Friday 25 March 2016

Sāra Saṅgama 05


ಸಾರ ಸಂಗಮ  by “ತ್ರಿವೇಣಿ ತನಯ

ಭವದ ತಾಪ -ಜ್ಞಾನ ದೀಪ

ಹಚ್ಚಿಡೋಣ ಒಳಗೆ ಜ್ಞಾನತೃಷೆಯ ದೀಪ,
ಅದೊಂದೇ ಕಳೆಯಬಲ್ಲದು ಭವದ ಈ ತಾಪ,
ಎನ್ನೊಳಗಿರುವವರೆಗೂ ಕಾಪಿಡದನು ವಾಯುದೇವ,
ಗುರು ನಿನ್ನ ಕಾರುಣ್ಯವಿರೆ ಒಲಿವ ಪರಮದೇವ.

ಅಹಂ ಬಲಿ --ಮೈಮನ ಕಾಯುವ ಮಾಲಿ

ಬಾಗಿದ ಬಲಿಯ ಬಾಗಿಲ ಕಾಯ್ದ ಸ್ವಾಮಿ,
ಬಾಗಿದವರ ಮನೆ ಮನ ಕಾಯುವ ಪ್ರೇಮಿ,
ಈ ಮರ್ಮವನರಿತು ಮಾಗುತ ಬಾಗುತ ಬಾಳು,
ನಂಬಿದವರ ಅವನೆಂದು ಕೈ ಬಿಟ್ಟಾನೆ ಹೇಳು.

ಕಾಣದ ಆಟ

ನಂಬಿರುವ ಮೂಲದಿಂದ ಬಾರದಿರುವುದು ಉಂಟು,
ನಂಬದಿರುವ ಎಡೆಯಿಂದ ಒದಗಿ ಬರುವುದೂ ಉಂಟು,
ನೀನಂದು ಕೊಂಡಂತೆ ನಡೆಯದದು ಎಂದೆಂದೂ,
ಎಲ್ಲವನೂ ನಡೆಸುತಿರುವವ ಒಬ್ಬನೇ ಅವ ಆತ್ಮಬಂಧು.

ನಿಯಾಮಕ

ಅದು ಮಾಡು ಇದು ಬಿಡು ಹಾರಾಟ ಸಲ್ಲ,
ಮಾಡುವುದಕೆ ಬಿಡುವುದಕೆ ನೀನೇನೂ ಅಲ್ಲ,
ಹಿಂದಿನದು ಮುಂದಿನದು ನಿನಗೇನೂ ಗೊತ್ತಿಲ್ಲ,
ಸರ್ವ ನಿಯಾಮಕನೊಬ್ಬನೇ ಅವ ಲಕುಮೀನಲ್ಲ.

ಎಲ್ಲ ಬಿಟ್ಟ ಬಲ್ಲವರು

ನಾನು ನನ್ನದೆಂದವರ ಹೆಸರು ಜಗದೊಳಗೆ ಇಲ್ಲ,
ಎಲ್ಲ ಬಿಟ್ಟವರ ಬೃಂದಾವನ ಸ್ಮಾರಕಗಳೇ ತುಂಬಿವೆಯಲ್ಲ,
ಏನಿದರ ಮರ್ಮ ಒಮ್ಮೆಯಾದರೂ ಕಣ್ಮುಚ್ಚಿ ಯೋಚಿಸು,
ಸ್ಥಿರವಲ್ಲವೀ ವ್ಯಾಪಾರ ಮನವ "ಸ್ಥಿರ"ನ ಪಾದದಿ ಕೀಲಿಸು.

(Contributed by Shri Govind Magal)

No comments:

Post a Comment

ಗೋ-ಕುಲ Go-Kula