ ಪ್ರತಿ ಯಯುಃ ಸ್ಮ ಕಲಿಙ್ಗದೇಶಮ್ ॥೧೯.೨೦೩॥

ಹಿಂದೆ ಸುರಾಂತಕನೆಂದು ಹೆಸರಾದ ಅಸುರ,

ದುಃಶಾಸನನ ಮಗನಾಗಿ ಹುಟ್ಟಿದ ವ್ಯಾಪಾರ.

ಪಾಂಡವರ ಗುಣ ಸಂಪತ್ತು ದ್ರೌಪದಿಯ ಮದುವೆ ನಂತರದ ಸಮೃದ್ಧಿ ಕಾಲ,

ಕಲಿಂಗದತ್ತ ಹೊರಟ ಕೌರವರ ಉರಿಸಿ ಚುಚ್ಚಿತ್ತು ಪಾಂಡವರ ಕೀರ್ತಿಶೂಲ.

 

ಆಸೀತ್ ಸ್ವಯಮ್ಬರ ಉತಾತ್ರ ಕಲಿಙ್ಗರಾಜಪುತ್ರ್ಯಾಃ ಸುವಜ್ರ ಇತಿ ಯಂ ಪ್ರವದನ್ತಿ ಭೂಪಾಃ ।

ರೌದ್ರಾದ್ ವರಾದವಿಜಿತಸ್ಯ ಚ ತಸ್ಯ ಕನ್ಯಾಂ ದೃಪ್ತೋ ಬಲಾತ್ ಸ ಜಗೃಹೇ ಧೃತರಾಷ್ಟ್ರಸೂನುಃ ॥೧೯.೨೦೪॥

ಕಲಿಂಗ ದೇಶದಲ್ಲಿ ನಡೆದಿತ್ತು ಕಲಿಂಗರಾಜನ ಮಗಳ ಸ್ವಯಂವರ,

ರುದ್ರವರದಿ ಅಜೇಯನಾದ ಅಲ್ಲಿನ ರಾಜನ ಕರೆಯುತ್ತಿದ್ದರು ಸುವಜ್ರ.

ಅವನ ಮಗಳ ದರ್ಪದ ದುರ್ಯೋಧನ ಮಾಡಿದ ಬಲದಿಂದ ಅಪಹಾರ.

 

ತತ್ರಾಥ ರುದ್ರವರತಃ ಸ ಜರಾಸುತೇನ ಯುಕ್ತೋ ಬಬನ್ಧ ಚ ಸುಯೋಧನಮಾಶು ಜಿತ್ವಾ ।

ಕರ್ಣ್ಣಃ ಪರಾದ್ರವದಿಹ ಸ್ಮ ಸುತೇಷು ಪಾಣ್ಡೋರ್ಯ್ಯಸ್ಮಾತ್ ಸ್ಪೃಧಾsಗಮದತಃ ಸ ಪರಾಜಿತೋsಭೂತ್ ॥೧೯.೨೦೫॥

ಜರಾಸಂಧನ ಕೂಡಿದ ರುದ್ರವರಬಲದ ಸುವಜ್ರ ತಾನು,

ದುರ್ಯೋಧನನ್ನು ಸೋಲಿಸಿ ಅವನನ್ನು ಕಟ್ಟಿಹಾಕಿದನು.

ಹೀಗೆ ಕರ್ಣನದು ಆಯಿತು ಯುದ್ಧರಂಗದಿಂದ ಪಲಾಯನ,

ಪಾಂಡುಪುತ್ರ ಧರ್ಮರಾಜಾದಿಗಳಲ್ಲಿ 'ಸ್ಪರ್ಧೆ'ಯ ಕಾರಣ,

'ಸ್ಪರ್ಧೆತಾನು ತೊಡಿಸಿತ್ತು ಕರ್ಣನಿಗೆ ಸೋಲಿನ ತೋರಣ.

Tuesday, 20 October 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 196 - 200

 ಸರ್ವೇಷು ತೇಷು ವಿಜಿತೇಷ್ವಭಿಜಗ್ಮಿವಾನ್ ಸ ಯೋದ್ಧುಂ ಬೃಹದ್ರಥಸುತೋsಪ್ಯಮುನಾ ರಥೇನ ।

ತಂ ಚೈವ ರಾಮವರತೋ ವಿರಥಂ ವಿಶಸ್ತ್ರಂ ಚಕ್ರೇ ಸ ಚೈನಮಥ ಮುಷ್ಟಿಭಿರಭ್ಯುಪೇತೌ ॥೧೯.೧೯೬॥

ಎಲ್ಲಾ ರಾಜರುಗಳು ಸೋಲುತ್ತಿರಲು,ಜರಾಸಂಧ ಮಾಡಿದ ಕರ್ಣನ ಮೇಲೆ ಆಕ್ರಮಣ,

ಭಾರ್ಗವರಾಮನ ವರಬಲದಿಂದ ಕರ್ಣ ಜರಾಸಂಧನ ಮಾಡಿದ ರಥ - ಆಯುಧಹೀನ.

ಬ್ರಹ್ಮವರಬಲದಿಂದ ಜರಾಸಂಧನೂ ಕರ್ಣನ ಮಾಡಿದ ರಥ ಆಯುಧಹೀನ,

ರಥ ಆಯುಧಹೀನರಾದ ಮೇಲೆ ಮುಷ್ಠಿಯುದ್ಧಕ್ಕೆ ಇಳಿದರು ಜರಾಸಂಧ ಕರ್ಣ.

 

ಸನ್ಧೌ ಯದೈವ ಜರಯಾ ಪ್ರತಿಸನ್ಧಿತಸ್ಯ ಕರ್ಣ್ಣೋ ಜಘಾನ ನ ಪರತ್ರ ತುತೋಷ ರಾಜಾ ।

ನ ಜ್ಞಾತಮೇತದಪಿ ಹೋ ಹಲಿನಾ ತದೇತಜ್ಜ್ಞಾತಂ ತ್ವಯಾ ಭವ ತತೋ ಮಮ ಭೃತ್ಯ ಏವ ॥೧೯.೧೯೭॥

ಜರಾ ಜೋಡಿಸಿದ ಜರಾಸಂಧನ ದೇಹಭಾಗಕ್ಕೆ ಕರ್ಣನಿಂದ ಹೊಡೆತ,

ಕರ್ಣ ದುರ್ಯೋಧನರ ಬೇರಾವ ಕ್ರಿಯೆಗಷ್ಟು ಆನಂದಪಟ್ಟಿದ್ದಿಲ್ಲಾತ.

ನೀ ತಿಳಿದೆ ಬಲರಾಮಗೂ ತಿಳಿಯಲಾಗದ ನನ್ನ ಮರ್ಮಸ್ಥಳ ರಹಸ್ಯ,

ಸಂತಸದಿಂದ ಹೇಳುತ್ತಿದ್ದೇನೆ ನೀನು ಸ್ವೀಕರಿಸು ನನ್ನಂತರಂಗ ದಾಸ್ಯ.

 

ಏವಂವಿಧಂ ಸುಕುಶಲಂ ಬಹುಯುದ್ಧಶೌಣ್ಡಂ ನ ತ್ವಾಂ ಹನಿಷ್ಯ ಉತ ತೇ ಪಿತುರೇವ ಪೂರ್ವಮ್ ।

ಬಾಹ್ವೋರ್ಬಲಾದಭಿಹೃತಂ ಹಿ ಮಯಾsಙ್ಗರಾಜ್ಯಂ ತತ್ ತ್ವಂ ಗೃಹಾಣ ಯುಧಿ ಕರ್ಮ್ಮಕರಶ್ಚ ಮೇ ಸ್ಯಾಃ ॥೧೯.೧೯೮॥

ಇತ್ಯುಕ್ತ ಆಶು ಸ ತಥೈವ ಚಕಾರ ಕರ್ಣ್ಣಃ ಪೂರ್ವಂ ಹಿ ತಸ್ಯ ನಿಜರಾಜ್ಯಪದೈಕದೇಶಃ ।

ದುರ್ಯ್ಯೋಧನೇನ ವಿಹಿತೋ ಮಗಧಾಧಿರಾಜಂ ಜಿತ್ವಾ ವೃಕೋದರಹೃತಃ ಪಿತುರೇವ ದತ್ತಃ ॥೧೯.೧೯೯॥

ಯುದ್ಧಕೌಶಲ್ಯ,ಬಗೆಬಗೆಯ ಯುದ್ಧಚಾತುರ್ಯದ  ನಿನ್ನನ್ನು ನಾನು ಕೊಲ್ಲಲಿಚ್ಛಿಸುವುದಿಲ್ಲ,

ತೋಳ್ಬಲದಿಂದ ಕಸಿದ ನಿನ್ನಪ್ಪನ ಅಂಗರಾಜ್ಯವು ನಿನ್ನದಿನ್ನು-ನೀನಾಗು ನನ್ನಕಡೆಯ ಮಲ್ಲ.

ಇದನ್ನೆಲ್ಲಾ ಕೇಳಿಸಿಕೊಂಡ ಕರ್ಣ ಒಪ್ಪಿಕೊಂಡು ಆಯಿತೆಂದ,

ಮೊದಲು ರಾಜ್ಯದ ಆ ಭಾಗ ಬಂದಿತ್ತು ದುರ್ಯೋಧನನಿಂದ.

ಜರಾಸಂಧನ ವಶದಲ್ಲಿದ್ದ ಆ ಭಾಗವನ್ನು ಭೀಮ ಗೆದ್ದಿದ್ದ,

ಗೆದ್ದಿದ್ದ ಆ ರಾಜ್ಯಭಾಗವನ್ನು ಧೃತರಾಷ್ಟ್ರಗೆ ಒಪ್ಪಿಸಿ ಬಿಟ್ಟಿದ್ದ.

 

ಅಙ್ಗಾಧಿರಾಜ್ಯಮುಪಲಭ್ಯ ಜರಾಸುತಸ್ಯ ಸ್ನೇಹಂ ಚ ಸೂರ್ಯ್ಯಸುತ ಆಶು ಕುರೂನ್ ಜಗಾಮ ।

ದೃಷ್ಟ್ವೈವ ತಂ ಮುಮುದಿರೇ ಧೃತರಾಷ್ಟ್ರಪುತ್ರಾ ನಾನೇನ ತುಲ್ಯಮಧಿಜಗ್ಮುರತೋ ಹರಿಂ ಚ ॥೧೯.೨೦೦॥

ಅಂಗರಾಜ್ಯ, ಜರಾಸಂಧನ ಗೆಳೆತನ ಪಡೆದ ಸೂರ್ಯಪುತ್ರ ಕರ್ಣ,

ಕುರುಪಟ್ಟಣ ಸೇರಿ ದುರ್ಯೋಧನಾದಿಗಳ ಸಂತಸಕ್ಕಾದ ಕಾರಣ,

ಅವರನ್ನಾವರಿಸಿತು ಇವ ಕೃಷ್ಣಗೂ ಮಿಗಿಲೆಂಬ ಭ್ರಮೆಯ ಆವರಣ.