Thursday, 24 March 2016

Sāra Saṅgama 04

ಸಾರ ಸಂಗಮ  by “ತ್ರಿವೇಣಿ ತನಯ

ಜೀವ ಯೋಗ್ಯತೆ

ಜೀವರಾಶಿಗಳವು ಅನಾದಿಯಿಂದಲೂ ಭಿನ್ನ,
ಅದರಂತೆ ನಡತೆ ಆಚಾರ ವಿಚಾರಗಳೂ ಬಿನ್ನ,
ಜೀವದ ಯೋಗ್ಯತೆಯನರಿತು ವ್ಯವಹರಿಸು,
ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸ್ವೀಕರಿಸು.

ಬೇವು ಬೆಲ್ಲ

ಬಾಳೇ ಹಾಗೆ ಬೇವು ನಂತರ ಬೆಲ್ಲ,
ಯಾವುದು ಮೊದಲೋ ಯಾವನು ಬಲ್ಲ,
ಎಲ್ಲದಕೂ ಕಾರಣ ನೀ ತಂದಿಹ ಗಂಟು,
ಕೃಷ್ಣಾರ್ಪಣವೆನುತಿರು ಹಚ್ಚಿಕೊಳ್ಳದೇ ಅಂಟು.

ಬದುಕಿನ ಸೂತ್ರ

ನಿನ್ನನ್ನೇ ನೀ ತಿಳಿಯದವ ಊರನ್ನೇನು ತಿದ್ದುವೆ?
ಆಗಲಾರದ ಕೆಲಸ ಸುಮ್ಮನೇ ಗಾಳಿಯ ಗುದ್ದುವೆ,
ಕಣ್ಮುಚ್ಚಿ ಒಳಗಿಳಿದು ತಿಳಿ ನಿನ್ನದೇನು ಪಾತ್ರ?
ಅದರ ಸುಳಿವು ಸಿಕ್ಕಿತೋ ಬದುಕೆಲ್ಲ ಸುಸೂತ್ರ .

ನಿಜ ಸಂಪತ್ತು

ಲಕ್ಷ್ಮೀ -ಅಲ್ಲ ಬರೀ ಸಂಪತ್ತು ಕನಕ ಧನ,
ಪ್ರಕೃತಿಯಾಗಿ ಎಲ್ಲದರ ಮೂಲ ಇಂಧನ,
ಬೇಡೋಣ ಅವಳಲ್ಲಿ ನಿಜ ಸಂಪತ್ತು ಜ್ಞಾನ,
ಜ್ಞಾನವಿತ್ತು ಕಾಯಿ ತಾಯೇ ನಿನಗೆ ನಮ್ಮ ವಂದನ.

ದೇವರ ಕಾನೂನು -ಕಾಯಿದೆ

ಒಪ್ಪಿದೆ ನೀನು ಮಾಡಿದುದೇ ಕಾನೂನು ಕಾಯ್ದೆ,
ಸಮಯಾಸಮಯ ನೋಡದೇ ಕರಿ ಮಕರಿಗಳ ಕಾಯ್ದೆ,
ಅಕ್ಷಯಾಂಬರವನಿತ್ತು ಸಾಧ್ವಿ ದ್ರೌಪದಿಯ ಕಾಯ್ದೆ,
ನಮ್ಮಂಥವರ ಪಾಲಿಗೆ "ನಿತ್ಯಸಂಸಾರ"ನೇಯ್ದೆ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula