Wednesday, 30 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 96 - 100

 ಉತ್ಪತ್ತಿಪೂರ್ವಕಕಥಾಂ ದ್ರುಪದಾತ್ಮಜಾಯಾ ವ್ಯಾಸೋ ಹ್ಯನೂಚ್ಯ ಜಗತಾಂ ಗುರುರೀಶ್ವರೇಶಃ ।

ಯಾತೇತ್ಯಚೋದಯದಥಾಪ್ಯಪರೇ ದ್ವಿಜಾಗ್ರ್ಯಾಸ್ತಾನ್ ಬ್ರಾಹ್ಮಣಾ ಇತಿ ಭುಜಿರ್ಭವತೀತಿ ಚೋಚುಃ ॥೧೯.೯೬॥

ಜಗದ್ಗುರುಗಳೂ ಸರ್ವಜ್ಞ ಸರ್ವೇಶರರೂ ಆದಂತಹ  ವೇದವ್ಯಾಸ ದೇವರು  ,

ದ್ರೌಪದಿಯ ಹುಟ್ಟು ಮತ್ತೆಲ್ಲಾ ಹೇಳಿ ಅವಳ ಸ್ವಯಂವರಕ್ಕೆ ಹೋಗಲ್ಹೇಳಿದರು.

ಬೇರೆ ಬ್ರಾಹ್ಮಣರು ಪಾಂಡವರ ಬ್ರಾಹ್ಮಣರೆಂದೇ ತಿಳಿದರು,

ಬನ್ನಿ , ಅಲ್ಲಿ ಉತ್ತಮ ಊಟ ಸಿಗುತ್ತದೆ ಎಂದು ಹೇಳಿದರು .

 

ಪೂರ್ವಂ ಹಿ ಪಾರ್ಷತ ಇಮಾನ್ ಜತುಗೇಹದಗ್ಧಾನ್ ಶ್ರುತ್ವಾsತಿದುಃಖಿತಮನಾಃ ಪುನರೇವ ಮನ್ತ್ರಃ ।

ಯಾಜೋಪಯಾಜಮುಖನಿಸ್ಸೃತ ಏವಮೇಷ ನಾಸತ್ಯತಾರ್ಹ ಇತಿ ಜೀವನಮೇಷು ಮೇನೇ ॥೧೯.೯೭॥

ಇತ್ತ ಪಾಂಡವರು ಅರಗಿನ ಮನೆಯಲ್ಲಿ ಸತ್ತರು ಎಂಬ ವಿಷಯ ತಿಳಿದು ,

ದ್ರುಪದರಾಜ ಅತ್ಯಂತ ದುಃಖಿತನಾಗಿದ್ದ ಮನದಲ್ಲಿ ಬಹಳವಾಗಿ ನೊಂದು .

ಆದರೆ ಯಾಜೋಪಯಾಜರ ಮಂತ್ರ ಮತ್ತವರ ಮಾತು,

ಸುಳ್ಳಾಗಲಸಾಧ್ಯ , ಬದುಕಿರಲೇಬೇಕೆಂಬ ನಂಬಿಕೆ ಬಂದಿತ್ತು .

 

ಯತ್ರಕ್ವಚಿತ್ ಪ್ರತಿವಸನ್ತಿ ನಿಲೀನರೂಪಾಃ ಪಾರ್ತ್ಥಾ ಇತಿ ಸ್ಮ ಸ ತು ಫಲ್ಗುನಕಾರಣೇನ ।

ಚಕ್ರೇ ಸ್ವಯಮ್ಬರವಿಘೋಷಣಮಾಶು ರಾಜಸ್ವನ್ಯೈರಧಾರ್ಯ್ಯಧನುರೀಶವರಾಚ್ಚ ಚಕ್ರೇ ॥೧೯.೯೮॥

ಎಲ್ಲೋ ಒಂದುಕಡೆ ತಮ್ಮ ರೂಪವನ್ನು ಬದಲು ಮಾಡಿಕೊಂಡು ,

ಪಾಂಡವರು ಜೀವಿಸುತ್ತಿದ್ದಾರೆಂದೇ ದ್ರುಪದರಾಜ ಅಂದುಕೊಂಡು ,

ಮಗಳು ದ್ರೌಪದೀದೇವಿಯ ಸ್ವಯಂವರದ ಘೋಷಣೆಯ ಮಾಡಿದ ,

ಅರ್ಜುನನ ಬಿಟ್ಟಿನ್ಯಾರೂ ಎತ್ತಲಾಗದ ಬಿಲ್ಲ ಶಿವದಯದಿ ಸಿದ್ಧಪಡಿಸಿದ .

 

[ಅರಗಿನಮನೆ  ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಶ್ರೀಕೃಷ್ಣ ಏನು ಮಾಡುತ್ತಿದ್ದ ಎನ್ನುವುದನ್ನು ವಿವರಿಸುತ್ತಾರೆ:]

ತತ್ಕಾಲ ಏವ ವಸುದೇವಸುತೋsಪಿ ಕೃಷ್ಣಃ ಸಮ್ಪೂರ್ಣ್ಣನೈಜಪರಿಬೋಧತ ಏವ ಸರ್ವಮ್ ।

ಜಾನನ್ನಪಿ ಸ್ಮ ಹಲಿನಾ ಸಹಿತೋ ಜಗಾಮ ಪಾರ್ತ್ಥಾನ್ ನಿಶಮ್ಯ ಚ ಮೃತಾನಥ ಕುಲ್ಯಹೇತೋಃ ॥೧೯.೯೯॥

ಆಗ ವಸುದೇವನ ಮಗನಾದ ಶ್ರೀಕೃಷ್ಣ ವಾಸುದೇವ ,

ಸರ್ವಜ್ಞ , ಎಲ್ಲಾ ವಿಷಯಗಳ ತಿಳಿದವನೇ ಆಗಿದ್ದವ .

