Friday, 18 March 2016

Bhava Guccha 49

ಭಾವ ಗುಚ್ಛ  by “ತ್ರಿವೇಣಿ ತನಯ


ಪರಶುರಾಮಾವತಾರ

ಮದೋನ್ಮತ್ತ ಕ್ಷತ್ರಿಯರ ಹಾವಳಿ ಮಿತಿ ಮೀರಿತ್ತು,
ಸಮತೋಲನ ಕಾಪಾಡಲು ಭಗವದವತಾರ ಬೇಕಿತ್ತು,
ಜಮದಗ್ನಿ ಪುತ್ರನಾಗಿ ಅವತರಿಸಿದ ಭಾರ್ಗವ ರಾಮ,
ಪರಶು ಹಿಡಿದು ಇಪ್ಪತ್ತೊಂದು ಬಾರಿ ದುಷ್ಟರ ಮಾಡಿದ ನಿರ್ನಾಮ.

ಲೋಕ ಕಂಟಕರ ವಧಿಸಿ ಭೂಭಾರ ಇಳಿಸಿದ ಸ್ವಾಮಿ,
ಬ್ರಾಹ್ಮಣರಿಗೆ ದಾನವಾಗಿ ಕೊಟ್ಟ ತನ್ನಧೀನವಾದ ಭೂಮಿ,
ನಮ್ಮೊಳಗಿಹ ದೈತ್ಯರ ಕತ್ತರಿಸು ಓ ಕೊಡಲಿ ರಾಮ,
ಮೊಮ್ಮಗನ ಎಮ್ಮಮನದಲಿರಿಸಿ ನುಡಿಸು ರಾಮನಾಮ.

ರಾಮಾವತಾರ

ಬ್ರಹ್ಮಾದಿ ದೇವತೆಗಳಿಂದ ರಾವಣ ಸಂಹಾರದ ಬೇಡಿಕೆ,
ಸರಿ ಸಿದ್ಧವಾಯಿತು ಶ್ರೀ ರಾಮಾವತಾರದ ವೇದಿಕೆ,
ದಶರಥ ಪುತ್ರನಾಗಿ ಇಕ್ಷ್ವಾಕುವಂಶದಿ ರಾಮನಾಗಿ ಬಂದ,
ಲಕ್ಷ್ಮಣ ,ಭರತ ,ಶತ್ರುಘ್ನರನೂ ತಮ್ಮಂದಿರಾಗಿ ತಂದ.

ಬಾಲ್ಯದಲ್ಲೇ ವಿಶ್ವಾಮಿತ್ರರ ಯಾಗ ರಕ್ಷಣೆಗೆ ನಡೆದ,
ತಾಟಕಿ ಸುಬಾಹು ಮಾರೀಚ ಮೊದಲಾದವರ ಬಡಿದ,
ಅಹಲ್ಯೆ ಉದ್ಧರಿಸಿ ಶಿವಬಿಲ್ಲ ಮುರಿದು ಸೀತೆಯ ಕೈ ಹಿಡಿದ,
ಕೈಕೇಯಿ ನೆಪ ಮಾಡಿ ಸತಿತಮ್ಮರೊಡಗೂಡಿ ಕಾಡಿಗೆ ನಡೆದ.

ಸಾವು ಸೆಳೆಯಿತು ರಾವಣನ ಸೀತೆಯ ರೂಪದಿಂದ,
ಸನ್ಯಾಸಿಯಾಗಿ ಬಂದು ಸೀತಾಕೃತಿ ಅಪಹರಿಸಿದ,
ನಂತರ ರಾಮಲಕ್ಷ್ಮಣರ ಸೀತೆಯ ಹುಡುಕುವಾಟ,
ಸಿದ್ಧವಾಯಿತು ಹನುಮ-ಸುಗ್ರೀವರ ಕಪಿಸೇನೆಯ ಕೂಟ.

ಶರಧಿಲಂಘಿಸಿ ಸೀತೆಯಕಂಡು ಹನುಮ ತಂದ ಸುವಾರ್ತೆ,
ಶ್ರೀರಾಮ ಹನುಮಾದಿಗಳ ಕೂಡಿ ಮುಗಿಸಿದ ರಾವಣಾದಿಗಳ ಮನೆವಾರ್ತೆ,
ಸುಜೀವಿ ವಿಭೀಷಣಗೆ ಪಟ್ಟಗಟ್ಟಿ ನಾಟಕ ಮುಗಿಸಿದ ರಾಮ,
ನಿನ್ನ ದಾಸರ ದಾಸರನೂ ಉದ್ಧರಿಸಿ ಸಲಹು ವೈಕುಂಠಧಾಮ.


(Contributed By Shri Govind Magal)

No comments:

Post a Comment

ಗೋ-ಕುಲ Go-Kula