Saturday 12 March 2016

Bhava Guccha 43

ಭಾವ ಗುಚ್ಛ  by “ತ್ರಿವೇಣಿ ತನಯ

ಮಂಥನ

ಅಮೃತ ಮಥನದಲ್ಲಿ ಮೊದಲು ಬಂದದ್ದೇ ಹಾಲಾಹಲ,
ತತ್ವ ಮಂಥನದಲ್ಲೂ ಎದುರಾಗುವವು ಗೊಂದಲ,
ತಳ್ಳುತ ಹಾಲಾಹಲ ಗೆಲ್ಲುತ್ತಾ ಬಾ ಗೊಂದಲ,
ಗುರು ಹರಿ ಕೃಪೆ ಒದಗಿತೋ ಎಲ್ಲವೂ ಸರಳ,

ಅನುಭವ -ಅನುಭಾವ

ಅನುಭವಿಸಿ ಕೇಳದ ಪ್ರವಚನವದ್ಯಾಕೆ,
ಅನುಭಾವವಾಗದ ನೀತಿ ಪಾಠವದ್ಯಾಕೆ,
ಅಳವಡಿಸಿಕೊಳ್ಳಲಾಗದ ತತ್ವ ಜ್ಞಾನವದ್ಯಾಕೆ,
ಅನುಸಂಧಾನವಿರದ ಶ್ವಾನ ಬಾಳು ಅದ್ಯಾಕೆ?

ಜಾತಿ -ನೀತಿ

ರಾಮಾಯಣ ಕೊಟ್ಟ ವಾಲ್ಮೀಕಿ ಬೇಡ,
ರಾಮಾಯಣವದು ಯಾರಿಗೆ ಬೇಡ?
ಮಹಾಭಾರತ ಕೊಟ್ಟ ವ್ಯಾಸ ಕಾನೀನ,
ತತ್ವ ಶಾಸ್ತ್ರಗಳಲ್ಲೇ ಅತ್ಯಂತ ಘನ,
ಗೀತೆ ಕೊಟ್ಟ ಕೃಷ್ಣನವನು ಗೊಲ್ಲ,
ಗುಣ ಗ್ರಹಿಕೆ ಮುಖ್ಯ ಜಾತಿಯದು ಸಲ್ಲ.


ಕಾಲ -ಮನದ ಜಾಲ

ಕೆಟ್ಟಿರುವುದು ಕಾಲವಲ್ಲ ನೋಡುವ ಮನಸು,
ನೋಡುವ ದೃಷ್ಟಿ ಶುಭ್ರವಿರೆ ಜಗವೆಲ್ಲ ಸೊಗಸು,
ನಿನ್ನ ಪಾಲಿನ ಕರ್ಮ ಪ್ರೀತಿ ಶ್ರದ್ಧೆಯಲಿ ಮಾಡು,
ನಡೆದಿರುವ ವ್ಯಾಪಾರ ಹರಿಯಧೀನವದು ನೋಡು.

ಭ್ರಮೆಯಾನಂದ

ಸಂಸಾರ ಲೋಕದಾಟದ ಭ್ರಮೆಯೇ ಮಹದಾನಂದ,
ಕಣ್ಮುಚ್ಚಿ ಯೋಚಿಸಿದರೆ ಅದುವೆ ಘೋರ ಪ್ರತಿಬಂಧ,
ಲೋಕದಾಟದ ಅಶಾಶ್ವತತೆಯ ಅರಿವಿದ್ದು-ಅಂಟದಂತಿರಲಿ,
ತಪಿಸುವ ಮನವದು ಶಾಶ್ವತ ಆನಂದದೆಡೆಗಿರಲಿ .


(Contributed by Shri Govind Magal)

No comments:

Post a Comment

ಗೋ-ಕುಲ Go-Kula