ಆದರೂ ಲೋಕನೀತಿಯಂತೆ ಅಣ್ಣ ಬಲರಾಮನ  ಒಡಗೂಡಿ ,

ಧರ್ಮೋದಕಕ್ಕೆ ಹೋದ ಪಾಂಡವರು ಸತ್ತ ಕಾರಣ ನೀಡಿ.

 

ಸ ಪ್ರಾಪ್ಯ ಹಸ್ತಿನಪುರಂ ಧೃತರಾಷ್ಟ್ರಪುತ್ರಾನ್ ಸಂವಞ್ಚಯಂಸ್ತದನುಸಾರಿಕಥಾಶ್ಚ ಕೃತ್ವಾ ।

ಭೀಷ್ಮಾದಿಭಿಃ ಪರಿಗತಾಪ್ರಿಯವಜ್ಜಗಾಮ ದ್ವಾರಾವತೀಮುದಿತಪೂರ್ಣ್ಣಸುನಿತ್ಯಸೌಖ್ಯಃ ॥೧೯.೧೦೦॥

ನಿತ್ಯತೃಪ್ತ ಪೂರ್ಣಸುಖಿ ಶ್ರೀಕೃಷ್ಣ ಹಸ್ತಿನಪುರಕ್ಕೆ ಬಂದ ,

ದುರ್ಯೋಧನಾದಿಗಳ ಮೋಹಕ್ಕೆ ತಕ್ಕ ಮಾತನಾಡಿದ .

ಭೀಷ್ಮಾದಿಗಳಿಂದ ಸುತ್ತುವರಿಯಲ್ಪಟ್ಟಿದ್ದ ಶ್ರೀಕೃಷ್ಣ ತಾನು,

ತುಂಬಾ ನೊಂದವನಂತೆ ದ್ವಾರಾವತೀ ಕಡೆ ಹೊರಟನು.

Tuesday, 29 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 88 - 95

 ಗತ್ವಾ ತ್ವರನ್ ಬಕವನಸ್ಯ ಸಕಾಶ ಆಶು ಭೀಮಃ ಸ ಪಾಯಸಸುಭಕ್ಷ್ಯಪಯೋಘಟಾದ್ಯೈಃ ।

ಯುಕ್ತಂ ಚ ಶೈಲನಿಭಮುತ್ತಮಮಾದ್ಯರಾಶಿಂ ಸ್ಪರ್ಶಾತ್ ಪುರೈವ ನರಭಕ್ಷಿತುರತ್ತುಮೈಚ್ಛತ್ ॥೧೯.೮೮॥

ಬಕಾಸುರನಿರುವ ಕಾಡಿನ ಸಮೀಪಕ್ಕೆ ತೆರಳಿದ ಭೀಮಸೇನ,

ಇತ್ತು-ಬಗೆಬಗೆಯ ಭಕ್ಷ್ಯ ಕ್ಷೀರಾದಿಗಳಿಂದ ಕೂಡಿದ ಪರಮಾನ್ನ.

ಅದೆಲ್ಲವ ತಿನ್ನಬಯಸಿದ ನರಭಕ್ಷಕ ಅದನ್ನ ಮುಟ್ಟುವ ಮುನ್ನ.

 

ತೇನೈವ ಚಾನ್ನಸಮಿತೌ ಪರಿಭುಜ್ಯಮಾನ ಉತ್ಪಾಟ್ಯ ವೃಕ್ಷಮಮುಮಾದ್ರವದಾಶು ರಕ್ಷಃ ।

ವಾಮೇನ ಮಾರುತಿರಪೋಹ್ಯ ತದಾ ಪ್ರಹಾರಾನ್ ಹಸ್ತೇನ ಭೋಜ್ಯಮಖಿಲಂ ಸಹಭಕ್ಷ್ಯಮಾದತ್ ॥೧೯.೮೯॥

ಭೀಮಸೇನನಿಂದ ಅದೆಲ್ಲಾ ಆಹಾರ ಪದಾರ್ಥಗಳು ತಿನ್ನಲ್ಪಡುತ್ತಿರಲು ,

ಅದನ್ನ ನೋಡಿದ ಬಕ ಮರವ ಕಿತ್ತು ಭೀಮಸೇನನತ್ತ ಧಾವಿಸಿ ಬರಲು ,

ಭೀಮಸೇನ ತನ್ನ ಎಡಗೈನಿಂದವನ ಸರಿಸಿ ತಡೆದ ,

ಎಲ್ಲಾ ಭಕ್ಷ್ಯಭೋಜ್ಯಗಳ ತಾನು ತಿಂದು ಮುಗಿಸಿದ .

 

ಪೀತ್ವಾ ಪಯೋ ತ್ವರಿತ ಏನಮವೀಕ್ಷಮಾಣ ಆಚಮ್ಯ ತೇನ ಯುಯುಧೇ ಗುರುವೃಕ್ಷಶೈಲೈಃ ।

ತೇನಾsಹತೋsಥ ಬಹುಭಿರ್ಗ್ಗಿರಿಭಿರ್ಬಲೇನ ಜಗ್ರಾಹ ಚೈನಮಥ ಭೂಮಿತಳೇ ಪಿಪೇಷ ॥೧೯.೯೦॥

ಆ ರಕ್ಕಸನತ್ತ ನೋಡದೇ ಹಾಲು ಇತ್ಯಾದಿ ಪಾನೀಯಗಳ ಕುಡಿದ ,

ಎಲ್ಲವ ಮುಗಿಸಿ ಕೈತೊಳೆದು ಆಚಮನ ಮಾಡಿ ಯುದ್ಧವ ಮಾಡಿದ .

ಬಕ ದೊಡ್ಡ ಮರ ಬಂಡೆಗಳಿಂದ ಭೀಮಗೆ ಹೊಡೆದ ,

ಭೀಮ ಅವನ ಬಲವಾಗಿ ನೆಲಕ್ಕೆ ಕೆಡವಿ ಮರ್ದಿಸಿದ .

 

ಆಕ್ರಮ್ಯ ಪಾದಮಪಿ ಪಾದತಳೇನ ತಸ್ಯ ದೋರ್ಭ್ಯಾಂ ಪ್ರಗೃಹ್ಯ ಚ ಪರಂ ವಿದದಾರ ಭೀಮಃ ।

ಮೃತ್ವಾ ಸ ಚೋರು ತಮ ಏವ ಜಗಾಮ ಪಾಪೋ ವಿಷ್ಣುದ್ವಿಡೇವ ಹಿ ಶನೈರನಿವೃತ್ತಿ ಚೋಗ್ರಮ್ ॥೧೯.೯೧ ॥

ಭೀಮ ಬಕನ ಒಂದು ಕಾಲನ್ನು ತನ್ನ ಪಾದದಿ ಮೆಟ್ಟಿ ಹಿಡಿದ ,

ಇನ್ನೊಂದು ಕಾಲನ್ನು ತನ್ನೆರಡು ಕೈಗಳಿಂದ ಹಿಡಿದವನ ಸೀಳಿದ .

ಹೀಗೆ ಸತ್ತ ಪಾಪಿಷ್ಠ ನಾರಾಯಣದ್ವೇಷಿ ಬಕ ,

ಕ್ರಮೇಣ ಮರಳಲಾಗದ ಅಂಧoತಮಸ್ಸ ಹೊಕ್ಕ .

 

ಹತ್ವಾ ತಮಕ್ಷತಬಲೋ ಜಗದನ್ತಕಂ ಸ  ಯೋ ರಾಕ್ಷಸೋ ನ ವಶ ಆಸ ಜರಾಸುತಸ್ಯ ।

ಭೌಮಸ್ಯ ಪೂರ್ವಮಪಿ ನೋ ಭರತಸ್ಯ ರಾಜ್ಞೋ ಭೀಮೋ ನ್ಯಧಾಪಯದಮುಷ್ಯ ಶರೀರಮಗ್ರೇ ॥೧೯.೯೨ ॥

ಹೀಗೆ ನಾಶವಿರದ ಬಲವಂತನಾದ ಜಗತ್ಕಂಟಕನಾದ  ಭಯಂಕರ ಬಕಾಸುರ ,

ಜರಾಸಂಧನ ವಶವಾಗದೆ ನರಕಾಸುರನ ಮಿತ್ರನಾಗದೆ ಭೀಮನಿಂದಾದ ಸಂಹಾರ .

ಭರತನ ವಶವೂ ಆಗದವನು ಹೆಣವಾಗಿ ಸೇರಿದ್ದು ಅಗಸೇಬಾಗಿಲ ಪ್ರವೇಶದ್ವಾರ .

 

ದ್ವಾರ್ಯೇವ ತತ್ ಪ್ರತಿನಿಧಾಯ ಪುನಃ ಸ ಭೀಮಃ ಸ್ನಾತ್ವಾ ಜಗಾಮ ನಿಜಸೋದರಪಾರ್ಶ್ವಮೇವ ।

ಶ್ರುತ್ವಾsಸ್ಯ ಕರ್ಮ್ಮ ಪರಮಂ ತುತುಷುಃ ಸಮೇತಾ ಮಾತ್ರಾ ಚ ತೇ ತದನು ವವ್ರುರತಃ ಪುರಸ್ಥಾಃ ॥೧೯.೯೩॥

ದೃಷ್ಟ್ವೈವ  ರಾಕ್ಷಸಶರೀರಮುರು ಪ್ರಭೀತಾ  ಜ್ಞಾತ್ವೈವ ಹೇತುಭಿರಥ ಕ್ರಮಶೋ ಮೃತಂ ಚ ।

ವಿಪ್ರಸ್ಯ ತಸ್ಯ ವಚನಾದಪಿ ಭೀಮಸೇನಭಗ್ನಂ ನಿಶಮ್ಯ ಪರಮಂ ತುತುಷುಶ್ಚ ತಸ್ಮೈ ॥೧೯.೯೪॥

ಹೀಗೆ ಊರಬಾಗಿಲಲ್ಲಿ ಅವನ ಹೆಣವಿಟ್ಟ ಭೀಮ ಸ್ನಾನ ಮಾಡಿ ಸೋದರರ ಸೇರಿದ ,

ಇವನ ಒಳ್ಳೇ ಕೆಲಸ ಕೇಳಿದ ತಾಯಿ ಸೋದರರಿಗಾದದ್ದು ಅತೀವವಾದ ಆನಂದ .

ರಕ್ಕಸನ ಸಾವಿನ ಬಗ್ಗೆ ಜನಕ್ಕೆ ಭಯ ಅನುಮಾನ ,

ಅವನ ಸಾವನ್ನು ಖಚಿತಮಾಡಿಕೊಂಡರು ಆ ಜನ.

ಇದೆಲ್ಲಾ ನಡೆದಮೇಲೆ ಅಲ್ಲಿ ನೆರೆದ ಜನರಿಗೆ ರಕ್ಕಸನ ಹೆಣ ನೋಡಿ ಭಯ ,

ಸತ್ತದ್ದವನು ವಿಪ್ರ ಕಳಿಸಿದ ಭೀಮನಿಂದೆoದರಿತವರಿಗೆ ಸಂತಸದ ಅಭಯ .

 

ಅನ್ನಾತ್ಮಕಂ  ಕರಮಮುಷ್ಯ ಚ ಸಮ್ಪ್ರಚಕ್ರುಃ ಸೋsಪ್ಯೇತಮಾಶು ನರಸಿಂಹವಪುರ್ದ್ಧರಸ್ಯ।

ಚಕ್ರೇ ಹರೇಸ್ತದನು ಸತ್ಯವತೀಸುತಸ್ಯ ವಿಷ್ಣೋರ್ಹಿ ವಾಕ್ಪ್ರಚುದಿತಾಃ ಪ್ರಯಯುಸ್ತತಶ್ಚ ॥೧೯.೯೫॥

ನೀಡಲ್ಪಟ್ಟಿತು ಭೀಮಸೇನಗೆ ಜನರಿಂದ ಅನ್ನದ ಕಂದಾಯ ,

ಅದನ್ನವ ಮಾಡಿದ ನೃಸಿಂಹರೂಪಿ ನಾರಾಯಣಗೆ ಸಂದಾಯ .

ವ್ಯಾಸರ ಮಾತಿನಂತೆ ಏಕಚಕ್ರ ನಗರಕ್ಹೇಳಿದರೆಲ್ಲಾ ವಿದಾಯ.

Saturday, 26 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 83 - 87

 ಉಕ್ತ್ವೈವಮೇತ್ಯ ನಿಖಿಲಂ ಚ ಜಗಾದ ಭೀಮ ಉದ್ಧರ್ಶ ಆಸ ಸ ನಿಶಮ್ಯ ಮಹಾಸ್ವಧರ್ಮ್ಮಮ್ ।

ಪ್ರಾಪ್ತಂ ವಿಲೋಕ್ಯ ತಮತೀವ ವಿಘೂರ್ಣ್ಣನೇತ್ರಂ ದೃಷ್ಟ್ವಾ ಜಗಾದ ಯಮಸೂನುರುಪೇತ್ಯ ಚಾನ್ಯೈಃ ॥೧೯.೮೩॥

ಕುಂತಿ ವಿಪ್ರನಿಗೆ ಇಷ್ಟು ಹೇಳಿ , ಭೀಮನ ಬಳಿ ಬಂದು ಎಲ್ಲವನ್ನೂ ಹೇಳಲು ,

ಸ್ವಧರ್ಮ ಪಾಲನಾವಕಾಶ ಸಿಕ್ಕಿತೆಂದು ಭೀಮನ ಮೊಗದಿ ಹರ್ಷದ ಹೊನಲು .

ಆ ಸಮಯಕ್ಕೆ ಅರ್ಜುನಾದಿಗಳೊಡನೆ ಧರ್ಮರಾಜ ಬಂದ ,

ಭೀಮನ ಹಿಗ್ಗಿನ ಬಗ್ಗೆ ತಾಯಿ ಕುಂತಿಯಲ್ಲಿ ಪ್ರಶ್ನೆ ಮಾಡಿದ .

 

ಮಾತಃ ಕಿಮೇಷ ಮುದಿತೋsತಿತರಾಮಿತಿ ಸ್ಮ ತಸ್ಮೈ ಚ ಸಾ ನಿಖಿಲಮಾಹ ಸ ಚಾಬ್ರವೀತ್ ತಾಮ್ ।

ಕಷ್ಟಂ ತ್ವಯಾ ಕೃತಮಹೋ ಬಲಮೇವ ಯಸ್ಯ ಸರ್ವೇ ಶ್ರಿತಾ ವಯಮಮುಂ ಚ ನಿಹನ್ಸಿ ಭೀಮಮ್ ॥೧೯.೮೪॥

ಅಮ್ಮಾ , ಭೀಮ ಯಾಕೆ ಇಷ್ಟೊಂದು ಹಿಗ್ಗಿದ್ದಾನೆ ,

ಆಗ ಕುಂತಿಯಿಂದ ಎಲ್ಲಾ ವಿಷಯದ ವಿವರಣೆ .

ಅಮ್ಮಾ , ಏನಿದು ನಿನ್ನ ಅವಿವೇಕದ ಕಾರ್ಯ ,

ಅಪಾಯಕಾರಿ ಕೆಲಸಕ್ಕಿಳಿದಿರುವುದು ಆಶ್ಚರ್ಯ .

ನಾವೆಲ್ಲಾ ನಂಬಿರುವೆವೋ ಯಾರ ತೋಳ ಬಲ ,

ಆ ಭೀಮಸೇನನನ್ನೇ ಸಾವಿಗೆ ತಳ್ಳುತ್ತಿರುವೆಯಲ್ಲ .

 

ಯದ್ಬಾಹುವೀರ್ಯ್ಯಪರಮಾಶ್ರಯತೋ ಹಿ ರಾಜ್ಯಮಿಚ್ಛಾಮ ಏವ ನಿಖಿಲಾರಿವಧಂ ಸ್ವಧರ್ಮ್ಮಮ್ ।

ಸೋsಯಂ ತ್ವಯಾsದ್ಯ ನಿಶಿಚಾರಿಮುಖಾಯ ಮಾತಃ ಪ್ರಸ್ಥಾಪ್ಯತೇ ವದ ಮಮಾsಶು ಕಯೈವ ಬುದ್ಧ್ಯಾ॥೧೯.೮೫॥

ಯಾರ ಬಾಹುಬಲದ ಮೇಲಿದೆಯೋ ನಮ್ಮೆಲ್ಲರ ಅವಲಂಬನೆ ,

ಯಾರಿಂದಾಗಬೇಕಿದೆಯೋ ಶತ್ರುನಾಶ ಮತ್ತು ಸ್ವಧರ್ಮದ ರಕ್ಷಣೆ .

ಆ ಭೀಮಸೇನನನ್ನು ರಾಕ್ಷಸನ ಬಾಯಿಗೆ ತಳ್ಳುತ್ತಿರುವೆ ,

ಯಾವ ಕಾರಣಕ್ಕಾಗಿ ನೀನು ಈ ಕೆಲಸ ಮಾಡುತ್ತಿರುವೆ .

 

ಇತ್ಯುಕ್ತವನ್ತಮಮುಮಾಹ ಸುಧೀರಬುದ್ಧಿಃ ಕುನ್ತೀ ನ ಪುತ್ರಕ ನಿಹನ್ತುಮಯಂ ಹಿ ಶಕ್ಯಃ ।

ಸರ್ವೈಃ ಸುರೈರಸುರಯೋಗಿಭಿರಪ್ಯನೇನ ಚೂರ್ಣ್ಣೀಕೃತೋ ಹಿ ಶತಶೃಙ್ಗಗಿರಿಃ ಪ್ರಸೂತ್ಯಾಮ್ ॥೧೯.೮೬॥

ಧರ್ಮರಾಜ ಹೀಗೆ ಹೇಳಲು , ಹೇಳುತ್ತಾಳೆ ಧೈರ್ಯದೆದೆಯ ಕುಂತಿ ,

ಭೀಮಸೇನನ ಕೊಲ್ಲಲು ಯಾವ ದೇವಾಸುರರಿಗೂ ಇಲ್ಲವದು ಶಕ್ತಿ .

ಹುಟ್ಟಿದಾಗಲೇ ಅವನು ತೋರಿದ್ದ ಶತಶೃoಗಕ್ಕೆ ಪುಡಿಯಾಗುವ ಗತಿ .

 

ಏಷ ಸ್ವಯಂ ಹಿ ಮರುದೇವ ನರಾತ್ಮಕೋsಭೂತ್ ಕೋ ನಾಮ ಹನ್ತುಮಿಮಮಾಪ್ತಬಲೋ  ಜಗತ್ಸು ।

ಇತ್ಯೇವಮಸ್ತ್ವಿತಿ ಸ ತಾಮವದತ್ ಪರೇದ್ಯುರ್ಭೀಮೋ ಜಗಾಮ ಶಕಟೇನ ಕೃತೋರುಭೋಗಃ ॥೧೯.೮೭॥

ಸಾಕ್ಷಾತ್ ವಾಯುದೇವನೇ ಮಾನವ ಶರೀರಿಯಾದ ಭೀಮನಾಗಿ ಹುಟ್ಟಿದ್ದಾನೆ,

ಅವನನ್ನು ಕೊಲ್ಲುವ ಶಕ್ತಿಯುಳ್ಳವ ಪ್ರಪಂಚದಲ್ಲಿ ಯಾವನು ತಾನೇ ಇದ್ದಾನೆ .

ಹಾಗಿದ್ದರೆ ಸರಿಯೆಂದು ಧರ್ಮರಾಜ ಸೂಚಿಸುತ್ತಾನೆ ಒಪ್ಪಿಗೆ ,

ಭೋಗಸಾಮಗ್ರಿಗಳನಿಟ್ಟ ಗಾಡಿಯಲ್ಲಿ ಭೀಮ ಹೊರಟ ಕಾಡಿಗೆ .

