ಭಾವ ಸ್ಪಂದನ by “ತ್ರಿವೇಣಿ ತನಯ”
ಹುಡುಗಾಟ -ಹುಡುಕಾಟ
ಇರದಿರೆ ಹೃತ್ಕಮಲದಲಿ ಪ್ರಾಮಾಣಿಕ ಹುಡುಕಾಟ,
ಹೊರ ಆಚರಣೆಗಳೆಲ್ಲ ಬೂಟಾಟಿಕೆಯ ಹುಡುಗಾಟ,
ತೊಳೆ ಮನದ ಕೊಳೆ ಹರಿಸು ನೈಜಭಕ್ತಿಯ ಹೊಳೆ,
ಆತ್ಮಸಾಕ್ಷಾತ್ಕಾರದ ಎಳೆ- ಭಗವತ್ಸಾಕ್ಷಾತ್ಕಾರದ ಬೆಳೆ.
ಬೆಳಗು -ಬೆರಗು
ಕರುಣಿಸಿದ ಭಗವಂತ ಮತ್ತೊಂದು ಬೆಳಗು,
ಸಾಕ್ಷಿಯಾಗಲುಂಟು ವಿಸ್ಮಯಗಳ ಬೆರಗು,
ಸಾಕ್ಷಿಯಾದಾಗಲಷ್ಟೇ ತೆರೆದೀತು ಅದು ತೆರೆ,
ಅಹಂ ಮಮಗಳಲಿ ಬಿದ್ದು ಬೀಳದಿರಲಿ ಬರೆ.
ಹೆಂಡತಿ -ಅವರವರ ಗತಿ
ಸಾಧನೆಗೆ ಸಹಕರಿಸುವ ಹೆಂಡತಿ,
ಸ್ವರ್ಗವೇ ಅದು ಧರೆಗಿಳಿದ ರೀತಿ,
ಸಹಕಾರವೀಯದ ಅಸಹಜ ಸತಿ,
ನರಕ ತಂದಿಟ್ಟ ಅಸಹನೀಯ ವಿಕೃತಿ.
ಪಿಂಡ -ದಂಡ
ಬೇಡ ಹುಚ್ಚು ಅಂಧಾನುಕರಣೆ,
ಅರಿತು ಮಾಡುವುದು ಆಚರಣೆ,
ಗೊತ್ತಿಲ್ಲದೇ ಹಾಕುವ -ಪಿಂಡ,
ಅರ್ಥವಿಲ್ಲದಿರೆ ಆಯ್ತು-ದಂಡ.
ಶ್ರಾದ್ಧ -ಬೇಡಿಕೆಗಷ್ಟೇ ಬದ್ಧ
ಅವರವರ ಪುಣ್ಯ ಪಾಪದಿಂದ ಅವರವರ ಗತಿ,
ನೀನು ಹಾಕುವ ಪಿಂಡ ಬದಲಿಸಲಾರದು ಸ್ಥಿತಿ,
ಊರ್ಧ್ವ ಪಯಣದಲಿ ಏನಾದರೂ ಇದ್ರೆ ತಡೆ,
ಪ್ರಾರ್ಥನೆಯದುವೇ ಶ್ರಾದ್ಧ-ಬೇಡುತ್ತಾ ಬಿಡುಗಡೆ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula