Tuesday, 1 March 2016

Bhava Guccha 35

ಭಾವ ಗುಚ್ಛ  by “ತ್ರಿವೇಣಿ ತನಯ


ಆಸಕ್ತಿ -ಭಕ್ತಿ

ಅಂಕುರವಾಯಿತೋ ಹರಿಪಾದದಲಿ ಆಸಕ್ತಿ,
ಮಾಡು ಹರಿದಾಸ ಯತಿಪರಂಪರೆಯಲಿ ಭಕ್ತಿ,
ಯಾರಲ್ಲಿ ಕೂತಿಹನೋ ನಿನ್ನ ಸ್ವರೂಪೋದ್ಧಾರಕ ಗುರು,
ಯಾವ ವೈಷ್ಣವರಲ್ಲೂ ದ್ವೇಷ ಕಟ್ಟಿಕೊಳ್ಳದಿರು.

ಎಲ್ಲೆಯಿರದವನು

ಅರಳೋ ಹೂವಲ್ಲಿ ಕರಳೋ ಹಾವಲ್ಲಿ,
ಹರಿವ ನೀರಲ್ಲಿ ಸುಳಿವ ಗಾಳಿಯಲ್ಲಿ,
ತುಣುಕು ಮೋಡದಲಿ ಇಣುಕು ಸೂರ್ಯನಲಿ,
"ನಿನ್ನ "ದರುಶನವೇ ಎಲ್ಲ ಠಾವಿನಲಿ.

ಬ್ರಹ್ಮ -ಲೀಲೆ

ಬ್ರಹ್ಮಾಂಡವೇ ಅವನ ಪ್ರಯೋಗ ಶಾಲೆ,
ನಡೆದಿದೆ ಒಂದೊಂದೆಡೆ ಒಂದೊಂದು ಲೀಲೆ,
ಜಗತ್ತೆಂಬುದು ಅವನು ಕಟ್ಟಿದ ಮನೆ,
ಭರತಖಂಡ ಅದರೊಳು ದೇವರ ಕೋಣೆ.

ಭ್ರಮೆ

ಮೇಲು ಕೀಳುಗಳೆಂಬ ಭ್ರಮೆಗಳು ಯಾಕೆ?
ಅವನಿಟ್ಟದ್ದು ಕೊಟ್ಟದ್ದು ಒಪ್ಪಲ್ಲ ಯಾಕೆ?
ಯಾವ ದೇಶದೊಳಿಹರೋ ಸಾಧಕ ಜೀವರಾಶಿ!
ಕಾಣದವನ ವ್ಯಾಪಾರ ಒಪ್ಪಿ ಶರಣಾಗೋದು ವಾಸಿ!

ಜೀವನಾದ -ತತ್ವವಾದ

ಬೇಕೋ ನಮಗೆ ಶುದ್ಧ ಜ್ಞಾನ,
ಹಿಡಿಯಬೇಕು ಮಧ್ವರ ಚರಣ,
ಶಾಸ್ತ್ರವನೆಲ್ಲ ನಂದಿತೀರ್ಥರ ಮಸೂರದಲಿ ನೋಡು,
ಹರಿಯೇ ಪರದೈವ ಎಂದು ತಿಳಿದು ಪೊಡಮಡು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula