Thursday, 5 October 2017

Bhava Spandana - 22

ಭಾವ ಸ್ಪಂದನ by “ತ್ರಿವೇಣಿ ತನಯ

ಜ್ಞಾನ -ಭಕ್ತಿ -ವೈರಾಗ್ಯ

ಇರಬೇಕಾದವು ಜ್ಞಾನ ಭಕ್ತಿ ವೈರಾಗ್ಯ ,
ಇವೆ ಎಲ್ಲಾ -ಬದಲಾಗಿದೆ ಕೊಂಚ ಜಾಗ,
ಲೌಕಿಕಬೇಕುಗಳ ಜ್ಞಾನ-ಸಂಸಾರದಿ ಭಕ್ತಿ,
ಪಾರುಗಾಣಿಸುವವನೆಡೆಗೆ ಸತತ ವಿರಕ್ತಿ .

ಸಹಜ ಧರ್ಮ

ಕೃಷಿ ಮಾಡುತಿರು ಧರ್ಮ,
ಬೇಡ ಲೌಕಿಕದ ಕುಕರ್ಮ,
ಹುಡುಕದಿರು ತಪ್ಪ ಬೇರೆಯವರಲ್ಲಿ,
ಮನ ನೆಟ್ಟಿರಲಿ ಸತತ ಹರಿಸ್ಮರಣೆಯಲ್ಲಿ.

ಬಂಧ -ಸಂಬಂಧ

ಯಾತರದು ಈ ಥರದ ದೇಹ ಸಂಬಂಧ,
ಬೇಕುಗಳ ನಿರೀಕ್ಷೆಯಲಿ ಬೆಸೆದ ಬಂಧ,
ಕೇಳದಲೇ ತಕ್ಕದನು ಕೊಡುವವನು ಬಂಧು,
ನಿರೀಕ್ಷೆಯಿರದೆ ಸಮಗತಿ ಕರುಣಿಸುವವ ಆತ್ಮಬಂಧು.

ಬೇಡ ಪ್ರತಿಕ್ರಿಯೆ-ಬೇಕು ನಿವಾರಣಾಪ್ರಕ್ರಿಯೆ

ಘಟನೆಗಳಿಗೆ ಬೇಡ ಆತುರದ ಪ್ರತಿಕ್ರಿಯೆ,
ಬರಲಿ ಸಮಚಿತ್ತದ ನಿವಾರಣಾ ಪ್ರಕ್ರಿಯೆ,
ನಿನ್ನ ಕಂಗೆಡಿಸುವದು ಘಟನೆಗಳಲ್ಲ,
ಅಧೀರ ಅಪಕ್ವ ಅಸ್ಥಿರ ಮನಸ್ಥಿತಿಗಳೆಲ್ಲ.

ಬಂಧನ -ಬಿಡುಗಡೆಯ ಚಂದನ

ಬಂಧನದೊಳಿದ್ದರೂ ಬಾಳಾಗುವುದು ಚಂದ,
ತೇಯ್ದು ಬೀರುತಲಿರು ಸ್ನೇಹ ಪ್ರೀತಿಯ ಗಂಧ,
ಬಂದದನುಭವಿಸುತ ಶರಣಾಗಿ ನೀ ನಡೆ,
ದೈವ ಹಿಡಿವುದು ತಪ್ಪದೆ ರಕ್ಷಣೆಯ ಕೊಡೆ.
[Contributed by Shri Govind Magal]

Tuesday, 3 October 2017

Bhava Spandana - 21


ಭಾವ ಸ್ಪಂದನ by “ತ್ರಿವೇಣಿ ತನಯ

ಅಜ್ಞಾನದ ಬೇಲಿ -ತಲೆ ಖಾಲಿ

ಜ್ಞಾನಿ -ಸಂತರಿಗೂ ಮಠ ಮಠದ ಬೇಲಿ,
ಮಾನವತ್ವದ ನೆಲೆಯಲಿ ಎಲ್ಲ ತಲೆ ಖಾಲಿ,
ವಿವಿಧತೆಯಲಿ ಏಕತೆಯಿರದ ಅದೆಂಥಾ ಭಕ್ತಿ?
ಕೀಳು ಭೇದ ಭಾವಗಳ ಒಪ್ಪೀತೇ ಪರಶಕ್ತಿ?

ಹಣಕ್ಕಿಲ್ಲ ಬೆಲೆ -ಕಂಡುಕೋ ನೆಲೆ

ಎಲ್ಲಿ ನೋಡಿದರೂ ಹಣ ಮಾಡುವ ಗೀಳು,
ಹೆಣವಾಗುವವರೆಗೂ ಹಣಕ್ಕೇ ದುಡಿವ ಬಾಳು,
ಪರಲೋಕದಲ್ಲಿ ನಿನ್ನ ಹಣಕ್ಕಿಲ್ಲ ಕವಡೆಯ ಬೆಲೆ,
ತತ್ವಜ್ಞಾನದ ಹಿಂದೆ ಬಿದ್ದು ಕಂಡುಕೋ ನಿನ್ನ ನೆಲೆ.

ಬೆಂಬಿಡದ ಶಾಖ -ಮನವಾಗಲಿ ಪಾಕ

ತಾಯ ಗರ್ಭದಿ ಭರಿಸಲಾಗದ ಶಾಖ,
ಭೂಮಿಯಲಿ ಪ್ರೇಮ ಕಾಮದ ಶಾಖ,
ಜೀವನದಿ ಬಾಳ-ಕುಲುಮೆಯ ಶಾಖ,
ಕೊನೆಗೆ ನೀ ಬಿಟ್ಟ ದೇಹಕ್ಕೆ ಚಿತೆಯ ಶಾಖ.

ಸಹಿಸದ ದೇಹ -ವಿಚಿತ್ರ ಸ್ವಭಾವ

ಚಳಿಗೆ ತಡೆಯದ ದೇಹ ಮಳೆಗೆ ತಡೆಯದ ದೇಹ,
ಬಿಸಿಲ ತಡೆಯದ ದೇಹ ಮಣ್ಣಿಗೊಗ್ಗದ ದೇಹ,
ಗಾಳಿ ತಡೆಯದ ದೇಹ ಧೂಳು ತಡೆಯದ ದೇಹ,
ಆಕಾಶದೊಳಿದ್ದರೂ ಸದವಕಾಶ ಪಡೆಯದ ದೇಹ,
ಪಂಚ ಭೂತಗಳಿಂದಾದದ್ದೇ ಈ ದೇಹ,
ಪಂಚ ಭೂತಗಳಲ್ಲೇ ಲೀನವಾಗುವ ದೇಹ.

ಜಾಡು -ಪಾಡು -ಬೀಡು

ವಿಚಿತ್ರವೆನಿಸಿದರೂ ಸತ್ಯವಿದು ನೋಡು,
ಒಬ್ಬೊಬ್ಬರದೂ ಒಂದೊಂದು ಬೇರೆ ಜಾಡು,
ಅವರವರ ಮನಶ್ರುತಿಯಂತೆ ಅವರ ಹಾಡು,
ಅದರಂತೇ ಪಾಡು-ಸೇರುವರವರವರ ಬೀಡು.
[Contributed by Shri Govind Magal]

Sunday, 1 October 2017

Bhava Spandana - 20

ಭಾವ ಸ್ಪಂದನ by “ತ್ರಿವೇಣಿ ತನಯ

ಎಚ್ಚರದ ನಡೆ

ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.

ಬಂಧು -ಬಳಗ

ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.

ಬಿಚ್ಚಿಕೋ -ನೆಚ್ಚಿ ಕಚ್ಚಿಕೋ

ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.

ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ

ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.

ಭಯ - ಅಭಯ

ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]