Wednesday, 16 August 2017

Bhava Spandana - 2

ಭಾವ ಸ್ಪಂದನ by “ತ್ರಿವೇಣಿ ತನಯ

ಹಸನಾದ ಹೊಲ -ಕೊಟ್ಟೀತು ಫಲ .

ತತ್ವಜ್ಞಾನವದು ನಿರಂತರ ಸುರಿವ ಮಳೆ ,
ತೋಯುವುದು ನಿಜ ಸಂಪೂರ್ಣ ಇಳೆ ,
ನೆನೆಯುವುದಿಲ್ಲ ಬಂಜರು ಕಲ್ಲು ಕಾಡು ,
ಹಸನಾದ ಹೊಲ ಕೊಟ್ಟೀತು ಫಲ ನೋಡು.

ದೇಹಕ್ಕೆ ಜಾತಿ -ಸ್ವಭಾವಕ್ಕೆ ರೀತಿ .

ದೇಹವ್ಯಾವುದಾದರೇನು ಹಿಂದು ಕ್ರೈಸ್ತ ಮುಸಲ್ಮಾನ ,
ಉನ್ನತ ಚಿಂತನೆಯ ಜೀವಕ್ಕಿಲ್ಲ ಸರಿ ಉಪಮಾನ ,
ಪರಮಾತ್ಮನ ಚಿಂತನೆಗೆ ಬೇಕಿಲ್ಲ ಜಾತಿ ಕುಲ ,
ಗೋಕುಲದೊಡೆಯನ ಕರುಣೆ ಕಳೆವುದು ವ್ಯಾಕುಲ .

ಸಾತ್ವಿಕ -ರಾಜಸ -ತಾಮಸ .

ಹುಟ್ಟಿ ಸಾಯ್ವ ದೇಹಕೆ ನೂರೆಂಟು ಜಾತಿ ,
ಸಾಯದೇ ಇರುವ ಆತ್ಮಕ್ಕೆ ಮೂರೇ ರೀತಿ ,
ಬಿಳಿ ಕೆಂಪು ಕಪ್ಪುಗಳ ಮಿಶ್ರ ಬಣ್ಣ ,
ಯಾವುದು ಹೆಚ್ಚೋ ಆ ಸ್ವಭಾವ ವರ್ಣ,
ಬಂದದುಣ್ಣುತ ಅಂಟದಿರುವುದೇ ನೀತಿ,
ನೋಯದೆ ನೋಯಿಸದಿರುವವಗಿಲ್ಲ ಭೀತಿ.

ಪರದೇಶಿಯ ಚೌಕಾಶಿ .

ಒಪ್ಪಿದೆ ನೀನ್ಯಾವುದನ್ನೂ ಮೈಮೇಲೆ ಹಾಕಿಕೊಳ್ಳುವುದಿಲ್ಲ ,
ಅವರವರ ಸ್ವಭಾವದಂತೆ ವಿಕಸಿಸುವೆ ಎಲ್ಲ !,
ತಿಳಿದವರು ಹೇಳುವರು ನೀನು ಕರುಣಾರಾಶಿ ,
ಒಂದಷ್ಟು ಕರುಣೆ ಬೀರಲು ಯಾಕಿಷ್ಟು ಚೌಕಾಶಿ?

ಬಿಡುಗಡೆಯ ಅಡುಗೆ

ವೇದ ಉಪನಿಷತ್ಗಳ ಬಂಧನದಿ ಬಾಳು,
ದಾರಿಯಾದೀತು ಅದು ಬಿಡುಗಡೆಗೆ ಕೇಳು,
ಋಷಿ ಮುನಿಗಳ ಅನುಭಾವದ ಅಡುಗೆ,
ಎತ್ತಿಕೊಳ್ಳುವುದು -ಅದೊಂದೇ ಕಡೆಗೆ.

No comments:

Post a Comment

ಗೋ-ಕುಲ Go-Kula