Saturday 17 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 66 -72

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ ಸೋsಚಿರೇಣ   ॥೧೧.೬೬॥

ಈರೀತಿ ಅವತರಿಸಿದ ಬೃಹಸ್ಪತಿಗೆ ಭರದ್ವಾಜರಿಟ್ಟ ಹೆಸರು ದ್ರೋಣ,
ಭರದ್ವಾಜ ತೊಡಿಸಿದರು ದ್ರೋಣಗೆ ಸರ್ವ ವೇದ ಶಾಸ್ತ್ರಗಳಾಭರಣ.
ಅತಿಶೀಘ್ರದಿ ಎಲ್ಲ ಕಲಿತ ದ್ರೋಣನಾದ ಸರ್ವ ವಿದ್ಯಾಪ್ರವೀಣ.

ಕಾಲೇ ಚ ತಸ್ಮಿನ್ ಪೃಷತೋsನಪತ್ಯೋ ವನೇ ತು ಪಾಞ್ಚಾಲಪತಿಶ್ಚಚಾರ ।
ತಪೋ ಮಹತ್ ತಸ್ಯ ತಥಾ ವರಾಪ್ಸರಾವಲೋಕನಾತ್ ಸ್ಕನ್ದಿತಮಾಶು ರೇತಃ ॥೧೧.೬೭॥

ದ್ರೋಣಾಚಾರ್ಯರು ಹುಟ್ಟಿಬಂದ ಆ ಕಾಲ,
ಪೃಶತನೆನ್ನುವ ರಾಜ-ದೇಶ ಅವನದು ಪಾಂಚಾಲ.
ಆ ರಾಜ ಮಕ್ಕಳಿಗಾಗಿ ಕಾಡಿನಲ್ಲಿ ಮಾಡುತ್ತಿದ್ದ ಮಹಾ ತಪಸ್ಸು,
ಊರ್ವಶಿಯನ್ನು ಕಂಡ ಪರಿಣಾಮ ಜಾರಿಬಿತ್ತವನ ರೇತಸ್ಸು.

ಸ ತದ್ ವಿಲಜ್ಜಾವಶತಃ ಪದೇನ ಸಮಾಕ್ರಮತ್ ತಸ್ಯ ಬಭೂವ ಸೂನುಃ ।
ಹಹೂ ತು ನಾಮ್ನಾ ಸ ವಿರಿಞ್ಚಗಾಯಕೋ ನಾಮ್ನಾssವಹೋ ಯೋ ಮರುತಾಂ ತದಂಶಯುಕ್ ॥೧೧.೬೮॥

ಪೃಶತ ರಾಜ ವಿಶೇಷವಾದ ನಾಚಿಕೆಯಿಂದ,
ಜಾರಿದ ರೇತಸ್ಸ ಮುಚ್ಚಿದ ತನ್ನ ಪಾದದಿಂದ.
ಆ ರೇತಸ್ಸಿನಿಂದ ಹಹೂ ಹೆಸರಿನ ಬ್ರಹ್ಮದೇವರ ಗಂಧರ್ವಗಾಯಕನ ಹುಟ್ಟು,
ಆತ ಆವಹನೆಂಬ ಮರುತ್ ದೇವತೆಯ ಅಂಶ ಉಳ್ಳವನೆಂಬುದು ಗುಟ್ಟು.

ಸ ದ್ರೋಣತಾತಾತ್ ಸಮವಾಪ ವೇದಾನಸ್ತ್ರಾಣಿ ವಿದ್ಯಾಶ್ಚ ತಥಾ ಸಮಸ್ತಾಃ ।
ದ್ರೋಣೇನ ಯುಕ್ತಃ ಸ ತದಾ ಗುರೋಃ ಸುತಂ ಸಹೈವ ನೌ ರಾಜ್ಯಮಿತಿ ಹ್ಯವಾದೀತ್ ॥೧೧.೬೯॥

ಹೀಗೆ ಹುಟ್ಟಿದ ಪೃಷತ್ ನ ಮಗ ;ದ್ರೋಣರಪ್ಪ ಭರದ್ವಾಜರಿಂದ,
ದ್ರೋಣನೊಡಗೂಡಿ ವೇದ ಅಸ್ತ್ರ ಸಮಸ್ತ ವಿದ್ಯೆಗಳ ಹೊಂದಿದ.
ವಿದ್ಯಾಭ್ಯಾಸ ಕಾಲದಲ್ಲಿ ಗುರುಪುತ್ರ ದ್ರೋಣರೊಂದಿಗೆ ಸಖ್ಯ ಒಡನಾಟ,
ರಾಜ್ಯದ ಭೋಗಭಾಗ್ಯವೆಲ್ಲ ನಮ್ಮಿಬ್ಬರಿಗೂ ಸಮಪಾಲು ಎಂದಿದ್ದನಾತ.

