Friday 3 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 06 - 11

ಸರ್ವೇsಜರಾ ನಿತ್ಯಬಲೋಪಪನ್ನಾಯಥೇಷ್ಟಸಿದ್ಧ್ಯಾ ಚ ಸದೋಪಪನ್ನಾಃ ।
ಸಮಸ್ತದೋಷೈಶ್ಚ ಸದಾ ವಿಹೀನಾಃ ಸರ್ವೇ ಸುರೂಪಾಶ್ಚ ಸದಾ ಮಹೋತ್ಸವಾಃ ॥೯.೦೬॥

ಎಲ್ಲರಲ್ಲಿತ್ತು ಮುಪ್ಪಿಲ್ಲದ ನೈಜ ಬಲ,
ಬಯಸಿದ್ದೆಲ್ಲಾ ಸಿಗುವ ಸುಭಿಕ್ಷಕಾಲ.
ರಾಗ ದ್ವೇಷ ಕ್ರೋಧ ದೋಷಗಳಿರದ ಚೆಲುಮುಖ ಕಮಲ,
ಉತ್ತಮತೆ ಮೈದಾಳಿದ ಸಮಾಜ ರಾಮನಾಳ್ವಿಕೆಯ ಫಲ.



ಸರ್ವೇ ಮನೋವಾಕ್ತನುಭಿಃ ಸದೈವ ವಿಷ್ಣುಂ ಯಜನ್ತೇ ನತು ಕಞ್ಚಿದನ್ಯಮ್ ।
ಸಮಸ್ತರತ್ನೋದ್ಭರಿತಾ ಚ ಪೃಥ್ವೀ ಯಥೇಷ್ಟಧಾನ್ಯಾ ಬಹುದುಗ್ಧಗೋಮತೀ ॥೯.೦೭॥

ಎಲ್ಲರಿಂದಾಗುತ್ತಿತ್ತು ತನು ಮನ ಮಾತಿನಿಂದ ದೈವ ಹೋಮ ,
ಭೂಮಿಯಾಗಿತ್ತು ಯಥೇಚ್ಛ ಧಾನ್ಯ ಸಮೃದ್ಧತೆಯ ಧಾಮ.
ಚೆನ್ನಾಗಿ ಹಾಲು ಕರೆಯುತ್ತಿದ್ದವು ಧೇನು,
ರತ್ನಗಳಿಂದ ತುಳುಕುತ್ತಿತ್ತು ಭೂಮಿ ತಾನು.

ಸಮಸ್ತಗನ್ಧಾಶ್ಚ ಸದಾsತಿಹೃದ್ಯಾ ರಸಾ ಮನೋಹಾರಿಣ ಏವ ತತ್ರ ।
ಶಬ್ದಾಶ್ಚ ಸರ್ವೇ ಶ್ರವಣಾತಿಹಾರಿಣಃ ಸ್ಪರ್ಶಾಶ್ಚ ಸರ್ವೇ ಸ್ಪರ್ಶೇನ್ದ್ರಿಯಪ್ರಿಯಾಃ ॥೯.೦೮ ॥

ಎಲ್ಲಾ ಗಂಧಗಳಾಗಿದ್ದವು ಮನೋಹರ,
ಎಲ್ಲಾ ರಸಗಳಾಗಿದ್ದವು ಅತಿ ರುಚಿಕರ.
ಹಿತವಾಗಿರುತ್ತಿದ್ದವು ಪ್ರತಿಯೊಂದು ಶಬ್ಧ,
ಸ್ಪರ್ಶವೀಯುತ್ತಿತ್ತು ಇಂದ್ರಿಯಗಳಿಗೆ ಮುದ.

ನ ಕಸ್ಯಚಿದ್ ದುಃಖಮಭೂತ್ ಕಥಞ್ಚಿನ್ನ ವಿತ್ತಹೀನಶ್ಚ ಬಭೂವ ಕಶ್ಚನ ।
ನಾಧರ್ಮ್ಮಶೀಲೋ ನಚ ಕಶ್ಚನಾಪ್ರಜೋ ನ ದುಷ್ಪ್ರಜೋ ನೈವ ಕುಭಾರ್ಯ್ಯಕಶ್ಚ ॥೯.೦೯॥

ಯಾರಿಗೂ ಒದಗುತ್ತಿರಲಿಲ್ಲ ದುಃಖದ ಸ್ಥಿತಿ,
ಧನಹೀನರಾಗುತ್ತಿರಲಿಲ್ಲ ಯಾವುದೇ ರೀತಿ.
ಯಾರಿಗೂ ಇರಲಿಲ್ಲ ಅಧರ್ಮದ ಮತಿ,
ಯಾರಿಗೂ ಇರಲಿಲ್ಲ ಮಕ್ಕಳಿಲ್ಲದ ಗತಿ.
ಯಾರಿಗೂ ಆಗುತ್ತಿರಲಿಲ್ಲ ದುಷ್ಟಸಂತತಿ,
ಯಾರಿಗೂ ಇರುತ್ತಿರಲಿಲ್ಲ ಕೆಟ್ಟ ಹೆಂಡತಿ

ಸ್ತ್ರಿಯೋ ನಚಾsಸನ್ ವಿಧವಾಃ ಕಥಞ್ಚಿನ್ನವೈ ಪುಮಾಂಸೋ ವಿಧುರಾ ಬಭೂವುಃ ।
ನಾನಿಷ್ಟಯೋಗಶ್ಚ ಬಭೂವ ಕಸ್ಯಚಿನ್ನಚೇಷ್ಟಹಾನಿರ್ನ್ನಚ ಪೂರ್ವಮೃತ್ಯುಃ ॥೯.೧೦॥

ವಿಧವೆಯರಾಗಲಿಲ್ಲ ಹೆಣ್ಣುಮಕ್ಕಳು,
ವಿಧುರರಾಗಲಿಲ್ಲ ಗಂಡುಮಕ್ಕಳು.
(ಅಂದರೆ ಒಟ್ಟಿಗೇ ಸಾಯುತ್ತಿದ್ದರು ಅಂತಲ್ಲ,
ಜವಾಬ್ದಾರಿ ತೀರುವ ಮೊದಲು ಸಾಯುತ್ತಿದ್ದಿಲ್ಲ).
ಆಗುತ್ತಿರಲಿಲ್ಲ ಅನಿಷ್ಟ ಸಂಬಂಧ,
ಆಗುತ್ತಿರಲಿಲ್ಲ ಇಷ್ಟಹಾನಿಯ ಬಂಧ.
ಸಾಯುತ್ತಿರಲಿಲ್ಲ ಕಿರಿಯರು ಹಿರಿಯರೆದುರಿಗೆ,
ಬಣ್ಣಿಸಲಳವೇ ರಾಮನಾಳ್ವಿಕೆಯ ರಾಜ್ಯದ ಬಗೆ.

ಯಥೇಷ್ಟಮಾಲ್ಯಾಭರಣಾನುಲೇಪನಾ ಯಥೇಷ್ಟಪಾನಾಶನವಾಸಸೋsಖಿಲಾಃ ।
ಬಭೂವುರೀಶೇ ಜಗತಾಂ ಪ್ರಶಾಸತಿ ಪ್ರಕೃಷ್ಟಧರ್ಮ್ಮೇಣ ಜನಾರ್ದ್ದನೇ ನೃಪೇ ॥೯.೧೧॥

ಭಗವಂತನೇ ರಾಜನಾಗಿದ್ದಿರುವ ಧರ್ಮದ ಆಳ್ವಿಕೆ,
ಇಷ್ಟಮಾಲೆ ಆಭರಣ ಗಂಧ ಹಿತಪಾನೀಯ ಪೂರೈಕೆ.
ಊಟ ಬಟ್ಟೆ ಬರೆ ಸಕಲವೂ ಸಮೃದ್ಧ,
ಹೇಳಬಲ್ಲೆವೇ ರಾಮರಾಜ್ಯವೆಷ್ಟು ಪ್ರಸಿದ್ಧ.

No comments:

Post a Comment

ಗೋ-ಕುಲ Go-Kula