Friday, 25 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 78 - 82

     ಪೃಷ್ಟಸ್ತಯಾssಹ ಸ ತು ವಿಪ್ರವರೋ ಬಕಸ್ಯ ವೀರ್ಯ್ಯಂ ಬಲಂ ಚ ದಿತಿಜಾರಿಭಿರಪ್ಯಸಹ್ಯಮ್ ।

ಸಂವತ್ಸರತ್ರಯಯುತೇ ದಶಕೇ ಕರಂ ಚ ಪ್ರಾತಿಸ್ವಿಕಂ ದಶಮುಖಸ್ಯ ಚ ಮಾತುಲಸ್ಯ ॥೧೯.೭೮॥

ಹೀಗೆ ಕುಂತಿದೇವಿಯಿಂದ ಪ್ರಶ್ನಿಸಲ್ಪಟ್ಟ ಆ ಬ್ರಾಹ್ಮಣಶ್ರೇಷ್ಠ ,

ವಿವರಿಸುತ್ತಾನೆ ರಾವಣನ ಸೋದರಮಾವ ಬಕ ತಂದ ಕಷ್ಟ .

ಅವನದು ದೇವತೆಗಳಿಗೂ ತಡೆಯಲಸಾಧ್ಯವಾದ ಬಲ ವೀರ್ಯ ,

ಸಾಗಿದೆ ಅವನಿಗೆ ಹದಿಮೂರು ವರ್ಷದಿಂದ ಕಪ್ಪವೀವ ಕಾರ್ಯ .

 

ಶ್ರುತ್ವಾ ತಮುಗ್ರಬಲಮತ್ಯುರುವೀರ್ಯ್ಯಮೇವ ರಾಮಾಯಣೇ ರಘುವರೋರುಶರಾತಿಭೀತಮ್ ।

ವಿಷ್ಟಂ ಬಿಲೇಷ್ವಥ ನೃಪಾನ್ ವಶಮಾಶು ಕೃತ್ವಾ ಭೀತ್ಯೈವ ತೈಸ್ತದನು ದತ್ತಕರಂ ನನನ್ದ ॥೧೯.೭೯॥

ರಾಮಾಯಣ ಕಾಲದಲ್ಲಿ ರಾಮನ ಉಗ್ರಬಾಣಕೆ ಹೆದರಿಕೊಂಡು ,

ಕುಳಿತಿದ್ದ ಅವ ಅವತಾರ ಸಮಾಪ್ತಿ ಆಗುವವರೆಗೂ ಅಡಗಿಕೊಂಡು .

ಆಮೇಲೆ ಎಲ್ಲಾ ರಾಜರನ್ನೂ ಮಾಡಿಕೊಂಡಿದ್ದ ವಶ ,

ಹೆದರಿಸಿ ಎಲ್ಲರಿಂದ ಕರ ಪಡೆಯುತ್ತಿದ್ದ ಆ ರಾಕ್ಷಸ .

ವಿಪ್ರನಿಂದ ಈ ವಿಷಯ ಕೇಳಿದ ಕುಂತಿಗೆ ಸಂತೋಷ .

 

[ಕುಂತೀದೇವಿ ಏಕೆ ಸಂತೋಷಪಟ್ಟಳು ಎನ್ನುವುದನ್ನು ವಿವರಿಸುತ್ತಾರೆ:]

ಏವಂ ಬಲಾಢ್ಯಮಮುಮಾಶು ನಿಹತ್ಯ ಭೀಮಃ ಕೀರ್ತ್ತಿಂ ಚ ಧರ್ಮ್ಮಮಧಿಕಂ ಪ್ರತಿಯಾಸ್ಯತೀಹ ।

ಸರ್ವೇ ವಯಂ ಚ ತಮನು ಪ್ರಗೃಹೀತಧರ್ಮ್ಮಾ ಯಾಸ್ಯಾಮ ಇತ್ಯವದದಾಶು ಧರಾಸುರಂ ತಮ್ ॥೧೯.೮೦॥

ಇಂತಹಾ ಬಲಾಢ್ಯ ಬಕನ ಕೊಂದರೆ ಭೀಮಗೆ ಕೀರ್ತಿ ಮತ್ತು ಪುಣ್ಯ ,

ಸಹಕರಿಸಿದರೆ ತಮಗೂ ಪುಣ್ಯವೆಂದು ವಿಪ್ರಗ್ಹೇಳಿದ ತೀರ್ಮಾನ .

 

ಸನ್ತಿ ಸ್ಮ ವಿಪ್ರವರ ಪಞ್ಚ ಸುತಾ ಮಮಾದ್ಯ ತೇಷ್ವೇಕ ಏವ ನರವೈರಿಮುಖಾಯ ಯಾತು ।

ಇತ್ಯುಕ್ತ ಆಹ ಸ ನ ತೇ ಸುತವದ್ಧ್ಯಯಾsಹಂ ಪಾಪೋ ಭವಾನಿ ತವ ಹನ್ತ ಮನೋsತಿಧೀರಮ್ ॥೧೯.೮೧॥

ಬ್ರಾಹ್ಮಣೋತ್ತಮ, ನನ್ನದು ಐದು ಜನ ಮಕ್ಕಳ ಸಂಸಾರ,

ಅವರಲ್ಲಿ ಒಬ್ಬನು ಹೋಗಲಿ ಭಕ್ಷಕ ಬಕನಿಗೆ ಆಗಿ  ಆಹಾರ .

ಅಮ್ಮಾ , ನಾ ಹೊರಲಾರೆ ನಿನ್ನ ಮಗನ ಕೊಂದ ಪಾಪದ ಭಾರ ,

ನಿನ್ನದು ಧೈರ್ಯದ ಮನಸ್ಸು ಎಂದವ ತೆಗೆದ ಅಚ್ಚರಿಯ ಉದ್ಗಾರ .

 

ಉಕ್ತೈವಮಾಹ ಚ ಪೃಥಾ  ತನಯೇ ಮದೀಯೇ ವಿದ್ಯಾsಸ್ತಿ ದಿಕ್ಪತಿಭಿರಪ್ಯವಿಷಹ್ಯರೂಪಾ ।

ಉಕ್ತೋsಪಿ ನೋ ಗುರುಭಿರೇಷ ನಿಯುಙ್ಕ್ತ ಏತಾಂ ವದ್ಧ್ಯಸ್ತಥಾsಪಿ ನ ಸುರಾಸುರಪಾಲಕೈಶ್ಚ ॥೧೯.೮೨॥

ಕುಂತಿದೇವಿಗೆ ಮೇಲಿನಂತೆ ಹೇಳಲು ಆ ಬ್ರಾಹ್ಮಣ ,

ಕುಂತಿ ಹೇಳಿದಳು-ನನ್ನ ಮಗನಲ್ಲಿದೆ ವಿದ್ಯಾಹೂರಣ .

ಅದು ದೇವತೆಗಳಿಂದಲೂ ಎದುರಿಸಲಾಗದ ವಿದ್ಯಾಬಲ ,

ಗುರು ಹೇಳಿದರೂ ಸ್ವರಕ್ಷಣೆಗದನ್ನು ಅವ ಬಳಸುವುದಿಲ್ಲ.

ಯಾರಿಂದಲೂ ಕೂಡಾ ಅವನಿಗೆ ಮರಣವದು ಬರುವುದಿಲ್ಲ .

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 72 - 77

 ಜಾನೀಹಿ ವಿಪ್ರರುದಿತಂ ಕುತ ಇತ್ಯತಶ್ಚ ಯೋಗ್ಯಂ ವಿಧಾಸ್ಯ ಇತಿ ಸಾ ಪ್ರಯಯೌ ಚ ಶೀಘ್ರಮ್ ।

ಸಾ ಸಂವೃತೈವ ಸಕಲಂ ವಚನಂ ಗೃಹೇsಸ್ಯ ಶುಶ್ರಾವ ವಿಪ್ರವರ ಆಹ ತದಾ ಪ್ರಿಯಾಂ ಸಃ ॥೧೯.೭೨॥

ತಿಳಿದುಕೋ ಏತಕ್ಕಾಗಿ ಆ ಬ್ರಾಹ್ಮಣನ ರೋದನೆ,

ನಾನು ಅದಕ್ಕೆ ಯೋಗ್ಯ ಪರಿಹಾರ ಮಾಡುತ್ತೇನೆ .

ಭೀಮನಿಂದ ಹೀಗೆ ಹೇಳಲ್ಪಟ್ಟ ಕುಂತಿದೇವಿ ಆಗ ,

ಅಲ್ಲಿ ಹೋಗಿನಿಂತು ಕೇಳಿಸಿಕೊಂಡದ್ದು ಕಾಣದ ಜಾಗ .

ಬ್ರಾಹ್ಮಣ ತನ್ನ ಹೆಂಡತಿಗೆ ಕೆಳಗಿನಂತೆ ಹೇಳುತ್ತಿದ್ದನಾಗ .

 

ದಾತವ್ಯ ಏವ ಹಿ ಕರೋsದ್ಯ ಚ ರಕ್ಷಸೋsಸ್ಯ ಸಾಕ್ಷಾದ್ ಬಕಸ್ಯ ಗಿರಿಸನ್ನಿಭಭಕ್ಷ್ಯಭೋಜ್ಯಃ ।

ಪುಂಸಾsನಸಾ ಚ ಸಹಿತಾನಡುಹಾ ಪುಮಾಂಸ್ತು ನೈವಾಸ್ತಿ ನೋsಪ್ರದದತಾಂ ಚ ಸಮಸ್ತನಾಶಃ ॥೧೯.೭೩॥

ಈದಿನ ಬಕ ರಕ್ಕಸನಿಗೆ ಕಳಿಸಬೇಕು ಭಕ್ಷ್ಯ ಭೋಜ್ಯ ಗುಡ್ಡ ಗಾತ್ರದ ಅನ್ನ ,

ಎರಡೆತ್ತಿನ ಬಂಡಿಯಲ್ಲಿ ಎಲ್ಲವ ತುಂಬಿ ಕಳಿಸಬೇಕೊಬ್ಬಮನುಷ್ಯನನ್ನ .

ಹಣವಿರದ ನಮ್ಮಲ್ಲಿ ಕಳಿಸಲ್ಯಾರಿದ್ದಾನೆ ಪುರುಷ ,

ನಾವು ಇದೆಲ್ಲಾ ಮಾಡದಿದ್ದರೆ ಕಾದಿದೆ ಸರ್ವನಾಶ .

 

ಅನ್ಯತ್ರ ಯಾಮ ಇತಿ ಪೂರ್ವಮುದಾಹೃತಂ ಮೇ ನೈತತ್ ಪ್ರಿಯೇ ತವ ಮನೋಗತಮಾಸ ತೇನ ।

ಯಾಸ್ಯಾಮಿ ರಾಕ್ಷಸಮುಖಂ ಸ್ವಯಮೇವ ಮರ್ತ್ತುಂ ಭಾರ್ಯ್ಯೈನಮಾಹ ನ ಭವಾನಹಮತ್ರ ಯಾಮಿ ॥೧೯.೭೪॥

ಬೇರೆಡೆಗೆ ಹೋಗಿಬಿಡೋಣ ನಾವು ಎಂದಿದ್ದೆ ನಾನು ,

ನನ್ನ ಆ ಮಾತನ್ನು ಒಪ್ಪಿಕೊಂಡು ನಡೆಸಲಿಲ್ಲ ನೀನು .

ಬ್ರಾಹ್ಮಣನೆಂದ-ರಕ್ಕಸನ ಬಾಯಿಗೆ ನಾನೇ ಆಗುತ್ತೇನೆ ಆಹಾರ ,

ಪತ್ನಿಯೆಂದಳು-ಬೇಡ, ನಾನು ಅವನ ಅನ್ನವಾಗುವುದೇ ಪರಿಹಾರ .

 

ಅರ್ತ್ಥೇತವಾದ್ಯ ತನುಸನ್ತ್ಯಜನಾದಹಂ ಸ್ಯಾಂ ಲೋಕೇ ಸತೀಪ್ರಚರಿತೇ ತದೃತೇ ತ್ವಧಶ್ಚ ।

ಕನ್ಯಾssಹ ಚೈನಮಹಮೇವ ನ ಕನ್ಯಯಾsರ್ತ್ಥ ಇತ್ಯುಕ್ತ ಆಹ ಧಿಗಿತಿ ಸ್ಮ ಸ ವಿಪ್ರವರ್ಯ್ಯಃ  ॥ ೧೯.೭೫ ॥

ನಿನಗಾಗಿ ನಾನು ದೇಹ ಬಿಟ್ಟರೆನಗೆ ಪತಿವ್ರತಾಲೋಕ ಪ್ರಾಪ್ತಿ ,

ಹಾಗಾಗದೇ ಬೇರೆ ರೀತಿಯಾದರೆ ಎನಗೆ ತಪ್ಪದು ಅಧೋಗತಿ .

ಹಿರಿಮಗಳು ಹೇಳುವಳಾಗ -ನಾನೇ ಹೋಗುವೆನು ,

ಹೆಣ್ಣಾದ ನನ್ನಿಂದ ಬೇರೊಂದು ಉಪಯೋಗವೇನು.

' ಧಿಕ್ಕಾರವಿರಲಿ' ಎಂದ ಈ ಮಾತ ಕೇಳಿದ ಬ್ರಾಹ್ಮಣನು.

 

ಕನ್ಯೋದಿತಾ ಬತ ಕುಲದ್ವಯತಾರಿಣೀತಿ ಜಾಯಾ ಸಖೇತಿ ವಚನಂ ಶ್ರುತಿಗಂ ಸುತಶ್ಚ ।

ಆತ್ಮೈವ ತೇನ ನತು ಜೀವನಹೇತುತೋsಹಂ ಧೀಪೂರ್ವಕಂ ನೃಶನಕೇ ಪ್ರತಿಪಾದಯಾಮಿ ॥೧೯.೭೬॥

ಹೆಣ್ಣು ಹುಟ್ಟಿದ ಕುಲ ಮತ್ತು ಮೆಟ್ಟಿದ ಕುಲಕ್ಕೆ ತಾರಕಳು ,

ಹೆಂಡತಿಯು ಸಖಿ ಎನ್ನುತ್ತವೆ ವೇದಗಳ ವಚನಗಳು .

ಮಗನೆಂದರೆ ಪ್ರತಿನಿಧಿಯಾಗಿ ನನ್ನದೇ ಇನ್ನೊಂದು ರೂಪ ,

ನಿಮ್ಮ್ಯಾರನ್ನೂ ಕಳಿಸಲಾರೆ ಎಂದ ಬ್ರಾಹ್ಮಣನಲ್ಲಿ ತೀವ್ರ ತಾಪ .

 

ಏವಂ ರುದತ್ಸು ಸಹಿತೇಷು ಕುಮಾರಕೋsಸ್ಯ ಪ್ರಾಹ ಸ್ವಹಸ್ತಗತೃಣಂ ಪ್ರತಿದರ್ಶ್ಯ ಚೈಷಾಮ್ ।

ಏತೇನ ರಾಕ್ಷಸಮಹಂ ನಿಹನಿಷ್ಯ ಏವೇತ್ಯುಕ್ತೇ ಸುವಾಕ್ಯಮನು ಸಾ ಪ್ರವಿವೇಶ ಕುನ್ತೀ ॥೧೯.೭೭ ॥

ಈರೀತಿಯಾಗಿ ಆ ಮನೆಯವರೆಲ್ಲಾ ಅಲ್ಲಿ ರೋದಿಸುತ್ತಿರುವಾಗ ,

ಹಿಡಿದ ಕಡ್ಡಿಯಿಂದ ರಕ್ಕಸನ ಕೊಲ್ಲುವೆನೆಂದ ಅವರ ಪುಟ್ಟಮಗನಾಗ .

ಕುಂತಿ ಪ್ರವೇಶಿಸುವಳು ವಾತಾವರಣ ಕೊಂಚ ತಿಳಿಯಾದಂತಾದಾಗ.