Monday, 21 March 2016

Sāra Saṅgama 01

ಸಾರ ಸಂಗಮ  by “ತ್ರಿವೇಣಿ ತನಯ

ಶಾಂತಿ --ಭ್ರಾಂತಿ

ಜೊತೆಗಿರುವವರು ನೀಡಲಾರರು ಮನ ಶಾಂತಿ,
ಸಂಸಾರದಲಿ ನೆಮ್ಮದಿಯೆನ್ನುವುದು ಬರೀ ಭ್ರಾಂತಿ,
ಕಣ್ಮುಚ್ಚಿ ಕೂತಾಗ ಆಗುವ ಅನುಭವ ಬಾಚಿಕೋ,
ಏನೇ ಬೇಕಿದ್ದರೂ ಕಾಣದವನನ್ನೇ ಕೇಳಿಕೋ.

ಯಾರು ಕಾರಣ -ಅವನೇ ಸಂಕರ್ಷಣ

ಸೂರ್ಯನಲಿ ಬಿಸಿಬೆಳಕ ಇಟ್ಟವನ್ಯಾರು,
ಚಂದ್ರನಿಗೆ ತಂಬೆಳಕ ಕೊಟ್ಟವನ್ಯಾರು,
ಹೊಳೆವ ನಕ್ಷತ್ರಗಳಿಗೆ ಬೆಳಕಿತ್ತವನ್ಯಾರು,
ಅಮಾವಾಸ್ಯೆ ರಾತ್ರಿಗೆ ಕಾರ್ಗತ್ತಲ ಬಿಟ್ಟವನ್ಯಾರು .

ಅರಳುವ ಹೂವಲ್ಲಿ ಚಲುವನ್ನು ಇಟ್ಟವನ್ಯಾರು,
ಕೆರಳಿದ ಹಾವಲ್ಲಿ ರೋಷವನು ಕೊಟ್ಟವನ್ಯಾರು,
ಎಳೆಮಗುವ ಮೊಗದಲ್ಲಿ ನಗುವ ಬಿತ್ತಿದವನ್ಯಾರು,
ಹುಣ್ಣಿಮೆರಾತ್ರಿಯ ಸೊಬಗನ್ನು ಹರಿಸಿದವನ್ಯಾರು.

ಮೊಟ್ಟೆಯಲಿ ಕೋಳಿಯನು ಇಟ್ಟವನ್ಯಾರು,
ಚಿಟ್ಟೆರೆಕ್ಕೆಯಲಿ ಬಣ್ಣಗಳ ಬಿಟ್ಟವನ್ಯಾರು,
ಹೊಟ್ಟೆಯಲಿ ಹಸಿವನ್ನು ಹುಟ್ಟಿಸಿದವನ್ಯಾರು,
ರಟ್ಟೆಯಲಿ ಶಕ್ತಿಯನು ಕಟ್ಟಿದವನ್ಯಾರು.

ಕರ್ಮ ಕಳೆಯಲು ಭೂಮಿಗೆ ಬಿಟ್ಟವನ್ಯಾರು,
ನೋವು ನಲಿವುಗಳಿಂದ ಕರ್ಮ ಸುಡುವವನ್ಯಾರು,
ನೀನಾವುದನೂ ಹೊರದೆ ಅವನ ಮೇಲೇ ಹೇರು,
ಪಾತ್ರ ಪೋಷಣೆ ಮುಗಿಸಿ ಅವನ ಪಾದ ಸೇರು.

(Contributed by Shri Govind Magal)

No comments:

Post a Comment

ಗೋ-ಕುಲ Go-Kula