Monday 28 August 2017

Bhava Spandana - 9

ಭಾವ ಸ್ಪಂದನ by “ತ್ರಿವೇಣಿ ತನಯ

ಅರ್ಹತೆ -ಅನರ್ಹತೆ

ದುಷ್ಟ ಅಹಂ ದುರಾಚಾರಿ ಧರ್ಮಧ್ವಜರಿಗೆ ಹೇಳಬೇಡ,
ಲಂಪಟ ಡಂಭ ಗೃಹಾಸಕ್ತ ಭಕ್ತರಲ್ಲದ ದ್ವೇಷಿಗಳಿಗೂ ಬೇಡ,
ಶ್ರದ್ಧೆ ವಿನಯ ದಯಾಪರ ವಿಷಯ ಅನಾಸಕ್ತ ಶುದ್ಧಚಿತ್ತ,
ಅಂಥವರಿಗೆ ಮಾತ್ರ ತಿಳಿವ ಉಪದೇಶ ಸಾತ್ವಿಕಪರ ಹರಿಚಿತ್ತ.

ಹಸಿದವಗಿತ್ತ ಅನ್ನ -ನೈಜ ಬ್ರಹ್ಮಯಜ್ಞ

ಕಾದ ಭೂಮಿಯಲಿ ಸುರಿದ ಮಳೆ,
ಆನಂದದಿಂದ ಅರಳುವುದು ಇಳೆ,
ಹಸಿದವರಿಗೆ ಸಮಯಕ್ಕಿತ್ತ ಅನ್ನ,
ನಿಜಾರ್ಥದಲ್ಲಿ ಅದುವೆ ಬ್ರಹ್ಮಯಜ್ಞ.

ಬೋಧನೆ -ಸಾಧನೆ -ಅವಲಂಬನೆ

ಅಧ್ಯಾತ್ಮ ಉಪದೇಶವದು ಮೇಲ್ನೋಟಕ್ಕೆ ಸರಳ,
ನಾನು ಮಾಡುವೆನೆನಲು ಕೈಗೆ ಸಿಗದ ವಿಸ್ತಾರ-ಆಳ,
ಸತತ ಬಿಂಬಾನುಸಂಧಾನವಿತ್ತು ಮಾಡಿಸಬೇಕು ಭಗವಂತ,
ಹರಿ-ಪ್ರಾಣರಾಣತಿಯಂತೆ ತತ್ವಾಭಿಮಾನಿಗಳು ನಿರತ.

ಶರಣಾಗತಿ

ನಾನು ನಾನೆಂದರೆ ಏನೇನೂ ಇಲ್ಲ,
ನಾನಲ್ಲ ನೀನೆಂದರೆ ನಡೆದೀತು ಎಲ್ಲ,
ಪ್ರಾಮಾಣಿಕ ಶರಣಾಗತಿ ಒಂದೇ ದಾರಿ,
ಅಸ್ವತಂತ್ರಜೀವಕ್ಕಾಸರೆ ಸ್ವತಂತ್ರ ಹರಿ.

ದೇವರ ನಾಮ

ದೇವರ ನಾಮವೇ ಹವನ ಹೋಮ,
ಪ್ರಾಮಾಣಿಕ ಪಠಣ ತಪವದು ನೇಮ,
ಎಲ್ಲ ಪಾಪ ಕಾರ್ಯಗಳೂ ನಿರ್ನಾಮ,
ಬಿಡುಗಡೆಯನೀವ ವಿಷ್ಣುಸಹಸ್ರನಾಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula