Monday, 16 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 60-67

[ಶಲ್ಯ-ಜರಾಸಂಧನ ಮಗಳಂದಿರನ್ನು ನಕುಲ-ಸಹದೇವರು ಮದುವೆಯಾದಮೇಲೆ ಅವರು ದ್ರೌಪದಿಯನ್ನು ಅತ್ತಿಗೆಯಂತೆ ನೋಡುತ್ತಿದ್ದರು ಎಂದು ಹಿಂದೆ ಹೇಳಿರುವುದನ್ನು ನೋಡಿದ್ದೇವೆ. ಇದೀಗ ಈ ಸಂಧರ್ಭದಲ್ಲಿ  ಧರ್ಮರಾಜನ ಮನಪರಿವರ್ತನೆಯ ಕುರಿತು ಹೇಳುತ್ತಾರೆ:]

 

ತತಃ ಪರಂ ಧರ್ಮ್ಮರಾಜೋ ನಿರ್ವಿಣ್ಣಃ ಸ್ವಕೃತೇನ ಹ ।

ಭ್ರಾತೃಭಾರ್ಯ್ಯಾಪದೇ ಕೃಷ್ಣಾಂ ಸ್ಥಾಪಯಾಮಾಸ ಸರ್ವದಾ    ॥೨೨.೬೦॥

ಆನಂತರ ಯುಧಿಷ್ಠಿರ ತಾನು ಮಾಡಿದ ತಪ್ಪಿನಿಂದ ನೊಂದ,

ದ್ರೌಪದಿಯನ್ನು ತನ್ನ ಸೋದರ ಪತ್ನಿ ಸ್ಥಾನದಲ್ಲಿ ಸ್ಥಾಪಿಸಿದ.

 

ಊಷುರ್ವನೇ ಚ ತೇ ಪಾರ್ತ್ಥಾ ಮುನಿಶೇಷಾನ್ನಭೋಜಿನಃ ।

ಭುಕ್ತವತ್ಸ್ವೇವಾನುಜೇಷು ಭುಙ್ಕ್ತೇ ರಾಜಾ ಯುಧಿಷ್ಠಿರಃ              ॥೨೨.೬೧॥

 

ಅಲಙ್ಘ್ಯತ್ವಾತ್ ತದಾಜ್ಞಾಯಾ ಅನುಜಾಃ ಪೂರ್ವಭೋಜಿನಃ ।

ತಸ್ಯಾನನ್ತರಮೇವೈಕಾ ಭುಙ್ಕ್ತೇ ಸಾ ಪಾರ್ಷತಾತ್ಮಜಾ            ॥೨೨.೬೨॥

ವನವಾಸದಲ್ಲಿ ಮುನಿಗಳದೆಲ್ಲಾ ಆದಮೇಲೆ ಊಟ,

ಪಾಂಡವರು ಶೇಷಾನ್ನವನ್ನು ಸ್ವೀಕರಿಸುವ ಪರಿಪಾಠ.

ತಮ್ಮಂದಿರದೆಲ್ಲಾ ಆದ ನಂತರ ಭೋಜನ,

ಯುಧಿಷ್ಠಿರನದಾಗುತ್ತಿತ್ತು ವೈಶ್ವಾನರ ಯಜ್ಞ.

ತಮ್ಮಂದಿರು ಮೊದಲು ಸ್ವೀಕರಿಸುತ್ತಿದ್ದರು ಮೀರದೇ ಅಣ್ಣನ ಆಜ್ಞ,

ಧರ್ಮರಾಜನದೂ ಊಟವಾದಮೇಲೆ ಕೊನೆಯಲ್ಲಿ ದ್ರೌಪದಿಗೆ ಅನ್ನ.

 

ಏವಂ ಸದಾ ವಿಷ್ಣುಪರಾಯಣಾನಾಂ ತತ್ಪ್ರಾಪಣಾನ್ನೈಕಭುಜಾಂ ಪ್ರಯಾತಃ ।

ಸಂವತ್ಸರಸ್ತತ್ರ ಜಗಾದ ಕೃಷ್ಣಾ ಭೀಮಾಜ್ಞಯಾ ಧರ್ಮ್ಮರಾಜಂ ಸುವೇತ್ರೀ ॥೨೨.೬೩॥

ಈರೀತಿಯಾಗಿ ವಿಷ್ಣು ಭಕ್ತರಾದ ಪಾಂಡವರು,

ದೇವರ ನೈವೇದ್ಯವನ್ನು ಮಾತ್ರ ಸ್ವೀಕರಿಸುತ್ತಿದ್ದರು.

ಇದರಂತೆ ಒಂದು ಸಂವತ್ಸರ ಕಳೆದಾಗ,

ದ್ರೌಪದಿಗೆ ಆಗಿ ಭೀಮನ ಒಪ್ಪಿಗೆಯ ಯೋಗ,

ಧರ್ಮರಾಜನ ಉದ್ದೇಶಿಸಿ ಮಾತನಾಡುವಳಾಗ.

 

ಅತಿಮಾರ್ದ್ದರವಯುಕ್ತತ್ವಾದ್ ಧರ್ಮ್ಮರಾಜಶ್ಚತುರ್ದ್ದಶೇ ।

ಅಪಿ ವರ್ಷೇ ಗುರುಭಯಾದ್ ರಾಜ್ಯಂ ನೇಚ್ಛೇದಿತಿ ಪ್ರಭುಃ ।

ಮಾರುತಿಃ ಪ್ರೇಷಯಾಮಾಸ ಕೃಷ್ಣಾಂ ಪ್ರಸ್ತಾವಹೇತವೇ ॥೨೨.೬೪॥

ಧರ್ಮರಾಜನದು ಏನೂ ಕೇಳದ ಅತಿ ಮೃದು ಸ್ವಭಾವ,

ಹದಿನಾಕು ವರ್ಷಾನಂತರವೂ ಗುರುಹಿರಿಯರ ಭಯ.

ಅವಧಿ ಮೀರಿದರೂ ಅವನು ರಾಜ್ಯಪಟ್ಟ ಬಯಸಲಾರ,

ಭೀಮ ಅದನ್ನು ಪ್ರಸ್ತಾಪಿಸುತ್ತಾನೆ ದ್ರೌಪದೀದೇವಿ ದ್ವಾರ.

 

ಕ್ಷಮಾ ಸರ್ವತ್ರ ಧರ್ಮ್ಮೋ ನ ಪಾಪಹೇತುಶ್ಚ ದುರ್ಜ್ಜನೇ ।

ರಾಜ್ಞಾಂ ಸಾಮರ್ತ್ಥ್ಯಯುಕ್ತಾನಾಮಿತಿ ಸಂಸ್ಥಾಪ್ಯ ಶಾಸ್ತ್ರತಃ ॥೨೨.೬೫॥

ಎಲ್ಲೆಡೆ ಎಲ್ಲರನ್ನೂ ಕ್ಷಮಿಸುವುದು ಅಲ್ಲ ಧರ್ಮ,

ಸಜ್ಜನರ ಸಣ್ಣಪುಟ್ಟ ಪಾಪ ಸಹಿಸುವುದದು ಮರ್ಮ.

ದುರ್ಜನರ ಕ್ಷಮಿಸುವುದು ಪಾಪಕ್ಕೇ ಕಾರಣ,

ಬಲಿಷ್ಠ ರಾಜರಿಗಿದು ವಿಧಿಸಿರುವಂಥ ಶಾಸನ.

ಭೀಮ ಇದನ್ನೆಲ್ಲಾ ವಿವರಿಸಿ ಹೇಳಿ ದ್ರೌಪದಿಗೆ,

ಅವಳನ್ನೇ ಕಳಿಸುತ್ತಾನೆ ಧರ್ಮರಾಜನ ಬಳಿಗೆ.

 

ಹತ್ವಾ ಚತುರ್ದ್ದಶೇ ವರ್ಷೇ ಧಾರ್ತ್ತರಾಷ್ಟ್ರಾನರಾಜ್ಯದಾನ್ ।

ಕರ್ತ್ತುಂ ರಾಜ್ಯಂ ಪುರೋ ಗನ್ತಾ ಭವಾನೀತ್ಯಗ್ರಜೇನ ಹ ॥೨೨.೬೬॥

 

ಕಾರಯನ್ ಸತ್ಯಶಪಥಂ ವಿವಾದಸ್ಯ ಕ್ರಮೇಚ್ಛಯಾ ।

ಆದಿಶತ್ ಪ್ರಥಮಂ ಕೃಷ್ಣಾಂ ಭೀಮಃ ಸಾ ನೃಪಮಬ್ರವೀತ್ ॥೨೨.೬೭॥

ಕಡೆಗೆ ಹದಿನಾಕನೇ ವರ್ಷ ರಾಜ್ಯ ಕೊಡದ ದುರ್ಯೋಧನಾದಿಗಳನ್ನ,

ಯುದ್ಧದಿ ಕೊಂದು ವಶಪಡಿಸಿಕೊಳ್ಳುತ್ತೇನೆ ಸಲ್ಲಬೇಕಾದ ರಾಜ್ಯಭಾರವನ್ನ.

ಈ ರೀತಿಯಾಗಿ ಮೃದುಧರ್ಮರಾಜನಿಂದ  ಮಾಡಿಸಲಿಕ್ಕಾಗಿ ಶಪಥ,

ವಿವಾದಪೀಠಿಕೆಯಾಗಿ ದ್ರೌಪದಿಯ ಕಳಿಸುವ ಭೀಮ ಧರ್ಮರಾಜನತ್ತ.

 [Contributed by Shri Govind Magal]

Saturday, 14 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 54-59

 

ಪಾಣ್ಡವಾನಾಂ ಚ ಯಾ ಭಾರ್ಯ್ಯಾಃ ಪುತ್ರಾ ಅಪಿ ಹಿ ಸರ್ವಶಃ ।

ಅನ್ವೇವ ಪಾಣ್ಡವಾನ್ ಯಾತಾ ವನಮತ್ರೈವ ಚ ಸ್ಥಿತಾಃ ॥೨೨.೫೪॥

ಪಾಂಡವರ ಬೇರೆ ಬೇರೆ ಹೆಂಡಂದಿರು ಮತ್ತವರ ಮಕ್ಕಳೆಲ್ಲಾ,

ಅವರನ್ನನುಸರಿಸಿ ಕಾಡಿಗೆ ಹೋಗಿ ಅವರೊಂದಿಗೆ ಇದ್ದರೆಲ್ಲಾ.

 

ಧೃಷ್ಟದ್ಯುಮ್ನಸ್ತತಃ ಕೃಷ್ಣಾಂ ಸಾನ್ತ್ವಯಿತ್ತ್ವೈವ ಕೇಶವಮ್ ।

ಪ್ರಣಮ್ಯ ಸಮನುಜ್ಞಾತೋ ಭಾಗಿನೇಯೈಃ ಪುರಂ ಯಯೌ         ॥೨೨.೫೫॥

ಧೃಷ್ಟದ್ಯುಮ್ನ ತಂಗಿ ದ್ರೌಪದಿಯ ಸಂತೈಸಿದ,

ಕೃಷ್ಣಗೆ ನಮಸ್ಕರಿಸಿ ಅವನನುಜ್ಞೆಯ ಪಡೆದ.

ದ್ರೌಪದೀಪುತ್ರರಾದ ತನ್ನ ಅಳಿಯರೊಂದಿಗೆ,

ತೆರಳಿದ ತನ್ನ ಪಟ್ಟಣವಾದ ಪಾಂಚಾಲದೆಡೆಗೆ.

 

ಧೃಷ್ಟಕೇತುಶ್ಚ ಭಗಿನೀಂ ಕಾಶಿರಾಜಃ ಸುತಾಮಪಿ ।

ಪುರಂ ಯಯತುರಾದಾಯ ಕುನ್ತ್ಯೈವಾನ್ಯಾಃ ಸಹ ಸ್ಥಿತಾಃ           ॥೨೨.೫೬॥

ಅಣ್ಣ ಧೃಷ್ಟಕೇತು ಧರ್ಮರಾಜ ಪತ್ನಿಯಾದ ದೇವಕಿಯನ್ನು,

ಕಾಶಿರಾಜ ತನ್ನ ಮಗಳು ಭೀಮನ ಪತ್ನಿಯಾದ ಕಾಳಿಯನ್ನು,

ತಮ್ಮ ತಮ್ಮ ಪಟ್ಟಣಗಳಿಗೆ ಕರೆದೊಯ್ದರು,

ಮಿಕ್ಕವರು ಕುಂತಿಯೊಂದಿಗೆ ವಿದುರನಲ್ಲಿದ್ದರು.

