Tuesday, 26 September 2017

Bhava Spandana - 19


ಭಾವ ಸ್ಪಂದನ by “ತ್ರಿವೇಣಿ ತನಯ
ಪರಭಾರೆ
ನೀನಾಗೇ ಬರಲಿಲ್ಲ ನಿನ್ನಿಚ್ಛದಿ ಹೋಗಲಾರೆ,
ಮಧ್ಯದಿ ಎಂಥದು ಅರ್ಥವಿರದ ಪರಭಾರೆ?
ಇರುವ ಮೂರು ದಿನ ಪ್ರೀತಿಸುತ ಬಾಳು,
ಹಾರಾಡಿದವರು ಏನು ಒಯ್ದಿದ್ದಾರೆ ಹೇಳು!
ನಡತೆ -ತಪವಂತೆ!
ಚೂರಿ ಹಿಡಿದು ಚುಚ್ಚಿದರಷ್ಟೇ ಅಲ್ಲ ಕ್ರೌರ್ಯ,
ನಡತೆ ಬಿರುಮಾತುಗಳದೂ ಅದೇ ತಾತ್ಪರ್ಯ,
ಪ್ರೀತಿಸಲಾಗದಿದ್ದರೆ ನೋಯಿಸದಿರು ಯಾರನ್ನ,
ಮಾನವತ್ವವ ಮೆರೆ ಮನುಜ ಕಣ್ಮುಚ್ಚುವ ಮುನ್ನ.
ಕಾಣದ ಸ್ನೇಹಿತ
ಹುಡುಕಿದರೆ ಸಿಗದವನು,
ಜತೆಗಿದ್ದೂ ಕಾಣದವನು,
ಎಲ್ಲರೊಳು ಇರುವವನು,
ಎಲ್ಲರಂತಲ್ಲ ಅವನು.
ಲೋಕದ ಸ್ನೇಹಿತ
ಕಲಿತ ವಿದ್ಯೆ ಬುದ್ಧಿ ಪರದೇಶದಲ್ಲಿ,
ಅನುಕೂಲ ಸತಿಯು ಮನೆಯಲ್ಲಿ,
ತಕ್ಕ ಔಷಧಿಯದು ಅನಾರೋಗ್ಯದಲ್ಲಿ,
ಸತ್ಕರ್ಮಗಳವು ನೋಡು ಮರಣದಲ್ಲಿ.
ನೋಟ -ಅನುಭವದ ಆಟ
ಕಾಣುವುದು ನಾವಲ್ಲ,
ಕರುಣಿಸಬೇಕವ- ನಲ್ಲ,
ಎದೆಯೊಳಗೆ ಹರಿವ ಜೀವ ಝರಿ,
ಅನುಭವ ಕೊಡಬೇಕವನೇ ಹರಿ.
[Contributed by Shri Govind Magal]

Saturday, 23 September 2017

Bhava Spandana - 18

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಚಿತ್ತಕ್ಕೆ ತಂದಿದ್ದು ಅತ್ತಿತ್ತ ಮಾಡದಿರು,
ಒತ್ತಾಗಿ ನಿಂತು ನಿತ್ಯ ಪ್ರಗತಿ ತೋರು,
ಎತ್ತಲೋ ಕಳುಹಿ ಏನೇನೋ ಮಾಡಿಸುವಿ,
ಮತ್ತೆಲ್ಲ ಮಾಡಿದ್ದು ನಿನ್ನಪೂಜೆ ಆಗಲೆಂಬ ಮನವಿ.

ನಿನ್ನೊಳಗೇ ಹುಡುಕು

ಹುಡುಕದಿರು ಅನ್ಯರಲಿ ಕೆಡುಕು,
ದುಡುಕದೇ ನಿನ್ನ ನೀ - ಕೆದಕು,
ಕಂಡೀತು ನಿನ್ನೊಳಗಣ ಹುಳುಕು,
ಕಡಿದು ಕಟ್ಟೆ ಹಾಕಿದ್ದು - ಸಾಕು,
ಹಿಡಿ ಸತ್ಸಂಗದ ತಿಳಿ ಬೆಳಕು,
ಪ್ರೀತಿಯಲಿ ಬಾಳು ದಿನ ನಾಕು.

ಬುದ್ಧಿ - ಸಿದ್ಧಿ

ಮನುಷ್ಯನ ಮನಸ್ಥಿತಿ ಯಾರ ಸ್ವತ್ತು?
ಬದಲಾಗುತ್ತಲೇ ಇರತ್ತೆ ಮೂರ್ಹೊತ್ತು,
ಹಾಲು ಕುಡಿವಷ್ಟರಲ್ಲಿ ಹದಿನಾರು ಬುದ್ಧಿ,
ಇಂತಹಾ ಅವಸ್ಥೆಯಲಿ ಎಲ್ಲಿ ಅದು ಸಿದ್ಧಿ!

