Saturday, 19 March 2016

Bhava Guccha 50

ಭಾವ ಗುಚ್ಛ  by “ತ್ರಿವೇಣಿ ತನಯ

ಕೃಷ್ಣಾವತಾರ

ದುಷ್ಟಶಿಕ್ಷಣಕೆ ಶಿಷ್ಟರಕ್ಷಣಕೆ ದ್ವಾಪರಾಂತ್ಯದಲಿ ಕೃಷ್ಣಾವತಾರ,
ಕೂಸಿರುವಾಗಲೇ ಮಾಡಿದ ಅನೇಕ ರಾಕ್ಷಸರ ಸಂಹಾರ,
ಒಂದೊಂದು ನಡೆಯಲ್ಲೂ ನಿಲುಕಿಗೇ ಸಿಗದೆ ತೋರಿದ ವ್ಯಾಪಾರ,
ತಾಯಿಗೆ ಬಾಯಲ್ಲೇ ಬ್ರಹ್ಮಾಂಡ ತೋರಿದ ಭಾರೀ ಪೋರ.

ಇಂದ್ರನ ಜಂಭಮುರಿದು ಗೋವರ್ಧನ ಗಿರಿಯನೆತ್ತಿದ ಗೋವಿಂದ,
ಕೊಳಲನೂದುತ ಗೋವಕಾಯುತ ಗೋಪಿಯರಿಗಿತ್ತ ಆನಂದ,
ಹಿಂಸಿಸುವ ಕಂಸಾದಿಗಳ ಸವರಿ ಅನೇಕ ರಕ್ಕಸರ ತರಿದ ಮುರಾರಿ,
ಭಾರತ ಯುದ್ಧದಿ ಸಾರಥ್ಯವಹಿಸಿ ಅರ್ಜುನಗೆ ಗೀತೆ ಕೊಟ್ಟ ಶೌರಿ.

ಸಂಧಾನದಲಿ ಕದನದಲಿ ಸ್ನೇಹದಲಿ ಪ್ರೀತಿಯಲಿ ಎಲ್ಲಿಲ್ಲ ಅವನ ಮಹಿಮೆ,
ಜೀವನದ ಮುತ್ಸದ್ದಿತನವನು ಕ್ಷಣ ಕ್ಷಣಕೂ ತೋರಿದ ಗರಿಮೆ,
ಬದುಕು ಧರ್ಮಗಳ ದರ್ಶನ ಮಾಡಿಸಿದ ಮೊದಲ ಮನೋವಿಜ್ಞಾನಿ,
ತನಗೆ ತಾನೇ ಶಪಥತೊಟ್ಟ ಅವತರಿಸುವೆ ಧರ್ಮಕ್ಕಾದಾಗ ಗ್ಲಾನಿ.

ಭೀಮಾಭಿರಕ್ಷಿತ ಸೈನ್ಯವ ಪೋಷಿಸಿ ಜಯವ ತಂದಿತ್ತೆ,
ಮಧ್ವಾಭಿರಕ್ಷಿತ ಸೈನ್ಯದ ರಕ್ಷಣವೂ ನಿನ್ನದೇ ಮತ್ತೆ,
ನಿನ್ನ ನಂಬಿದವರ ನೀನೆಂದೂ ಕೈ ಬಿಟ್ಟಿಲ್ಲ ಕೃಷ್ಣ,
ಭಕುತ ಜನರ ಎದೆಯಲಿ ನೆಲೆಸಿ ಕಳೆ ಭವದ ಉಷ್ಣ .


(Contributed by Shri Govind Magal)

No comments:

Post a Comment

ಗೋ-ಕುಲ Go-Kula