Friday, 9 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 08 - 10


ಸರ್ವಸ್ಯ ನಿರ್ಣಯಸುವಾಕ್ಯಸಮುದ್ಧೃತೀ ತು ಸ್ವಧ್ಯಾಯಯೋರ್ಹರಿಪದಸ್ಮರಣೇನ ಕೃತ್ವಾ ।
ಆನನ್ದತೀರ್ಥವರನಾಮವತೀ ತೃತೀಯಾ ಭೌಮೀ ತನುರ್ಮರುತ ಆಹ ಕಥಾಃ ಪರಸ್ಯ ॥೩.೦೮॥

ಮೊದಲಧ್ಯಾಯದಲ್ಲಿ ಸರ್ವಶಾಸ್ತ್ರಾರ್ಥಸಾರ,
ಎರಡನೇ ಅಧ್ಯಾಯದಲ್ಲಿ ವಾಕ್ಯೋದ್ಧಾರ ಧಾರ,
ಎರಡನ್ನೂ ಮಾಡಿದ ಆನಂದತೀರ್ಥನಾಮಕ ಯತಿ  ಮುಖ್ಯಪ್ರಾಣ,
ಮೂರನೇ ಅಧ್ಯಾಯದ ಕಥೆಗಳ ಆರಂಭಿಸುವ ಗುರಿ  ನಾರಾಯಣ.

(ಗಮನಿಸಿದಾಗ ಈ ಅಧ್ಯಾಯದ ಆಳ ಮತ್ತು ವಿಸ್ತಾರ,
ಸೃಷ್ಟಿ- ಅನುಸರ್ಗ -ಪ್ರಳಯ- ಪ್ರಾದುರ್ಭಾವಗಳ ಸಾರ,
ಎದಿರಾಗುವ ಅನೇಕ ವೈರುಧ್ಯಗಳ ಸಮೀಕರಣ,
ಅವಶ್ಯ ಆಳ ಅಧ್ಯಯನ ಸಿಗಬೇಕಾದರೆ ಹೂರಣ.
ಇಲ್ಲಿರುವದು ಸಂಕ್ಷಿಪ್ತವಾದ ಶ್ಲೋಕಾನುವಾದ,
ಹಸಿವಿದ್ದವರು ಆಳಕ್ಕಿಳಿದು ಮಾಡಲಿ ಶೋಧ).



ವ್ಯೂಢಶ್ಚತುರ್ಧಾ ಭಗವಾನ್ ಸ ಏಕೋ ಮಾಯಾಂ ಶ್ರಿಯಂ ಸೃಷ್ಟಿವಿಧಿತ್ಸಯಾssರ ।
ರೂಪೇಣ ಪೂರ್ವೇಣ ಸ ವಾಸುದೇವನಾಮ್ನಾ ವಿರಿಞ್ಚಮ್ ಸುಷುವೇ ಚ ಸಾsತಃ ॥೩.೦೯॥

ಆ ಒಬ್ಬನೇ ಒಬ್ಬನಾಗಿದ್ದ ಭಗವಂತ ನಾರಾಯಣ,
ಆದ ವಾಸುದೇವ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ.
ವಾಸುದೇವ ರೂಪ ಕೂಡಿತು ಲಕ್ಷ್ಮಿಯ ಮಾಯಾ ಎಂಬ ರೂಪ,
ಬ್ರಹ್ಮನ ಸೃಜಿಸಿ ಮಾಡಿದ ದಾಂಪತ್ಯದ ಮೊದಲನೇ ಪ್ರತಾಪ.

ಸಙ್ಕರ್ಷಣಾಚ್ಛಾಪಿ ಜಯಾತನೂಜೋ ಬಭೂವ ಸಾಕ್ಷಾದ್ ಬಲಸಂವಿದಾತ್ಮಾ ।
ವಾಯುರ್ಯ ಏವಾಥ ವಿರಿಞ್ಚನಾಮಾ ಭವಿಷ್ಯಆದ್ಯೋ ನ ಪರಸ್ತತೋ ಹಿ ॥೩.೧೦॥

ಸಂಕರ್ಷಣನಾದಾಗ ಭಗವಂತ ಲಕ್ಷ್ಮಿಯಾದಳು ಜಯ,
ಬಲ ಜ್ಞಾನ ಮೈವೆತ್ತು ಬಂದ  ಮುಖ್ಯಪ್ರಾಣನ ಉದಯ.
ಇವನೇ ಆಗುವ ಮುಂದಿನ ಕಲ್ಪದ ಬ್ರಹ್ಮ,
ಹಾಗೆಂದೇ ಎರಡನೇ ಮಗನ ಹೆತ್ತ ಮರ್ಮ.
[Contributed by Shri Govind Magal]

Wednesday, 7 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 04 - 07


(ಮಹಾಭಾರತದಲ್ಲಿನ ನಿತ್ಯ ಪಾರಾಯಣ ಮಾಡುವ ಶ್ಲೋಕ,
ಮಥಿಸಿ ಕೊಡುತ್ತಾರೆ ಆಚಾರ್ಯರು ಅಧ್ಯಾತ್ಮದಿವ್ಯ ಪಾಕ).

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇ ॥೩.೦೪॥

ವ್ಯಾಸ ಸರಸ್ವತಿ ಲಕ್ಷ್ಮೀ ವಾಯು ಶೇಷ ಮತ್ತು ಶ್ರೀಹರಿ,
ಇವರೆಲ್ಲರನು ವಂದಿಸಿ ಆಚಾರ್ಯ ಗ್ರಂಥ ಹೇಳುವ ಪರಿ.
ಮೊದಲು ವಂದಿತ ಶ್ರೀಮನ್ನಾರಾಯಣ,
ಎಲ್ಲರೊಳಗಿನ ಮೂಲ ಮುಖ್ಯ ಹೂರಣ.
ನರ (ಶೇಷ) ನರೋತ್ತಮ (ವಾಯು)ರಿಗೆ ವಂದನೆ,
ಲಕ್ಷ್ಮೀ -ಸರಸ್ವತಿ -ವೇದವ್ಯಾಸರಿಗೆ -ಅಭಿವಂದನೆ.

ಜಯೋ ನಾಮೇತಿಹಾಸೋಯಂ ಕೃಷ್ಣದ್ವೈಪಾಯನೇರಿತಃ ।
ವಾಯುರ್ನರೋತ್ತಮೋ ನಾಮ ದೇವೀತಿ ಶ್ರೀರುದೀರಿತಾ ॥೩.೦೫॥

ನಾರಾಯಣೋ ವ್ಯಾಸ ಇತಿ ವಾಚ್ಯವಕ್ತೃಸ್ವರೂಪಕಃ ।
ಏಕಃ ಸ ಭಗವಾನುಕ್ತಃ ಸಾಧಕೇಶೋ ನರೋತ್ತಮಃ ॥೩.೦೬॥

ಉಪಸಾಧಕೋ ನರಶ್ಚೋಕ್ತೋ ದೇವೀ ಭಾಗ್ಯಾತ್ಮಿಕಾ ನೃಣಾಮ್ ।
ಸರಸ್ವತೀ ವಾಕ್ಯರೂಪಾ ತಸ್ಮಾನ್ನಮ್ಯಾ ಹಿ ತೇsಖಿಲಾಃ ।
ಕೃಷ್ಣೌ ಸತ್ಯಾ ಭೀಮಪಾರ್ಥೌ ಕೃಷ್ಣೇತ್ಯುಕ್ತಾ ಹಿ ಭಾರತೇ’ ॥೩.೦೭॥

ಜಯ ಎಂದು ಕರೆಯಲ್ಪಡುವುದದು ಮಹಾಭಾರತ,
ಕರ್ತೃ ಪ್ರತಿಪಾದ್ಯ ಅಭಿಮಾನಿಗಳೆಲ್ಲರಿಲ್ಲಿ  ವಂದಿತ.
ಪ್ರತಿಪಾದ್ಯ ಹೆದ್ದೈವವಾಗಿ ವಂದಿತನವ  ನಾರಾಯಣ,
ಕರ್ತೃ ವ್ಯಾಸರಾದ್ದರಿಂದ ಅವರಿಗೆ ವಂದನಾತೋರಣ.
ಉಸಿರನ್ನೀವ ಪ್ರಾಣ ಭಗವದ್ ಚಿಂತನೆ ಹಚ್ಚುವ ತ್ರಾಣ,
ನರೋತ್ತಮನಾಗಿ ವಿಶೇಷ ವಂದಿತನಿಲ್ಲಿ ಮುಖ್ಯಪ್ರಾಣ.
ಶ್ರವಣ ಮನನ ನಿಧಿಧ್ಯಾಸನಕ್ಕಭಿಮಾನಿ (ಶೇಷ)ನರ,
ಸಾಧನಾನುಗ್ರಹ ಬೇಡುತ್ತಾ ನರಗೊಂದು  ನಮಸ್ಕಾರ.
ಅವರಲ್ಲಿ ಗರುಡ ಶೇಷ ರುದ್ರರೂ ವಂದಿತಾರ್ಹರೆಂದು ಸಾರ.
ಸಮಸ್ತ ವೇದಾಭಿಮಾನಿ ಅವಳು ಲಕ್ಷ್ಮೀಮಾತ,
ಸರಸ್ವತಿ ಭಾರತಿಯರಿದ್ದರೇ ಮಾತು ಓತಪ್ರೋತ.
ಹೀಗೆ ಗ್ರಂಥಾಧ್ಯಯನ ಆರಾಧನೆಯ ರೀತಿ,
ಆಚಾರ್ಯ ತಿಳಿಸುವ ತಾರತಮ್ಯೋಕ್ತ ನೀತಿ.

ಮಹಾಭಾರತದಲ್ಲಿ ಮೊದಲಾಗುವ ಆರು ಮೂರ್ತಿಗಳಿಗೆ ನಮಸ್ಕಾರ,
ಕಾಣಸಿಗುತ್ತದೆ ಮಹಾಭಾರತದಲ್ಲಿ ಅವರೆಲ್ಲರ ಅವತಾರ,
ವೇದವ್ಯಾಸ ,ಶ್ರೀಕೃಷ್ಣ (ನಾರಾಯಣ),
ಸತ್ಯಭಾಮೆ (ದೇವೀ),ನರೋತ್ತಮ (ಭೀಮಸೇನ),
ಪಾರ್ಥ (ನರ), ದ್ರೌಪದಿ (ಸರಸ್ವತಿ),
ಹೀಗೆ ನೋಡುವದ ಹೇಳಿದ್ದು ಪೂರ್ಣಪ್ರಮತಿ.
[Contributed by Shri Govind Magal]

Tuesday, 6 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 03

ಜಯತ್ಯಸಙ್ಖ್ಯೋರುಬಲಾಮ್ಬುಪೂರೋ ಗುಣೋಚ್ಚರತ್ನಾಕರ ಆತ್ಮವೈಭವಃ ।

ಸದಾ ಸದಾತ್ಮಜ್ಞನದೀಭಿರಾಪ್ಯಃ ಕೃಷ್ಣಾವತಾರೋ ಹರಿರೇಕಸಾಗರಃ ॥೩.೦೩॥

ಶ್ರೀಕೃಷ್ಣ ಅಪಾರ ಅಸೀಮ ಗುಣಗಳ ಸಾಗರ,
ಖಾಲಿಯಾಗದ ಗುಣರತ್ನ ಮುತ್ತುಗಳ ಆಗರ.
ಸಾಗರದ ಆಳ ವ್ಯಾಪ್ತಿಗೆ ಹೋಲಿಕೆಯಿಲ್ಲ,
ಕೃಷ್ಣನ ಗುಣ ಬಲಗಳಿಗೆ ಸರಿಸಾಟಿಯಿಲ್ಲ.
ಎಲ್ಲ ಹರಿವ ನದಿಗಳು ಸೇರುವವು ಕಡೆಗೆ ಕಡಲು,
ಎಲ್ಲ ಆತ್ಮಜ್ಞಾನಿಗಳು ಸೇರುವರು ಕೃಷ್ಣನ ಒಡಲು.
ಈ ಕೃಷ್ಣನೆಂಬ ಜ್ಞಾನಾನಂದ ಸಾಗರವದು ಅನಂತ,
ಜ್ಞಾನವಿದಿರಲೆಂದು ಆಚಾರ್ಯರ ಸ್ತೋತ್ರ ಅನವರತ.
[Contributed by Shri Govind Magal]