ಸನ್ಮಾರ್ಗದ ಬದುಕು

ಬದುಕಿರುವಷ್ಟು ಕಾಲ ಸತ್ಪ್ರಭಾವ ಬೀರುತ ಬಾಳು,
ನೀಡುತಲಿರು ಅನ್ನ ನೀರು ಜ್ಞಾನದಾ ತಂಪು ನೆರಳು,
ಸನ್ಮಾರ್ಗದ ಬದುಕು ಕಳೆವುದು ಭವದ ಬೇಗೆ,
ಬರೀ ಲೌಕಿಕಲೋಭದಿ ಮುಳುಗಿ ಆಗದಿರು ಕಾಗೆ.

ಸ್ವಂತಿಕೆಯ ಬೆಲೆ -ಕಂಡೀತು ನೆಲೆ

ನಾಟಕವ ಬಿಟ್ಟು ನೀನಿರುವಂತೆ ಬಾಳು,
ಪರದೆ ಕಳಚಲು ಒಮ್ಮೆ ಎಲ್ಲವೂ ಬೋಳು,
ನಿನ್ನ ನಾಟಕಕೆ ಇಲ್ಲ ಮೂರು ಕಾಸಿನ ಬೆಲೆ,
ನಿನ್ನತನದಲಿ ಬದುಕಿ ಕಂಡುಕೋ ನಿನ್ನ ನೆಲೆ.
[Contributed by Shri Govind Magal]

Wednesday, 20 September 2017

Bhava Spandana - 17

ಭಾವ ಸ್ಪಂದನ by “ತ್ರಿವೇಣಿ ತನಯ

ಪಕ್ಷಮಾಸವೂ ನೀನೆ-ಪರ್ವಕಾಲವೂ ನೀನೆ

ಹಬ್ಬ ಹರಿದಿನ ಶ್ರಾದ್ಧ ಪಕ್ಷ,
ಎಲ್ಲದರಲಿ ಅವನ ದೀಕ್ಷ,
ಎಲ್ಲ(ದ)ರ ನಿಯಾಮಕ ಅವನು,
ಅಸ್ವತಂತ್ರ ಜೀವ ಮಾಡಲಾರ ಏನೂ.

ಸಾವಿರದವನ ಸಹಸ್ರನಾಮ

ಸಾವಿರದ ವಿಷ್ಣುವಿನ ಸಹಸ್ರನಾಮ,
ಜಪಿಸಲು ಜೀವವದುವೆ ಪವಿತ್ರನೇಮ,
ಆದೀತು ಜೀವನವೇ ಉತ್ಕೃಷ್ಟ ಹೋಮ,
ಶರಣಾಗಲಿ ಜೀವ -ಅವ ಸಾರ್ವಭೌಮ.

ಬೇಡ ದಾಹ -ಬಿಡು ವ್ಯಾಮೋಹ

ತೃಪ್ತಿಯೇ ಇರದ ಅತಿಮೋಹ ದಾಹ,
ಕಪಟಾಚರಣೆ ಮೇಲೆಯೇ ವ್ಯಾಮೋಹ,
ಭ್ರಾಂತ ಮನಸಿನ ವಕ್ರ ನೋಟ,
ಕೆಡುಕಿನುದ್ದೇಶದ ಕೊಳಕು ಆಟ.

ತಿಳಿ ಸ್ವಭಾವ-ಬೇಡ ಪ್ರಭಾವ

ಎನಿತು ನೋಡಿದರೂ ಜೀವಗಳ ಸ್ವಭಾವ ಮೂರು,
ಮಿಶ್ರಣದಿ ಹೊರ ಹೊಮ್ಮೀತು ಬಗೆ ಬಗೆ ಹಲವಾರು,
ಸ್ವಭಾವಗಳ ಪ್ರಶ್ನಿಸಲು ಜೀವ ನೀನ್ಯಾರು?
ಇದ್ದದಿದ್ದಂತೆ ಒಪ್ಪು ಬೇಡ ತಕರಾರು.

ಪ್ರಯತ್ನವಿರಲಿ ಸತತ ತಿಳಿ ನಿನದ್ಯಾವ ಬೇರು?
ಪ್ರಾಮಾಣಿಕ ನಡತೆಯಲಿ ಬೆಳೆಸದನ ಎರೆದು ನೀರು,
ಒಮ್ಮೆ ಅರಿವಾಗಲು ನಿನ್ನದ್ಯಾವ ರೀತಿ,
ರೀತಿ ವಿಕಸಿಸುವುದೇ ನಿಜಬಾಳಿನ ನೀತಿ.
[Contributed by Shri Govind Magal]