ಪದೇ ದ್ರುತತ್ವಾದ್ ದ್ರುಪದಾಭಿಧೇಯಃ ಸ ರಾಜ್ಯಮಾಪಾಥ ನಿಜಾಂ ಕೃಪೀಂ ಸಃ ।
ದ್ರೋಣೋsಪಿ ಭಾರ್ಯ್ಯಾಂ ಸಮವಾಪ್ಯ ಸರ್ವಪ್ರತಿಗ್ರಹೋಜ್ಝಶ್ಚ ಪುರೇsವಸತ್ ಸುಖೀ ॥೧೧.೭೦॥

ಪಾದದಿಂದ ಮುಚ್ಚಿದ್ದರಿಂದ ಪೃಶತ್ ನ ಮಗನ ಹೆಸರಾಯ್ತು ದ್ರುಪದ,
ತನ್ನ ತಂದೆಯ ಕಾಲದ ನಂತರ ಪಾಂಚಾಲ ದೇಶಕ್ಕಾತ ರಾಜನಾದ.
ದ್ರೋಣರು ತನ್ನವಳೇ ಆದ ಕೃಪಾಚಾರ್ಯರ ತಂಗಿಯನ್ನು ಮಾಡಿಕೊಂಡರು ಹೆಂಡತಿ,
ಪ್ರತಿಗ್ರಹ ವಿರಹಿತರಾಗಿ ಸುಖವಾಗಿ ನೆಮ್ಮದಿಯಲಿ  ವಾಸಿಸಿದ್ದ ನಗರವದು ಹಸ್ತಿನಾವತಿ.

ಸಿಲೋಞ್ಚವೃತ್ತ್ಯೈವ ಹಿ ವರ್ತ್ತಯನ್ ಸ ಧರ್ಮ್ಮಂ ಮಹಾನ್ತಂ ವಿರಜಂ ಜುಷಾಣಃ ।
ಉವಾಸ ನಾಗಾಖ್ಯಪುರೇ ಸಖಾ ಸ ದೇವವ್ರತಸ್ಯಾಥ ಕೃಪಸ್ಯ ಚೈವ  ॥೧೧.೭೧॥

ದ್ರೋಣಾಚಾರ್ಯರು ಆಯ್ಕೆ ಮಾಡಿಕೊಂಡದ್ದು ಸಿಲೋಂಛ ಧರ್ಮ,
ಅದರನುಗುಣ ಸಾಗುವ ಜೀವನಕ್ಕೆ ರಜೋಗುಣದ ಸ್ಪರ್ಶವಿರದ ಮರ್ಮ.
ಭಗವಂತಗೆ ಪ್ರಿಯವಾದ ಧರ್ಮಾಚರಣೆಯಿಂದ ಹಸ್ತಿನಾವತಿಯಲ್ಲಿ ವಾಸ,
ರಾಜಕುಮಾರ ದೇವವ್ರತ ಕೃಪಾಚಾರ್ಯರ ಗೆಳೆತನ ಮತ್ತು ಸಹವಾಸ.

ತೇಷಾಂ ಸಮಾನೋ ವಯಸಾ ವಿರಾಟಸ್ತ್ವಭೂದ್ಧಹಾ ನಾಮ ವಿಧಾತೃಗಾಯಕಃ ।
ಮರುತ್ಸು ಯೋ ವಿವಹೋ ನಾಮ ತಸ್ಯಾಪ್ಯಂಶೇನ ಯುಕ್ತೋ ನಿಜಧರ್ಮ್ಮವರ್ತ್ತೀ  ॥೧೧.೭೨॥

ದೇವವ್ರತ, ಕೃಪ, ದ್ರೋಣ ಮತ್ತು ದ್ರುಪದ,
ವಿರಾಟರಾಜ ಸಮನಾಗಿದ್ದವರಿಗೆ ವಯಸ್ಸಿನಿಂದ.
ಮೂಲದಲ್ಲಿ ಆತ ಬ್ರಹ್ಮದೇವರ ಹಾಡುಗಾರ ಹಹಾ ಗಂಧರ್ವ,
ವಿರಾಟನಲ್ಲಿ ವಿವಹ ಮರುತ್ ದೇವತೆಯ ಆವೇಶದ ಆಂತರ್ಯ.
ವಿರಾಟ ತನ್ನ ಧರ್ಮದಲ್ಲಿ ತೊಡಗಿ ನಡೆಸಿದ್ದ ತನ್ನ ರಾಜ್ಯಭಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula