Wednesday, 30 August 2017

Bhava Spandana - 10

ಭಾವ ಸ್ಪಂದನ by “ತ್ರಿವೇಣಿ ತನಯ
ದೇವಹೂತಿಯ ಅನುಭಾವ

ಆಲದ ಎಲೆಯ ಮೇಲೆ ನಿನ್ನ ಶಯನ,
ಬ್ರಹ್ಮಾಂಡವಿರದಾಗ ನೀ ವೇದಾಸೀನ,
ಜಗವ ಹೊತ್ತ ನಿನ್ನನ್ನ ನಾನು ಹೊತ್ತೆ,
ಏನು ಕರುಣೆ ಎಂಥಾ ಸೌಭಾಗ್ಯವಿತ್ತೆ.

ಬಿಂಬ -ಯಾರಲ್ಲಿ ಉಂಬ?

ಬಂದ ಕೃಷ್ಣ ರಾಯಭಾರಿಯಾಗಿ ಸಂಧಾನಕ್ಕೆ,
ಯಾರಲ್ಲಿಯೂ ಒಪ್ಪಿ ನಿಲ್ಲಲಿಲ್ಲವ ಊಟಕ್ಕೆ,
ಎಲ್ಲರಿಗಿಂತ ವಿದುರ ಆರ್ದ್ರ --ಜ್ಞಾನಿ,
ಅವನಲ್ಲಿ ತಂಗಿ ಸವಿದ ಆತಿಥ್ಯ ವಿಜ್ಞಾನಿ.

ಸಾಧಕನ ಮಾತು-ಅಮೂಲ್ಯ ಮುತ್ತು

ಯಾರ ಮನದ ಸದಿಚ್ಛೆಯ ಮಾತು,
ಹೊಮ್ಮುವುದದಾಗಿ ಅಮೂಲ್ಯ ಮುತ್ತು,
ನುಡಿದಂತೆ ನಡೆವವ ಅವನು ಸಾಧು,
ಹರಿಯಾಜ್ಞೆಯಂತೆ ನಡೆವ ಎಲ್ಲರ ಬಂಧು.

ಆತ್ಮಾವಲೋಕನ

ತತ್ವಜ್ಞಾನವದು ಪ್ರಸಾರ ಪ್ರಚಾರಕ್ಕಲ್ಲ,
ಕಾಣಸಿಗುವುದೀಗ ಪಾಠಒಪ್ಪಿಸೋ ಪರಿಯೆಲ್ಲ,
ಅನುಭಾವಿ ಸಾಧಕನಿಂದ ಹರಿಯಬೇಕು,
ಕೇಳುವ ಮನ ಅನುಭವಿಸಿ ತಿಳಿಯಬೇಕು.

ಸಾಧನೆ -ಬೇಡ ವೇದನೆ

ಸಾಧನೆ ಶ್ರವಣ ಮನನ ಕಾರ್ಯಕ್ರಮವಲ್ಲ,
ಪ್ರತಿಯುಸಿರ ನಡೆಯ ನಡವಳಿಕೆಯೇ ಎಲ್ಲ,
ದೃಢವಾಗಲು ಈ ಜ್ಞಾನ-ನಾನು ಏನೂ ಅಲ್ಲ,

ಕಣ್ರೆಪ್ಪೆಯಂತೆ ಕಾಯುವ ಅವ ಲಕುಮೀನಲ್ಲ.

[Contributed by Shri Govind Magal]

Monday, 28 August 2017

Bhava Spandana - 9

ಭಾವ ಸ್ಪಂದನ by “ತ್ರಿವೇಣಿ ತನಯ

ಅರ್ಹತೆ -ಅನರ್ಹತೆ

ದುಷ್ಟ ಅಹಂ ದುರಾಚಾರಿ ಧರ್ಮಧ್ವಜರಿಗೆ ಹೇಳಬೇಡ,
ಲಂಪಟ ಡಂಭ ಗೃಹಾಸಕ್ತ ಭಕ್ತರಲ್ಲದ ದ್ವೇಷಿಗಳಿಗೂ ಬೇಡ,
ಶ್ರದ್ಧೆ ವಿನಯ ದಯಾಪರ ವಿಷಯ ಅನಾಸಕ್ತ ಶುದ್ಧಚಿತ್ತ,
ಅಂಥವರಿಗೆ ಮಾತ್ರ ತಿಳಿವ ಉಪದೇಶ ಸಾತ್ವಿಕಪರ ಹರಿಚಿತ್ತ.

ಹಸಿದವಗಿತ್ತ ಅನ್ನ -ನೈಜ ಬ್ರಹ್ಮಯಜ್ಞ

ಕಾದ ಭೂಮಿಯಲಿ ಸುರಿದ ಮಳೆ,
ಆನಂದದಿಂದ ಅರಳುವುದು ಇಳೆ,
ಹಸಿದವರಿಗೆ ಸಮಯಕ್ಕಿತ್ತ ಅನ್ನ,
ನಿಜಾರ್ಥದಲ್ಲಿ ಅದುವೆ ಬ್ರಹ್ಮಯಜ್ಞ.

