Friday, 4 March 2016

Bhava Guccha 38

ಭಾವ ಗುಚ್ಛ  by “ತ್ರಿವೇಣಿ ತನಯ

ವಿಧಿಯಾಟ

ಮದುವೆಗೆ ಹೊರಟವರು ಮಸಣ ಸೇರಿದ್ದುಂಟು,
ಮಸಣಯಾತ್ರೆಯ ಶವ ಎದ್ದು ಕುಳಿತದ್ದೂ ಉಂಟು,
ಹೂವೆಂದು ತಬ್ಬಿದ್ದು ಹಾವಾಗಿ ಕುಟುಕಿದ್ದುಂಟು,
ಹಾಲೆಂದು ಕುಡಿದದ್ದು ಹಾಲಾಹಲವಾದದ್ದುಂಟು,
ಬಲ್ಲವರಾರಿಲ್ಲಿ ವಿಧಿ ಆಡಿಸುವ ಆಟ,
ನಡೆವುದೇ ನಡೆಯುತಿದೆ ಇರಲಿ ನಿರ್ಲಿಪ್ತ ನೋಟ.

ಮಡಿ

"ಮಡಿ"ಯ ಬೇಕು ಮನಶುದ್ಧವಾಗದ "ಮಡಿ",
ಕಡಿಯಬೇಕು ಅರ್ಥಹೀನ ಕರ್ಮದ ಕುಡಿ,
ನಂದಬೇಕು ಕಾಮಕ್ರೋಧಾದಿಗಳ ಕಿಡಿ,
ಬರಬೇಕು ಕಪಟವಿರದ ಪ್ರಾಮಾಣಿಕ ನುಡಿ,
ಬೇಕೋ ಇವೆಲ್ಲ -ಕಳಚುತ ಜಗದ ರಾಡಿ,
ಶರಣಾಗಿ ಭಗವಂತನ ಪಾದವೊಂದೇ ಹಿಡಿ.

ಪ್ರೇರಕ -ಪಾಲಕ

ನೀನು ಒಳಗಿದ್ದು ಪ್ರೇರಕ,
ನೀನೇ ಹೊರಗಿದ್ದು ಪಾಲಕ,
ಬದುಕು ಮಾತ್ರ ನಿತ್ಯ ನರಕ,
ಕಾರಣವದು ಪ್ರಾರಬ್ಧ ಪಾಕ.

ಸೂತ್ರ -ಪಾತ್ರ

ಸುಟ್ಟು ಬಿಡು ದುರಿತಗಳ,
ಹರಿಸು ಕರುಣಾ ಹೊನಲ,
ನೀನೇ ನಾಟಕದ ಸೂತ್ರ,
ಎಂದು ಮುಗಿಸುವೆ ಪಾತ್ರ?

ಹಗಲು -ರಾತ್ರಿ

ಬದುಕೇ ಹಾಗೆ ಹಗಲು ರಾತ್ರಿ,
ಸುಖ ದುಃಖ ಎರಡೂ ಖಾತ್ರಿ,
ಅಮಾವಾಸ್ಯೆಯ ನಂತರ ಹುಣ್ಣಿಮೆ,
ಅದೇ ವಿಧಾತನ ಸೃಷ್ಟಿಯ ಮಹಿಮೆ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula