Friday, 7 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 202 - 212

ತತಃ ಪುರಾ ಸ್ಯಮನ್ತಕಂ ಹ್ಯವಾಪ ಸೂರ್ಯ್ಯಮಣ್ಡಲೇ

ಸ್ಥಿತಾದ್ಧರೇಃ ಸ ಸತ್ರಜಿತ್ ಸದಾsತ್ರ ಕೇಶವಾರ್ಚ್ಚಕಃ ॥೧೭.೨೦೨ ॥

ಹಿಂದೆ ಸೂರ್ಯಮಂಡಲದಲ್ಲಿನ ಕೇಶವನ ಪೂಜಿಸುತ್ತಿದ್ದ ಸತ್ರಜಿತ್ ಎಂಬ ಯಾದವ , 

ಸೂರ್ಯಮಂಡಲದಲ್ಲಿನ ನಾರಾಯಣನಿಂದ ವರವಾಗಿ ಸ್ಯಮಂತಕಮಣಿ ಪಡೆದಿದ್ದವ .

 ಸದಾsಸ್ಯ ವಿಷ್ಣುಭಾವಿನೋsಪ್ಯತೀವ ಲೋಭಮಾನ್ತರಮ್ ।

ಪ್ರಕಾಶಯನ್ ರಮಾಪತಿರ್ಯ್ಯಯಾಚ ಈಶ್ವರೋ ಮಣಿಮ್ ॥೧೭.೨೦೩॥

ಮೂಲತಃ ವಿಷ್ಣುಭಕ್ತನಾಗಿದ್ದರೂ ಸತ್ರಜಿತ್ ಒಳಗಿತ್ತು ಭಾರೀ ಲೋಭತನ , 

ಇದನ್ನ ಜಗಕೆ ತೋರಲೆಂದೇ ಸ್ಯಮಂತಕ ಮಣಿ ಕೇಳಿದನಂತೆ ಜನಾರ್ದನ .

 ಸ ತಂ ನ ದತ್ತವಾಂಸ್ತತೋsನುಜೋ ನಿಬದ್ಧ್ಯ ತಂ ಮಣಿಮ್ ।

ವನಂ ಗತಃ ಪ್ರಸೇನಕೋ ಮೃಗಾಧಿಪೇನ ಪಾತಿತಃ ॥೧೭.೨೦೪॥

ಶ್ರೀಕೃಷ್ಣ ಕೇಳಿದ ಸ್ಯಮಂತಕ ಮಣಿ ಕೊಡಲು ಸತ್ರಜಿತನಿಂದ ನಕಾರ , 

ಧರಿಸಿ ಬೇಟೆಗೆ ಹೋದ ಅವನ ತಮ್ಮ ಪ್ರಸೇನನ ಸಿಂಹ ಮಾಡಿತು ಸಂಹಾರ .

 ತದಾ ಸ ಸತ್ರಜಿದ್ಧರಿಂ ಶಶಂಸ ಸೋದರಾನ್ತಕಮ್ ।

ಉಪಾಂಶು ವರ್ತ್ಮನಾ ತತೋ ಹರಿಃ ಸಯಾದವೋ ಯಯೌ ॥೧೭.೨೦೫॥

ಹೀಗಾದಮೇಲೆ ಕೃಷ್ಣ ತನ್ನ ತಮ್ಮನ ಕೊಂದನೆಂದು ಸತ್ರಜಿತನ ಮೆಲುಆಪಾದನೆ , 

ಯಾದವರ ಕೂಡಿಕೊಂಡು ಪ್ರಸೇನ ಹೋದ ಹಾದಿ ಹಿಡಿದು ಹೊರಟ ಕೃಷ್ಣ ತಾನೇ .

 ವನೇ ಸ ಸಿಂಹಸೂದಿತಂ ಪದೈಃ ಪ್ರದರ್ಶ್ಯ ವೃಷ್ಣಿನಾಮ್ ।

ಪ್ರಸೇನಮೃಕ್ಷಪಾತಿತಂ ಸ ಸಿಂಹಮಪ್ಯದರ್ಶಯತ್ ॥೧೭.೨೦೬॥

ಹೆಜ್ಜೆ ಗುರುತಿಂದ ಸಿಂಹವೇ ಪ್ರಸೇನನ ಕೊಂದಿದೆ ಎಂದು ನಿರೂಪಿಸಿದ ಗೋವಿಂದ , 

ಕರಡಿಯಿಂದ (ಜಾಂಬವಂತ) ಸಿಂಹವೂ ಕೊಲ್ಲಲ್ಪಟ್ಟಿದೆ ಎಂದು ತೋರಿದ ಮುಕುಂದ .

 ತತೋ ನಿಧಾಯ ತಾನ್ ಬಿಲಂ ಸ ಜಾಮ್ಬವತ್ಪರಿಗ್ರಹಮ್ ।

ವಿವೇಶ ತತ್ರ  ಸಂಯುಗಂ ಬಭೂವ ತೇನ ಚೇಶಿತುಃ ॥೧೭.೨೦೭॥

ಆನಂತರ ತನ್ನ ಜೊತೆ ಬಂದ ಯಾದವರ ಹೊರಗೆಬಿಟ್ಟ ಕೃಷ್ಣ ತಾನು , 

ಜಾಂಬವಂತನಿದ್ದ ಗುಹೆ ಹೊಕ್ಕು ಭಾರೀ ಯುದ್ಧವನ್ನೇ ಮಾಡಿದನು .

  ಯುಯೋಧ ಮನ್ದಮೇವ ಸಃ ಪ್ರಭುಃ ಸ್ವಭಕ್ತ ಇತ್ಯಜಃ ।

ಚಕಾರ ಚೋಗ್ರಮನ್ತತಃ ಪ್ರಕಾಶಯನ್ ಸ್ವಮಸ್ಯ ಹಿ ॥೧೭.೨೦೮॥

ತನ್ನ ಭಕ್ತನೆಂದು ಕೃಷ್ಣ ಮೊದಲು ತೋರಿದ ಮಂದಗತಿ , 

ಕೊನೆಗೆ ಜಾಂಬವಂತಗೆ ತೋರಿದ ಯುದ್ಧದ ಉಗ್ರನೀತಿ .

 ಸ ಮುಷ್ಟಿಪಿಷ್ಟವಿಗ್ರಹೋ ನಿತಾನ್ತಮಾಪದಂ ಗತಃ ।

ಜಗಾಮ ಚೇತಸಾ ರಘೂತ್ತಮಂ ನಿಜಂ ಪತಿಂ ಗತಿಮ್ ॥೧೭.೨೦೯॥

ಭಗವಂತನ ಪೆಟ್ಟುಗಳಿಂದ ತತ್ತರಿಸಿಹೋದ ಜಾಂಬವಂತ , 

ಮೂಡಿತು ಸಾಯುತ್ತೇನೇನೋ ಎಂಬ ಆತಂಕದಾಘಾತ .

ಮನದಲ್ಲೇ ತನ್ನೊಡೆಯನ ನೆನೆದ , 

ಗತಿಕೊಡುವ ಶ್ರೀರಾಮನ ಸ್ಮರಿಸಿದ .

 ಸ್ಮೃತಿಂ ಗತೇ ತು ರಾಘವೇ ತದಾಕೃತಿಂ ಯದೂತ್ತಮೇ;  ।

ಸಮಸ್ತಭೇದವರ್ಜ್ಜಿತಾಂ ಸಮೀಕ್ಷ್ಯ ಸೋsಯಮಿತ್ಯವೇತ್ ॥೧೭.೨೧೦॥

ಸ್ಮರಿಸಿದಾಗ ಕೃಷ್ಣನಲ್ಲಿ ರಾಮಾಕೃತಿಯ ನೋಡಿದ , 

ಅವನೇ ಇವನಾದ ಭಗವಂತನಿಗ್ಯಾವ ಥರದ ಭೇದ .

 ತತಃ ಕ್ಷಮಾಪಯನ್ ಸುತಾಂ ಪ್ರದಾಯ ರೋಹಿಣೀಂ ಶುಭಾಮ್ ।

ಮಣಿಂ ಚ ತಂ ನುನಾವ ಸಃ ಪ್ರಪನ್ನ ಆಶು ಪಾದಯೋಃ ॥೧೭.೨೧೧॥

ತನ್ನೆದುರು ನಿಂತ ಕೃಷ್ಣ ಶ್ರೀರಾಮನೇ ಎಂದರಿತ , 

ಕ್ಷಮೆ ಕೋರಿ ಮಗಳು ರೋಹಿಣಿಯ ಕೃಷ್ಣಗಿತ್ತ .

ಪಾದದಿ ಬಿದ್ದು ಸ್ತುತಿಸುತ್ತಾ ಮಣಿಯನ್ನೂ ಇತ್ತ .

 ವಿಧಾಯ ಚಕ್ರದಾರಿತಂ ಸುಜೀರ್ಣ್ಣದೇಹಮಸ್ಯ ಸಃ ।

ಯುವಾನಮಾಶು ಕೇಶವಶ್ಚಕಾರ ವೇದನಾಂ ವಿನಾ ॥೧೭.೨೧೨॥

 ಕೃಷ್ಣ ಮುಪ್ಪಾದ ಜಾಂಬವಂತನ ಜೀರ್ಣಶರೀರವ ಸೀಳಿದ , 

ಅವನಿಗ್ಯಾವ ನೋವು ಮಾಡದೇ ಯುವಕನನ್ನಾಗಿ ಮಾಡಿದ .

No comments:

Post a Comment

ಗೋ-ಕುಲ Go-Kula