ಬೋಧನೆ -ಸಾಧನೆ -ಅವಲಂಬನೆ

ಅಧ್ಯಾತ್ಮ ಉಪದೇಶವದು ಮೇಲ್ನೋಟಕ್ಕೆ ಸರಳ,
ನಾನು ಮಾಡುವೆನೆನಲು ಕೈಗೆ ಸಿಗದ ವಿಸ್ತಾರ-ಆಳ,
ಸತತ ಬಿಂಬಾನುಸಂಧಾನವಿತ್ತು ಮಾಡಿಸಬೇಕು ಭಗವಂತ,
ಹರಿ-ಪ್ರಾಣರಾಣತಿಯಂತೆ ತತ್ವಾಭಿಮಾನಿಗಳು ನಿರತ.

ಶರಣಾಗತಿ

ನಾನು ನಾನೆಂದರೆ ಏನೇನೂ ಇಲ್ಲ,
ನಾನಲ್ಲ ನೀನೆಂದರೆ ನಡೆದೀತು ಎಲ್ಲ,
ಪ್ರಾಮಾಣಿಕ ಶರಣಾಗತಿ ಒಂದೇ ದಾರಿ,
ಅಸ್ವತಂತ್ರಜೀವಕ್ಕಾಸರೆ ಸ್ವತಂತ್ರ ಹರಿ.

ದೇವರ ನಾಮ

ದೇವರ ನಾಮವೇ ಹವನ ಹೋಮ,
ಪ್ರಾಮಾಣಿಕ ಪಠಣ ತಪವದು ನೇಮ,
ಎಲ್ಲ ಪಾಪ ಕಾರ್ಯಗಳೂ ನಿರ್ನಾಮ,
ಬಿಡುಗಡೆಯನೀವ ವಿಷ್ಣುಸಹಸ್ರನಾಮ.
[Contributed by Shri Govind Magal]

Saturday, 26 August 2017

Bhava Spandana - 8

ಭಾವ ಸ್ಪಂದನ by “ತ್ರಿವೇಣಿ ತನಯ

ಮನ ನಿಲ್ಲದ ಹೋಮ-ಶಾರಣ್ಯವೇ ನೇಮ

ನಿಯಂತ್ರಣವಿಲ್ಲದ ಕ್ರೋಧ ಸ್ವಚ್ಛಂದ ಕಾಮ,
ಕೆಲಸಕ್ಕೆ ಬಾರವು ಎಷ್ಟು ಮಾಡಿದರೂ ಹೋಮ,
ಶರಣಾಗುತ ಮನವಾಗಲಿ ಹರಿಪಾದದಲಿ ಲಗ್ನ,
ತಕರಾರಿಲ್ಲದ ತಾಳ್ಮೆಯಿರಲಿ ಪಾಪಗಳೆಲ್ಲ ಭಗ್ನ.

ಕರ್ಮ ಸಿದ್ಧಾಂತ

ಎಲ್ಲ ಘಟನೆಗಳೂ ಪೂರ್ವನಿಯೋಜಿತ,
ತಕ್ಕಂತೆ ನಿಯೋಜಿಸುವನು ಅವ ಅಜಿತ,
ಅವರಿವರ ದೂಷಣೆ ಪೋಷಣೆ ಸಲ್ಲ,
ನಾವು ಮಾಡಿದ್ದೇ ಫಲ ಬೇವು ಇಲ್ಲ ಬೆಲ್ಲ.

ಚಕ್ರಭ್ರಮಣ

ಪಾಪ ಕರ್ಮದಿಂದ ಚಿತ್ತ ಭ್ರಮಣೆ,
ಚಿತ್ತ ಭ್ರಮಣೆಯಿಂದ ಪಾಪ ಸಂಗ್ರಹಣೆ,
ಇದೊಂದು ರೀತಿಯ ಚಕ್ರ ಭ್ರಮಣ,
ಪಾರುಮಾಡುವುದು ಹರಿಸ್ಮರಣ-ಕರುಣ.

ವಿವಿಧ ದಾರಿ -ಒಬ್ಬನೇ ಹರಿ

ಜ್ಞಾನಯೋಗ ಭಕ್ತಿಯೋಗ ಯಜ್ಞಯಾಗ,
ಅಧ್ಯಯನ -ತಪ -ನಿಗ್ರಹ -ಕರ್ಮತ್ಯಾಗ,
ನಿವೃತ್ತಿ ಪ್ರವೃತ್ತಿ ದೃಢವೈರಾಗ್ಯ ಅನೇಕಮಾರ್ಗ,
ಅನೇಕ ಪ್ರಕಾರಗಳಿಂದ ಭಗವದ್ ಜ್ಞಾನಯೋಗ.

ಗುಣಸ್ವಭಾವ-ತಕ್ಕ ಅನುಭಾವ

ಸಾತ್ವಿಕ ರಾಜಸ ತಾಮಸ ನಿರ್ಗುಣಭಕ್ತಿ ಯೋಗ,
ಅವರವರ ಯೋಗ್ಯತಾನುಸಾರ ಅನುಭಾವ ಭಾಗ್ಯ,
ಭಗವಂತನ ಪೂರ್ಣಾನುಭವವದು ಅಸಂಭವ,
ಕುರುಡರು ಆನೆಯ ಕಂಡಂತೆ ತೆರ ತೆರ ಅನುಭವ.
[Contributed by Shri Govind Magal]