Sunday 13 March 2016

Bhava Guccha 44

ಭಾವ ಗುಚ್ಛ  by “ತ್ರಿವೇಣಿ ತನಯ

ಸತ್ಯ -ಮಿಥ್ಯ

ಕೇಳಿದ್ದೆಲ್ಲ ಸತ್ಯವಲ್ಲ ನೋಡಿದ್ದೆಲ್ಲ ಸತ್ಯವಲ್ಲ,
ಅಸಲು ಸತ್ಯ ಮಿಥ್ಯಗಳ ಅರ್ಥವೇ ಸಾರ್ವತ್ರಿಕವಲ್ಲ,
ಒಪ್ಪು ಬಿಡು ಈ ದ್ವಂದ್ವವಂತೂ ಉಂಟೇ ಉಂಟು,
ದ್ವಂದ್ವಾತೀತನೊಂದಿಗೆ ಬೆಳೆಸಿಕೊ ನೋವಿರದ ನಂಟು.

ತಾತ -ಮೊಮ್ಮಗ

ತಾತಂದಿರೊಡನಾಡುವುದು ಮೊಮ್ಮಕ್ಕಳ ರೀತಿ,
ನಿನ್ನ ತಾತನೊಡನಿರಲು ನಿನಗಿಲ್ಲವೇ ಪ್ರೀತಿ?
ನಿನ್ನ ತಾತನಂತೂ ಇರುವ ಆತ್ಮ ಸಖನಾಗಿ,
ನೀನೂ ಸೇರಲು ಮನದಕಲ್ಲರಳುವುದು ಹೂವಾಗಿ.

ಏಳು -ಬೀಳು -ಗೀಳು

ನೂರೆಂಟು ಇರಲಿ ಸಂಸಾರದೇಳು ಬೀಳು,
ತಪ್ಪದಿರಲದು ಅಧ್ಯಾತ್ಮ ತುಡಿತದ ಗೀಳು,
ಬಂದದ್ದು ಬರಲಿ ತಪ್ಪದ ಭವದ ಉಷ್ಣ,
ನಿನ್ನ ಪಾದದ ಸ್ಮರಣೆ ತಪ್ಪಿಸದಿರು ಕೃಷ್ಣ.

ನಾಟಕಕಾರ

ನಯ ವಿನಯ ಪ್ರೇಮ ಕರುಣೆ ತೋರಿದ ರಾಮ,
ಕಪಟಿ ವಂಚಕರಿಗೆ ಕೃಷ್ಣನಾಡಿದ ಆಟವೇ ನೇಮ,
ಎರಡವತಾರಗಳಲ್ಲಿ ತೋರಿದ ಅದ್ಭುತ ಲೀಲೆ,
ಇಡೀ ಬ್ರಹ್ಮಾಂಡವಲ್ಲವೇ ಅವನ ಪ್ರಯೋಗ ಶಾಲೆ.

ನಿಜ ಕಾರ್ಯ .

ಜಗದೊಳು ಮೂರ್ಖರಿಗೆ ತೋರಿದ ಔದಾರ್ಯ,
ನೀನಾದೆ ಅವರ ದೃಷ್ಟಿಯಲಿ ಪರಮ ನಿರ್ವೀರ್ಯ,
ಎಲ್ಲರನೂ ಎಲ್ಲ ಕಾಲಕ್ಕೂ ಮೆಚ್ಚಿಸುವದಲ್ಲ ಅನಿವಾರ್ಯ,
ವಿಧಾತನ ಆಟಕ್ಕೆ ಮಣಿಯುವುದೇ ನಿಜ ಕಾರ್ಯ.


(Conributed by Shri Govind Magal)

No comments:

Post a Comment

ಗೋ-ಕುಲ Go-Kula