Wednesday 18 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 71 - 75

ಸಮ್ಮನ್ತ್ರ್ಯ ರಾಜತನಯೈರ್ದ್ಧೃತರಾಷ್ಟ್ರಜೈಸ್ತದ್ ದತ್ತಂ ಸ್ವಸೂದಮುಖತೋsಖಿಲಭಕ್ಷ್ಯಭೋಜ್ಯೇ ।
ಜ್ಞಾತ್ವಾ ಯುಯುತ್ಸುಗದಿತಂ ಬಲವಾನ್ ಸ ಭೀಮೋ ವಿಷ್ಣೋರನುಗ್ರಹಬಲಾಜ್ಜರಯಾಞ್ಚಕಾರ॥೧೪.೭೧॥
ರಾಜಕುಮಾರರೊಡನೆ ಕೌರವರ ಸಮಾಲೋಚನೆಯ ಮಸಲತ್ತು,
ಬಾಣಸಿಗನ ಮೂಲಕ ತಿಂಡಿತಿನಿಸುಗಳಲ್ಲಿ ತೀಕ್ಷ್ಣವಿಷವು ಸೇರಿಸಲ್ಪಟ್ಟಿತ್ತು.
ಆ ವಿಷಯ ಭೀಮಗೆ ತಿಳಿಯಲು ಅಂಧಕಪುತ್ರ ಯುಯುತ್ಸುವಾಗಿದ್ದ ಕಾರಣ,
ಬಲಿಷ್ಠಭೀಮ ಹರಿಯನುಗ್ರಹದಿಂದ ಅದನು ತಿಂದರೂ ಮಾಡಿಕೊಂಡ ಜೀರ್ಣ.

ಜೀರ್ಣ್ಣೇ ವಿಷೇ ಕುಮತಯಃ ಪರಮಾಭಿತಪ್ತಾಃ ಪ್ರಾಸಾದಮಾಶು ವಿದಧುರ್ಹರಿಪಾದತೋಯೇ ।
ಜ್ಞಾತ್ವಾ ಯುಯುತ್ಸುಮುಖತಃ ಸ್ವಯಮತ್ರ ಚಾನ್ತೇ ಸುಷ್ವಾಪ ಮಾರುತಿರಮಾ ಧೃತರಾಷ್ಟ್ರಪುತ್ರೈಃ ॥೧೪.೭೨॥
ಭೀಮಗೆ ವಿಷ ಜೀರ್ಣವಾಗಲು ಸಂಕಟಪಟ್ಟ ದುಷ್ಟಕೂಟ,
ಗಂಗಾತಟದಲ್ಲಿ ಒಂದು ಕೃತಕಮಹಲು ಕಟ್ಟಿದ ಕ್ರೂರಆಟ.
ಅವರೆಲ್ಲ ಪಿತೂರಿಗಳ ಯುಯುತ್ಸುವಿನಿಂದ ತಿಳಿದಿದ್ದ ಭೀಮ,
ಅವರಿಗನುವಾಗಲೆಂದು ತಾನೇ ಬಂದಲ್ಲಿ ಮಲಗಿದ ನೇಮ.

ದೋಷಾನ್ ಪ್ರಕಾಶಯಿತುಮೇವ ವಿಚಿತ್ರವೀರ್ಯ್ಯಪುತ್ರಾತ್ಮಜೇಷು ನೃವರಂ ಪ್ರತಿ ಸುಪ್ತಮೀಕ್ಷ್ಯ ।
ಬಧ್ವಾsಭಿಮನ್ತ್ರಣದೃಢೈರಯಸಾ ಕೃತೈಸ್ತಂ ಪಾಶೈರ್ವಿಚಿಕ್ಷಿಪುರುದೇ ಹರಿಪಾದಜಾಯಾಃ ॥೧೪.೭೩॥
ವಿಚಿತ್ರವೀರ್ಯಪುತ್ರ ಧೃತರಾಷ್ಟ್ರನ ಮಕ್ಕಳು,
ದೋಷಪ್ರದರ್ಶನಕ್ಕನುವಾದ ಕೌರವಾದಿಗಳು.
ಮಹಲಲ್ಲಿ ಮಲಗಿದ್ದ ಜಗದಪ್ರಾಣ ಮೂಲತ್ರಾಣ ಅವ ಮುಖ್ಯಪ್ರಾಣ,
ಮಾಡಿದರವನ ದುರ್ಮಂತ್ರದಿ ಸಿದ್ಧಪಡಿಸಿದ ಸರಪಳಿಗಳಿಂದ ಬಂಧನ.
ಗಂಗಾನದಿಯ ನೀರಿಗೆ ಎಸೆದರು ದುಷ್ಟರು  ಬಂಧಿತನಾದ ಭೀಮಸೇನನ.

ತತ್ ಕೋಟಿಯೋಜನಗಭೀರಮುದಂ ವಿಗಾಹ್ಯ ಭೀಮೋ ವಿಜೃಮ್ಭಣತ ಏವ ವಿವೃಶ್ಚ್ಯ ಪಾಶಾನ್ ।
ಉತ್ತೀರ್ಯ್ಯ ಸಜ್ಜನಗಣಸ್ಯ ವಿಧಾಯ ಹರ್ಷಂ ತಸ್ಥಾವನನ್ತಗುಣವಿಷ್ಣುಸದಾತಿಹಾರ್ದ್ದಃ ॥೧೪.೭೪॥
ಕೋಟಿಯೋಜನ ಆಳದ ನೀರಲ್ಲಿ ಮುಳುಗಿದ ಭೀಮಸೇನ,
ಆಕಳಿಕೆಯಿಂದಲೇ ಕತ್ತರಿಸಿಕೊಂಡ ಕಟ್ಟಿದ ಸರಪಳಿಬಂಧನ.
ಅತ್ಯಂತ ನಿರಾಯಾಸವಾಗಿ ಮೇಲೆದ್ದು ಬಂದುನಿಂದ,
ಗುಣವಂತ ಹರಿಭಕ್ತ ಸಜ್ಜನರಿಗೀಯುತ್ತ ಆನಂದ.

ತಂ ವೀಕ್ಷ್ಯದುಷ್ಟಮನಸೋsತಿವಿಪನ್ನಚಿತ್ತಾಃ ಸಮ್ಮನ್ತ್ರ್ಯ ಭೂಯ ಉರುನಾಗಗಣಾನಥಾಷ್ಟೌ ।
ಶುಕ್ರೋಕ್ತಮನ್ತ್ರಬಲತಃ ಪುರ ಆಹ್ವಯಿತ್ವಾ ಪಶ್ಚಾತ್ ಸುಪಞ್ಜರಗತಾನ್ ಪ್ರದದುಃ  ಸ್ವಸೂತೇ ॥೧೪.೭೫॥
ಭೀಮನ ಕಂಡು ಸಂಕಟ ಪಟ್ಟ ದುಷ್ಟರಪಡೆ,
ಶುಕ್ರಾಚಾರ್ಯರ ಮಂತ್ರಬಂಧ ಪಡೆವ ನಡೆ.
ಮಂತ್ರಿಸಿದ ಅಷ್ಟನಾಗಗಳ ಪ್ರಭೇದಗಳ ಕೂಟ,
ಪಂಜರದಲ್ಲಿಟ್ಟು ರಥಸಾರಥಿಗೆ ಕೊಟ್ಟಂಥ ಆಟ.

No comments:

Post a Comment

ಗೋ-ಕುಲ Go-Kula