ಭಾವ ಗುಚ್ಛ by “ತ್ರಿವೇಣಿ ತನಯ”
ವರಾಹಾವತಾರ
ಬ್ರಹ್ಮನ ಮೂಗಿನಿಂದ ಉದುರಿದ ರೂಪ,
ಅಗಾಧರೂಪ ತಾಳಿ ನಿಂತ ಸೂಕರ ರೂಪ,
ದೈತ್ಯ ಹಿರಣ್ಯಾಕ್ಷನಿಂದ ಕಕ್ಷೆ ತಪ್ಪಿತ್ತು ಭೂಮಿ,
ಅದನ್ನ ರಕ್ಷಿಸಲೆಂದೇ ವರಾಹರೂಪ ತಾಳಿದ ಸ್ವಾಮಿ,
ಬ್ರಹ್ಮಾದಿ ದೇವತೆಗಳ ಪ್ರಾರ್ಥನೆ ಆಲಿಸಿದ ಸೂಕರ,
ಭಾರೀ ಘರ್ಜನೆಯೊಂದಿಗೆ ಜಲ ಪ್ರವೇಶಿಸಿದ ಆಕಾರ,
ದೈತ್ಯ ಹಿರಣ್ಯಾಕ್ಷನ ಸಂಹರಿಸಿ ಕೊಟ್ಟ ಶಿಕ್ಷೆ,
ಕೋರೆ ದಾಡಿಯಲೆತ್ತಿ ಭೂಮಿಯ ಸೇರಿಸಿದ ಕಕ್ಷೆ,
ನಮೋ ನಮೋ ಭೂಮಿ ರಕ್ಷಿಸಿದ ವರಾಹ ರೂಪ,
"ನಿನ್ನವರ"ನೂ ರಕ್ಷಿಸಿ "ಕಕ್ಷೆ "ಸೇರಿಸು ಅನಂತ ರೂಪ.
ನೃಸಿಂಹಾವತಾರ
ಅಗಾಧ ತಪಸ್ಸಾಚರಿಸಿ ದಿತಿಪುತ್ರ ಬ್ರಹ್ಮ ವರದಿ ಉನ್ಮತ್ತ,
ಅವನ ಉದರದಿಂದಲೇ ಬಂದ ಪ್ರಹ್ಲಾದ -ಹರಿಚಿತ್ತ,
ಬಾಲ್ಯದಿಂದಲೇ ಬಾಲಕ ಅವಿಚ್ಛಿನ್ನ ವಿಷ್ಣುಭಕ್ತ,
ತಂದೆಯೇ ಅವನ ಮುಗಿಸಲನೇಕ ಪೀಡನೆಗಳಿತ್ತ.
ರಾಕ್ಷಸತ್ವ ಮೇರೆ ಮೀರಿ ಮೆರೆದಾಡತೊಡಗಿತು,
ಕೂಸು ಪ್ರಹ್ಲಾದ ತದೇಕಚಿತ್ತದಿ ಹರಿಯ ಧ್ಯಾನಿಸಿತು,
ಭಕ್ತನ ರಕ್ಷಣೆಗೆ ಕಂಬದಿಂ ಬಂದ ನಾರಸಿಂಹ,
ದೈತ್ಯನ ಸೀಳಿ ಭಕ್ತನನುಗ್ರಹಿಸಿದ ಲಕ್ಷ್ಮೀ ನೃಸಿಂಹ
ನಮೋ ನಮೋ ಲಕ್ಷ್ಮೀ ನಾರಸಿಂಹ,
ಅನುಗ್ರಹಿಸಿ ರಕ್ಷಿಸಿ ಪೊರೆಯೆಮ್ಮ,
ನಮ್ಮೊಳಗಿಹ ಹಿರಣ್ಯಕಶಿಪುವ ಸೀಳಿ,
ಸೇರಿಸಿಕೊ ನಿನ್ನ ಭಕ್ತರ ಪಾಳಿ.
ಆರ್ಭಟಿಸಿ ಘುಡುಘುಡಿಸಿ ಕಂಬದಿಂ ಬಂದವತಾರ,
ತನ್ನ ಭಕ್ತನ ರಕ್ಷಿಸಿ ದೈತ್ಯನ ಸೀಳಿದವತಾರ,
ಬಾಲಕ ಮೊರೆಯಿಡಲು ಕಾಣಿಸಿಕೊಂಡ ನೃಸಿಂಹಾವತಾರ,
ರಾಕ್ಷಸತ್ವ ಮಿತಿ ಮೀರಿರಲು ಮಟ್ಟ ಹಾಕಿದ ಭೀಕರವತಾರ.
ರಾಕ್ಷಸನ ಪೀಡನೆಗಳಿಂದ ಭಕ್ತನ ಪಾರುಮಾಡಿದವತಾರ,
ಎಲ್ಲರೊಳಿಹ ಶಕ್ತಿ ತಾನೇ ಎಂದು ತೋರಿ ಕಾಣಿಸಿಕೊಂಡಾವತಾರ,
ಮಗ ನಾಲ್ಮೊಗನ ವರವ ನಿಜಮಾಡಿ ಶತ್ರುವ ಸೀಳಿದವತಾರ,
ನಮ್ಮೊಳಿಹ ಶತ್ರುವ ಬಗೆದು ಆಹ್ಲಾದ ಕೊಡು ನೃಸಿಂಹಾವತಾರ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula