Sunday, 20 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 38 - 42

 ತಸ್ಯಾಗ್ರಜಾ ಚ ಸಹಿತಾ ಸುತಪಞ್ಚಕೇನ ತತ್ರಾsಗಮತ್ ತದನು ಮಾರುತಿರೇಷ ಕಾಲಃ ।

ಇತ್ಥಂ ವಿಚಿನ್ತ್ಯ ಸ ನಿಶಾಮ್ಯ ಚ ತಾನ್ ಪ್ರಸುಪ್ತಾನ್ ಭ್ರಾತೃಂಶ್ಚ ಮಾತರಮಥಾsಶು ಬಿಲೇ ನ್ಯಧಾತ್ ಪ್ರಾಕ್ ॥೧೯.೩೮॥

ಹೀಗಿರಲು , ಪುರೋಚನನ ಅಕ್ಕ ತನ್ನೈದು ಮಕ್ಕಳೊಡನೆ ಅರಗಿನ ಮನೆಗೆ ಬರುವಿಕೆ ,

ಅವರು ಮಲಗಿದ್ದ ಹೊತ್ತಲ್ಲಿ ತಾಯಿ ಸೋದರರನ್ನು ಭೀಮ ಸುರಂಗದೊಳು ಸೇರಿಸುವಿಕೆ.

 

ತಂ ಭಾಗಿನೇಯಸಹಿತಂ ಭಗಿನೀಂ ಚ ತಸ್ಯ ಪಾಪಾನ್ ದದಾಹ ಸಗೃಹಾನ್ ಪವಮಾನಸೂನುಃ ।

ಸಾsಪ್ಯಾಗತಾ ಹಿ ಗರಳೇನ ನಿಹನ್ತುಮೇತಾನ್ ಭೀಮಸ್ಯ ಪೂರ್ವಭುಜಿತೋ ನ ಶಶಾಕ ಚೈತತ್ ॥೧೯.೩೯॥

ಅಕ್ಕ ಸೋದರಳಿಯರೊಂದಿಗೆ ಕೂಡಿದ್ದ ಪಾಪಿಷ್ಠ  ಪುರೋಚನ ,

ಅರಗಿನಮನೆಯೊಂದಿಗೆ ಅವರೆಲ್ಲರನ್ನು ಸುಟ್ಹಾಕಿದ ಭೀಮಸೇನ .

ಪಾಂಡವರಿಗೆ ವಿಷವಿಡಲೆಂದೇ ಬಂದಿದ್ದ ಪುರೋಚನನ ಅಕ್ಕ ,

ತಾನೊಬ್ಬ ತಿಂದು ಅರಗಿಸಿಕೊಳ್ಳುತ್ತಿದ್ದದ್ದು ಭೀಮಗ್ಯಾವ ಲೆಕ್ಕ .

 

[ಭೀಮ ಅಷ್ಟೂ ಜನರನ್ನು ಒಟ್ಟಿಗೇ ಏಕೆ ಸಾಯಿಸಿದ ಎಂದರೆ:]

ತಪ್ತಂ ತಯಾ ಸಸುತಯಾ ಚ ತಪೋ ನಿತಾನ್ತಂ ಸ್ಯಾಂ ಸೂನುಭಿಃ ಸಹ ಬಲಾದದಿತಿಸ್ತಥಾsಬ್ದಾತ್ ।

ತಸ್ಯಾ ಅದಾಚ್ಚ ಗಿರಿಶೋ ಯದಿ ಪುತ್ರಕೈಸ್ತ್ವಂ ಯುಕ್ತಾ ನ ಯಾಸಿ ಮೃತಿಮೇಷ ವರಸ್ತವೇತಿ ॥೧೯.೪೦॥

ಆ ಬೇಡತಿ ಹೆಂಗಸಿಂದ ಹಿಂದಾಗಿತ್ತು ಒಂದು ವರ್ಷಕಾಲ ಉಗ್ರವಾದ ತಪಸ್ಸು ,

ತಾನದಿತಿಯಾಗಿ ಮಕ್ಕಳು ದೇವತೆಗಳಾಗಬೇಕೆಂದು ಶಿವನ ಕೇಳಿತ್ತು ಮನಸ್ಸು .

ಶಿವ ಕೊಟ್ಟ ವರ -ನಿನ್ನ ಮಕ್ಕಳೊಂದಿಗೆ ನೀನು ಸಾಯದಿದ್ದರೆ ,

ವರವಿದು ಫಲ ನೀಡುತ್ತದೆ ಎಂದಿದ್ದ ಮನಸ್ಸನ್ನ ಆಳುವ ದೊರೆ .

 

ಜಾನನ್ನಿದಂ ಸಕಲಮೇವ ಸ ಭೀಮಸೇನೋ ಹತ್ವಾ ಸುತೈಃ ಸಹ ಕುಬುದ್ಧಿಮಿಮಾಂ ಹಿ ತಂ ಚ ।

ಭ್ರಾತೄಂಶ್ಚ ಮಾತರಮುದೂಹ್ಯ ಯಯೌ ಬಿಲಾತ್ ಸ ನಿರ್ಗ್ಗತ್ಯ ಭೀತಿವಶತೋsಬಲತಾಂ ಪ್ರಯಾತಾನ್ ॥೧೯.೪೧॥

ಇದೆಲ್ಲಾ ಬಲ್ಲವನಾದ ಜೀವೋತ್ತಮ ಭೀಮಸೇನ ,

ಕೊಂದ-ಆ ಬೇಡತಿ ಮಕ್ಕಳು ಮತ್ತು ಪುರೋಚನನ್ನ.

ಭಯ ಮತ್ತು ನಿಶ್ಯಕ್ತಿಯಿಂದಿದ್ದ ತಾಯಿ ಸೋದರರನ್ನು ,

ಹೊತ್ತು ಬಿಲದಿಂದ ಹೊರನಡೆದು ಹೋದ ಭೀಮ ತಾನು .

 

ಜ್ಞಾತ್ವಾ ಪುರೋಚನವಧಂ ಯದಿ ಭೀಷ್ಮಮುಖ್ಯೈರ್ವೈಚಿತ್ರವೀರ್ಯ್ಯತನಯಾ ಅಭಿಯೋಧಯೇಯುಃ ।

ಕಿಂ ನೋ ಭವೇದಿತಿ ಭಯಂ ಸುಮಹದ್ ವಿವೇಶ ಭೀಮಂ ತ್ವೃತೇ ಚ ತನಯಾನ್ ಸಕಲಾನ್ ಪೃಥಾಯಾಃ ॥೧೯.೪೨॥

[ಭೀಮನನ್ನು ಬಿಟ್ಟು ಉಳಿದ ಎಲ್ಲರೂ ಏಕೆ ಭಯದಿಂದ ದುರ್ಬಲರಾಗಿದ್ದರು ಎಂದರೆ: ]

ಪುರೋಚನಾದಿಗಳ ವಧೆಯ ತಿಳಿದಮೇಲೆ ಕೌರವರು ,

ಭೀಷ್ಮಾದಿಳೊಂದಿಗೆ ನಮ್ಮ ಮೇಲೆ ಯುದ್ಧ ಮಾಡುವರು.

ಹಾಗೊಂದು ವೇಳೆ ಯುದ್ಧವಾದರೆ ಏನಾದೀತು ಗತಿ ,

ಇದು-ಭೀಮನ ಬಿಟ್ಟು ಉಳಿದವರಿಗಾವರಿಸಿದ ಭೀತಿ .

No comments:

Post a Comment

ಗೋ-ಕುಲ Go-Kula