Monday, 16 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 37 -42


ಶ್ರುತ್ವಾsಥ ಶಙ್ಖರವಮಮ್ಬುಜಲೋಚನಸ್ಯ ವಿದ್ರಾವಿತಾನಪಿ ನೃಪಾನಭಿವೀಕ್ಷ್ಯ ರಾಮಃ ।
ಯುದ್ಧ್ಯನ್ತಮೀಕ್ಷ್ಯ ಚ ರಿಪುಂ ವವೃಧೇ ಬಲೇನ ತ್ಯಕ್ತ್ವಾ ರಿಪುಂ ಮುಸಲಮಾದದ ಆಶ್ವಮೋಘಮ್॥೧೪.೩೭॥
ಬಲರಾಮ ಕೇಳಿಸಿಕೊಂಡ ತಾವರೆಕಂಗಳ ಶ್ರೀಕೃಷ್ಣನ ಶಂಖನಾದ,
ಓಡುತ್ತಿರುವ ರಾಜರುಗಳ ಕಂಡು ಯುದ್ಧೋತ್ಸಾಹದಿ ಬೆಳೆದುನಿಂದ.
ಶತ್ರುವನ್ನು ಬಿಟ್ಟು ಎತ್ತಿಕೊಂಡ ತನ್ನ ಅಮೋಘವಾದ ಮುಸಲಾಯುಧ.

ತೇನಾsಹತಃ ಶಿರಸಿ ಸಮ್ಮುಮುಹೇsತಿವೇಲಂ ಬಾರ್ಹದ್ರಥೋ ಜಗೃಹ ಏನಮಥೋ ಹಲೀ ಸಃ।
ತತ್ರೈಕಲವ್ಯ ಉತ ಕೃಷ್ಣಶರೈಃ ಫಲಾಯನ್ನಸ್ತ್ರಾಣಿ ರಾಮಶಿರಸಿ ಪ್ರಮುಮೋಚ ಶೀಘ್ರಮ್ ॥೧೪.೩೮॥
ತಲೆಗೆ ಒನಕೆಯ ಏಟು ತಿಂದ ಜರಾಸಂಧ ಮೂರ್ಛೆಹೋದ,
ಮೂರ್ಛೆಹೋದ ಜರಾಸಂಧನ ಬಲರಾಮ ತಾನೇಹಿಡಿದ.
ಕೃಷ್ಣಬಾಣಗಳಿಂದ ಘಾಸಿಗೊಂಡು ಏಕಲವ್ಯ ಓಡುತ್ತಿದ್ದ,
ಜರಾಸಂಧನ ಹಿಡಿದ ರಾಮನಮೇಲೆ ಅಸ್ತ್ರಗಳ ಪ್ರಯೋಗಿಸಿದ.

ಭೀತೇನ ತೇನ ಸಮರಂ ಭಗವಾನನಿಚ್ಛನ್ ಪ್ರದ್ಯುಮ್ನಮಾಶ್ವಸೃಜದಾತ್ಮಸುತಂ ಮನೋಜಮ್ ।
ಪ್ರದ್ಯುಮ್ನ ಏನಮಭಿಯಾಯ ಮಹಾಸ್ತ್ರಜಾಲೈ ರಾಮಾಸ್ತು ಮಾಗಧಮಥಾsತ್ಮರತಂ ನಿನಾಯ ॥೧೪.೩೯॥
ಭಯಭೀತನಾದ ಏಕಲವ್ಯನ ಮೇಲೆಬಿತ್ತು ಕೃಷ್ಣನ ದೃಷ್ಟಿ,
ಯುದ್ಧ ಬಯಸದೆ ಶ್ರೀಕೃಷ್ಣ ಮಾಡಿದ ಪ್ರದ್ಯುಮ್ನನ ಸೃಷ್ಟಿ.
ಸೃಷ್ಟಿಯಾದ ಪ್ರದ್ಯುಮ್ನ ಮಹದಸ್ತ್ರಗಳೊಂದಿಗೆ ಏಕಲವ್ಯಗೆ ಎದುರಾದ,
ಈ ಕಡೆ ಬಲರಾಮ ಜರಾಸಂಧನನ್ನು ತನ್ನ ರಥದ ಕಡೆಗೆ ಎಳೆದೊಯ್ದ.

ಯುಧ್ವಾ ಚಿರಂ ರಣಮುಖೇ ಭಗವತ್ಸುತೋsಸೌ ಚಕ್ರೇ ನಿರಾಯುಧಮಮುಂ ಸ್ಥಿರಮೇಕಲವ್ಯಮ್ ।
ಅಂಶೇನ ಯೋ ಭುವಮಗಾನ್ಮಣಿಮಾನಿತಿ ಸ್ಮ ಸ ಕ್ರೋಧತನ್ತ್ರಕಗಣೇಷ್ವಧಿಪೋ ನಿಷಾದಃ ॥೧೪.೪೦॥
ನಡೆಯಿತು ಕೃಷ್ಣಪುತ್ರ ಪ್ರದ್ಯುಮ್ನನ ನಿರಂತರ ಯುದ್ಧ,
ಗಟ್ಟಿ ಹೋರಾಡುತ್ತಿದ್ದ ಏಕಲವ್ಯನ ಮಾಡಿದ ನಿರಾಯುಧ.
ಸಿಗುತ್ತದಿಲ್ಲಿ ಈ ಏಕಲವ್ಯ ಯಾರೆಂಬ ವಿವರಣೆ,
ಕ್ರೋಧವಶ ರಕ್ಕಸರ ಒಡೆಯನವ ಮಣಿಮಂತನೇ.
ಒಂದಂಶದಿಂದ ಬೇಡನಾಗಿ ಹುಟ್ಟಿ ತಾ ಬಂದವನೇ.

ಪ್ರದ್ಯುಮ್ನಮಾತ್ಮನಿ ನಿಧಾಯ ಪುನಃ ಸ ಕೃಷ್ಣಃ ಸಂಹೃತ್ಯ ಮಾಗಧಬಲಂ ನಿಖಿಲಂ ಶರೌಘೈಃ ।
ಭೂಯಶ್ಚಮೂಮಭಿವಿನೇತುಮುದಾರಕರ್ಮ್ಮಾ ಬಾರ್ಹದ್ರಥಂ ತ್ವಮುಚದಕ್ಷಯಪೌರುಷೋsಜಃ॥೧೪.೪೧॥
ಎಂದೂ ಹುಟ್ಟು ಸಾವುಗಳಿರದ ಆ ಅನಂತ ಭಗವಂತ,
ಪ್ರದ್ಯುಮ್ನನ ಮರಳಿ ತನ್ನೊಳಗಿಟ್ಟುಕೊಂಡು ತಾನು ನಿಂತ.
ತನ್ನ ಬಾಣಗಳಿಂದ ಮಾಡಿದ ಜರಾಸಂಧನ ಸೈನ್ಯ ಸಂಹಾರ,
ಮತ್ತೆ ದುಷ್ಟರೊಡನೆ ಬರಲಿ ಎಂದು ಕಳಿಸಿದ ದೈವೀ ವ್ಯಾಪಾರ.
ಇದು ಭೂಭಾರಹರಣಕೆ ಭಗವಂತನೇ ಮಾಡಿದಂಥ ಕಾರ್ಯ,
ಅನೇಕ ತಾಮಸರ ವಧೆಗಾಗಿ ಜರಾಸಂಧನ ಉಳಿಸಿದ ಔದಾರ್ಯ.

ವ್ರೀಳಾನತಾಚ್ಛವಿಮುಖಃ ಸಹಿತೋ ನೃಪೈಸ್ತೈರ್ಬಾರ್ಹದ್ರಥಃ ಪ್ರತಿಯಯೌ ಸ್ವಪುರೀಂ ಸ ಪಾಪಃ ।
ಆತ್ಮಾಭಿಷಿಕ್ತಮಪಿ ಭೋಜವರಾಧಿಪತ್ಯೇ ದೌಹಿತ್ರಮಗ್ರತ ಉತ ಪ್ರಣಿಧಾಯ ಮನ್ದಃ ॥೧೪.೪೨॥
ನಾಚಿಕೆಯಿಂದ ಕುಗ್ಗಿ ಬಗ್ಗಿ ಕಳಾಹೀನನಾದ ಜರಾಸಂಧ,
ಮಿಕ್ಕ ರಾಜರ ಒಡಗೂಡಿ ತನ್ನ ಪಟ್ಟಣಕೆ ಹಿಂತಿರುಗಿದ.
ತಾನೇ ಪಟ್ಟಗಟ್ಟಿದ ಕಂಸನ ಮಗನ ಮುಂದುಮಾಡಿ ನಡೆದ.
ಹೇಗೆ ಅಂದು ಶ್ರೀರಾಮ ವಿಭೀಷಣಗೆ ಪಟ್ಟಗಟ್ಟಿದ್ದ ಯುದ್ಧಕ್ಕೂ ಮೊದಲು,
ಹಾಗೇ ದುಷ್ಟ ಜರಾಸಂಧ ಮೊಮ್ಮಗಗೆ ಪಟ್ಟಗಟ್ಟಿದ್ದ- ಎದುರಾಗಿತ್ತು ಸೋಲು.

No comments:

Post a Comment

ಗೋ-ಕುಲ Go-Kula