Friday, 25 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 72 - 77

 ಜಾನೀಹಿ ವಿಪ್ರರುದಿತಂ ಕುತ ಇತ್ಯತಶ್ಚ ಯೋಗ್ಯಂ ವಿಧಾಸ್ಯ ಇತಿ ಸಾ ಪ್ರಯಯೌ ಚ ಶೀಘ್ರಮ್ ।

ಸಾ ಸಂವೃತೈವ ಸಕಲಂ ವಚನಂ ಗೃಹೇsಸ್ಯ ಶುಶ್ರಾವ ವಿಪ್ರವರ ಆಹ ತದಾ ಪ್ರಿಯಾಂ ಸಃ ॥೧೯.೭೨॥

ತಿಳಿದುಕೋ ಏತಕ್ಕಾಗಿ ಆ ಬ್ರಾಹ್ಮಣನ ರೋದನೆ,

ನಾನು ಅದಕ್ಕೆ ಯೋಗ್ಯ ಪರಿಹಾರ ಮಾಡುತ್ತೇನೆ .

ಭೀಮನಿಂದ ಹೀಗೆ ಹೇಳಲ್ಪಟ್ಟ ಕುಂತಿದೇವಿ ಆಗ ,

ಅಲ್ಲಿ ಹೋಗಿನಿಂತು ಕೇಳಿಸಿಕೊಂಡದ್ದು ಕಾಣದ ಜಾಗ .

ಬ್ರಾಹ್ಮಣ ತನ್ನ ಹೆಂಡತಿಗೆ ಕೆಳಗಿನಂತೆ ಹೇಳುತ್ತಿದ್ದನಾಗ .

 

ದಾತವ್ಯ ಏವ ಹಿ ಕರೋsದ್ಯ ಚ ರಕ್ಷಸೋsಸ್ಯ ಸಾಕ್ಷಾದ್ ಬಕಸ್ಯ ಗಿರಿಸನ್ನಿಭಭಕ್ಷ್ಯಭೋಜ್ಯಃ ।

ಪುಂಸಾsನಸಾ ಚ ಸಹಿತಾನಡುಹಾ ಪುಮಾಂಸ್ತು ನೈವಾಸ್ತಿ ನೋsಪ್ರದದತಾಂ ಚ ಸಮಸ್ತನಾಶಃ ॥೧೯.೭೩॥

ಈದಿನ ಬಕ ರಕ್ಕಸನಿಗೆ ಕಳಿಸಬೇಕು ಭಕ್ಷ್ಯ ಭೋಜ್ಯ ಗುಡ್ಡ ಗಾತ್ರದ ಅನ್ನ ,

ಎರಡೆತ್ತಿನ ಬಂಡಿಯಲ್ಲಿ ಎಲ್ಲವ ತುಂಬಿ ಕಳಿಸಬೇಕೊಬ್ಬಮನುಷ್ಯನನ್ನ .

ಹಣವಿರದ ನಮ್ಮಲ್ಲಿ ಕಳಿಸಲ್ಯಾರಿದ್ದಾನೆ ಪುರುಷ ,

ನಾವು ಇದೆಲ್ಲಾ ಮಾಡದಿದ್ದರೆ ಕಾದಿದೆ ಸರ್ವನಾಶ .

 

ಅನ್ಯತ್ರ ಯಾಮ ಇತಿ ಪೂರ್ವಮುದಾಹೃತಂ ಮೇ ನೈತತ್ ಪ್ರಿಯೇ ತವ ಮನೋಗತಮಾಸ ತೇನ ।

ಯಾಸ್ಯಾಮಿ ರಾಕ್ಷಸಮುಖಂ ಸ್ವಯಮೇವ ಮರ್ತ್ತುಂ ಭಾರ್ಯ್ಯೈನಮಾಹ ನ ಭವಾನಹಮತ್ರ ಯಾಮಿ ॥೧೯.೭೪॥

ಬೇರೆಡೆಗೆ ಹೋಗಿಬಿಡೋಣ ನಾವು ಎಂದಿದ್ದೆ ನಾನು ,

ನನ್ನ ಆ ಮಾತನ್ನು ಒಪ್ಪಿಕೊಂಡು ನಡೆಸಲಿಲ್ಲ ನೀನು .

ಬ್ರಾಹ್ಮಣನೆಂದ-ರಕ್ಕಸನ ಬಾಯಿಗೆ ನಾನೇ ಆಗುತ್ತೇನೆ ಆಹಾರ ,

ಪತ್ನಿಯೆಂದಳು-ಬೇಡ, ನಾನು ಅವನ ಅನ್ನವಾಗುವುದೇ ಪರಿಹಾರ .

 

ಅರ್ತ್ಥೇತವಾದ್ಯ ತನುಸನ್ತ್ಯಜನಾದಹಂ ಸ್ಯಾಂ ಲೋಕೇ ಸತೀಪ್ರಚರಿತೇ ತದೃತೇ ತ್ವಧಶ್ಚ ।

ಕನ್ಯಾssಹ ಚೈನಮಹಮೇವ ನ ಕನ್ಯಯಾsರ್ತ್ಥ ಇತ್ಯುಕ್ತ ಆಹ ಧಿಗಿತಿ ಸ್ಮ ಸ ವಿಪ್ರವರ್ಯ್ಯಃ  ॥ ೧೯.೭೫ ॥

ನಿನಗಾಗಿ ನಾನು ದೇಹ ಬಿಟ್ಟರೆನಗೆ ಪತಿವ್ರತಾಲೋಕ ಪ್ರಾಪ್ತಿ ,

ಹಾಗಾಗದೇ ಬೇರೆ ರೀತಿಯಾದರೆ ಎನಗೆ ತಪ್ಪದು ಅಧೋಗತಿ .

ಹಿರಿಮಗಳು ಹೇಳುವಳಾಗ -ನಾನೇ ಹೋಗುವೆನು ,

ಹೆಣ್ಣಾದ ನನ್ನಿಂದ ಬೇರೊಂದು ಉಪಯೋಗವೇನು.

' ಧಿಕ್ಕಾರವಿರಲಿ' ಎಂದ ಈ ಮಾತ ಕೇಳಿದ ಬ್ರಾಹ್ಮಣನು.

 

ಕನ್ಯೋದಿತಾ ಬತ ಕುಲದ್ವಯತಾರಿಣೀತಿ ಜಾಯಾ ಸಖೇತಿ ವಚನಂ ಶ್ರುತಿಗಂ ಸುತಶ್ಚ ।

ಆತ್ಮೈವ ತೇನ ನತು ಜೀವನಹೇತುತೋsಹಂ ಧೀಪೂರ್ವಕಂ ನೃಶನಕೇ ಪ್ರತಿಪಾದಯಾಮಿ ॥೧೯.೭೬॥

ಹೆಣ್ಣು ಹುಟ್ಟಿದ ಕುಲ ಮತ್ತು ಮೆಟ್ಟಿದ ಕುಲಕ್ಕೆ ತಾರಕಳು ,

ಹೆಂಡತಿಯು ಸಖಿ ಎನ್ನುತ್ತವೆ ವೇದಗಳ ವಚನಗಳು .

ಮಗನೆಂದರೆ ಪ್ರತಿನಿಧಿಯಾಗಿ ನನ್ನದೇ ಇನ್ನೊಂದು ರೂಪ ,

ನಿಮ್ಮ್ಯಾರನ್ನೂ ಕಳಿಸಲಾರೆ ಎಂದ ಬ್ರಾಹ್ಮಣನಲ್ಲಿ ತೀವ್ರ ತಾಪ .

 

ಏವಂ ರುದತ್ಸು ಸಹಿತೇಷು ಕುಮಾರಕೋsಸ್ಯ ಪ್ರಾಹ ಸ್ವಹಸ್ತಗತೃಣಂ ಪ್ರತಿದರ್ಶ್ಯ ಚೈಷಾಮ್ ।

ಏತೇನ ರಾಕ್ಷಸಮಹಂ ನಿಹನಿಷ್ಯ ಏವೇತ್ಯುಕ್ತೇ ಸುವಾಕ್ಯಮನು ಸಾ ಪ್ರವಿವೇಶ ಕುನ್ತೀ ॥೧೯.೭೭ ॥

ಈರೀತಿಯಾಗಿ ಆ ಮನೆಯವರೆಲ್ಲಾ ಅಲ್ಲಿ ರೋದಿಸುತ್ತಿರುವಾಗ ,

ಹಿಡಿದ ಕಡ್ಡಿಯಿಂದ ರಕ್ಕಸನ ಕೊಲ್ಲುವೆನೆಂದ ಅವರ ಪುಟ್ಟಮಗನಾಗ .

ಕುಂತಿ ಪ್ರವೇಶಿಸುವಳು ವಾತಾವರಣ ಕೊಂಚ ತಿಳಿಯಾದಂತಾದಾಗ.

No comments:

Post a Comment

ಗೋ-ಕುಲ Go-Kula