 

ಪಾರ್ವತೀ ನಕುಲಸ್ಯಾSಸೀದ್ ಭಾರ್ಯ್ಯಾ ಪೂರ್ವಂ ತಿಲೋತ್ತಮಾ ।

ಪೂರ್ವೋಕ್ತೇ ಚೈವ ಯಮಯೋರ್ಭಾರ್ಯ್ಯೇ ಕುನ್ತ್ಯಾ ಹಿ ವಾರಿತಾಃ ॥೨೨.೫೭॥

ತಿಲೋತ್ತಮೆ ಎಂಬ ಅಪ್ಸರೆ ನಕುಲನ ಹೆಂಡತಿಯಾಗಿ ಬಂದವಳ ಹೆಸರು ಪಾರ್ವತಿ,

ಅವಳನ್ನೂ, ನಕುಲ ಸಹದೇವರ ಪತ್ನಿಯರನ್ನೂ ತಡೆದಿಟ್ಟುಕೊಂಡಿದ್ದಳು ಕುಂತಿ.

(ಶಲ್ಯ ಜರಾಸಂಧ ಪುತ್ರಿಯರು ನಕುಲ ಸಹದೇವರ ಪತ್ನಿಯರೆಂಬುದು ಸಂಗತಿ.)

 

ಸುಭದ್ರಾಮಭಿಮನ್ಯುಂ ಚ ರಥಮಾರೋಪ್ಯ ಕೇಶವಃ ।

ಪಾಣ್ಡವಾನಭ್ಯನುಜ್ಞಾಯ ಸಭಾರ್ಯ್ಯಃ ಸ್ವಪುರಿಂ ಯಯೌ ॥೨೨.೫೮॥

ಸುಭದ್ರೆ ಅಭಿಮನ್ಯು ಅವರುಗಳನ್ನು ಕೃಷ್ಣ ರಥವನ್ನೇರಿಸಿಕೊಂಡ,

ಪಾಂಡವರಿಂದ ಬೀಳ್ಕೊಂಡು ದ್ವಾರಕೆಗೆ ಹೊರಟ ಭಾಮೆಯ ಸಂಗಡ.

 

ಕಞ್ಚಿತ್ ಕಾಲಂ ದ್ರೌಪದೇಯಾ ಉಷ್ಯ ಪಾಞ್ಚಾಲಕೇ ಪುರೇ ।

ಯಯುರ್ದ್ದ್ವಾರಾವತೀ ಮೇವ ತತ್ರೋಷುಃ ಕೃಷ್ಣಲಾಳಿತಾಃ ॥೨೨.೫೯॥

ದ್ರೌಪದಿಯ ಮಕ್ಕಳು ಪಾಂಚಾಲದಲ್ಲಿದ್ದರು ಕೆಲ ಕಾಲ ತಾತನೊಂದಿಗೆ,

ನಂತರದಲ್ಲಿ ಕೃಷ್ಣಪೋಷಿತರಾದರವರು ತೆರಳಿ ಪಟ್ಟಣ ದ್ವಾರಕೆಗೆ.

 [Contributed by Shri Govind Magal]

Friday, 13 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 47-53

 

ಶ್ರುತ್ವಾ ವಚಃ ಸ ಪವನಸ್ಯ ಶರಂ ತ್ವಮೋಘಂ ಸಞ್ಜಹ್ರ ಆಶು ಸ ಚ ಸಾಲ್ವಪತಿಃ ಸ್ವಸೌಭಮ್ ।

ಆರುಹ್ಯ ಬಾಲಕಲಹೇನ ಕಿಮತ್ರ ಕಾರ್ಯ್ಯಂ ಕೃಷ್ಣೇನ ಸಙ್ಗರ ಇತಿ ಪ್ರಯಯೌ ಸ್ವದೇಶಮ್ ॥೨೨.೪೭॥

ವಾಯುವಚನವ ಕೇಳಿಸಿಕೊಂಡ ಪ್ರದ್ಯುಮ್ನ ತಾನು ಬಾಣ ಹಿಂದೆಳೆದು ಬತ್ತಳಿಕೆ ಸೇರಿಸಿದ,

ಸಾಲ್ವನು : ಹುಡುಗನೊಡನೇನು ಯುದ್ಧ ಅದು ಕೃಷ್ಣನೊಡನೇ ಸಿದ್ಧವೆಂದು ತನ್ನ ದೇಶಕ್ಕೆ ತೆರಳಿದ.

 

  ಪ್ರದ್ಯುಮ್ನಸಾಮ್ಬಗದಸಾರಣಚಾರುದೇಷ್ಣಾಃ ಸೇನಾಂ ನಿಹತ್ಯ ಸಹ ಮನ್ತ್ರಿಗಣೈಸ್ತದೀಯಾಮ್ ।

  ಆಹ್ಲಾದಿನಃ ಸ್ವಪುರಮಾಯಯುರಪ್ಯಹಂ ಚ ತತ್ರಾಗಮಂ ಸಪದಿ ತೈಃ ಶ್ರುತವಾನಶೇಷಮ್ ॥೨೨.೪೮॥

ಪ್ರದ್ಯುಮ್ನ ಸಾಂಬ ಗದ ಸಾರಣ ಚಾರುದೇಷ್ಣ ಮುಂತಾದವರೆಲ್ಲ,

ಸಾಲ್ವ ಸೇನೆಯನ್ನು ನಾಶಗೊಳಿಸಿ ಸಂತಸದಿಂದ ವಾಪಸಾಗುತ್ತಿದ್ದರೆಲ್ಲ.

ಅದೇ ಸಮಯಕ್ಕೆ ನಾನು ಅಲ್ಲಿಗೆ ತಲುಪಿದೆ,

ನಡೆದ ಘಟನೆಗಳನ್ನೆಲ್ಲಾ ಅವರಿಂದ ಕೇಳಿದೆ.

 

 ಯಸ್ಮಿಞ್ಛರೇ ಕರಗತೇ ವಿಜಯೋ ದ್ಧ್ರುವಃ ಸ್ಯಾನ್ಮತ್ತೇಜಸಾ ತದನುಸಙ್ಗ್ರಹಣಾತ್ ಸುತಾನ್ಮೇ ।

 ಯಾತಂ ನಿಶಮ್ಯ ರಿಪುಮಾತ್ಮಪುರೀಂ ಚ ಭಗ್ನಾಂ ದೃಷ್ಟ್ವೈವ ತೇನ ತದನುಬ್ರಜನಂ ಕೃತಂ ಮೇ ॥೨೨.೪೯॥

ಯಾವ ಆ ಬಾಣದಿಂದ ಖಚಿತವಾಗಿತ್ತು ಪ್ರದ್ಯುಮ್ನನ ಗೆಲುವು,

ನನ್ನ ತೇಜಸ್ಸಿನ ಬಾಣ ಹಿಂಪಡೆದ ನನ್ನ ಮಗ ಮುಂದೂಡಿದ್ದವನ ಸಾವು.

ಹಾಳಾದ ದ್ವಾರಕೆಯ ಸರಿಮಾಡಲು ಹೇಳಿದೆ,

ನಾನು ಸಾಲ್ವನನ್ನು ಬೆನ್ನಟ್ಟಿಕೊಂಡು ಹೋದೆ.

 

ತಂ ಸಾಗರೋಪರಿಗಸೌಭಗತಂ ನಿಶಾಮ್ಯ ಮುಕ್ತೇ ಚ ತೇನ ಮಯಿ ಶಸ್ತ್ರಮಹಾಸ್ತ್ರವರ್ಷೇ ।

ತಂ ಸನ್ನಿವಾರ್ಯ್ಯ ತು ಮಯಾ ಶರಪೂಗವಿದ್ಧೋ ಮಾಯಾ ಯುಯೋಜ ಮಯಿ ಪಾಪತಮಃ ಸ ಸಾಲ್ವಃ ॥೨೨.೫೦॥

ಸಾಲ್ವ ಸೌಭ ವಿಮಾನದಲ್ಲಿ ಸಮುದ್ರದ ಮೇಲೆ ಹೋಗುತ್ತಿದ್ದ,

ಸುರಿಸುತ್ತಿದ್ದ ಬಾಣಗಳ ತಡೆದು ಹೊಡೆದೆನವನ ಬಾಣಗಳಿಂದ.

ಪಾಪಿ ಸಾಲ್ವ ವಿವಿಧ ಮಾಯಾಜಾಲ ಪ್ರಯೋಗ ಮಾಡಿದ.

 

ತಾಃ ಕ್ರೀಡಯಾ ಕ್ಷಣಮಹಂ ಸಮರೇ ನಿಶಾಮ್ಯ ಜ್ಞಾನಾಸ್ತ್ರತಃ ಪ್ರತಿವಿಧೂಯ ಬಹೂಂಶ್ಚ ದೈತ್ಯಾನ್ ।

ಹತ್ವಾSSಶು ತಂ ಚ ಗಿರಿವರ್ಷಿಣಮಾಶು ಸೌಭಂ ವಾರ್ದ್ಧೌ ನ್ಯಪಾತಯಮರೀನ್ದ್ರವಿಭಿನ್ನಬನ್ಧಮ್ ॥

೨೨.೫೧ll

ಎಲ್ಲಾ ಮಾಯೆಗಳನ್ನು ನಿರಾಯಾಸದಿ ಕ್ಷಣದಲ್ಲಿ ಆಟದಂತೆ,

ಜ್ಞಾನಾಸ್ತ್ರದಿಂದ ಸೋಲಿಸಿ ಸಂಹರಿಸಿದೆ ದೈತ್ಯರ ಆ ಸಂತೆ.

ಬೆಟ್ಟಗಳ ಮಳೆಯನ್ನೇ ಸುರಿಸುತ್ತಿದ್ದ ಸಾಲ್ವನ ಸಮುದ್ರಕೆ ಕೆಡವಿದೆ,

ನಾ ಬಿಟ್ಟ ಚಕ್ರದಿಂದವನ ವಿಮಾನ ತುಂಡಾಗಿ ಬೀಳುವಂತೆ ಮಾಡಿದೆ.

 

ತಂ ಸ್ಯನ್ದನಸ್ಥಿತಮಥೋ ವಿಭುಜಂ ವಿಧಾಯ ಬಾಣೇನ ತದ್ರಥವರಂ ಗದಯಾ ವಿಭಿದ್ಯ ।

ಚಕ್ರೇಣ ತಸ್ಯ ಚ ಶಿರೋ ವಿನಿಕೃತ್ಯ ಧಾತೃಶರ್ವಾದಿಭಿಃ ಪ್ರತಿನುತಃ ಸ್ವಪುರೀಮಗಾಂ ಚ ॥೨೨.೫೨॥

ವಿಮಾನ ನಾಶವಾಗಲು ಆ ಸಾಲ್ವ ರಥವೇರಿ ಯುದ್ಧಕೆ ಬಂದ,

ತೋಳು ಕಳಕೊಂಡು ರಥಹೀನನಾಗಿ ತಲೆ ಕತ್ತರಿಸಲ್ಪಟ್ಟು ಬಿದ್ದ.

ಬ್ರಹ್ಮ ರುದ್ರಾದಿಗಳಿಂದ ಸ್ತುತಿಸಲ್ಪಟ್ಟೆ,

ನನ್ನ ಪಟ್ಟಣ ದ್ವಾರಕೆಯತ್ತ ಹೊರಟೆ.

 

ತಸ್ಮಾದಿದಂ ವ್ಯಸನಮಾಸ ಹಿ ವಿಪ್ರಕರ್ಷಾನ್ಮೇ ಕಾರ್ಯ್ಯತಸ್ತ್ವಿತಿ ನಿಗದ್ಯ ಪುನಶ್ಚ ಪಾರ್ತ್ಥಾನ್ ।

ಕೃಷ್ಣಾಂ ಚ ಸಾನ್ತ್ವಯಿತುಮತ್ರ ದಿನಾನ್ಯುವಾಸ ಸತ್ಯಾ ಚ ಸೋಮಕಸುತಾಮನುಸಾನ್ತ್ವಯನ್ತೀ ॥೨೨.೫೩॥

ಹೀಗೆ ಕೃಷ್ಣ ವಿವರಿಸಿದ ತಾನು ನಡೆಸಿದ ಸಾಲ್ವಕಾರ್ಯ,

ಪಾಂಡವರಿಗಾದ ಕಷ್ಟ ತಾನು ಹೋಗಿದ್ದರಿಂದ ದೂರ.

ದ್ರೌಪದಿಯ ಸಮಾಧಾನ ಮಾಡುತ್ತಾ ಕೆಲಕಾಲ ಅಲ್ಲೇ ನಿಂತ,

ಸತ್ಯಭಾಮೆಯೂ ಜೊತೆಗಿದ್ದಳು ದ್ರೌಪದಿಯ ಸಂತೈಸುತ್ತ.

 [Contributed by Shri Govind Magal]