Wednesday, 25 July 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 212 - 217

ಅಥೈನಮಸ್ತೌತ್ ಪಿತರಂ ಕೃತಾಞ್ಜಲಿರ್ಗ್ಗುಣಾಭಿರಾಮಂ ಜಗತಃ ಪಿತಾಮಹಃ ।
ಜಿತಞ್ಜಿತಂ ತೇsಜಿತ ಲೋಕಭಾವನ ಪ್ರಪನ್ನಪಾಲಾಯ ನತಾಃ ಸ್ಮ ತೇ ವಯಮ್ ॥೮.೨೧೨॥

ಜಗದ ಪಿತನಾದ ಚತುರ್ಮುಖ ಬ್ರಹ್ಮ,
ಸ್ತುತಿಸಿದ ತನ್ನ ತಂದೆಯ ಗುಣ ಮತ್ತು ನೇಮ,
ಜ್ಞಾನಾನಂದ ಗುಣಪೂರ್ಣ ಜಗತ್ಕಾರಣ ಶ್ರೀರಾಮ.
ಜಗದ ತಂದೆ ನೀನು ಸೋಲೇ ಇರದ  ಸರದಾರ,
ಧನ್ಯವದು  ನಿನ್ನನಲಂಕರಿಸಿದ ಜಯದ ಹಾರ,
ಆಶ್ರಿತರಕ್ಷಕನಾದ ನಿನಗೆ ನಮ್ಮೆಲ್ಲರ ನಮಸ್ಕಾರ.

ತ್ವಮೇಕ ಈಶೋsಸ್ಯ ನಚಾsದಿರನ್ತಸ್ತವೇಡ್ಯ ಕಾಲೇನ ತಥೈವ ದೇಶತಃ ।
ಗುಣಾ ಹ್ಯಗಣ್ಯಾಸ್ತವ ತೇsಪ್ಯನನ್ತಾಃ ಪ್ರತ್ಯೇಕಶಶ್ಚಾsದಿವಿನಾಶವರ್ಜ್ಜಿತಾಃ ॥೮.೨೧೩॥

ಮುಂದುವರೆಸುತ್ತಾನೆ ಬ್ರಹ್ಮ ಭಗವಂತನ ಸ್ತೋತ್ರ ,
ತಿಳಿಸುತ್ತಾನೆ ಜಗನ್ನಾಥನ ಮತ್ತು ದೇವತೆಗಳ ಪಾತ್ರ .
ಭಗವಂತಾ ನೀನೊಬ್ಬನೇ ಜಗದ ಮುಖ್ಯ ಸ್ವಾಮಿ,
ಕಾಲ ದೇಶ ಆದಿ ಅಂತ್ಯಗಳಿರದ ಅಸಾಧಾರಣ ನೇಮಿ.
ಸ್ತೋತ್ರಾರ್ಹನೇ ನಿನ್ನ ಒಂದೊಂದು ಗುಣಗಳೂ ಅನಂತ,
ಏಕವಾಗಿ ಅನೇಕವಾಗಿ ಅವಕ್ಕಿಲ್ಲ ಉತ್ಪತ್ತಿ ಮತ್ತು ಅಂತ್ಯ.

ನಚೋದ್ಭವೋ ನೈವ ತಿರಸ್ಕೃತಿಸ್ತೇ ಕ್ವಚಿದ್ ಗುಣಾನಾಂ ಪರತಃ ಸ್ವತೋ ವಾ ।
ತ್ವಮೇಕ ಆದ್ಯಃ ಪರಮಃ ಸ್ವತನ್ತ್ರೋ ಭೃತ್ಯಾಸ್ತವಾಹಂ ಶಿವಪೂರ್ವಕಾಶ್ಚ ಯೇ ॥೮.೨೧೪॥

ನಿನ್ನ ಗುಣಗಳಿಗಿಲ್ಲ ಸ್ವಾಭಾವಿಕ ಬೇರೆ ಕಾರಣಗಳ ಪ್ರಭಾವ,
ಎಂದೂ ಎಲ್ಲೂ ಅವಕ್ಕಿಲ್ಲ ಉತ್ಪತ್ತಿ ಮತ್ತು ನಾಶದ ಭಾವ.
ನೀನೊಬ್ಬನೇ ಆದಿಕಾರಣ ಸರ್ವಸ್ವತಂತ್ರ ಸರ್ವಶಕ್ತ ಸದಾನಂದ,
ನಾನೂ  ರುದ್ರಾದಿ ದೇವತಾಗಣವೆಲ್ಲಾ ನಿನ್ನ ಸೇವಕ ವೃಂದ.

