Friday, 13 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 152 - 158

ಇತ್ಯುಕ್ತೋ ಜಾಮ್ಬವಾನಾಹ ಹನೂಮನ್ತಮನನ್ತರಮ್ ।
ಯೋsಸೌ ಮೇರೋಃ ಸಮೀಪಸ್ಥೋ ಗನ್ಧಮಾದನಸಙ್ಜ್ಞಿತಃ ।
ಗಿರಿಸ್ತಸ್ಮಾತ್ ಸಮಾಹಾರ್ಯ್ಯಂ ತ್ವಯೌಷಧಚತುಷ್ಟಯಮ್ ॥೮.೧೫೨॥

ನಾನಿದ್ದೇನೆ” ಎನ್ನುತ್ತಾನೆ ಧೀರ ಹನುಮಂತ,
ಅವನ ಕುರಿತು ಹೇಳುತ್ತಾನೆ ಜಾಂಬವಂತ.
ಮೇರುವಿನ ಬಳಿಯಿರುವ ಗಂಧಮಾದನ ಪರ್ವತದಿಂದ,
ಅತಿ ಅಮೂಲ್ಯವಾದ ನಾಕು ಔಷಧಿಗಳನ್ನು ತೆರಬೇಕೆಂದ.

ಮೃತಸಞ್ಜೀವನೀ ಮುಖ್ಯಾ ಸನ್ಧಾನಕರಣೀ ಪರಾ ।
ಸವರ್ಣ್ಣಕರಣೀ ಚೈವ ವಿಶಲ್ಯಕರಣೀತಿ ಚ ॥೮.೧೫೩॥

ಸತ್ತವರನ್ನು ಬದುಕಿಸುವ ಮೃತಸಂಜೀವನಿ,
ಬೇರಾದ ಅಂಗಾಂಗ ಸೇರಿಸುವ ಸಂಧಾನಕರಣಿ,
ಬಣ್ಣವ್ಯತ್ಯಾಸ ಸರಿಪಡಿಸುವ ಸವರ್ಣಕರಣಿ,
ದೇಹ ಸೇರಿದ ಆಯುಧ ತೆಗೆವ ವಿಶಲ್ಯಕರಣಿ,
ಪೂರ್ಣ ಮಾಹಿತಿಯಿತ್ತಿದ್ದು ಜಾಂಬವಂತನ ಧ್ವನಿ.

ಇತ್ಯುಕ್ತಃ ಸ ಕ್ಷಣೇನೈವ ಪ್ರಾಪತದ್ ಗನ್ಧಮಾದನಮ್ ।
ಅವಾಪ ಚಾಮ್ಬರಚರೋ ರಾಮಮುಕ್ತಃ ಶರೋ ಯಥಾ ॥೮.೧೫೪॥

ಜಾಂಬವಂತನ ಮಾತ ಕೇಳಿದ ಹನುಮಂತ,
ಗಂಧಮಾದನ ಪರ್ವತದೆಡೆಗೆ ನೆಗೆದನಾತ.
ಶ್ರೀರಾಮಚಂದ್ರ ಬಿಟ್ಟ ಬಾಣದಂತೆ,
ಕ್ಷಣಮಾತ್ರದಿ ಪರ್ವತವ ತಲುಪಿದನಂತೆ.

ಅನ್ತರ್ಹಿತಾಶ್ಚೌಷಧೀಸ್ತು ತದಾ ವಿಜ್ಞಾಯ ಮಾರುತಿಃ ।
ಉದ್ಬಬರ್ಹ ಗಿರಿಂ ಕ್ರೋಧಾಚ್ಛತಯೋಜನಮಣ್ಡಲಮ್ ॥೮.೧೫೫॥

ಔಷಧಗಳೆಲ್ಲವೂ ಅಡಗಿಕೊಂಡಿವೆ ಎಂದು ಹನುಮಂತ ತಿಳಿದ,
ನೂರು ಯೋಜನ ಅಳತೆಯ ಆ ಬೆಟ್ಟವನ್ನೇ ಸಿಟ್ಟಿನಿಂದ ಎತ್ತಿದ.

ಸ ತಂ ಸಮುತ್ಪಾಟ್ಯ ಗಿರಿಂ ಕರೇಣ ಪ್ರತೋಳಯಿತ್ವಾ ಬಲದೇವಸೂನುಃ ।
ಸಮುತ್ಪಪಾತಾಮ್ಬರಮುಗ್ರವೇಗೋ ಯಥಾ ಹರಿಶ್ಚಕ್ರಧರಸ್ತ್ರಿವಿಕ್ರಮೇ ॥೮.೧೫೬॥

ಬೆಟ್ಟ ಕಿತ್ತು ಕೈಯಲ್ಲಿ ಹಿಡಿದು ಅತಿವೇಗದಿ ಜಿಗಿದ ಹನುಮಂತ,
ಹೇಗೆ ಹರಿ ತೋರಿದ್ದ ವಾಮನಾವತಾರದಿ ತಾನು ಸರ್ವತ್ರವ್ಯಾಪ್ತ.
(ಸರ್ವೋತ್ತಮತ್ವ ಮತ್ತು ಜೀವೋತ್ತಮತ್ವದ ತುಲನಾತ್ಮಕ ದೃಷ್ಟಾಂತ)

ಅವಾಪ ಚಾಕ್ಷ್ಣೋಃ ಸ ನಿಮೇಷಮಾತ್ರತೋ ನಿಪಾತಿತಾ ಯತ್ರ ಕಪಿ ಪ್ರವೀರಾಃ ।
ತಚ್ಛೈಲವಾತಸ್ಪರ್ಶಾತ್ ಸಮುತ್ಥಿತಾಃ ಸಮಸ್ತಶೋ ವಾನರಯೂಥಪಾಃ ಕ್ಷಣಾತ್ ॥೮.೧೫೭॥

ನಿಮಿಷಮಾತ್ರದಲ್ಲಿ ಹನುಮಂತ ತಲುಪಿದ ಕಪಿಗಳು ಬಿದ್ದ ಜಾಗ,
ಆಶ್ಚರ್ಯವೇನು ಅದರಲ್ಲಿ ಅವನದೇ ಅಲ್ಲವೇ ಆ ವಾಯುವೇಗ.
ಯಾವಾಗಾಯಿತೋ ಆ ಬೆಟ್ಟದ ಗಾಳಿಯ ಸ್ಪರ್ಶ,
ಆ ಕ್ಷಣಕ್ಕಾಯಿತು ಕಪಿಗಳಿಗೆಲ್ಲಾ ಎಚ್ಚರದ ಹರ್ಷ.

ಅಪೂಜಯನ್ಮಾರುತಿಮುಗ್ರಪೌರುಷಂ ರಘೂತ್ತಮೋsಸ್ಯಾನುಜನಿಸ್ತಥಾsಪರೇ ।
ಪಪಾತ ಮೂರ್ಧ್ನ್ಯಸ್ಯ ಚ ಪುಷ್ಪಸನ್ತತಿಃ 
ಪ್ರಮೋದಿತೈರ್ದ್ದೇವವರೈರ್ವಿಸರ್ಜ್ಜಿತಾ ॥೮.೧೫೮॥

ಇಂತಹಾ ಉಗ್ರ ಪರಾಕ್ರಮಿಯಾದ ಹನುಮಂತನನ್ನ,
ಮಾಡಿದರು ರಾಮ ಲಕ್ಷ್ಮಣ ಸುಗ್ರೀವರು ಗುಣಗಾನ.
ಅತ್ಯಂತ  ಸಂತಸಗೊಂಡ ದೇವತಾವೃಂದ,
ಹನುಮನ ಮೇಲೆ ಹೂಮಳೆಗರೆದ ಆನಂದ.


No comments:

Post a Comment

ಗೋ-ಕುಲ Go-Kula