Monday 18 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 25 - 30


ಅಥಾಸ್ತ್ರಸಮ್ಪ್ರದೀಪಿತೈಃ ಸಮಸ್ತಶೋ ಮಹೋಲ್ಮುಕೈಃ ।
ರಘುಪ್ರವೀರಚೋದಿತಾಃ ಪುರಂ ನಿಷಿ ಸ್ವದಾಹಯನ್ ॥೮.೨೫॥

ಮೊದಲನೆಯ ದಿನದ ಯುದ್ಧವಾದ ರಾತ್ರಿ,
ದೈತ್ಯರ ಪಡೆಯ ಪರಾಜಯವಾಯಿತು ಖಾತ್ರಿ.
ಶ್ರೀರಾಮಚಂದ್ರನಿಂದ ಪ್ರಚೋದಿಸಲ್ಪಟ್ಟ ಕಪಿಗಳ ಸೈನ್ಯ,
ಅಗ್ನ್ಯಸ್ತ್ರದಿಂದ ಹಚ್ಚಿದ ಪಂಜುಗಳಿಂದ ಮಾಡಿತು ಲಂಕಾದಹನ.

ತತಸ್ತೌ ನಿಕುಮ್ಭೋsಥ ಕುಮ್ಭಶ್ಚ ಕೋಪಾತ್ ಪ್ರದಿಷ್ಟೌ ದಶಾಸ್ಯೇನ ಕುಮ್ಭಶ್ರುತೇರ್ಹಿ ।
ಸುತೌ ಸುಪ್ರಹೃಷ್ಟೌ ರಣಾಯಾಭಿಯಾತೌ ಕಪೀಂಸ್ತಾನ್ ಬಹಿಃ ಸರ್ವಶೋ 
ಯಾತಯಿತ್ವಾ ॥೮.೨೬॥

ಪಟ್ಟಣ ಸುಟ್ಟುಹೋದ ಕಾರಣ,
ಅತ್ಯಂತ ಕೋಪಗೊಂಡ ರಾವಣ.
ಕಳುಹಿದ ಕುಂಭಕರ್ಣನ ಮಕ್ಕಳಾದ ನಿಕುಂಭ ಕುಂಭ,
ಅವರಿಗಿತ್ತಂತೆ ಕಪಿಗಳನ್ನು ಕೊಲ್ಲಬಲ್ಲೆವೆಂಬ ಜಂಭ.
ಬಲು ಆನಂದದಿಂದ ಯುದ್ಧಕ್ಕೆ ಬಂದರವರು,
ಕಪಿಗಳನ್ನು ಹೊಡೆದು ಪ್ರಾಕಾರದಾಚೆ ಓಡಿಸಿದರು.

ಸ ಕುಮ್ಭೋ ವಿಧಾತುಃ ಸುತಂ ತಾರನೀಲೌ ನಳಂ ಚಾಶ್ವಿಪುತ್ರೌ ಜಿಗಾಯಾಙ್ಗದಂ ಚ ।
ಸುಯುದ್ಧಂ ಚ ಕೃತ್ವಾ ದಿನೇಶಾತ್ಮಜೇನ ಪ್ರಣೀತೋ ಯಮಸ್ಯಾsಶು ಲೋಕಂ ಸುಪಾಪಃ ॥೮.೨೭॥

ಪ್ರಾರಂಭವಾಯಿತು ಮಹಾಪಾಪಿಷ್ಟನಾದ ಕುಂಭನ ಯುದ್ಧ,
ಜಾಂಬವಂತ ತಾರ ನೀಲ ನಳ ಮೈಂದ ವಿವಿದ ಅಂಗದರನ್ನು ಗೆದ್ದ.
ಸುಗ್ರೀವನೊಡನೆ ನಡೆಯಿತು ಸುದೀರ್ಘವಾದ ಯುದ್ಧ,
ಕಡೆಗೊಮ್ಮೆ ಕಾದಲಾಗದೇ ಸೋತು ಯಮಲೋಕದಿ  ಬಿದ್ದ.

ತತೋ ನಿಕುಮ್ಭೋsದ್ರಿವರಪ್ರದಾರಣಂ ಮಹಾನ್ತಮುಗ್ರಂ ಪರಿಘಂ ಪ್ರಗೃಹ್ಯ ।
ಸಸಾರ ಸೂರ್ಯ್ಯಾತ್ಮಜಮಾಶು ಭೀತಃ ಸ ಪುಪ್ಲುವೇ ಪಶ್ಚಿಮತೋ ಧನುಃಶತಮ್॥೮.೨೮॥

ನಿಕುಂಭ ನುಗ್ಗುತ್ತಾನೆ ಸುಗ್ರೀವನೆಡೆಗೆ ಹಿಡಿದು ಪರ್ವತ ಸೀಳಬಲ್ಲ ದೊಡ್ಡ ಈಟಿ,
ಹೆದರಿದ ಸುಗ್ರೀವ ಹಿಂದಕ್ಕೆ ಜಿಗಿಯುತ್ತಾನೆ ಪಶ್ಚಿಮಕ್ಕೆ ನೂರು ಮಾರು ದಾಟಿ.




ತಂ ಭ್ರಾಮಯತ್ಯಾಶು ಭುಜೇನ ವೀರೇ ಭ್ರಾನ್ತಾ ದಿಶೋ ದ್ಯೌಶ್ಚ ಸಚನ್ದ್ರಸೂರ್ಯ್ಯಾ ।
ಸುರಾಶ್ಚ ತಸ್ಯೋರುಬಲಂ ವರಂ ಚ ಶರ್ವೋದ್ಭವಂ ವೀಕ್ಷ್ಯ ವಿಷೇದುರೀಷತ್ ॥೮.೨೯॥

ನಿಕುಂಭ ತನ್ನ ಈಟಿಯನ್ನು ವಿಶಾಲ ಭುಜದಿಂದ ತಿರುಗಿಸಲು ಗರಗರನೆ,
ಕಪಿಗಳಿಗಾಯಿತು ದಿಕ್ಕುಗಳು ತಿರುಗಿದ ಸೂರ್ಯ ಚಂದ್ರ ಮಂಕಾದ ಭಾವನೆ.
ನಿಕುಂಭನಿಗಿದ್ದ ಸದಾಶಿವನ ವರಬಲ,
ದೇವತೆಗಳಿಗೂ ತಂದಿತು ಕೊಂಚ ದುಃಖದ ಜಾಲ.

ಅನನ್ಯಸಾಧ್ಯಂ ತಮಥೋ ನಿರೀಕ್ಷ್ಯ ಸಮುತ್ಪಪಾತಾsಶು ಪುರೋsಸ್ಯ ಮಾರುತಿಃ ।
ಪ್ರಕಾಶಬಾಹ್ವನ್ತರ ಆಹ ಚೈನಂ ಕಿಮೇಭಿರತ್ರ ಪ್ರಹರಾsಯುಧಂ ತೇ ॥೮.೩೦॥

ಬೇರಾರಿಗೂ ಗೆಲ್ಲಲಾಗದ ನಿಕುಂಭನ ನೋಡಿದನಾ  ಹನುಮಂತ,
ಅವನೆದುರು ಹಾರಿ ದೀರ್ಘತೋಳುಗಳ ಮಧ್ಯದ ಎದೆ ಸೆಟೆಸಿ ನಿಂತ.
ಸೆಟೆದೆದೆ ತೋರುತ್ತಾ ಹನುಮ ಹೇಳಿದ,
ಅವರಿವರಿಂದೇನು ಇಲ್ಲಿ ಹೊಡೆ ನಿನ್ನಾಯುಧ.


No comments:

Post a Comment

ಗೋ-ಕುಲ Go-Kula