ಯಥಾsರ್ಚ್ಚಿಷೋsಗ್ನೇಃ ಪವನಸ್ಯ ವೇಗಾ ಮರೀಚಯೋsರ್ಕ್ಕಸ್ಯ ನದೀಷು ಚಾsಪಃ ।
ಗಚ್ಛನ್ತಿ ಚಾsಯಾನ್ತಿ ಚ ಸನ್ತತಾಸ್ತ್ವತ್ ತದ್ವನ್ಮದಾದ್ಯಾಃ ಶಿವಪೂರ್ವಕಾಶ್ಚ ಯೇ ॥೮.೨೧೫॥

ಬೆಂಕಿಯಿಂದ ಕಿಡಿಗಳಂತೆ ಗಾಳಿಯಿಂದ ವೇಗದಂತೆ,
ಸೂರ್ಯನಿಂದ ಕಿರಣದಂತೆ ನದಿಗಳಿಂದ ನೀರಿನಂತೆ,
ನನ್ನ ರುದ್ರಾದಿಗಳೆಲ್ಲರದೂ ನಿನ್ನಿಂದಲೇ ಹುಟ್ಟು,
ಪ್ರಳಯದಲ್ಲಿ  ನಿನ್ನಲ್ಲೇ ಬಂದು ಸೇರುವ ಗುಟ್ಟು.

ಯೇಯೇ ಚ ಮುಕ್ತಾಸ್ತ್ವಥ ಯೇ ಚ ಬದ್ಧಾಃ ಸರ್ವೇ ತವೇಶೇಶ ವಶೇ ಸದೈವ ।
ವಯಂ ಸದಾ ತ್ವದ್ಗುಣಪೂಗಮುಚ್ಚೈಃ ಸರ್ವೇ ವದನ್ತೋsಪಿ ನ ಪಾರಗಾಮಿನಃ ॥೮.೨೧೬॥

ಈಶರಿಗೂ ಈಶನಾದ ಸರ್ವಾಂತರ್ಯಾಮಿ ರಾಮ,
ಮುಕ್ತ ಬದ್ಧರೆಲ್ಲರಿಗೂ ನಿನ್ನೊಡಲೇ ಆಶ್ರಯ ಧಾಮ.
ನಾವೆಲ್ಲರೂ ಸದಾ ಮಾಡಿದರೂ ನಿನ್ನ ಗುಣಸಮೂಹದ ಬಣ್ಣನೆ,
ಮುಗಿಯಲಾರದ ಗುಣಸಾಗರ  ನೀನು ಗುಣಗಡಣಕಿಲ್ಲ ಕೊನೆ.

ಕಿಮೇಶ ಈದೃಗ್ಗುಣಕಸ್ಯ ತೇ ಪ್ರಭೋ ರಕ್ಷೋವಧೋsಶೇಷಸುರಪ್ರಪಾಲನಮ್ ।
ಅನನ್ಯಸಾದ್ಯಂ ಹಿ ತಥಾsಪಿ ತದ್ ದ್ವಯಂ ಕೃತಂ ತ್ವಯಾ ತಸ್ಯ ನಮೋನಮಸ್ತೇ ॥೮.೨೧೭॥

ಗುಣಪೂರ್ಣ ಸರ್ವಸಮರ್ಥ ಜಗದ  ಸ್ವಾಮಿಯಾದ ನಿನಗೆ,
ಶಿಷ್ಟಪಾಲನೆ ದುಷ್ಟಸಂಹಾರ ನಿನ್ನಾಟದ ಅನಾಯಾಸ ಅಡುಗೆ.
ನಿನ್ನ ಬಿಟ್ಟು ಇನ್ಯಾರಿಗೂ ಮಾಡಲಾಗದ ಈ ಕಾರ್ಯ,
ಶಿರಬಾಗಿ ನಮಿಸುವೆವು ನಿನಗೆ ಓ ಅಮಿತ ವೀರ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula