Saturday, 30 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 94 - 98

ರಥಂ ಸಮಾರುಹ್ಯ ಪುನಃ ಸ ಕಾರ್ಮ್ಮುಕಃ  ಸಮಾರ್ಗ್ಗಣೋ ರಾವಣ ಆಶು ರಾಮಮ್ ।
ಅಭ್ಯೇತ್ಯ ಸರ್ವಾಶ್ಚ ದಿಶಶ್ಚಕಾರ ಶರಾನ್ಧಕಾರಾಃ ಪರಮಾಸ್ತ್ರವೇತ್ತಾ ॥೮.೯೪॥

ರಾವಣ ಶ್ರೀರಾಮನ ನುಡಿಯ ಕೇಳಿದ,
ಅಸ್ತ್ರಜ್ಞನಾದ ಅವ ಸಿದ್ಧವಾಗಿ ರಥವನೇರಿದ.
ಸಮಸ್ತ ದಿಕ್ಕಿಗೂ ಸುರಿಸಿದ ಬಾಣಗಳ ಮಳೆ,
ಬಾಣಗಳಿಂದಾವೃತವಾಗಿ ಕವಿಯಿತಂತೆ ಕತ್ತಲೆ.

ರಥಸ್ಥಿತೇsಸ್ಮಿನ್ ರಜನೀಚರೇಶೇ ನ ಮೇ ಪತಿರ್ಭೂಮಿತಳೇ ಸ್ಥಿತಃ ಸ್ಯಾತ್ ।
ಇತಿ ಸ್ಮ ಪುತ್ರಃ ಪವನಸ್ಯ ರಾಮಂ ಸ್ಕನ್ದಂ ಸಮಾರೋಪ್ಯ ಯಯೌ ಚ ರಾಕ್ಷಸಮ್ ॥೮.೯೫॥

ರಾವಣ ರಥದಲ್ಲಿ ನಿಂತು ಯುದ್ಧ ಮಾಡುತ್ತಿರಲು,
ರಾಮಚಂದ್ರ ನೆಲದಿ ನಿಂತು ಯುದ್ಧ ಮಾಡುತಿರಲು,
ಅದ ಸಹಿಸದಾದ ರಾಮಬಂಟ ಹನುಮಂತ,
ರಾಮನ ಹೆಗಲಲಿ ಹೊತ್ತು ಹೊರಟ ರಾವಣನತ್ತ.

ಪ್ರಹಸ್ಯ ರಾಮೋsಸ್ಯ ಹಯಾನ್ ನಿಹತ್ಯ ಸೂತಂ ಚ ಕೃತ್ವಾ ತಿಲಶೋ ಧ್ವಜಂ ರಥಮ್ ।
ಧನೂಂಷಿ ಖಡ್ಗಂ ಸಕಲಾಯುಧಾನಿ ಚ್ಛತ್ರಂ ಚ ಸಞ್ಛಿದ್ಯ ಚಕರ್ತ್ತ ಮೌಲಿಮ್ ॥೮.೯೬॥

ನಸುನಗುತಲೇ ಶ್ರೀರಾಮಚಂದ್ರ,
ಮಾಡಿದ ರಾವಣನೆಲ್ಲಾ ಪರಿಕರ ಛಿದ್ರ.
ರಾವಣನ ಸಾರಥಿ ಕುದುರೆಗಳ ಕೊಂದ,
ರಥ ಧ್ವಜ ಬಿಲ್ಲು ಬಾಣಗಳ ಮುರಿದ.
ಛತ್ರ ಕತ್ತರಿಸಿದ ಕಿರೀಟವ ತುಂಡರಿಸಿದ.

ಕರ್ತ್ತವ್ಯಮೂಢಂ ತಮವೇಕ್ಷ್ಯ ರಾಮಃ ಪುನರ್ಜ್ಜಗಾದಾsಶು ಗೃಹಂ ಪ್ರಯಾಹಿ ।
ಸಮಸ್ತಭೋಗಾನನುಭೂಯ ಶೀಘ್ರಂ ಪ್ರತೋಷ್ಯ ಬನ್ಧೂನ್ ಪುನರೇಹಿ ಮರ್ತ್ತುಮ್ ॥೮.೯೭॥

ದಿಗ್ಭ್ರಾಂತನಾದ ರಾವಣ ಕಂಗೆಟ್ಟು ನಿಂತ,
ಅವನ ಕುರಿತು ಹೇಳುತ್ತಾನೆ ದಶರಥ ಸುತ.
ಹೋಗು ಎಲ್ಲಾ ಭೋಗಗಳ ಅನುಭವಿಸು,
ಮರಣಾನಂತರದ ಕೊಡುಗೆಗಳ ವಿತರಿಸು.
ಇದೀಗಲೇ ಹೊರಡು ನೀ ರಾವಣ,
ಸಿದ್ಧವಾಗಿ ಬಾ ಎದುರಿಸಲು ಮರಣ.

ಇತೀರಿತೋsವಾಗ್ವದನೋ ಯಯೌ ಗೃಹಂ ವಿಚಾರ್ಯ್ಯ ಕಾರ್ಯ್ಯಂ ಸಹ ಮನ್ತ್ರಿಭಿಃ ಸ್ವಕೈಃ ।
ಹತಾವಶೇಷೈರಥ ಕುಮ್ಭಕರ್ಣ್ಣಪ್ರಬೋಧನಾಯಾsಶು ಮತಿಂ ಚಕಾರ ॥೮.೯೮॥

ಕೇಳಿದ ರಾವಣ ತಲೆತಗ್ಗಿಸಿ ಹೊರಟ ಮನೆಯತ್ತ,
ಅಳಿದುಳಿದವರಲ್ಲಿ ವಿಚಾರಿಸಿದ ಮುಂದೇನು ಎತ್ತ.
ತಮ್ಮ ಕುಂಭಕರ್ಣ ದೀರ್ಘ ನಿದ್ರೆಯಲ್ಲಿದ್ದ,
ಶೀಘ್ರದಿ ಅವನ ಎಚ್ಚರಿಸಲು ನಿರ್ಧರಿಸಿದ.

No comments:

Post a Comment

ಗೋ-ಕುಲ Go-Kula