ಶ್ರೀ ರಾಘವೇಂದ್ರ ಮಂಗಲಾಷ್ಟಕ
ಸಮಸ್ತ ಸಜ್ಜನರಿಗೂ ಅತ್ಯಂತ ಪೂಜ್ಯರಾದ ಶ್ರೀ ರಾಘವೇಂದ್ರತೀರ್ಥರ
ಪರಮಭಕ್ತರಾದ,
ಮಂತ್ರತುಲ್ಯವಾದ ರಾಘವೇಂದ್ರ ಸ್ತೋತ್ರವನ್ನು ರಚಿಸಿದ ಶ್ರೀ
ಅಪ್ಪಣ್ಣಾಚಾರ್ಯರೇ ರಚಿಸಿದ ಇನ್ನೊಂದು ಅದ್ಭುತಕೃತಿ ಶ್ರೀ ರಾಘವೇಂದ್ರ ಮಂಗಳಾಷ್ಟಕ.
ಇದರ ಬಗ್ಗೆ ಕೂಡ ಒಂದು ಐತಿಹ್ಯ ಪ್ರಸಿದ್ಧವಿದೆ.
ರಾಯರು ಸಶರೀರ ವೃಂದಾವನಸ್ಥರಾದಮೇಲೆ ಆಪ್ಪಣ್ಣಾಚಾರ್ಯರು ಗುರುಗಳ
ವಿರಹದಿಂದ ಬಹಳವಾಗಿ ಕುಗ್ಗಿಹೋಗಿರುತ್ತಾರೆ. ಮನೆಮಂದಿಯನ್ನೆಲ್ಲ ಬಿಟ್ಟು ಮಂತ್ರಾಲಯದಲ್ಲೆ ರಾಯರ
ಸಮೀಪದಲ್ಲಿ ಇದ್ದುಬಿಡುತ್ತಾರೆ. ಹೀಗಿರುವಾಗ ಒಮ್ಮೆ, ರಾಯರು
ಕನಸಿನಲ್ಲಿ ಬಂದು,
ಮನೆಯವರನ್ನೆಲ್ಲಾ ಬಿಟ್ಟು ಇರುವುದು ಸರಿಯಲ್ಲ. ಹಿಂದಿರುಗಿ ಹೋಗಿ
ನಿನ್ನ ಮನೆವಾಳ್ತೆಯನ್ನು ನೋಡಿಕೊ ಎಂದು ಹೇಳುತ್ತಾರೆ. ರಾಯರ ಮಾತಿನಂತೆ ಆಪ್ಪಣ್ಣಾಚಾರ್ಯರು
ಮನೆಗೆ ಹೊರಡುತ್ತಾರೆ. ಆದರೂ ಕೂಡ ರಾಯರನ್ನು ಬಿಟ್ಟಿರಲಾರದೇ ಅಂತರ್ಮುಖಿಯಾಗಿ ಇದ್ದುಕೊಂಡು, ಅವರದ್ದೇ ಚಿಂತೆಯಲ್ಲಿ ದಿನವೂ ಮಂತ್ರಾಲಯಕ್ಕೆ ಹೋಗಿಬರಲು
ಶುರುಮಾಡುತ್ತಾರೆ. ಆದರೆ, ದಾರಿ ಮಧ್ಯೆ ಭಯಂಕರವಾದ, ದೋಣಿಯಿಂದ ಕೂಡ ದಾಟಲು ಅಸಾಧ್ಯವಾದ ತುಂಗಭದ್ರಾ ಪ್ರವಾಹ. ಹೀಗಿರುವಾಗ, ಶಿಷ್ಯನ ಮೇಲಿನ ವಾತ್ಸಲ್ಯದಿಂದ ರಾಯರು ಮತ್ತೆ ಕನಸಿನಲ್ಲಿ
ಕಾಣಿಸಿಕೊಂಡು,
ಬಿಚ್ಚಾಲೆಯಲ್ಲೇ ಒಂದು ವೃಂದಾವನ ಕಟ್ಟಿಸುವಂತೆಯೂ, ತಾನು ಅಲ್ಲೆ ಇದ್ದು ಪ್ರತಿದಿನ ದರ್ಷನ ಕೊಡುವುದಾಗಿಯೂ ಹೇಳುತ್ತಾರೆ.
ಅಂತೆಯೇ ಆಪ್ಪಣ್ಣಾಚಾರ್ಯರು ಒಂದು ಏಕ ಶಿಲಾ ವೃಂದಾವನವನ್ನು ಕಟ್ಟಿಸಿ
ರಾಯರ ದರ್ಷನ ಪಡೆದು ಧನ್ಯರಾಗುತ್ತಾರೆ. ಅಲ್ಲಿಯೇ ರಾಯರಮೇಲಿನ ಅತಿಶಯವಾದ ಭಕ್ತಿಯಿಂದ, ಕೇಳಿದವರ ಹೇಳಿದವರ ಮೈನವಿರೇಳಿಸುವ, ಭಕ್ತಿಯ ಕಡಲಲ್ಲಿ ಮುಳುಗೇಳಿಸುವ ಅದ್ಭುತವಾದ ಒಂದು ಅಷ್ಟಕವನ್ನು
ರಚಿಸುತ್ತಾರೆ. ಹೆಸರೇ ಹೇಳುವಂತೆ ಅದು ಎಂಟು ಶ್ಲೋಕಗಳುಳ್ಳ, ಕೊನೆಯಲ್ಲಿ
ಫಲಶೃತಿಯಿರುವ ಸ್ತೋತ್ರ. ಶ್ರೀ ರಾಘವೇಂದ್ರ
ಗುರುರಾಯರ ಮಹಿಮೆಗಳ, ಹಿರಿಮೆಗಳ ಸ್ತುತಿಸುವ
ಕೃತಿಯಾದ್ದರಿಂದ ಇದು ಶ್ರೀ ರಾಘವೇಂದ್ರ ಮಂಗಳಾಷ್ಟಕ. ಇದು ಶಾರ್ದುಲವಿಕ್ರೀಡಿತಾ ವೃತ್ತದಲ್ಲಿ
ರಚನೆಯಾಗಿದೆ. ಅಂದರೆ, ಒಂದೊಂದು ಪಾದದಲ್ಲೂ (ಸಾಲು) 19
ಅಕ್ಷರವುಳ್ಳ,
ಒಟ್ಟು 76 ಅಕ್ಷರಗಳ ನಾಲ್ಕು ಪಾದಗಳ ಶ್ಲೋಕ. ಶಾರ್ದುಲವಿಕ್ರೀಡಿತಾ
ವೃತ್ತದ ಲಕ್ಷಣ : ಪ್ರತೀ ಸಾಲಿನಲ್ಲಿ ಕ್ರಮವಾಗಿ ಮಗಣ, ಸಗಣ, ಜಗಣ, ಸಗಣ, ತಗಣ, ತಗಣ ಮತ್ತು ಕೊನೆಯಲ್ಲಿ ಒಂದು
ಗುರು.
ಒಟ್ಟು ಒಂಭತ್ತು ಶ್ಲೋಕಗಳ ಈ ಕೃತಿಯ, ಮೊದಲ ಎಂಟು ಶ್ಲೋಕಗಳ, ಮೊದಲ ಮೂರು
ಪಾದಗಳಲ್ಲಿ ರಾಯರ ವ್ಯಕ್ತಿತ್ವ, ಮಹಿಮೆ, ಹಿರಿಮೆ ಮತ್ತು ಮಂತ್ರಾಲಯದ ಪರಿಸರದ ಬಗ್ಗೆ ವರ್ಣಿಸಿ, ಎಲ್ಲ ಶ್ಲೋಕಗಳ ಕೊನೆಯ ಪಾದದಲ್ಲಿ ಮಾತ್ರ "ಶ್ರೀಮತ್-ಸದ್ಗುರು ರಾಘವೇಂದ್ರ
-ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್" ಎಂಬ ಮಂಗಳ ವಾಕ್ಯವನ್ನೇ ಪುನರುಕ್ತಿಯಾಗಿ
ಬಳಸಿದ್ದಾರೆ. ಇದು, ಜ್ಞಾನಿಗಳೂ, ಉತ್ತಮಗುರುಗಳೂ ಆದ ಯತಿಶ್ರೇಷ್ಠರಾದ ರಾಘವೇಂದ್ರರು ಶಾಶ್ವತವಾದ
ಔನ್ನತ್ಯವನ್ನು ಉಂಟುಮಾಡಲಿ ಎಂದು ಕಳಕಳಿಯ, ಭಕ್ತಿಪೂರ್ವಕ
ವಿನಂತಿ. ಕೊನೆಯ,
ಅಂದರೆ ಒಂಭತನೆಯ ಶ್ಲೋಕದಲ್ಲಿ ಈ ಕೃತಿಯನ್ನು ಪಠಣ ಮಾಡುವವರಿಗೆ
ಸಿಗಬಹುದಾದ ಫಲಗಳನ್ನು ವಿವರಿಸಿದ್ದಾರೆ. ಇದು, ಔಷಧ
ತೆಗೆದುಕೊಳ್ಳುವುದಕ್ಕೆ ಹಠ ಮಾಡುವ ಮಗುವಿಗೆ ಚಾಕೊಲೆಟ್ ಆಸೆ ತೋರಿಸಿ ಔಷಧ ಕುಡಿಸುವ ತಾಯಿಯ
ಮಮತೆಯ ಹಾಗೆ. ಆದರೆ, ಫಲಾಪೇಕ್ಷೆಗಿಂತಲೂ ಹೆಚ್ಚಾಗಿ, ವೈಷ್ಣವ ಮತಕ್ಕೆ, ಮಾಧ್ವಮತಕ್ಕೆ
ಮತ್ತು ಸಮಸ್ತ ಮನುಕುಲಕ್ಕೆ ಸಂದ ರಾಯರ
ಅತುಲ್ಯವಾದ ಕೊಡುಗೆಗೆ ಒಂದು ಕೃತಜ್ಞತೆಯಂತೆ ಭಕ್ತಿಯಿಂದ ಪಠಿಸುವುದು ಹೆಚ್ಚು ಸೂಕ್ತ ಎಂದು ನಮ್ಮ
ಪರಂಪರೆಯ ಅಭಿಪ್ರಾಯ.
ಈ ಕೃತಿಯಲ್ಲಿ ಅತ್ಯಂತ ಕ್ಲಿಷ್ಟಕರವಾದ ಪದಗಳ ಪ್ರಯೋಗವಿದ್ದು ಸರಿಯಾದ ಮಾರ್ಗದರ್ಶನ ಇಲ್ಲದೆ ಪದಚ್ಚೇದ ಕೂಡಾ ಅಸಾಧ್ಯ. ವಾಸ್ತವವಾಗಿ ಯಾವ ಯೋಗ್ಯತೆಯೂ ಇಲ್ಲದ ನಾನು, ಕೇವಲ ರಾಯರ ಮೇಲಿನ ಭಕ್ತಿಯಿಂದ, ಅವರೇ ನನ್ನಿಂದ ಈ ಕೆಲಸವನ್ನು ಸುಸೂತ್ರವಾಗಿ ಮಾಡಿಸುತ್ತಾರೆಂಬ ವಿಶ್ವಾಸದಿಂದ, ಶ್ರೀ, ಹುಣಸೂರು ಶ್ರೀಪ್ರಸಾದ್ ಎಂಬುವವರ ಇಂಗ್ಲೀಷ್ ವಿವರಣೆಯ ಆಧಾರದೊಂದಿಗೆ, ಮತ್ತು ನನ್ನ ಅಲ್ಪ ಬುದ್ಧಿಗೆ ತೋಚಿದ ಕೆಲವು ಅರ್ಥಗಳೊಂದಿಗೆ ಈ ಅಪೂರ್ವ ಕೃತಿಯ ತಕ್ಕಮಟ್ಟಿಗಿನ ಅರ್ಥಚಿಂತನೆಯನ್ನು ಬಳಗದ ಗೆಳೆಯರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.. ಯಥಾ ಪ್ರಕಾರ, ಶ್ರೀ ಪ್ರಸಾದರ ಆಂಗ್ಲ ಅನುವಾದ ಹಾಗೂ ಮಾರ್ಗದರ್ಶನ ಇದ್ದೇ ಇರುತ್ತದೆಂಬ ವಿಶ್ವಾಸವಿದೆ. ಮತ್ತು ತಮ್ಮೆಲ್ಲರ ಸಹಕಾರ ಇರುವುದೆಂಬ ನಂಬಿಕೆಯಿದೆ.
(Contributed by Shri B R Krishna/ English translation by Shri Prasad BS)
****