ಭಾವ ಗುಚ್ಛ by “ತ್ರಿವೇಣಿ ತನಯ”
ಪ್ರಾರ್ಥನೆ
ದೀನ ನಾನು ಸಮಸ್ತಜಗಕೆ ದಾನಿ
ನೀನು,
ಹೀಗೆಂದು ಸಾರುತಿದೆ ದಾಸವಾಣಿ
ತಾನು,
ನೀನಿತ್ತರೆ ಎನಗೆ ಬದುಕುಂಟು,ಇಲ್ಲದಿರೆ ಬರಿ ನಡೆ ಕುಂಟು,
ನೀನುಪೇಕ್ಷೆಯ ಮಾಡೆ ಲೋಕಿಗರಿಗೂ
ನಿನಗೂ ವ್ಯತ್ಯಾಸ ಏನುಂಟು?
ಅನಾವರಣ
ಮುಖನೋಡಿ ತಿಳಿಯಲಾರೆ ನೀ
ಯಾರೊಬ್ಬರ ಗುಣ,
ಇಂದು ಜಗದೊಳಗೆ ಅತಿಪ್ರಧಾನ
ಒಂದೇ ಅದು ಹಣ,
ಕಷ್ಟಕಾರ್ಪಣ್ಯಗಳಲ್ಲಾಗುವುದು
ವ್ಯಕ್ತಿಗಳ ಅನಾವರಣ,
ಜಗದ ಶಾಲೆಯಲಿ ನಿತ್ಯ ಕಲಿಯುತ
ಹುಡುಕಬೇಕಿದೆ ಹೂರಣ.
ಜಗದ ಶಾಲೆ
ಜಗಕಿಂತ ಮಿಗಿಲಾದ
ವಿಶ್ವವಿದ್ಯಾಲಯವಿಲ್ಲ,
ಸಮಾಜ ಸಂಸಾರಕೆ ಮಿಗಿಲಾದ
ಪಠ್ಯವಿಲ್ಲ,
ಅಂಕ ಪ್ರಮಾಣಪತ್ರ ಇಲ್ಲಿ
ಸಿಗುವುದೇ ಇಲ್ಲ,
ಮೌಲ್ಯಮಾಪಕ ಎಲ್ಲೆಡೆಯಿದ್ದರೂ
ಕಾಣುವುದಿಲ್ಲ.
ಹರಿ ಸರ್ವೋತ್ತಮ
ಭಾರತ ಭಾಗವತಗಳ ಉದಹರಿಸಲಾರೆ,
ಸೂಕ್ತ ಉಪನಿಷತ್ಗಳ ಪದ
ಅರುಹಲಾರೆ,
ಜೀವ ತಾ ಅಸ್ವತಂತ್ರ ದಾಸ-ಹರಿ
ಸರ್ವಸ್ವತಂತ್ರ ಈಶ,
ಆಡಿಸಿದಂತಾಡುತಿರುವೆನು ಅವನೇ
ಕಳೆಯುವ ಕ್ಲೇಶ.
ಕರ್ಮ ಫಲ
ಬೇಕೆನಿಸಿದ್ದು ಸಿಗದು
ಬೇಡವಾದ್ದು ಬರದಿರದು,
ಹಳಹಳಿಸಿದರೂ ನಡೆಯಬೇಕಾದ್ದೇ
ನಡೆವುದು,
ಕಣ್ಮುಚ್ಚಿ ಯೋಚಿಸು ಏನಿದರ
ಮರ್ಮ,
ಜನ್ಮಾಂತರಗಳ ಲೆಕ್ಕಾಚಾರ ನೀ
ಮಾಡಿದ ಕರ್ಮ.
(Contributed
by Shri Govind Magal)
No comments:
Post a Comment
ಗೋ-ಕುಲ Go-Kula