Sunday, 3 April 2016

Sāra Saṅgama 12

ಸಾರ ಸಂಗಮ  by “ತ್ರಿವೇಣಿ ತನಯ


ಹುಟ್ಟಾ ತಿರುಕ -ಎಣೆಯಿರದ ಧನಿಕ

ತಿರುಕನಿಗೇನು ಗೊತ್ತು ತೀರದವನ ಸಂಪತ್ತು,
ಸ್ವಲ್ಪ ಏರು ಪೇರಾದರೂ ಎಲ್ಲವೂ ಆಪತ್ತು,
ಸಾಕು ಭ್ರಮೆಯ ಬಾಳಿನ ಹೊಲಸು ಮತ್ತು,
ಶರಣಾಗಿ ಅವನ ಕರುಣೆಗಾಗಿ ತಪಿಸಿ ಬೆನ್ಹತ್ತು.

ವಿದ್ಯೆ -ವಿನಯ

ಫಲಭರಿತ ಮರವದು ಬಾಗುವುದು ನೋಡು,
ಜ್ಞಾನಿ ತಾ ಬಾಗುವನು ಹಾಡುತಾ ವಿನಯದ ಹಾಡು,
ಒಣ ಮರವೆಂದಿಗೂ ಬಾಗಲಾರದು  ತಾನು,
ಮೂರ್ಖ ಮನುಜ ತಾ ಮಣಿದಾನು ಏನು?

ಮುಖವಾಡ

ಪ್ರಾಮಾಣಿಕತೆ ಎಂಬುವುದು ಎಲ್ಲೆಲ್ಲೂ ಇಲ್ಲ,
ಎಲ್ಲೆಲ್ಲೂ ಮುಖವಾಡದ ಬದುಕೇ ಎಲ್ಲ,
ಹೊಲಸು ನಾಟಕವಾಡಿ ಗಳಿಸುವುದು ಏನು?
ಗಳಿಸಿದ್ದೇನೇ ಇದ್ದರೂ ಹೊತ್ತೊಯ್ಯಬಲ್ಲೆಯಾ ನೀನು.

ಇಟ್ಹಾಂಗೆ ಇರು

ವ್ರತ ನೇಮ ಉಪವಾಸ ಮಾಡಿದೆನೆಂಬ ಹಮ್ಮು ಬೇಡ,
ಜಪ ತಪ ಅನುಷ್ಠಾನಗೈದೆನೆಂಬ ಬಿಮ್ಮು ಬೇಡ,
ಬದುಕೆಲ್ಲ ಭಾರೀ ಮಡಿ ಮಾಡಿದೆನೆಂಬುದು ಸಲ್ಲ ನೋಡ,
ಜಗದೊಳು ಯಾರ ಎಷ್ಟು ಮೆಚ್ಚಿದೆ ನೀ ಹೇಳು?
ಸೃಷ್ಟಿಕರ್ತನ ಸೃಷ್ಟಿ ಮೆಚ್ಚದ ಅದೆಂಥಾ ಸಾಧನಾ ಗೀಳು?
ಸರ್ವಾಂತರ್ಯಾಮಿಯ ನಮಿಸುತ್ತ ಇಟ್ಹಾಂಗೆ ಇರುವುದೇ ಬಾಳು!

ನಿರ್ಮಲ ಮನ -ಅದೇ ಸಾಧನ

ನಿರ್ಮಲ ಮನವದು ಸುಖದ ಬಾಳಿಗೆ ಸೋಪಾನ,
ಮನ ಕೆಡಿಸಿಕೊಂಡು ಬದುಕ ಮಾಡಿಕೊಳ್ಳದಿರು ಅಧ್ವಾನ,
ಕಾಲನ ನಿಯಮ ಎಂತು ಬದಲಿಸಬಲ್ಲೆ ನೀ ಹೇಳು?
ಬಂದದ್ದು ಒಪ್ಪಿ "ಕೃಷ್ಣಾರ್ಪಣ"ಎನ್ನುವುದೇ ಬಾಳು.


(Contributed by Shri Govind Magal)

Saturday, 2 April 2016

Sāra Saṅgama 11

ಸಾರ ಸಂಗಮ  by “ತ್ರಿವೇಣಿ ತನಯ

ಭವ ಭಾರ -ಆಗು ಹಗುರ

ಭಾರವದು ನೋಡು ಬಲುವಿಧದಿಂದ ದುರ್ಭರ,
ಏನಾದರೂ ಸಾಧಿಸಲು ಆಗಲೇಬೇಕು ಹಗುರ,
ಹಗುರಾಗುತಲಿ ಸಾಧನೆಯ ಮೆಟ್ಟಿಲುಗಳ ಏರು,
ಜ್ಞಾನಾಮೃತವ ಹೀರುತ್ತ ಬಿಡುಗಡೆಯ ಕೋರು.

ತಪ್ಪೊಪ್ಪಿಕೊಂಡರೆ ನಿನ್ನದೇನು ಹೋಯ್ತು?
ಕಲ್ಮಶ ತೊಲಗಿ ಮನವದು ನಿರಾಳ ಆಯ್ತು,
ಮೈ ಭಾರ ಮನ ಭಾರ ಬದುಕದು ದುರ್ಭರ,
ಮೈ ಮನದ ಕೊಳೆ ನೀಗಿ ಆಗುತಲಿರು ಹಗುರ.

ಒಳಕೆಂಡ --ಮುಖವಾಡ

ಮುಖವಾಡ ಧರಿಸಿ ನೀ ಸಾಧಿಸುವದೇನು?
ಒಳಗಿರುವ ಹೊಲೆಬೆಂಕಿ ಸುಡದೇ ಬಿಟ್ಟೀತೇನು?
ನಿನ್ನ ನೀ "ಬೆತ್ತಲಾಗಿ"ಕಾಣುವುದೇ ಮುಕ್ತಿ,
ಗಳಿಸಲದನು ಸಾಧಿಸು ಹರಿಭಕ್ತಿಯ ಶಕ್ತಿ.

ಭಯ --ಅಜ್ಞಾನದ ಛಾಯ

ಭಯವೆಂಬುದು ಅಜ್ಞಾನದ ನೆರಳು,
ನಿಜಜ್ಞಾನ ಕತ್ತರಿಸುವುದು ಭಯದ ಕೊರಳು,
ತೃಪ್ತ ನಿರ್ಲಿಪ್ತ ಬದುಕಲಿ ಹುಡುಕು ಜ್ಞಾನದ ತಿರುಳು,
ಆತ್ಮಸಖನ ನಂಬಿ ನಡೆದಿರಲು ಯಾತರ ಗೋಳು.

ಖಾಲಿ ಹೊಟ್ಟೆ -ಜ್ಞಾನದ ತಟ್ಟೆ

ಹೊಟ್ಟೆ ಇಟ್ಟುಕೊಂಡರೆ ಖಾಲಿ,
ತಲೆ ಚುರುಕಾಗುವುದು ನೋಡಲ್ಲಿ,
ಸ್ಫುರಣೆಗಳು ಭಗವಂತನ ಕರುಣೆ,
ಹೂಗಳವು ಅವನಪಾದಕೆ ಅರ್ಪಣೆ.


(Contributed by Shri Govind Magal)

Friday, 1 April 2016

Sāra Saṅgama 10

ಸಾರ ಸಂಗಮ  by “ತ್ರಿವೇಣಿ ತನಯ


ಜ್ಞಾನಿಯ ಅರಿವಾಗದ ಅಜ್ಞಾನ

ಜ್ಞಾನಿಗಳ ಮಧ್ಯೆ ಇದ್ದರೂ ಅರಿವೇ ಇಲ್ಲ,
ಅಹಂಕಾರದ ಮೂಟೆಗಳಾಗಿ ದೂರಿರುವವರೇ ಎಲ್ಲ,
ವ್ಯಕ್ತಿ ಹೋದಮೇಲೆ ಭಾರೀ ಸಂತಾಪ ಸಭೆ ಗುಣಗಾನ,
ಇದ್ಯಾತರ ರೀತಿ ಆಡಂಬರದ ಮತಿಹೀನ ಪ್ರದರ್ಶನ.


ಪ್ರಾಮಾಣಿಕತೆ


ಪ್ರಾಮಾಣಿಕತೆಯದು ಹೊರಗೆ ಕಲಿಯುವ ವಿಷಯವಲ್ಲ,
ಸರಿ ತಪ್ಪುಗಳಾವೆಂದು ಕ್ಷಣವೂ ಒಳಮನ ನುಡಿಯುತಿದೆಯಲ್ಲ,
ಆತ್ಮಸಾಕ್ಷಿಗೆ ಕಿವಿಗೊಟ್ಟು ಒಳಮಾತಿಗೆ ಬೆಲೆ ಕೊಡು,
ಅಂತರಾತ್ಮ ಅರಿಯದವಗೆ ಪರಮಾತ್ಮ ದೂರ ನೋಡು.


ಮನದ ಸರಿಗಮ --ಉತ್ತಮ ಅಧಮ

ಪ್ರಕೃತಿಯಲಿ ಯಾವುದೂ ಉತ್ತಮ ಅಧಮ ಅಂತಿಲ್ಲ,
ಅವರವರ ಯೋಗ್ಯತಾನುಸಾರ ತೋರುತಿಹುದೆಲ್ಲ,
ಒಬ್ಬನಿಗೆ ವಿಷ -ಇನ್ನೊಬ್ಬನಿಗದೇ ಪೀಯೂಷ,
ಒಂದೇ ವಿಷಯ ಒಬ್ಬನಿಗೆ ನೋವು ಇನ್ನೊಬ್ಬಗೆ ಹರ್ಷ,
ಏನಿದು ವಿಚಿತ್ರ ಘಟನಾವಳಿಗಳ ವಿರೋಧಾಭಾಸ,
ತೂಗಿ ಕೊಡುತಿಹ ವಿಧಾತನದದು "ವಿಶೇಷ ತ್ರಾಸ".

ಹಣೆಬರಹ


ಯಾರೇ ಇರಲಿ ಪುಣ್ಯವಂತ ಪಾಪಿ,
ತಪ್ಪಿಸಲಾದೀತೆ ಅದ ಫಾಲ -ಲಿಪಿ,
ಬೇಕಿರಲಿ ಬೇಡದಿರಲಿ ಬದಲಾಗದ  ಗತಿ,
ಕಟ್ಟಿ ತಂದಿರುವದ ಉಣಬೇಡವೇ ಬುತ್ತಿ.


(Contributed by Shri Govind Magal)